'ಪ್ರೀತಿʼ ಮತ್ತು ʼಶಾಂತಿ'ಯಿಂದ ದೇಶದ ನಿರ್ಮಾಣ: ಖಲೀದಾ ಜಿಯಾ

Update: 2024-08-07 13:11 GMT

ಕೋಪ ಅಥವಾ ಸೇಡಿನಿಂದ ಅಲ್ಲ; ಪ್ರೀತಿ ಮತ್ತು ಶಾಂತಿ ರಾಷ್ಟ್ರವನ್ನು ಪುನಃ ನಿರ್ಮಿಸುತ್ತದೆ ಎಂದು ಬಾಂಗ್ಲಾದೇಶದ ಮಾಜಿ ಪ್ರಧಾನಿ ಮತ್ತು ಬಿಎನ್‌ಪಿ ಅಧ್ಯಕ್ಷೆ ಖಲೀದಾ ಜಿಯಾ ಬುಧವಾರ ಹೇಳಿದ್ದಾರೆ. 

ಗೃಹಬಂಧನದಿಂದ ಬಿಡುಗಡೆಯಾದ ಒಂದು ದಿನದ ನಂತರ ಅವರ ಹೇಳಿಕೆ ಬಂದಿದೆ. 

ಅಸಾಧ್ಯವಾದುದನ್ನು ಸಾಧ್ಯವಾಗಿಸಿದ ಹೋರಾಟಕ್ಕಾಗಿ ದೇಶದ ಜನರಿಗೆ ಧನ್ಯವಾದ ಅರ್ಪಿಸಿದ ಅವರು, ಕೋಪ ಅಥವಾ ಸೇಡಿನಿಂದ ಅಲ್ಲದೆ ಪ್ರೀತಿ ಮತ್ತು ಶಾಂತಿ ರಾಷ್ಟ್ರವನ್ನು ಪುನರ್ನಿರ್ಮಿಸುತ್ತವೆ ಎಂದು ಹೇಳಿದರು.

ಶಾಂತಿಗಾಗಿ ಮನವಿ: 2018 ರ ಬಳಿಕ ತಮ್ಮ ಮೊದಲ ಸಾರ್ವಜನಿಕ ಭಾಷಣದ ವಿಡಿಯೋ ಬಿಡುಗಡೆಗೊಳಿಸಿರುವ ಅವರು ಶಾಂತಿಯನ್ನು ಕಾಪಾಡಿಕೊಳ್ಳಲು ಮನವಿ ಮಾಡಿದರು. ಬಿಡುಗಡೆಗೆ ಪ್ರಾರ್ಥಿಸಿದ ಜನರಿಗೆ ಅವರು ಧನ್ಯವಾದ ಅರ್ಪಿಸಿದರು ಎಂದು ದಿ ಡೈಲಿ ಸ್ಟಾರ್ ಪತ್ರಿಕೆ ವರದಿ ಮಾಡಿದೆ. 

ʻನಾನು ಈಗ ಬಿಡುಗಡೆಯಾಗಿದ್ದೇನೆ. ಮಾಡು ಇಲ್ಲವೇ ಮಡಿ ಹೋರಾಟ ಮಾಡಿದ ಕೆಚ್ಚೆದೆಯ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಈ ಗೆಲುವು ಲೂಟಿ, ಭ್ರಷ್ಟಾಚಾರ ಮತ್ತು ಕೆಡುಕನಿಂದ ಹೊಸ ಸಾಧ್ಯತೆಯನ್ನು ತರಲಿದೆ. ನಾವು ಈ ದೇಶವನ್ನು ಸಮೃದ್ಧ ದೇಶವಾಗಿಸಬೇಕಿದೆ,ʼ ಎಂದು ಜಿಯಾ ಹೇಳಿದರು. 

ಸೆರೆವಾಸ: ಶೇಖ್ ಹಸೀನಾ ಅವರ ಆಳ್ವಿಕೆಯಲ್ಲಿ 2018 ರಲ್ಲಿ ಜಿಯಾ ಅವರಿಗೆ 17 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಪ್ರಸ್ತುತ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿರುವ ಬಿಎನ್‌ಪಿ ಅಧ್ಯಕ್ಷೆಯನ್ನು ಮಂಗಳವಾರ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರ ಆದೇಶದ ಮೇರೆಗೆ ಬಿಡುಗಡೆ ಮಾಡಲಾಗಿದೆ. 

ಜಿಯಾ ಎರಡು ವರ್ಷಕ್ಕೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ್ದರು. ಮಾರ್ಚ್ 25, 2020 ರಂದು ಹಸೀನಾ ಸರ್ಕಾರವು ಅವರ ಶಿಕ್ಷೆಯನ್ನು ಅಮಾನತುಗೊಳಿಸಿ, ಷರತ್ತುಬದ್ಧ ಬಿಡುಗಡೆ ನೀಡಿತು. ತರುವಾಯ, ಪ್ರತಿ ಆರು ತಿಂಗಳಿಗೊಮ್ಮೆ ಶಿಕ್ಷೆಯ ಅಮಾನತು ಮತ್ತು ಬಿಡುಗಡೆ ನಡೆಯುತ್ತಿತ್ತು. 

ಬಾಂಗ್ಲಾದೇಶದ ರಾಜಕೀಯವು ಹಸೀನಾ ಮತ್ತು ಜಿಯಾ ಎಂಬ ಎರಡು ಧ್ರುವಗಳ ನಡುವಿನ ಪೈಪೋಟಿಯ ವ್ಯಾಖ್ಯಾನವಾಗಿದೆ.

Tags:    

Similar News