PM in US| ಟ್ರಂಪ್‌ ಭೇಟಿಯಾಗದ ಪ್ರಧಾನಿ ಮೋದಿ

ಈ ಹಿಂದೆ ಮೋದಿ ಅವರು ಬಹಿರಂಗವಾಗಿ ʻಟ್ರಂಪ್ ಸರ್ಕಾರ್ʼ ನ್ನು ಅನುಮೋದಿಸಿದ್ದರು; ಆದರೆ, ಈ ಬಾರಿ ಅವರು ಟ್ರಂಪ್ ಅಥವಾ ಕಮಲಾ ಹ್ಯಾರಿಸ್ ಅವರನ್ನು ಭೇಟಿ ಮಾಡದಿರಲು ನಿರ್ಧರಿಸಿದರು̤

Update: 2024-09-24 10:08 GMT

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಮೆರಿಕದ ಪ್ರವಾಸದಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿಲ್ಲ.ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ,ʼಮೋದಿ ತಮ್ಮನ್ನು ಭೇಟಿ ಮಾಡಲು ಅಮೆರಿಕಕ್ಕೆ ಬರಲಿದ್ದಾರೆʼ ಎಂದು ಸಭೆಯೊಂದರಲ್ಲಿ ಹೇಳಿಕೊಂಡಿದ್ದರೂ, ಇಬ್ಬರ ಭೇಟಿ ನಡೆದಿಲ್ಲ.

ಲಾಂಗ್ ಐಲ್ಯಾಂಡ್‌ನಲ್ಲಿ ಭಾನುವಾರ ನಡೆಯುವ ಟ್ರಂಪ್ ಅವರ ಸಭೆಯಲ್ಲಿ ಮೋದಿ ಪಾಲ್ಗೊಳ್ಳಲಿದ್ದಾರೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದ್ದು, ಭಾರತ ಅದನ್ನು ನಿರಾಕರಿಸಿತ್ತು. ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಅಮೆರಿಕದ ಮಾಜಿ ಅಧ್ಯಕ್ಷರೊಂದಿಗೆ ಮೋದಿ ಅವರ ಭೇಟಿ ಕಾರ್ಯಕ್ರಮ ಇಲ್ಲ ಎಂದು ಹೇಳಿದ್ದರು. 

ಈ ಬಾರಿ ʻಟ್ರಂಪ್ ಸರ್ಕಾರʼದ ಅನುಮೋದನೆ ಇಲ್ಲ: ಈ ಹಿಂದೆ ಮೋದಿ ಅವರು ʻಈ ಬಾರಿ ಟ್ರಂಪ್ ಸರ್ಕಾರ್ʼ ಎಂದು ಪ್ರತಿಪಾದಿಸಿದ್ದರು. ಇಬ್ಬರು ನಾಯಕರೂ ಬಲಪಂಥೀಯ ರಾಜಕೀಯ ಸಿದ್ಧಾಂತದ ಜೊತೆಗೆ ವೈಯಕ್ತಿಕ ಸಂಬಂಧ ಹಂಚಿಕೊಳ್ಳುತ್ತಾರೆ. ಮೋದಿ ಅವರು ತಮ್ಮ ʻಮೇಕ್ ಇನ್ ಇಂಡಿಯಾʼ ಅಭಿಯಾನದ ಜೊತೆಯಲ್ಲಿ ಟ್ರಂಪ್ ಅವರ ʻಅಮೆರಿಕಾ ಮೊದಲುʼ ನೀತಿಯನ್ನು ಬಹಿರಂಗವಾಗಿ ಹೊಗಳಿದ್ದರು.

2019 ರಲ್ಲಿ ಹೂಸ್ಟನ್‌ನಲ್ಲಿ ನಡೆದ ʻಹೌಡಿ, ಮೋದಿʼ ಸಭೆ ಸಾಕಷ್ಟು ಗಮನ ಸೆಳೆದಿತ್ತು. ಟ್ರಂಪ್ ಆಗ ಅಧ್ಯಕ್ಷರಾಗಿದ್ದು, ಎರಡನೇ ಅವಧಿಗೆ ಸ್ಪರ್ಧಿಸಿದ್ದರು. ಮೋದಿ ಅವರು 50,000 ಭಾರತೀಯ ಅಮೆರಿಕನ್ನರ ಮುಂದೆ ತಮ್ಮದೇ ಚುನಾವಣಾ ಘೋಷಣೆಯಾದ ʻಅಬ್ಕಿ ಬಾರ್, ಟ್ರಂಪ್ ಸರ್ಕಾರ್ ʼ ಎಂದು ಘೋಷಿಸಿದ್ದರು.

2020ರಲ್ಲಿ ಟ್ರಂಪ್ ಅಹಮದಾಬಾದ್‌ಗೆ ಭೇಟಿ ನೀಡಿದರು. ʼನಮಸ್ತೆ ಟ್ರಂಪ್ʼ ಕಾರ್ಯಕ್ರಮವು 100,000 ಕ್ಕೂ ಹೆಚ್ಚು ವೀಕ್ಷಕರನ್ನು ಸೆಳೆಯಿತು. ಆದರೆ, ಈ ಬಾರಿ ಟ್ರಂಪ್ ಅಥವಾ ಡೆಮೋಕ್ರಾಟ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ಭೇಟಿ ಮಾಡದಿರಲು ಮೋದಿ ನಿರ್ಧರಿಸಿದ್ದಾರೆ.

ಮಿಚಿಗನ್‌ನ ಫ್ಲಿಂಟ್‌ನಲ್ಲಿ ನಡೆದ ಸಭೆಯಲ್ಲಿ ʻಮೋದಿ ತಮ್ಮನ್ನು ಭೇಟಿಯಾಗಲಿದ್ದಾರೆ ಎಂದು ಟ್ರಂಪ್ ಹೇಳಿಕೊಂಡಿದ್ದರು. ʻಅವರೊಂದು [ಮೋದಿ] ಅದ್ಭುತ. ನನ್ನ ಪ್ರಕಾರ, ಅದ್ಭುತ ಮನುಷ್ಯ. ಬಹಳಷ್ಟು ನಾಯಕರು ಅದ್ಭುತʼ ಎಂದು ತಮ್ಮ ಬೆಂಬಲಿಗರಿಗೆ ಹೇಳಿದ್ದರು. 

ತಮ್ಮ ಮೂರು ದಿನಗಳ ಅಮೆರಿಕಾ ಭೇಟಿಯಲ್ಲಿ ಮೋದಿ ಅವರು ವಿಲ್ಮಿಂಗ್ಟನ್‌ನಲ್ಲಿ ನಡೆದ ಕ್ವಾಡ್ ಲೀಡರ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದರು; ವಿಶ್ವ ನಾಯಕರೊಂದಿಗೆ ದ್ವಿಪಕ್ಷೀಯ ಚರ್ಚೆ ನಡೆಸಿದರು, ಲಾಂಗ್ ಐಲ್ಯಾಂಡ್‌ ನಲ್ಲಿರುವ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಿದರು, ತಂತ್ರಜ್ಞಾನ ಕ್ಷೇತ್ರದ ದಿಗ್ಗಜರನ್ನು ಭೇಟಿ ಮಾಡಿದರು ಮತ್ತು ವಿಶ್ವಸಂಸ್ಥೆಯ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದರು.

Tags:    

Similar News