Modi-Trump Meet | ಮೋದಿ- ಟ್ರಂಪ್ ಭೇಟಿ; ಶ್ವೇತ ಭವನದಲ್ಲಿ ಮಗಾ- ಮಿಗಾ ಹವಾ

Modi-Trump Meet: . 2030ರ ವೇಳೆಗೆ ನಮ್ಮ ದ್ವಿಪಕ್ಷೀಯ ವ್ಯಾಪಾರ ದ್ವಿಗುಣಗೊಳಿಸಿ 500 ಶತಕೋಟಿ ಡಾಲರ್‌ಗೆ ಹೆಚ್ಚಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಅವರು ಹೇಳಿದರು.;

Update: 2025-02-14 04:56 GMT
ಮೋದಿ ಮತ್ತು ಟ್ರಂಪ್​ ಭೇಟಿ

ವಾಷಿಂಗ್ಟನ್​: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಗುರುವಾರ ತಡರಾತ್ರಿ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಟ್ರಂಪ್​ ಎರಡನೇ ಅವಧಿಗೆ ಅಧ್ಯಕ್ಷರಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಥಮ ಅಮೆರಿಕ ಭೇಟಿ ಇದಾಗಿದೆ. ಶ್ವೇತ ಭವನಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಟ್ರಂಪ್ ಅದ್ದೂರಿ ಸ್ವಾಗತ ಕೋರಿದ್ದು, ಬಳಿಕ ಉಭಯ ನಾಯಕರು ಜಂಟಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿಸಿದರು.

2030ರ ವೇಳೆಗೆ ಭಾರತ-ಅಮೆರಿಕ ವ್ಯಾಪಾರ ದ್ವಿಗುಣಗೊಳಿಸುವ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದರು. ''2030ರ ವೇಳೆಗೆ ನಮ್ಮ ದ್ವಿಪಕ್ಷೀಯ ವ್ಯಾಪಾರ ದ್ವಿಗುಣಗೊಳಿಸಿ 500 ಶತಕೋಟಿ ಡಾಲರ್‌ಗೆ ಹೆಚ್ಚಿಸುವ ಗುರಿಯನ್ನು ನಾವು ಹೊಂದಿದ್ದೇವೆ,'' ಎಂದು ಅವರು ಹೇಳಿದರು.

ಅಮೆರಿಕದ ಅಧ್ಯಕ್ಷ ಟ್ರಂಪ್ ಸದಾ ತಮ್ಮ ದೇಶವನ್ನು ಆದ್ಯ ಸ್ಥಾನದಲ್ಲಿ ಇರಿಸಿಕೊಳ್ಳುತ್ತಾರೆ. ನಾನೂ ಅದನ್ನೇ ಮಾಡುತ್ತೇನೆ. ಇದು ನಮ್ಮಿಬ್ಬರಲ್ಲಿರುವ ಸಾಮಾನ್ಯ ಗುಣ," ಎಂದು ಮೋದಿ ಹೇಳಿದರು. ಇದಕ್ಕೆ ಟ್ರಂಪ್ ಕೂಡಲೇ ಪ್ರತಿಕ್ರಿಯಿಸಿ, "ಅವರು ಭಾರತದಲ್ಲಿ ಅದ್ಭುತ ಕೆಲಸ ಮಾಡುತ್ತಿದ್ದಾರೆ. ನಾವಿಬ್ಬರೂ ಒಳ್ಳೆಯ ಸ್ನೇಹಿತರು. ನಮ್ಮ ದೇಶಗಳ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತೇವೆ" ಎಂದು ಹೇಳಿದರು.

ಮಗಾ- ಮಿಗಾ ಸಂಬಂಧ

"ಅಮೆರಿಕದ ಜನರು MAGA - Make America Great Again (ಅಮೆರಿಕವನ್ನು ಮತ್ತೊಮ್ಮೆ ಶ್ರೇಷ್ಠ ರಾಷ್ಟ್ರವನ್ನಾಗಿಸೋಣ) ಎಂಬುದನ್ನು ಚೆನ್ನಾಗಿ ಬಲ್ಲರು. ಭಾರತದ ಜನರೂ 2047ರ ವಿಕಸಿತ ಭಾರತದತ್ತ ಸಾಗುತ್ತಿದ್ದಾರೆ. ಅಮೆರಿಕದ ಭಾಷೆಯಲ್ಲಿ ಇದನ್ನು 'Make India Great Again - MIGA' ಎಂದು ಕರೆಯಬಹುದು. ಅಮೆರಿಕಾ ಮತ್ತು ಭಾರತ ಒಟ್ಟಿಗೆ ಕೆಲಸ ಮಾಡಿದಾಗ, MAGA ಜೊತೆಗೆ MIGA ಸೇರಿ ‘ಮೆಗಾ ಅಭಿವೃದ್ಧಿಯಾಗಲಿದೆ’," ಎಂದು ಪ್ರಧಾನಿ ಮೋದಿ ಹೇಳಿದರು.

ವಾಣಿಜ್ಯ ಒಪ್ಪಂದ

ಎರಡೂ ದೇಶಗಳಿಗೆ ಪರಸ್ಪರ ಪ್ರಯೋಜನಕಾರಿಯಾಗುವ ವ್ಯಾಪಾರ ಒಪ್ಪಂದ ತೀರ್ಮಾನಿಸಲು ನಮ್ಮ ತಂಡಗಳು ಶೀಘ್ರದಲ್ಲೇ ಕೆಲಸ ಮಾಡುತ್ತವೆ. ಭಾರತದ ಇಂಧನ ಭದ್ರತೆ ಖಚಿತಪಡಿಸಿಕೊಳ್ಳಲು ನಾವು ತೈಲ ಮತ್ತು ಅನಿಲ ವ್ಯಾಪಾರ ಬಲಪಡಿಸುತ್ತೇವೆ. ಇಂಧನ ಮೂಲಸೌಕರ್ಯದಲ್ಲಿ ಹೂಡಿಕೆ ಹೆಚ್ಚಾಗುತ್ತದೆ ಎಂದು ಮೋದಿ ಹೇಳಿದರು.

ಟ್ರಂಪ್ ಮಾತನಾಡಿ, ಭಾರತದೊಂದಿಗೆ ಅದ್ಭುತ ವ್ಯಾಪಾರ ಒಪ್ಪಂದಗಳನ್ನುನಿರೀಕ್ಷಿಸುವುದಾಗಿ ಹೇಳಿದರು. ಭಾರತವು ನಮಗೆ ಅತಿ ಹೆಚ್ಚು ಶುಲ್ಕ ವಿಧಿಸುವ ದೇಶಗಳಲ್ಲಿ ಒಂದು. ಅವರು ನಮಗೆ ತೆರಿಗೆ ಅಥವಾ ಸುಂಕ ವಿಧಿಸುತ್ತಾರೆ. ನಾವು ಕೂಡಾ ಅಷ್ಟೇ ಸುಂಕ ವಿಧಿಸುತ್ತೇವೆ. ಆ ಪ್ರಮಾಣ ಎಷ್ಟು ಎಂಬ ಬಗ್ಗೆ ಯಾರಿಗೂ ಗೊತ್ತಿಲ್ಲ ಎಂದು ಹೇಳಿದರು.

ಗುರುವಾರ ವಾಷಿಂಗ್ಟನ್ ತಲುಪಿದ ಪ್ರಧಾನಿ ನರೇಂದ್ರ ಮೋದಿ, ಟ್ರಂಪ್‌ ಭೇಟಿಗೂ ಮುನ್ನ ವಾಷಿಂಗ್ಟನ್ ಡಿಸಿಯ ಬ್ಲೇರ್ ಹೌಸ್‌ನಲ್ಲಿ ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೈಕೆಲ್ ವಾಲ್ಟ್ಜ್ ಮತ್ತು ಯುಎಸ್ ರಾಷ್ಟ್ರೀಯ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್ ಅವರೊಂದಿಗೆ ಸಭೆ ನಡೆಸಿದರು.

Tags:    

Similar News