ದುಬೈ, ಜೂನ್ 12 - ಕುವೈತಿನಲ್ಲಿ ಬುಧವಾರ ಮುಂಜಾನೆ ಕಟ್ಟಡವೊಂದರಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ ಕನಿಷ್ಠ 41 ಜನರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ದಕ್ಷಿಣ ಮಂಗಾಫ್ ಜಿಲ್ಲೆಯಲ್ಲಿ ಬೆಂಕಿ ದುರಂತ ಸಂಭವಿಸಿದೆ. ಆರು ಮಹಡಿಯ ಕಟ್ಟಡದ ಅಡುಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು,ಎಲ್ಲ ಕಡೆಗೆ ವ್ಯಾಪಿಸಿದೆ. ಮೃತರಲ್ಲಿ 10 ಮಂದಿ ಭಾರತೀಯರು ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಮತ್ತು ಅಧಿಕಾರಿಗಳು ಅವಘಡಕ್ಕೆ ಕಾರಣ ಶೋಧಿಸುತ್ತಿದ್ದಾರೆ ಎಂದು ಆಂತರಿಕ ಸಚಿವಾಲಯದ ಫೋರೆನ್ಸಿಕ್ ದಾಖಲೆಗಳ ಮುಖ್ಯಸ್ಥ ಮೇಜರ್ ಜನರಲ್ ಈದ್ ಅಲ್-ಒವೈಹಾನ್ ಅವರನ್ನು ಉಲ್ಲೇಖಿಸಿ ಕೆಯುಎನ್‌ಎ ವರದಿ ಮಾಡಿದೆ.
ಕುವೈತ್ 4.2 ದಶಲಕ್ಷ ಜನರಿರುವ ರಾಷ್ಟ್ರ. ಅಮೆರಿಕದ ನ್ಯೂಜೆರ್ಸಿಗಿಂತ ಸ್ವಲ್ಪ ಚಿಕ್ಕದು. ವಿಶ್ವದ ಆರನೇ ಅತಿ ದೊಡ್ಡ ತೈಲ ನಿಕ್ಷೇಪಗಳನ್ನು ಹೊಂದಿದೆ. 2022 ರಲ್ಲಿ ತೈಲ ಸಂಸ್ಕರಣಾಗಾರದಲ್ಲಿ ಸಂಭವಿಸಿದ ಬೆಂಕಿಯಲ್ಲಿ ನಾಲ್ವರು ಸಾವನ್ನಪ್ಪಿದ್ದರು.