ಶ್ರೀಲಂಕಾದ ಆರ್ಥಿಕ ಚೇತರಿಕೆಗೆ ಬೆಂಬಲ: ಜೈಶಂಕರ್
ದಿಸ್ಸನಾಯಕೆ ಅವರು ಅಧಿಕಾರ ವಹಿಸಿಕೊಂಡ ನಂತರ ದ್ವೀಪ ರಾಷ್ಟ್ರಕ್ಕೆ ಭೇಟಿ ನೀಡಿದ ಮೊದಲ ವಿದೇಶಿ ಗಣ್ಯ ಸಚಿವ ಜೈಶಂಕರ್. ಅವರು ಶ್ರೀಲಂಕಾಕ್ಕೆ ಭಾರತದ ಬೆಂಬಲವನ್ನು ಪುನರುಚ್ಚರಿಸಿದರು.;
ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ ಅವರನ್ನು ಶುಕ್ರವಾರ ಭೇಟಿಯಾಗಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಎರಡು ದೇಶಗಳ ನಡುವೆ ಸಹಕಾರವನ್ನು ಹೆಚ್ಚಿಸಲು ಮತ್ತು ಭಾರತ-ಶ್ರೀಲಂಕಾ ಸಂಬಂಧಗಳನ್ನು ಬಲಪಡಿಸುವ ಮಾರ್ಗಗಳ ಕುರಿತು ಚರ್ಚೆ ನಡೆಸಿದರು.
ದಿಸ್ಸನಾಯಕೆ ಅವರು ಪ್ರಮಾಣವಚನ ಸ್ವೀಕರಿಸಿದ ಹದಿನೈದು ದಿನಗಳೊಳಗೆ ಅವರನ್ನು ಭೇಟಿ ಮಾಡಿದ ಜೈಶಂಕರ್, ದ್ವೀಪ ರಾಷ್ಟ್ರದ ಆರ್ಥಿಕ ಚೇತರಿಕೆ ಪ್ರಯತ್ನಗಳಿಗೆ ಬೆಂಬಲವನ್ನು ಪುನರುಚ್ಚರಿಸಿದರು.
ʻಇಂದು ಕೊಲಂಬೊದಲ್ಲಿ ಅನುರಾ ದಿಸ್ಸನಾಯಕೆ ಅವರನ್ನು ಭೇಟಿ ಮಾಡಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾರ್ದಿಕ ಶುಭಾಶಯ ತಿಳಿಸಿದ್ದಾರೆ,ʼ ಎಂದು ಜೈಶಂಕರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ʻಎರಡು ದೇಶಗಳು ಮತ್ತು ಜನರ ನಡುವಿನ ಸಹಕಾರವನ್ನು ಗಾಢವಾಗಿಸಲು ಮತ್ತು ಭಾರತ-ಶ್ರೀಲಂಕಾ ಸಂಬಂಧವನ್ನು ಬಲಪಡಿಸುವ ಮಾರ್ಗಗಳನ್ನು ಚರ್ಚಿಸಲಾಗಿದೆ,ʼ ಎಂದು ತಿಳಿಸಿದ್ದಾರೆ.
ದಿಸ್ಸನಾಯಕೆ ನೇತೃತ್ವದ ನ್ಯಾಷನಲ್ ಪೀಪಲ್ಸ್ ಪವರ್ (ಎನ್‌ಪಿಪಿ) ಸರ್ಕಾರ ಸೆಪ್ಟೆಂಬರ್ 23 ರಂದು ಅಧಿಕಾರಕ್ಕೆ ಬಂದ ನಂತರ ಭೇಟಿ ನೀಡಿದ ಮೊದಲ ವಿದೇಶಿ ಗಣ್ಯ ಜೈಶಂಕರ್. ಜೈಶಂಕರ್ ಅವರನ್ನು ಶ್ರೀಲಂಕಾದ ವಿದೇಶಾಂಗ ಕಾರ್ಯದರ್ಶಿ ಅರುಣಿ ವಿಜೆವರ್ಧನ ಮತ್ತು ಶ್ರೀಲಂಕಾದಲ್ಲಿ ಭಾರತೀಯ ಹೈಕಮಿಷನರ್ ಸಂತೋಷ್ ಝಾ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು.
ಇದಕ್ಕೂ ಮುನ್ನ ಜೈಶಂಕರ್ ಅವರು ಶ್ರೀಲಂಕಾದ ವಿದೇಶಾಂಗ ಸಚಿವ ವಿಜಿತಾ ಹೆರಾತ್ ಅವರನ್ನು ಭೇಟಿ ಮಾಡಿದ್ದರು.
ದಿಸ್ಸನಾಯಕೆ ನಿಲುವು: ಪ್ರತಿಪಕ್ಷದಲ್ಲಿದ್ದಾಗ ದಿಸ್ಸನಾಯಕೆ ಅವರು ಕೆಲವು ಭಾರತೀಯ ಯೋಜನೆಗಳ ಬಗ್ಗೆ, ವಿಶೇಷವಾಗಿ ಅದಾನಿ ಗ್ರೂಪ್ ನಡೆಸುತ್ತಿರುವ ಸುಸ್ಥಿರ ಇಂಧನ ಯೋಜನೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ತಾವು ಅಧಿಕಾರಕ್ಕೆ ಬಂದರೆ ಆ ಯೋಜನೆಗಳನ್ನು ರದ್ದುಗೊಳಿಸುವುದಾಗಿ ವಾಗ್ದಾನ ಮಾಡಿದ್ದರು.
ಫೆಬ್ರವರಿಯಲ್ಲಿ ಜೈಶಂಕರ್ ಅವರು ದಿಸ್ಸನಾಯಕೆ ಅವರನ್ನು ನವದೆಹಲಿಗೆ ಆಹ್ವಾನಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.