ಮೋಸ್ಟ್ ವಾಂಟೆಡ್ ಖಲಿಸ್ತಾನಿ ಉಗ್ರ ಅರ್ಶ್ ದಲ್ಲಾ ಕೆನಡಾದಲ್ಲಿ ಬಂಧನ
ಮಿಲ್ಟನ್ ಪಟ್ಟಣದಲ್ಲಿ ಅಕ್ಟೋಬರ್ 27 ಅಥವಾ 28ರಂದು ನಡೆದ ಸಶಸ್ತ್ರ ದಾಳಿ ಅಪರಾಧದಲ್ಲಿ ಭಾಗಿಯಾಗಿರುವ ಶಂಕೆಯ ಹಿನ್ನೆಲೆಯಲ್ಲಿ ದಲ್ಲಾನನ್ನು ಬಂಧಿಸಲಾಗಿದೆ. ಆತನ ಬಂಧನವನ್ನು ಭಾರತೀಯ ಭದ್ರತಾ ಸಂಸ್ಥೆಗಳ ಮೂಲಗಳು ದೃಢಪಡಿಸಿವೆ;
ಇತ್ತೀಚೆಗೆ ನಡೆದ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖಲಿಸ್ತಾನಿ ಭಯೋತ್ಪಾದಕ ಮತ್ತು ಭಾರತದ ಮೋಸ್ಟ್ ವಾಂಟೆಡ್ ಅಪರಾಧಿಗಳಲ್ಲಿ ಒಬ್ಬನಾದ ಅರ್ಶ್ ದಲ್ಲಾ ಅಲಿಯಾಸ್ ಅರ್ಶ್‌ದೀಪ್ ಸಿಂಗ್‌ನನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ. ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್) ನ ಹಂಗಾಮಿ ಮುಖ್ಯಸ್ಥನಾಗಿರುವ ದಲ್ಲಾ, ಹತ್ಯೆಗೀಡಾದ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್‌ನ ಉತ್ತರಾಧಿಕಾರಿ.
ಮಿಲ್ಟನ್ ಪಟ್ಟಣದಲ್ಲಿ ಅಕ್ಟೋಬರ್ 27 ಅಥವಾ 28ರಂದು ನಡೆದ ಸಶಸ್ತ್ರ ದಾಳಿ ಅಪರಾಧದಲ್ಲಿ ಭಾಗಿಯಾಗಿರುವ ಶಂಕೆಯ ಹಿನ್ನೆಲೆಯಲ್ಲಿ ದಲ್ಲಾನನ್ನು ಬಂಧಿಸಲಾಗಿದೆ. ಆತನ ಬಂಧನವನ್ನು ಭಾರತೀಯ ಭದ್ರತಾ ಸಂಸ್ಥೆಗಳ ಮೂಲಗಳು ದೃಢಪಡಿಸಿವೆ ಎಂದು ʼಇಂಡಿಯಾ ಟುಡೇʼ ವರದಿ ಮಾಡಿದೆ.
ಭಾರತದಲ್ಲಿ ವಿವಿಧ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು ಪೊಲೀಸರಿಗೆ ಬೇಕಾಗಿದ್ದ ದಲ್ಲಾ, ತನ್ನ ಹೆಂಡತಿಯೊಂದಿಗೆ ಕೆನಡಾದಲ್ಲಿ ವಾಸಿಸುತ್ತಿದ್ದಾನೆ. ಕೆನಡಾದ ಪೊಲೀಸ್ ಮತ್ತು ಭದ್ರತಾ ಸಂಸ್ಥೆಗಳು ವಿಶೇಷವಾಗಿ ಹಾಲ್ಟನ್ ಪ್ರಾದೇಶಿಕ ಪೊಲೀಸ್ ಇಲಾಖೆ(ಎಚ್ಆರ್‌ಪಿಎಸ್) ಇತ್ತೀಚಿನ ಶೂಟೌಟ್ ಬಗ್ಗೆ ತನಿಖೆ ನಡೆಸುತ್ತಿವೆ. ಹೀಗಾಗಿ ಆತನನ್ನು ಬಂಧಿಸಿದೆ.
ಭಾರತೀಯ ಅಧಿಕಾರಿಗಳು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಕೆನಡಾದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುತ್ತಿದ್ದಾರೆ.
ದಲ್ಲಾ ಗ್ಯಾಂಗ್ ಸದಸ್ಯರಿಬ್ಬರ ಬಂಧನ
ಕಳೆದ ತಿಂಗಳು ಪಂಜಾಬ್‌ನಲ್ಲಿ ಸಿಖ್ ಕಾರ್ಯಕರ್ತನ ಹತ್ಯೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾದ ದಲ್ಲಾ ಗ್ಯಾಂಗ್‌ನ ಇಬ್ಬರು ಸದಸ್ಯರನ್ನು ಮೊಹಾಲಿಯ ಖರಾನ್‌ನಿಂದ ಬಂಧಿಸಲಾಗಿದೆ ಎಂದು ಪಂಜಾಬ್‌ನ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಸಿಖ್ ಕಾರ್ಯಕರ್ತ ಗುರ್ಪ್ರೀತ್ ಸಿಂಗ್ ಹರಿ ನೌ ಅಲಿಯಾಸ್ ಭೋಡಿ ಅವರನ್ನು ಅಕ್ಟೋಬರ್ 9 ರಂದು ಫರಿದ್‌ಕೋಟ್‌ನ ಗ್ರಾಮದ ಗುರುದ್ವಾರದಿಂದ ತನ್ನ ಮೋಟಾರ್ ಸೈಕಲ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದ ಮಾಸ್ಟರ್ ಮೈಂಡ್ ದಲ್ಲಾ ಎಂದು ಪೊಲೀಸರು ಆಗ ಹೇಳಿದ್ದರು.
ಪಂಜಾಬ್‌ನಲ್ಲಿ ಅಪರಾಧ ಚಟುವಟಿಕೆಗಳು
ಈ ವರ್ಷದ ಸೆಪ್ಟೆಂಬರ್‌ನಲಿ ಪಂಜಾಬ್‌ನ ಮೊಗಾ ಜಿಲ್ಲೆಯ ತಮ್ಮ ನಿವಾಸದಲ್ಲಿ ಗುಂಡಿನೇಟಿಗೆ ಹತ್ಯೆಯಾಗಿದ್ದ ಕಾಂಗ್ರೆಸ್ ಮುಖಂಡ ಬಲ್ಜಿಂದರ್ ಸಿಂಗ್ ಬಲ್ಲಿ ಹತ್ಯೆಯ ಹೊಣೆಯನ್ನು ದಲ್ಲಾ ವಹಿಸಿಕೊಂಡಿದ್ದ. ಬಲ್ಲಿ ತನ್ನ ಭವಿಷ್ಯ ಹಾಳು ಮಾಡಿದ್ದಾನೆ ಮತ್ತು ದರೋಡೆಕೋರರ ಜಗತ್ತಿಗೆ ಪರಚಯಿಸಿದ್ದಾನೆ ಎಂದು ದಲ್ಲಾ ತನ್ನ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದ. ತನ್ನ ತಾಯಿಯ ಬಂಧನದ ಹಿಂದೆ ಕಾಂಗ್ರೆಸ್ ನಾಯಕನ ಕೈವಾಡವಿದೆ. ಅದಕ್ಕಾಗಿ ಈ ಸೇಡು ಎಂದು ಹೇಳಿದ್ದ.
ಎನ್ಐಎ ಭಯೋತ್ಪಾದಕರ ಪಟ್ಟಿಯಲ್ಲಿ ವಾಂಟೆಡ್ ವ್ಯಕ್ತಿಯಾಗಿರುವ ದಲ್ಲಾ ಕಳೆದ ಮೂರ್ನಾಲ್ಕು ವರ್ಷಗಳಿಂದ ಕೆನಡಾದಲ್ಲಿರುವ ತನ್ನ ನೆಲೆಯಿಂದಲೇ ಪಂಜಾಬ್‌ನಲ್ಲಿ ಅಪರಾಧ ಚಟುವಟಿಕೆಗಳನ್ನು ನಡೆಸುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಮೊಗಾ ಮೂಲದವನಾದ ದಲ್ಲಾ ಪಂಜಾಬ್‌ನಲ್ಲಿ ಅನೇಕ ಭಯೋತ್ಪಾದಕ ಹತ್ಯೆಗಳ ಆರೋಪ ಎದುರಿಸುತ್ತಿದ್ದಾನೆ.
ಪಂಜಾಬ್ ಪೊಲೀಸರು ಈಗಾಗಲೇ ದಲ್ಲಾ ಮ ಆಪ್ತ ಸಹಾಯಕರನ್ನು ಬಂಧಿಸುವ ಮೂಲಕ ಮತ್ತು ಐಇಡಿಗಳು, ಹ್ಯಾಂಡ್-ಗ್ರೆನೇಡ್‌ಗಳು ಮತ್ತು ಇತರ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದರು.