Donald Trump: ಟ್ರಂಪ್ ಮೆಚ್ಚಿಸಲು 18,000 ಅಕ್ರಮ ವಲಸಿಗರನ್ನು ವಾಪಸ್ ಕರೆಸಿಕೊಳ್ಳಲಿದೆ ಭಾರತ
Donald Trump: ಇತರ ಹಲವಾರು ರಾಷ್ಟ್ರಗಳಂತೆ, ಟ್ರಂಪ್ ಆಡಳಿತವನ್ನು ಸಮಾಧಾನಪಡಿಸಲು ಮತ್ತು ಅದರ ವ್ಯಾಪಾರ ಬೆದರಿಕೆಗಳ ಹೊರೆ ತಪ್ಪಿಸಲು ಭಾರತವು ತೆರೆಮರೆಯಲ್ಲಿ ಕೆಲಸ ಮಾಡುತ್ತಿದೆ ಎಂದು ಬ್ಲೂಮ್‌ಬರ್ಗ್ ಹೇಳಿದೆ;
ಅಕ್ರಮ ವಾಸಿಗಳ ಬಗ್ಗೆ ಟ್ರಂಪ್ (Donald Trump) ಆಡಳಿತ ತೆಗೆದುಕೊಳ್ಳುತ್ತಿರುವ ನಿರ್ಲಕ್ಷ್ಯದ ಕ್ರಮಕ್ಕೆ ಭಾರತವೂ ನೆರವಾಗಲಿದೆ ಎಂದು ಹೇಳಲಾಗಿದೆ. ದೊಡ್ಡಣ್ಣನ ಮೆಚ್ಚುಗೆ ಪಡೆಯಲು ಭಾರತ ಶತಪ್ರಯತ್ನ ಪಡುತ್ತಿದ್ದು. ಯುನೈಟೆಡ್ ಸ್ಟೇಟ್ಸ್‌ನಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಅಂದಾಜು 18,000 ನಾಗರಿಕರನ್ನು ವಾಪಸ್ ಕರೆಸಿಕೊಳ್ಳಲು ಭಾರತ ತಯಾರಿ ನಡೆಸುತ್ತಿದೆ ಎಂಬುದಾಗಿ ವರದಿಯಾಗಿದೆ.
ಯುಎಸ್ ಅಧಿಕಾರಿಗಳು ಗುರುತಿಸಿರುವ 18,000 ಜನರನ್ನು ಗಡೀಪಾರು ಮಾಡುವ ಪ್ರಕ್ರಿಯೆ ಬಗ್ಗೆ ಭಾರತ ಸರ್ಕಾರ ಚಿಂತನೆ ನಡೆಸುತ್ತಿದೆ ಹಾಗೂ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ ಎಂದು ಬ್ಲೂಮ್‌ಬರ್ಗ್ ವರದಿ ಮಾಡಿದೆ.
ಅಮೆರಿಕದಲ್ಲಿರುವ ಭಾರತದ ಅಕ್ರಮವಾಸಿಗಳ ಸಂಖ್ಯೆ ಎಷ್ಟು ಎಂಬುದು ಸ್ಪಷ್ಟವಾಗಿಲ್ಲ. ಸದ್ಯಕ್ಕೆ 18 ಸಾವಿರ ಎಂದು ಹೇಳಲಾಗುತ್ತಿದ್ದರೂ ನೈಜ ಸಂಖ್ಯೆ ಇನ್ನಷ್ಟು ಹೆಚ್ಚಾಗಿರಬಹುದು ಎಂದು ವರದಿ ಹೇಳಿದೆ. ಅವರಲ್ಲಿ ಬಹುತೇಕರು ಗುಜರಾತ್ ಮತ್ತು ಪಂಜಾಬ್ ಮೂಲದವರು ಎಂದು ನಂಬಲಾಗಿದೆ.
ಕಾನೂನುಬಾಹಿರ ಮತ್ತು ವ್ಯಾಪಾರ
ಟ್ರಂಪ್ ಅಧಿಕಾರಕ್ಕೆ ಏರಿದ ಬಳಿಕ ಎಲ್ಲ ರಾಷ್ಟ್ರಗಳು ಅವರ ಆಡಳಿತವನ್ನು ಸಮಾಧಾನ ಮಾಡಲು ಮುಂದಾಗಿದೆ. ಯಾಕೆಂದರೆ ಆ ದೇಶವು ಒಡ್ಡುತ್ತಿರುವ ವ್ಯಾಪಾರ ಸಂಬಂಧದ ಬೆದರಿಕೆಯನ್ನು ತಗ್ಗಿಸುವುದೇ ಆ ದೇಶಗಳ ಉದ್ದೇಶ. ಅಂತೆಯೇ ಭಾರತವು ತೆರೆಮರೆಯಲ್ಲಿ ಕೆಲಸ ಮಾಡುತ್ತಿದೆ" ಎಂದು ಬ್ಲೂಮ್‌ಬರ್ಗ್ ಹೇಳಿದೆ.
ಅಕ್ರಮ ನುಸುಳುಕೋರರನ್ನು ವಾಪಸ್ ಕರೆತಲು ಸಹಕಾರ ನೀಡುವುದಕ್ಕೆ ಪ್ರತಿಯಾಗಿ, ಟ್ರಂಪ್ ಆಡಳಿತವು ಭಾರತೀಯರು ಪ್ರತಿಭಾವಂತರಿಗೆ ಕಾನೂನು ಪ್ರಕಾರ ಆ ದೇಶಕ್ಕೆ ಪ್ರವೇಶಿಸಲು ನೆರವು ನೀಡಬಹುದು ಎಂದು ಹೇಳಲಾಗಿದೆ. ವಿದ್ಯಾರ್ಥಿ ವೀಸಾಗಳು ಮತ್ತು ನುರಿತ ಕಾರ್ಮಿಕರಿಗೆ ಎಚ್ -1 ಬಿ ಸಿಗಬಹುದು ಎಂದು ಭಾರತ ಆಶಿಸಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, 2023ರಲ್ಲಿ ಅಮೆರಿಕವು ವಿತರಣೆ ಮಾಡಿರವ 386,000 ಎಚ್ -1 ಬಿ ವೀಸಾಗಳಲ್ಲಿ ಸುಮಾರು ಮುಕ್ಕಾಲು ಭಾಗ ಭಾರತೀಯ ನಾಗರಿಕರು ಸೌಲಭ್ಯ ಪಡೆದಿದ್ದಾರೆ..
ಭಾರತದ ಅಧಿಕೃತ ಪ್ರತಿಕ್ರಿಯೆ
"ವಲಸೆ ಕುರಿತ ಭಾರತ-ಯುಎಸ್ ಸಹಕಾರದ ಭಾಗವಾಗಿ, ಎರಡೂ ಕಡೆಯವರು ಅಕ್ರಮ ವಲಸೆ ತಡೆಯುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ" ಎಂದು ಭಾರತೀಯ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
"ಭಾರತದಿಂದ ಅಮೆರಿಕಕ್ಕೆ ಕಾನೂನುಬದ್ಧ ವಲಸೆಗೆ ಹೆಚ್ಚಿನ ಮಾರ್ಗಗಳನ್ನು ಸೃಷ್ಟಿಸಲು ಈ ರೀತಿ ಮಾಡಲಾಗುತ್ತಿದೆ" ಎಂದು ಅವರು ಹೇಳಿದ್ದಾರೆ.
2024ರ ಆರ್ಥಿಕ ವರ್ಷದಲ್ಲಿ ಅಮೆರಿಕ ಗಡಿ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿರುವ ಅಕ್ರಮ ವಾಸಿಗಳ ಪೈಕಿ ಭಾರತೀಯರು ಕೇವಲ ಮೂರು ಶೇಕಡಾ ಮಾತ್ರ ಇದ್ದಾರೆ ಎಂದು ಅಮೆರಿಕದ ಅಂಕಿ ಅಂಶಗಳು ತಿಳಿಸಿವೆ.
ಹೆಚ್ಚುತ್ತಿರುವ ಭಾರತೀಯರ ಅಕ್ರಮ
ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಅಕ್ರಮ ವಲಸಿಗರ ಪಾಲು ಹೆಚ್ಚುತ್ತಿದೆ. ಯುಎಸ್-ಕೆನಡಾ ಗಡಿಯಿಂದ ಹೆಚ್ಚಿನ ಅಕ್ರಮ ಪ್ರವೇಶ ವರದಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಲಂಡನ್‌ಗೆ ಕಿಂಗ್ಸ್ ಕಾಲೇಜಿನ ಅಂತರರಾಷ್ಟ್ರೀಯ ಸಂಬಂಧಗಳ ಪ್ರಾಧ್ಯಾಪಕ ಹರ್ಷ್ ಪಂತ್ ಬ್ಲೂಮ್‌ಬರ್ಗ್ ಜತೆ ಮಾತನಾಡಿ, ಅಕ್ರಮ ವಲಸೆಯ ನಿವಾರಣೆ ಟ್ರಂಪ್ ಆಡಳಿತಕ್ಕೆ ಸುಧಾರಣೆ ಮಾಡಬಹುದಾದ ಬಹುದೊಡ್ಡ ಕ್ಷೇತ್ರವಾಗಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಮೆರಿಕದಿಂದ ವಿಮಾನದಲ್ಲಿ 100ಕ್ಕೂ ಹೆಚ್ಚು ಭಾರತೀಯರನ್ನು ಕರೆತರಲಾಗಿತ್ತು. ಇದು ಹಿಂದಿನ 12 ತಿಂಗಳಲ್ಲಿ 1,100 ಕ್ಕೂ ಹೆಚ್ಚು ಭಾರತೀಯ ನಾಗರಿಕರನ್ನು ಗಡಿಪಾರು ಮಾಡಲಾಗಿದೆ.
ಖಲಿಸ್ತಾನ್ ಬೆಂಬಲಿಗರು?
ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ಕೆಲವು ಭಾರತೀಯರು ಖಲಿಸ್ತಾನ್ ಚಳವಳಿಯ ಬೆಂಬಲಿಗರಾಗಿರಬಹುದು ಎಂದು ವರದಿ ತಿಳಿಸಿದೆ.
ಇನ್ನು ಭಾರತದಲ್ಲಿ ಅಮೆರಿಕದ ಉತ್ಪನ್ನಗಳಿಗೆ ಹಾಕುತ್ತಿರುವ ತೆರಿಗೆಗೆ ಪ್ರತಿಯಾಗಿ ಅದಕ್ಕಿಂತ ದುಪ್ಪಟ್ಟು ಕರ ವಿಧಿಸುವುದಾಗಿ ಆ ದೇಶ ಹೇಳಿರುವುದು ಆತಂಕಕ್ಕೆ ಕಾರಣವಾಗಿದೆ.