ಉಗ್ರವಾದ ವೈಭವೀಕರಿಸುವ ನಿಮಗೆ ನಾಚಿಕೆಯಾಗಬೇಕು: ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನಕ್ಕೆ ಭಾರತದ ತಿರುಗೇಟು
'ಉತ್ತರಿಸುವ ಹಕ್ಕು' ಬಳಸಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಮಿಷನ್‌ನ ಪ್ರಥಮ ಕಾರ್ಯದರ್ಶಿ ಪೆಟಲ್ ಗಹ್ಲೋಟ್, ಪಾಕಿಸ್ತಾನದ ಎರಡು ನಾಲಿಗೆಯ ನೀತಿಯನ್ನು ಬಯಲಿಗೆಳೆದರು.
ವಿಶ್ವಸಂಸ್ಥೆಯ 80ನೇ ಮಹಾಧಿವೇಶನದಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಭಾರತದ ವಿರುದ್ಧ ಮಾಡಿದ ಆರೋಪಗಳಿಗೆ ಭಾರತವು ತೀಕ್ಷ್ಣವಾಗಿ ತಿರುಗೇಟು ನೀಡಿದೆ. ಪಾಕಿಸ್ತಾನದ ಹೇಳಿಕೆಗಳನ್ನು "ಹಾಸ್ಯಾಸ್ಪದ ನಾಟಕ" ಎಂದು ಕರೆದಿರುವ ಭಾರತ, ಭಯೋತ್ಪಾದನೆಯನ್ನು ಪೋಷಿಸುವುದೇ ಪಾಕಿಸ್ತಾನದ ವಿದೇಶಾಂಗ ನೀತಿಯ ಕೇಂದ್ರಬಿಂದುವಾಗಿದೆ ಎಂದು ಜಾಗತಿಕ ವೇದಿಕೆಯಲ್ಲಿ ಹೇಳಿದೆ.
ಶುಕ್ರವಾರ ನಡೆದ ಅಧಿವೇಶನದಲ್ಲಿ ಮಾತನಾಡಿದ್ದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್, ಮೇ ತಿಂಗಳಲ್ಲಿ ನಡೆದ 'ಆಪರೇಷನ್ ಸಿಂಧೂರ್' ವೇಳೆ ಭಾರತದ ಏಳು ಯುದ್ಧ ವಿಮಾನಗಳನ್ನು ತಮ್ಮ ಸೇನೆ ಹೊಡೆದುರುಳಿಸಿದೆ ಎಂದು ಹೇಳಿಕೊಂಡಿದ್ದರು. ಕಾಶ್ಮೀರ ವಿಷಯ ಮತ್ತು ಸಿಂಧೂ ನದಿ ನೀರು ಒಪ್ಪಂದವನ್ನು ಭಾರತ ರದ್ದುಗೊಳಿಸಿರುವುದನ್ನು ಅವರು ಪ್ರಸ್ತಾಪಿಸಿ, ಅಂತರರಾಷ್ಟ್ರೀಯ ಸಮುದಾಯದ ಗಮನ ಸೆಳೆಯಲು ಪ್ರಯತ್ನಿಸಿದ್ದರು.
ಭಾರತದ ಖಡಕ್ ಉತ್ತರ
'ಉತ್ತರಿಸುವ ಹಕ್ಕು' ಬಳಸಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಮಿಷನ್‌ನ ಪ್ರಥಮ ಕಾರ್ಯದರ್ಶಿ ಪೆಟಲ್ ಗಹ್ಲೋಟ್, ಪಾಕಿಸ್ತಾನದ ಎರಡು ನಾಲಿಗೆಯ ನೀತಿಯನ್ನು ಬಯಲಿಗೆಳೆದರು. "ಎಷ್ಟೇ ನಾಟಕವಾಡಿದರೂ, ಎಷ್ಟೇ ಸುಳ್ಳು ಹೇಳಿದರೂ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ. ಭಯೋತ್ಪಾದನೆಯನ್ನು ವೈಭವೀಕರಿಸುವುದನ್ನೇ ಪಾಕಿಸ್ತಾನ ಮುಂದುವರಿಸಿದೆ" ಎಂದು ಅವರು ಸ್ಪಷ್ಟಪಡಿಸಿದರು.
ಒಸಾಮಾಗೆ ಆಶ್ರಯ ನೀಡಿದ್ದನ್ನು ಸ್ಮರಿಸಿದ ಭಾರತ
"ಅಮೆರಿಕದ ಮೇಲೆ 9/11 ದಾಳಿ ನಡೆಸಿದ ಕುಖ್ಯಾತ ಉಗ್ರ ಒಸಾಮಾ ಬಿನ್ ಲಾಡೆನ್‌ಗೆ ಒಂದು ದಶಕಗಳ ಕಾಲ ಆಶ್ರಯ ನೀಡಿದ್ದು ಇದೇ ಪಾಕಿಸ್ತಾನ. ಜಗತ್ತಿನ ಕಣ್ಣಿಗೆ ಭಯೋತ್ಪಾದನೆ ವಿರುದ್ಧದ ಯುದ್ಧದಲ್ಲಿ ಪಾಲುದಾರರಂತೆ ನಟಿಸುತ್ತಲೇ, ಉಗ್ರನಿಗೆ ರಕ್ಷಣೆ ನೀಡಿತ್ತು. ಇಂತಹ ಇತಿಹಾಸವಿರುವ ದೇಶಕ್ಕೆ, ಬೇರೆಯವರತ್ತ ಬೆರಳು ತೋರಿಸಲು ಯಾವ ನೈತಿಕತೆಯೂ ಇಲ್ಲ," ಎಂದು ಗಹ್ಲೋಟ್ ತೀಕ್ಷ್ಣವಾಗಿ ನುಡಿದರು.
ಯುದ್ಧ ವಿರಾಮಕ್ಕಾಗಿ ಅಂಗಲಾಚಿದ್ದ ಪಾಕ್ ಸೇನೆ
"ಮೇ 9ರವರೆಗೂ ಭಾರತದ ಮೇಲೆ ಮತ್ತಷ್ಟು ದಾಳಿ ನಡೆಸುವುದಾಗಿ ಪಾಕಿಸ್ತಾನ ಬೆದರಿಕೆ ಹಾಕಿತ್ತು. ಆದರೆ, 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯ ತೀವ್ರತೆಗೆ ತತ್ತರಿಸಿ, ಮೇ 10ರಂದು ಪಾಕಿಸ್ತಾನದ ಸೇನೆಯೇ ನಮ್ಮೊಂದಿಗೆ ನೇರವಾಗಿ ಯುದ್ಧ ನಿಲ್ಲಿಸುವಂತೆ ಅಂಗಲಾಚಿತ್ತು. ಇದು ವಾಸ್ತವ," ಎಂದು ಗಹ್ಲೋಟ್ ಬಹಿರಂಗಪಡಿಸಿದರು. "ನಾಶವಾದ ರನ್‌ವೇಗಳು ಮತ್ತು ಸುಟ್ಟುಹೋದ ಹ್ಯಾಂಗರ್‌ಗಳು ನಿಮಗೆ ವಿಜಯದಂತೆ ಕಂಡರೆ, ಆ ಖುಷಿಯನ್ನು ನೀವೇ ಅನುಭವಿಸಿ," ಎಂದು ಅವರು ವ್ಯಂಗ್ಯವಾಡಿದರು.
ಉಗ್ರ ಸಂಘಟನೆಗೆ ಪಾಕಿಸ್ತಾನದ ರಕ್ಷಣೆ
"ಏಪ್ರಿಲ್ 25ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಅಮಾಯಕ ಪ್ರವಾಸಿಗರನ್ನು ಹತ್ಯೆಗೈದ 'ದಿ ರೆಸಿಸ್ಟೆನ್ಸ್ ಫ್ರಂಟ್' ಎಂಬ ಉಗ್ರ ಸಂಘಟನೆಯನ್ನು ಇದೇ ಪಾಕಿಸ್ತಾನ ರಕ್ಷಿಸಲು ಯತ್ನಿಸಿತ್ತು. ಇದು ಅವರ ಉಗ್ರಪರ ನೀತಿಗೆ ಹಿಡಿದ ಕೈಗನ್ನಡಿ" ಎಂದು ಗಹ್ಲೋಟ್ ಆರೋಪಿಸಿದರು.