ಭಾರತದಿಂದ ಯುಎನ್‌ಎಸ್‌ಸಿಯಲ್ಲಿ ಪಾಕಿಸ್ತಾನದ ಭಯೋತ್ಪಾದನಾ ಪ್ರಾಯೋಜಕತ್ವದ ಖಂಡನೆ
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ "ಸಂಘರ್ಷದ ಸಂದರ್ಭದಲ್ಲಿ ಸಾಮಾನ್ಯ ಜನರ ರಕ್ಷಣೆ ಎಂಬ ವಿಷಯದ ಕುರಿತಾದ ತೆರೆದ ಚರ್ಚೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿ, ರಾಯಭಾರಿ ಪಾರ್ವತನೇನಿ ಹರೀಶ್ ಮಾತನಾಡುವ ವೇಳೆ ಪಾಕಿಸ್ತಾನಕ್ಕೆ ಛೀಮಾರಿ ಹಾಕಿದರು.;
ಪಾಕಿಸ್ತಾನದ ಕಪಟತನದ ವರ್ತನೆಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ಭಾರತವು ತೀವ್ರವಾಗಿ ಖಂಡಿಸಿದೆ. ಭಯೋತ್ಪಾದಕರಿಗೂ ಸಾಮಾನ್ಯ ಜನರಿಗೂ ಯಾವುದೇ ಭೇದವಿಲ್ಲದೆ ವರ್ತಿಸುವ ದೇಶಕ್ಕೆ. ಸಾಮಾನ್ಯ ಜನರ ರಕ್ಷಣೆಯ ಬಗ್ಗೆ ಮಾತನಾಡಲು ಯಾವುದೇ ಅರ್ಹತೆ ಇಲ್ಲ ಎಂದು ಭಾರತ ಕಿಡಿ ಕಾರಿದೆ.
ಈ ತಿಂಗಳ ಆರಂಭದಲ್ಲಿ ಪಾಕಿಸ್ತಾನದ ಸೇನೆಯು ಭಾರತದ ಗಡಿಭಾಗದ ಗ್ರಾಮಗಳ ಮೇಲೆ ಉದ್ದೇಶಪೂರ್ವಕವಾಗಿ ಶೆಲ್ ದಾಳಿ ನಡೆಸಿ, ಸಾಮಾನ್ಯ ಜನರನ್ನು ಹತ್ಯೆ ಮಾಡಿರುವುದನ್ನು ಭಾರತ ಬಯಲು ಮಾಡಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ "ಸಂಘರ್ಷದ ಸಂದರ್ಭದಲ್ಲಿ ಸಾಮಾನ್ಯ ಜನರ ರಕ್ಷಣೆ ಎಂಬ ವಿಷಯದ ಕುರಿತಾದ ತೆರೆದ ಚರ್ಚೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿ, ರಾಯಭಾರಿ ಪಾರ್ವತನೇನಿ ಹರೀಶ್ ಮಾತನಾಡುವ ವೇಳೆ ಪಾಕಿಸ್ತಾನಕ್ಕೆ ಛೀಮಾರಿ ಹಾಕಿದರು.
"ಪಾಕಿಸ್ತಾನದ ಪ್ರತಿನಿಧಿಯ ಆಧಾರರಹಿತ ಆರೋಪಗಳಿಗೆ ಉತ್ತರಿಸಲು ನಾನು ಬದ್ಧನಾಗಿದ್ದೇನೆ ಎಂದರಲ್ಲದೆ, "ಭಾರತವು ದಶಕಗಳಿಂದ ಪಾಕಿಸ್ತಾನದ ಪ್ರಾಯೋಜಿತ ಭಯೋತ್ಪಾದಕ ದಾಳಿಗಳನ್ನು ಎದುರಿಸುತ್ತಿದೆ. 2008ರ ಮುಂಬೈನ 26/11 ದಾಳಿಯಿಂದ ಹಿಡಿದು, 2025ರ ಏಪ್ರಿಲ್‌ನಲ್ಲಿ ಪಹಲ್ಗಾಮ್‌ನಲ್ಲಿ ನಡೆದ ಪ್ರವಾಸಿಗರ ಮೇಲಿನ ಭೀಕರ ಕೊಲೆಯವರೆಗೆ, ಈ ದಾಳಿಗಳ ಗುರಿಯಾಗಿದೆ. ಇಂತಹ ದೇಶವು ಸಾಮಾನ್ಯ ಜನರ ರಕ್ಷಣೆಯ ಬಗ್ಗೆ ಚರ್ಚೆಯಲ್ಲಿ ಭಾಗವಹಿಸುವುದೇ ಅಂತಾರಾಷ್ಟ್ರೀಯ ಸಮುದಾಯಕ್ಕೆ ಅವಮಾನ" ಎಂದು ಹೇಳಿದರು.
ಪಾಕಿಸ್ತಾನದ ಕೃತ್ಯಗಳ ಖಂಡನೆ
ಪಾಕಿಸ್ತಾನವು ಭಯೋತ್ಪಾದನೆಯನ್ನು ಉತ್ತೇಜಿಸಲು ಸಾಮಾನ್ಯ ಜನರನ್ನು ರಕ್ಷಾಕವಚವಾಗಿ ಬಳಸಿಕೊಂಡಿದೆ ಎಂದು ಆರೋಪಿಸಿದ ಅವರು, "ಇತ್ತೀಚೆಗೆ, ಆಪರೇಷನ್ ಸಿಂದೂರ್‌ನಲ್ಲಿ ಹತ್ಯೆಯಾದ ಗಮನಾರ್ಹ ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನದ ಹಿರಿಯ ಸರ್ಕಾರಿ, ಪೊಲೀಸ್ ಮತ್ತು ಸೈನಿಕ ಅಧಿಕಾರಿಗಳು ಗೌರವ ಸಲ್ಲಿಸಿದ್ದನ್ನು ನಾವು ಕಂಡಿದ್ದೇವೆ. ಭಯೋತ್ಪಾದಕರಿಗೂ ಸಾಮಾನ್ಯ ಜನರಿಗೂ ವ್ಯತ್ಯಾಸ ಇಲ್ಲದ ದೇಶದಲ್ಲಿ ಸಾಮಾನ್ಯ ಜನರ ರಕ್ಷಣೆಯ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ" ಎಂದರು.
ತಿಂಗಳ ಆರಂಭದಲ್ಲಿ, ಪಾಕಿಸ್ತಾನದ ಸೇನೆಯು ಭಾರತದ ಗಡಿಯ ಗ್ರಾಮಗಳ ಮೇಲೆ ಉದ್ದೇಶಪೂರ್ವಕವಾಗಿ ಶೆಲ್ ದಾಳಿ ನಡೆಸಿತು, ಇದರಿಂದ 20ಕ್ಕೂ ಹೆಚ್ಚು ಸಾಮಾನ್ಯ ಜನರು ಮೃತಪಟ್ಟಿದ್ದಾರೆ ಮತ್ತು 80ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. "ಗುರುದ್ವಾರಗಳು, ದೇವಾಲಯಗಳು, ಕಾನ್ವೆಂಟ್‌ಗಳು ಮತ್ತು ವೈದ್ಯಕೀಯ ಕೇಂದ್ರಗಳಂತಹ ಧಾರ್ಮಿಕ ಸ್ಥಳಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗಿದೆ. ಇಂತಹ ಕೃತ್ಯಗಳ ನಂತರ ಈ ಸಭೆಯಲ್ಲಿ ಉಪನ್ಯಾಸ ನೀಡುವುದು ಸಂಪೂರ್ಣ ಕಪಟತನ" ಎಂದು ಹರೀಶ್ ಖಂಡಿಸಿದರು.
ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ
ಸಾಮಾನ್ಯ ಜನರ ಮೇಲೆ, ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ದುರ್ಬಲ ಗುಂಪುಗಳ ಮೇಲೆ, ಹಾಗೂ ಆಸ್ಪತ್ರೆಗಳಂತಹ ಅಗತ್ಯ ಮೂಲಸೌಕರ್ಯಗಳ ಮೇಲೆ ದಾಳಿಗಳು ನಡೆಯುತ್ತಿರುವುದು ದುರದೃಷ್ಟಕರ ಎಂದು ಭಾರತ ವಾದ ಮಾಡಿತು. "ಸಾಮಾನ್ಯ ಜನರನ್ನು, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳನ್ನು, ಸೇನಾ ಕಾರ್ಯಾಚರಣೆಗಳಿಗೆ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಮಾನವ ರಕ್ಷಾಕವಚವಾಗಿ ಬಳಸಿಕೊಳ್ಳಲಾಗುತ್ತಿದೆ ಆದ್ದರಿಂದ, ಭದ್ರತಾ ಮಂಡಳಿಯ ಸಂಬಂಧಿತ ತೀರ್ಮಾನಗಳನ್ನು ಜಾರಿಗೆ ತರಲು ಅಂತಾರಾಷ್ಟ್ರೀಯ ಸಮುದಾಯವು ಕಾಂಕ್ರೀಟ್ ಕ್ರಮಗಳನ್ನು ತೆಗೆದುಕೊಳ್ಳಬೇಕು" ಎಂದು ಹರೀಶ್ ಹೇಳಿದರು.
"ವಿಶ್ವಸಂಸ್ಥೆಯ ಒಡಂಬಡಿಕೆಯ ತತ್ವಗಳಾದ ಸಾರ್ವಭೌಮತ್ವ ಮತ್ತು ಭೌಗೋಳಿಕ ಸಮಗ್ರತೆಯ ಗೌರವವು, ಸಾಮಾನ್ಯ ಜನರ ರಕ್ಷಣೆಗಾಗಿ ಭದ್ರತಾ ಮಂಡಳಿಯ ಎಲ್ಲ ಕ್ರಿಯೆಗಳಿಗೆ ಆಧಾರವಾಗಿರಬೇಕು. ರಾಜಕೀಯ ಉದ್ದೇಶದಿಂದ ತೆಗೆದುಕೊಂಡ ಯಾವುದೇ ಹಸ್ತಕ್ಷೇಪದ ನಿರ್ಧಾರವು ಸಾಮಾನ್ಯ ಜನರಿಗೆ ವಿನಾಶಕಾರಿ ಪರಿಣಾಮಗಳನ್ನು ಉಂಟುಮಾಡಬಹುದು. ಆದ್ದರಿಂದ, ಯಾವುದೇ ಹಸ್ತಕ್ಷೇಪವು ಸಮಂಜಸವಾಗಿರಬೇಕು ಮತ್ತು ವಿಶ್ವಾಸಾರ್ಹ, ಪರಿಶೀಲಿತ ಬೆದರಿಕೆಯ ಆಧಾರದ ಮೇಲೆ ಇರಬೇಕು" ಎಂದು ಹರೀಶ್ ತಿಳಿಸಿದರು.