Operation Sindoor | ಭಾರತ-ಪಾಕ್ ಯುದ್ದದಲ್ಲಿ ಮಧ್ಯಪ್ರವೇಶ ಮಾಡಲ್ಲ; ಉಗ್ವಿಗ್ನ ಶಮನಕ್ಕೆ ನಿರಂತರ ಪ್ರಯತ್ನ- ಅಮೆರಿಕಾ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್
ಅಮೆರಿಕವು ಭಾರತ ಮತ್ತು ಪಾಕಿಸ್ತಾನವನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೂ, ಅದು ಎರಡು ಪರಮಾಣು ಶಸ್ತ್ರಸಜ್ಜಿತ ಯುದ್ಧ ಆಗದಂತೆ ತಡೆಯಲು ಬಯಸುತ್ತದೆ ಎಂದು ಅಮೆರಿಕಾ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಹೇಳಿದ್ದಾರೆ.;
ಜೆಡಿ ವ್ಯಾನ್ಸ್
ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ನಮಗೆ ಸಂಬಂಧಿಸಿದ್ದಲ್ಲ. ಎರಡೂ ರಾಷ್ಟ್ರಗಳ ಸಂಘರ್ಷದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಅಮೆರಿಕಾ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಹೇಳಿದ್ದಾರೆ.
ಫಾಕ್ಸ್ ನ್ಯೂಸ್ ಜೊತೆ ಗುರುವಾರ ಮಾತನಾಡಿದ ಅವರು, ಭಾರತ ಮತ್ತು ಪಾಕಿಸ್ತಾನವನ್ನು ಅಮರಿಕಾ ನಿಯಂತ್ರಿಸುವುದಿಲ್ಲ. ಪರಮಾಣು ಶಸ್ತ್ರಸಜ್ಜಿತ ಎರಡು ನೆರೆಯ ರಾಷ್ಟ್ರಗಳ ಉದ್ವಿಗ್ನತೆ ಕಡಿಮೆ ಮಾಡಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದ್ದಾರೆ.
"ಪರಮಾಣು ಅಸ್ವಸ್ತ್ರ ಹೊಂದಿರುವ ಎರಡೂ ರಾಷ್ಟ್ರಗಳ ಮಧ್ಯೆ ಸಂಘರ್ಷ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ವಾಷಿಂಗ್ಟನ್ ಸಾಧ್ಯವಾದಷ್ಟು ಉದ್ವಿಗ್ನತೆ ತಗ್ಗಿಸಲು ಬಯಸುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿರುವುದನ್ನು ವ್ಯಾನ್ಸ್ ಅವರು ಇದೇ ವೇಳೆ ಉಲ್ಲೇಖಿಸಿದ್ದಾರೆ.
ಸೀಮಿತ ಪ್ರಭಾವಗಳು
"ನಾವು ಎರಡೂ ದೇಶಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಭಾರತಕ್ಕೆ ಪಾಕಿಸ್ತಾನದ ಮೇಲೆ ಅಸಮಾಧಾನವಿದೆ. ಪಾಕಿಸ್ತಾನ ಇದಕ್ಕೆ ಪ್ರತಿಕ್ರಿಯೆ ನೀಡಿದೆ. ಆದರೆ, ನಾವು ಉಭಯ ದೇಶಗಳ ನಡುವಿನ ಉದ್ವಿಗ್ನತೆಯಷ್ಟೇ ಕಡಿಮೆ ಮಾಡಲು ಪ್ರಯತ್ನಿಸಬಹುದು. ಆದರೆ, ನಮಗೆ ಯಾವುದೇ ಸಂಬಂಧವಿಲ್ಲದ ಯುದ್ಧದಲ್ಲಿ ಅಮೆರಿಕಾ ಭಾಗಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ.
"ನಾವು ಭಾರತೀಯರನ್ನಾಗಲಿ, ಪಾಕಿಸ್ತಾನಿಯರನ್ನಾಗಲಿ ಶಸ್ತ್ರಾಸ್ತ್ರ ಕೆಳಗಿಡುವಂತೆ ಹೇಳಲು ಸಾಧ್ಯವಿಲ್ಲ. ರಾಜತಾಂತ್ರಿಕ ಮಾರ್ಗಗಳ ಮೂಲಕ ಉದ್ವಿಗ್ನತೆ ಕಡಿಮೆ ಮಾಡಲು ಪ್ರಯತ್ನ ಮುಂದುವರಿಸಲಿದ್ದೇವೆ. ಈಗಿನ ಪರಿಸ್ಥಿತಿಯು ಪ್ರಾದೇಶಿಕತೆ ಹಾಗೂ ಧರ್ಮ ಸಂಘರ್ಷಕ್ಕಷ್ಟೇ ಸೀಮಿತವಾಗಿದೆ. ಯಾವುದೇ ರೀತಿಯ ಪರಮಾಣು ಯುದ್ಧವಾಗಿ ಬದಲಾಗುವುದಿಲ್ಲ ಎಂಬ ಆಶಯ ಹಾಗೂ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.
ಭಾರತ ಹಾಗೂ ಪಾಕಿಸ್ತಾನದ ಸಂಘರ್ಷ ಪರಮಾಣು ಯುದ್ಧವಾಗದಂತೆ ನೋಡಿಕೊಳ್ಳುವುದು ಭಾರತ ಮತ್ತು ಪಾಕಿಸ್ತಾನದ ರಾಜತಾಂತ್ರಿಕರು ಮತ್ತು ಶಾಂತಿಪ್ರಿಯರ ಕೆಲಸವೂ ಆಗಿದೆ ಎಂದು ಹೇಳಿದ್ದಾರೆ.
ಪಹಲ್ಗಾಮ್ ದಾಳಿಯ ಪರಿಣಾಮ
ಏಪ್ರಿಲ್ 22 ರಂದು ಜಮ್ಮುಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟ ಸಮಯದಲ್ಲಿ ಅಮೆರಿಕಾ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಹಾಗೂ ಅವರ ಪತ್ನಿ ಉಷಾ ವ್ಯಾನ್ಸ್ ಅವರು ಭಾರತ ಪ್ರವಾಸದಲ್ಲಿದ್ದರು.
ಈ ದಾಳಿಯ ಬಳಿಕ ಭಾರತ ಮೇ 7 ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಾದ್ಯಂತ ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂದೂರ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿ ಧ್ವಂಸಗೊಳಿಸಿತ್ತು. ಇದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನವು ಜಮ್ಮು, ಪಠಾಣ್‌ಕೋಟ್, ಉಧಂಪುರ ಮತ್ತು ಇತರ ಪ್ರದೇಶಗಳಲ್ಲಿರುವ ಭಾರತೀಯ ಸೇನಾ ನೆಲೆಗಳ ಮೇಲೆ ದಾಳಿಗೆ ಪ್ರಯತ್ನಿಸಿತ್ತು. ಆದರೆ, ಆ ಪ್ರಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿತ್ತು. ಗಡಿಯಲ್ಲಿ ಪಾಕಿಸ್ತಾನದ ಅಪ್ರಚೋದಿತ ದಾಳಿಗೆ ತಿರುಗೇಟು ನೀಡುವ ಜೊತೆಗೆ ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ಮುಗಿಬಿದ್ದಿದೆ. ಇದು ಎರಡೂ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಲು ಕಾರಣವಾಗಿದೆ.
ಭಾರತವು "ತನ್ನ ಸಾರ್ವಭೌಮತೆ ರಕ್ಷಿಸಲು ಮತ್ತು ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣ ಸಿದ್ಧವಾಗಿದೆ" ಎಂದು ಈಗಾಗಲೇ ರಕ್ಷಣಾ ಸಚಿವಾಲಯ ಘೋಷಣೆ ಮಾಡಿದೆ.
ಅಮೆರಿಕಾದಿಂದ ರಾಜತಾಂತ್ರಿಕ ಮಾತುಕತೆ
ಉಭಯ ರಾಷ್ಟ್ರಗಳ ಮಧ್ಯೆ ಸಂಘರ್ಷ ತೀವ್ರವಾಗುತ್ತಿದ್ದಂತೆ ಅಮೆರಿಕಾದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರು ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹಾಗೂ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದರು. ಉದ್ವಿಗ್ನತೆಯನ್ನು ಕಡಿಮೆ ಮಾಡುವ ಅಗತ್ಯವನ್ನು ಒತ್ತಿ ಹೇಳಿದರು ಎಂದು ಮೂಲಗಳು ತಿಳಿಸಿವೆ.
ಜೈಶಂಕರ್ ಅವರೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ ಮಾತನಾಡಿದ ರೂಬಿಯೊ ಅವರು, ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಯನ್ನು ಅಮೆರಿಕ ಖಂಡಿಸಲಿದೆ. ಭಯೋತ್ಪಾದನೆ ಎದುರಿಸುವಲ್ಲಿ ಭಾರತದೊಂದಿಗೆ ಕೆಲಸ ಮಾಡಲು ಅಮೆರಿಕದ ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರೊಂದಿಗೆ ಮಾತನಾಡಿ, ಭಯೋತ್ಪಾದಕ ಸಂಘಟನೆಗಳಿಗೆ ಯಾವುದೇ ರೀತಿಯ ಬೆಂಬಲ ನೀಡದಂತೆ, ಅರ್ಥಪೂರ್ಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರೂಬಿಯೊ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ರಾಜತಾಂತ್ರಿಕತೆಯ ಮೇಲೆ ಗಮನ ಹರಿಸಿ
ಅಮೆರಿಕಾದ ವಿದೇಶಾಂಗ ಇಲಾಖೆಯ ವಕ್ತಾರೆ ಟ್ಯಾಮಿ ಬ್ರೂಸ್ ಅವರು ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ. ಭಾರತ - ಪಾಕಿಸ್ತಾನದ ಮಧ್ಯೆ ಉದ್ವಿಗ್ನತೆ ಕಡಿಮೆ ಮಾಡುವ ಅಗತ್ಯವನ್ನು ಈಗಾಗಲೇ ರೂಬಿಯೊ ಅವರು ಭಾರತದ ವಿದೇಶಾಂಗ ಸಚಿವ ಜೈಶಂಕರ್ ಮತ್ತು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಎರಡೂ ದೇಶಗಳ ನಡುವಿನ ಮಿಲಿಟರಿ ಕಾರ್ಯಾಚರಣೆ ಸ್ಥಗಿತಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.
ʼಮಿಲಿಟರಿ ಕ್ರಮ ಮತ್ತು ಹಿಂಸಾಚಾರವೇ ಪರಿಹಾರವಲ್ಲ. ದಕ್ಷಿಣ ಏಷ್ಯಾ ಮತ್ತು ಮಧ್ಯಪ್ರಾಚ್ಯದಲ್ಲಿ ದಶಕಗಳ ಸಂಘರ್ಷವು ಅಶಾಂತಿಗೆ ಕಾರಣವಾಗುತ್ತದೆ ಎಂದು ತೋರಿಸಿವೆ. ಹಾಗಾಗಿ ರಾಜತಾಂತ್ರಿಕ ಮಾತುಕತೆಯೇ ಪರಿಹಾರ. ಹಿಂಸಾಚಾರ ಕೊನೆಗೊಳಿಸಲು ಹೊಸ ವಿಧಾನಗಳು ಅಗತ್ಯವಾಗಿವೆʼ ಎಂದು ಬ್ರೂಸ್ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನದೊಂದಿಗೆ ಅಮೆರಿಕವು ಬಹು ಹಂತದ ಮಾತುಕತೆಗಳಲ್ಲಿ ತೊಡಗಿಸಿಕೊಂಡಿದೆ. ಎರಡೂ ರಾಷ್ಟ್ರಗಳು ಜವಾಬ್ದಾರಿಯುತವಾಗಿ ಪರಿಹಾರ ಕಂಡುಕೊಳ್ಳಬೇಕು ಎಂದು ಸೂಚಿಸಿದರು ಎಂದು ತಿಳಿದು ಬಂದಿದೆ.
ಪಹಲ್ಗಾಮ್ ಭಯೋತ್ಪಾದಕ ದಾಳಿಯ ಅಪರಾಧಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕೆಂದು ಅಮೆರಿಕ ಬಯಸುತ್ತದೆ. ಸಂಘರ್ಷ ಉಲ್ಬಣಗೊಳ್ಳಬಾರದು ಎಂದು ರೂಬಿಯೊ ಒತ್ತಿ ಹೇಳಿದರು ಎಂದು ಬ್ರೂಸ್ ವರದಿಗಾರರಿಗೆ ತಿಳಿಸಿದರು.
"ಭಾರತ ಹಾಗೂ ಪಾಕಿಸ್ತಾನದ ನಡುವೆ ದಶಕಗಳಿಂದ ವಿವಾದವಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿ ನಂತರ ಅದು ಸಂಘರ್ಷ ರೂಪ ಪಡೆದುಕೊಂಡಿದೆ. ಆದರೆ, ಸಂಘರ್ಷ ಇತ್ಯರ್ಥಕ್ಕೆ ಸಂವಹನವೇ ಮುಖ್ಯ. ನಿರಂತರ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಬೇಕುʼ ಎಂದು ಬ್ರೂಸ್ ಹೇಳಿದ್ದಾರೆ.