ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆ ಹತ್ಯೆ: ಇಸ್ರೇಲ್ ಕೈವಾಡದ ಶಂಕೆ

Update: 2024-07-31 06:42 GMT

ಟೆಹ್ರಾನ್- ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆ ಅವರನ್ನು ಟೆಹ್ರಾನ್‌ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಇರಾನ್‌ನ ಅರೆಸೇನಾ ರೆವಲ್ಯೂಷನರಿ ಗಾರ್ಡ್ ಬುಧವಾರ ಮುಂಜಾನೆ ತಿಳಿಸಿದೆ.

ಹತ್ಯೆಯ ಹೊಣೆಗಾರಿಕೆಯನ್ನು ಯಾರೂ ಹೊತ್ತಿಲ್ಲ. ಆದರೆ, ಇಸ್ರೇಲ್‌ ಮೇಲೆ ಅನುಮಾನ ವ್ಯಕ್ತವಾಗಿದೆ. ಅಕ್ಟೋಬರ್ 7 ರ ದಾಳಿಯಲ್ಲಿ 1,200 ಜನ ಹತ್ಯೆ ಮತ್ತು ಸುಮಾರು 250 ಜನರನ್ನು ಒತ್ತೆಯಾಳಾಗಿ ತೆಗೆದುಕೊಂಡಿದ್ಡ ಹನಿಯೆ‌ ಮತ್ತು ಹಮಾಸ್‌ನ ಇತರ ನಾಯಕರನ್ನು ಕೊಲ್ಲುವುದಾಗಿ ಇಸ್ರೇಲ್‌ ಪ್ರತಿಜ್ಞೆ ಮಾಡಿತ್ತು. 

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಹನಿಯೆ ಟೆಹ್ರಾನ್‌ಗೆ ಮಂಗಳವಾರ ಬಂದಿದ್ದರು. ಹನಿಯೆ ಹತ್ಯೆ ಹೇಗೆ ಆಯಿತು ಎಂಬ ಕುರಿತು ಇರಾನ್ ಯಾವುದೇ ವಿವರ ನೀಡಿಲ್ಲ; ದಾಳಿ ಕುರಿತು ತನಿಖೆ ನಡೆಯುತ್ತಿದೆ ಎಂದು ರೆವಲ್ಯೂಷನರಿ ಗಾರ್ಡ್ ಹೇಳಿದೆ. 

ಹನಿಯೆ 2019 ರಲ್ಲಿ ಗಾಜಾ ಪಟ್ಟಿಯನ್ನು ತೊರೆದು, ಕತಾರ್‌ನಲ್ಲಿ ನೆಲೆಸಿದ್ದರು. ಇತ್ತೀಚೆಗೆ ಇಸ್ರೇಲ್-ಹಮಾಸ್ ಯುದ್ಧಕ್ಕೆ ಕಾರಣವಾದ ಅಕ್ಟೋಬರ್ 7 ರ ದಾಳಿಯ ಹಿಂದಿನ ಶಕ್ತಿಯಾಗಿರುವ ಯೆಹ್ಯಾ ಸಿನ್ವಾರ್, ಗಾಜಾದ ಉನ್ನತ ಹಮಾಸ್ ನಾಯಕ ಆಗಿದ್ದಾರೆ. 

ಶ್ವೇತಭವನದಿಂದ ಹನಿಯೆ ಅವರ ಹತ್ಯೆ ಕುರಿತು ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರ ಆಡಳಿತವು ಹಮಾಸ್ ಮತ್ತು ಇಸ್ರೇಲನ್ನು ತಾತ್ಕಾಲಿಕ ಕದನ ವಿರಾಮ ಮತ್ತು ಒತ್ತೆಯಾಳು ಬಿಡುಗಡೆ ಒಪ್ಪಂದಕ್ಕೆ ಒಪ್ಪಿಕೊಳ್ಳುವಂತೆ ಒತ್ತಡ ಹೇರುತ್ತಿರುವುದರಿಂದ, ಹನಿಯೆ ಹತ್ಯೆಯು ಅನಿಶ್ಚಿತ ಸಮಯದಲ್ಲಿ ಸಂಭವಿಸಿದೆ. 

ಇಸ್ರೇಲ್, ಕತಾರ್ ಮತ್ತು ಈಜಿಪ್ಟ್‌ನ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಲು, ಸಿಐಎ ನಿರ್ದೇಶಕ ಬಿಲ್ ಬರ್ನ್ಸ್ ಭಾನುವಾರ ರೋಮ್‌ನಲ್ಲಿ ದ್ದರು. ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕದ ಶ್ವೇತಭವನದ ಸಂಯೋಜಕರಾದ ಬ್ರೆಟ್ ಮೆಕ್‌ಗುರ್ಕ್ ಅವರು ಅಮೆರಿಕದ ಪಾಲುದಾರರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. 

ಇರಾನ್ ದೂರದರ್ಶನದ ವಿಶ್ಲೇಷಕರು ದಾಳಿಗೆ ಇಸ್ರೇಲನ್ನು ದೂಷಿಸಿದ್ದಾರೆ. ಆದರೆ, ಇಸ್ರೇಲ್ ಈ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Tags:    

Similar News