Israel-Iran conflict | ಇರಾನ್ ಮೇಲೆ ಅಮೆರಿಕ ದಾಳಿಯಿಂದ ಜಾಗತಿಕ ಮಾರುಕಟ್ಟೆ ಏರುಪೇರು: ತೈಲ ಬೆಲೆ ಏರಿಕೆ, ಷೇರು ಕುಸಿತ

ಶನಿವಾರ (ಜೂ.21) ನಡೆದ ದಾಳಿ ನಂತರ ತೈಲ ಬೆಲೆ ಆರಂಭದಲ್ಲಿ ಶೇ. 2ಕ್ಕಿಂತ ಹೆಚ್ಚು ಏರಿಕೆ ಕಂಡಿತು. ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆಯಿಂದಾಗಿ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಬಹುದೆಂಬ ಕಳವಳ ಇದಕ್ಕೆ ಕಾರಣವಾಗಿತ್ತು.;

Update: 2025-06-23 07:23 GMT
ಸಾಂದರ್ಭಿಕ ಚಿತ್ರ

ಅಮೆರಿಕವು ಇರಾನ್‌ ಪರಮಾಣು ಕೇಂದ್ರಗಳ ಮೇಲೆ ನಡೆಸಿದ ದಾಳಿಗಳ ನಂತರ ಜಾಗತಿಕ ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೂಡಿಕೆದಾರರು ಇರಾನ್‌ ಪ್ರತಿಕ್ರಿಯೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದರಿಂದ, ಮಾರುಕಟ್ಟೆಗಳಲ್ಲಿ ಸದ್ಯ ಅನಿಶ್ಚಿತತೆ ಮನೆ ಮಾಡಿದೆ.

ಶನಿವಾರ(ಜೂ.21) ನಡೆದ ದಾಳಿಗಳ ನಂತರ ತೈಲ ಬೆಲೆ ಆರಂಭದಲ್ಲಿ ಶೇ.2ಕ್ಕಿಂತ ಹೆಚ್ಚು ಏರಿಕೆ ಕಂಡಿತು. ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆಯಿಂದಾಗಿ ತೈಲ ಪೂರೈಕೆಯಲ್ಲಿ ಅಡಚಣೆಯಾಗಬಹುದು ಎಂಬ ಕಳವಳ ಇದಕ್ಕೆ ಕಾರಣವಾಗಿತ್ತು. ಆದರೆ, ಸೋಮವಾರದ(ಜೂ.23) ವೇಳೆಗೆ ತೈಲ ಬೆಲೆಗಳು ಸ್ವಲ್ಪಮಟ್ಟಿಗೆ ಕಡಿಮೆಯಾದವು. ಅಂತರರಾಷ್ಟ್ರೀಯ ಮಾನದಂಡವಾದ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇ 1.2ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 6,624 ರೂ. ತಲುಪಿತು. ಹಾಗೆಯೇ, ಯು.ಎಸ್. ಕಚ್ಚಾ ತೈಲವೂ ಶೇ.1.3ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 6,359 ರೂ. ತಲುಪಿತು.

ಇದೇ ವೇಳೆ, ಶನಿವಾರ ನಡೆದ ಈ ದಾಳಿಗಳು ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದವು. ಇದರ ಪರಿಣಾಮವಾಗಿ, ಯು.ಎಸ್. ಸ್ಟಾಕ್ ಫ್ಯೂಚರ್ಸ್ ಮತ್ತು ಏಷ್ಯನ್ ಷೇರು ಮಾರುಕಟ್ಟೆಗಳಲ್ಲಿ ಕುಸಿತ ಕಂಡುಬಂದಿತು. S&P 500 ಮತ್ತು ಡೌ ಜೋನ್ಸ್ ಇಂಡಸ್ಟ್ರಿಯಲ್ ಏವರೇಜ್‌ನ ಫ್ಯೂಚರ್ಸ್ ಶೇ. 0.3ರಷ್ಟು ಇಳಿಕೆ ಕಂಡರೆ, ನಾಸ್ಡಾಕ್ ಫ್ಯೂಚರ್ ಒಪ್ಪಂದವು ಶೇ. 0.5ರಷ್ಟು ಕಡಿಮೆಯಾಯಿತು. ಆದರೆ, ಟ್ರೆಷರಿ ಇಳುವರಿಗಳಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಕಂಡುಬರಲಿಲ್ಲ.

ಒಟ್ಟಾರೆ, ಅಮೆರಿಕ ಮತ್ತು ಇರಾನ್ ನಡುವಿನ ಈ ಉದ್ವಿಗ್ನತೆ ಜಾಗತಿಕ ಆರ್ಥಿಕತೆಯ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬುದು ಇರಾನ್‌ನ ಮುಂದಿನ ಪ್ರತಿಕ್ರಿಯೆ ಮತ್ತು ಪ್ರಾದೇಶಿಕ ಸ್ಥಿತಿಗತಿಗಳ ಮೇಲೆ ಅವಲಂಬಿತವಾಗಿದೆ.

Tags:    

Similar News