Donald Trump : ಅಮೆರಿಕದ 51ನೇ ರಾಜ್ಯ ಕೆನಡಾ; ಡೊನಾಲ್ಡ್‌ ಟ್ರಂಪ್‌ ಆಹ್ವಾನ

Donald Trump: ಈ ವರ್ಷ ಅಕ್ಟೋಬರ್‌ನಲ್ಲಿ ಸಾರ್ವತ್ರಿಕ ಚುನಾವಣೆ ನಿಗದಿಯಾಗಿದೆ. ಪಕ್ಷವು ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೂ ತಾನು ಪ್ರಧಾನಿಯಾಗಿ ಮುಂದುವರಿಯುತ್ತೇನೆ ಎಂದು ಕೆನಡಾದ ಪ್ರಧಾನಿ ಟ್ರುಡೊ ಹೇಳಿದ್ದಾರೆ.;

Update: 2025-01-07 05:12 GMT
ಡೊನಾಲ್ಡ್‌ ಟ್ರಂಪ್‌ ಮತ್ತು ಜಸ್ಟಿನ್‌ ( ಸಂಗ್ರಹ ಚಿತ್ರ)

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ರಾಜೀನಾಮೆ ನೀಡುವುದಾಗಿ ಘೋಷಿಸಿದ ಕೆಲವೇ ಗಂಟೆಗಳ ಬಳಿಕ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಕೆನಡಾವನ್ನು ಅಮೆರಿಕದ 51 ನೇ ರಾಜ್ಯವನ್ನಾಗಿ ಮಾಡುವ ಪ್ರಸ್ತಾಪ ಮುಂದಿಟ್ಟಿದ್ದಾರೆ.

53 ವರ್ಷದ ಟ್ರುಡೊ ಅವರು ಜನಪ್ರಿಯತೆಯ ಕಡಿಮೆಯಾಗುತ್ತಿರುವ ನಡುವೆ ಲಿಬರಲ್ ಪಕ್ಷದಿಂದ ನಿರ್ಗಮಿಸಲು ಮುಂದಾಗಿದ್ದಾರೆ. ಹೀಗಾಗಿ ಸೋಮವಾರ ರಾಜೀನಾಮೆ ನೀಡುವುದಾಗಿ ಘೋಷಿಸಿದರು. ಈ ವರ್ಷ ಅಕ್ಟೋಬರ್‌ನಲ್ಲಿ ಸಾರ್ವತ್ರಿಕ ಚುನಾವಣೆ ನಿಗದಿಯಾಗಿದೆ. ಪಕ್ಷವು ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೂ ತಾನು ಪ್ರಧಾನಿಯಾಗಿ ಮುಂದುವರಿಯುತ್ತೇನೆ ಎಂದು ಕೆನಡಾದ ಪ್ರಧಾನಿ ಹೇಳಿದ್ದರು

2017-2021ರಿಂದ ತಮ್ಮ ಮೊದಲ ಅಧಿಕಾರಾವಧಿಯಲ್ಲಿ ಕೆನಾಡ ಪ್ರಧಾನಿ ಟ್ರುಡೊ ಅವರೊಂದಿಗೆ ಜಗಳವಾಡಿಕೊಂಡೇ ಇದ್ದ 78 ವರ್ಷದ ಟ್ರಂಪ್, ನವೆಂಬರ್ 5 ರಂದು ನಡೆದ ಚುನಾವಣಾ ವಿಜಯದ ವೇಳೆ ಕೆನಡಾವನ್ನು ಅಮೆರಿಕಕ್ಕೆ ಸೇರಿಸುವ ಪ್ರಸ್ತಾಪ ಮುಂದಿಟ್ಟಿದ್ದರು. ಇದೀಗ ಮತ್ತೆ 51ನೇ ರಾಜ್ಯವನ್ನಾಗಿ ಮಾಡುವ ಆಲೋಚನೆ ವ್ಯಕ್ತಪಡಿಸಿದ್ದಾರೆ.

"ಕೆನಡಾದ ಅನೇಕ ಜನರು ಅಮೆರಿಕದ 51 ನೇ ರಾಜ್ಯವಾಗಿರಲು ಇಷ್ಟಪಡುತ್ತಾರೆ. ಕೆನಡಾವು ಉಳಿಸಿಕೊಳ್ಳಲು ಅಗತ್ಯವಿರುವ ವ್ಯಾಪಾರ ಕೊರತೆಗಳು ಮತ್ತು ಸಬ್ಸಿಡಿಗಳನ್ನು ಯುನೈಟೆಡ್ ಸ್ಟೇಟ್ಸ್ ಇನ್ನು ಮುಂದೆ ಅನುಭವಿಸಲು ಸಾಧ್ಯವಿಲ್ಲ. ಜಸ್ಟಿನ್ ಟ್ರುಡೋ ಇದನ್ನು ತಿಳಿದುಕೊಂಡು ರಾಜೀನಾಮೆ ನೀಡಿದ್ದಾರೆ " ಎಂದು ಟ್ರಂಪ್ ಸೋಶಿಯಲ್‌ ಮೀಡಿಯಾಗಳಲ್ಲಿ ಹೇಳಿದ್ದಾರೆ.

"ಕೆನಡಾವು ಯುಎಸ್‌ನೊಂದಿಗೆ ವಿಲೀನಗೊಂಡರೆ, ಯಾವುದೇ ಸುಂಕಗಳನ್ನು ಹಾಕುವುದಿಲ್ಲ. ತೆರಿಗೆಗಳು ಕಡಿಮೆಯಾಗುತ್ತವೆ. ನಿರಂತರವಾಗಿ ಬೆಳೆಯುತ್ತಾ ರಷ್ಯಾ ಮತ್ತು ಚೀನಾದ ಬೆದರಿಕೆಗಳಿಂದ ಸುರಕ್ಷಿತವಾಗಿರುತ್ತಾರೆ. ಒಟ್ಟಾರೆಯಾಗಿ ಶ್ರೇಷ್ಠ ರಾಷ್ಟ್ರವಾಗಲಿದೆ" ಎಂದು ಟ್ರಂಪ್‌ ಹೇಳಿದ್ದರು.

ಟ್ರಂಪ್ ಅವರ ಪ್ರಸ್ತಾಪಕ್ಕೆ ಕೆನಡಾದ ಕಡೆಯಿಂದ ಹೆಚ್ಚಿನ ಪ್ರತಿಕ್ರಿಯೆ ಬಂದಿಲ್ಲ. ದಕ್ಷಿಣ ಗಡಿಯಿಂದ ಅಕ್ರಮ ಮಾದಕವಸ್ತುಗಳು ಮತ್ತು ಅಕ್ರಮ ವಲಸಿಗರ ಹರಿವು ತಡೆಯಲು ಕೆನಡಾ ವಿಫಲವಾದರೆ, ಆಮದಿನ ಮೇಲೆ ಶೇಕಡಾ 25 ರಷ್ಟು ಸುಂಕ ವಿಧಿಸುವುದಾಗಿ ಟ್ರಂಪ್ ಹಿಂದೆಯೂ ಬೆದರಿಕೆ ಹಾಕಿದ್ದರು.

ಕೆಲವು ಪೋಸ್ಟ್ಗಳಲ್ಲಿ, ಟ್ರಂಪ್ ಟ್ರುಡೊ ಅವರನ್ನು "ಗ್ರೇಟ್ ಸ್ಟೇಟ್ ಆಫ್ ಕೆನಡಾದ ಗವರ್ನರ್" ಎಂದು ಗೇಲಿ ಮಾಡಿದ್ದಾರೆ. ಪಿಟಿಐ

Tags:    

Similar News