ಡೊನಾಲ್ಡ್ ಟ್ರಂಪ್‌ಗೆ ಕ್ರಾನಿಕ್ ವೀನಸ್ ಇನ್ಸಫಿಷಿಯನ್ಸಿ ಕಾಯಿಲೆ? ಏನಿದು, ಇದರ ಲಕ್ಷಣಗಳೇನು?
Donald Trump health news, Chronic Venous Insufficiency Trump, What is chronic venous insufficiency, Symptoms of venous insufficiency, Trump medical condition 2025, Venous disease explained, CVI symptoms and causes, Trump CVI news, Varicose veins and CVI, Chronic venous disorder information;
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕ್ರಾನಿಕ್ ವೀನಸ್ ಇನ್ಸಫಿಷಿಯನ್ಸಿ (CVI) ಎಂಬ ರಕ್ತಪರಿಚಲನೆಗೆ ಸಂಬಂಧಿಸಿದ ಕಾಯಿಲೆ ಇರುವುದು ಪತ್ತೆಯಾಗಿದೆ. ಈ ಅನಾರೋಗ್ಯದಿಂದ ಕಾಲಿನ ರಕ್ತನಾಳಗಳು ರಕ್ತವನ್ನು ಹೃದಯಕ್ಕೆ ಸರಿಯಾಗಿ ಕಳುಹಿಸಲು ವಿಫಲವಾಗುತ್ತವೆ. ಟ್ರಂಪ್ ಕಾಲುಗಳಲ್ಲಿ ಊತ ಕಾಣಿಸಿಕೊಂಡ ನಂತರ ವೈದ್ಯಕೀಯ ತಪಾಸಣೆಗೆ ಒಳಗಾದಾಗ ಈ ಸಮಸ್ಯೆ ಪತ್ತೆಯಾಯಿತು.
ಟ್ರಂಪ್ ಅವರನ್ನು ಪರೀಕ್ಷಿಸಿದ ವೈದ್ಯರು ಡೀಪ್ ವೀನ್ ಥ್ರಾಂಬೋಸಿಸ್ (DVT), ಹೃದಯ ಸಂಬಂಧಿ ಸಮಸ್ಯೆಗಳು ಅಥವಾ ಇತರ ಗಂಭೀರ ಸಮಸ್ಯೆಗಳು ಇಲ್ಲ ಎಂದಿದ್ದಾರೆ. ಆದಾಗ್ಯೂ ಟ್ರಂಪ್‌ಗೆ ಇರುವ ರೋಗದ ಬಗ್ಗೆ ಎಲ್ಲೆಡೆ ಜೋರು ಚರ್ಚೆಗಳು ನಡೆಯುತ್ತಿವೆ. ಹಾಗಾದರೆ ಆ ರೋಗ ಏನು? ಈ ಸಮಸ್ಯೆಗೆ ಕಾರಣ ಏನು ಎಂಬುದನ್ನು ನೋಡೋಣ.
ಸಿವಿಐ ಎಂದರೇನು?
ಕ್ರಾನಿಕ್ ವೀನಸ್ ಇನ್ಸಫಿಷಿಯನ್ಸಿ (CVI) ಎಂಬುದು ದೀರ್ಘಕಾಲೀನ ಅನಾರೋಗ್ಯ ಸ್ಥಿತಿಯಾಗಿದ್ದು, ಇದರಲ್ಲಿ ಕಾಲಿನ ರಕ್ತನಾಳಗಳು ರಕ್ತವನ್ನು ಹೃದಯಕ್ಕೆ ಪರಿಣಾಮಕಾರಿಯಾಗಿ ರಕ್ತವನ್ನು ಕಳುಹಿಸಲು ವಿಫಲವಾಗುತ್ತದೆ. ಕಾಲಿನ ರಕ್ತನಾಳಗಳಲ್ಲಿರುವ ಕವಾಟಗಳು (ವಾಲ್ವ್‌ಗಳು) ರಕ್ತವು ಹಿಂದಕ್ಕೆ ಹರಿಯದಂತೆ ತಡೆಯುವ ಕೆಲಸ ಮಾಡಲು ಸಾಧ್ಯವಾಗದಿರುವಾಗ ಅಥವಾ ದುರ್ಬಲವಾದಾಗ ಈ ಸ್ಥಿತಿ ಉಂಟಾಗುತ್ತದೆ. ಈ ಕವಾಟಗಳ ಕಾರ್ಯವೈಫಲ್ಯದಿಂದ ರಕ್ತವು ಹಿಂದಕ್ಕೆ ಹರಿದು ಕೆಳಗಿನ ಭಾಗದಲ್ಲಿ ಸಂಗ್ರಹವಾಗುತ್ತದೆ, ಇದರಿಂದ ಊತ, ಕಾಲು ಭಾರವಾದ ಭಾವನೆ ಮತ್ತು ಚರ್ಮದ ಬದಲಾವಣೆಗಳು ಕಂಡುಬರುತ್ತವೆ. ನೋಡದೇ ಬಿಟ್ಟರೆ, ಇದು ದೀರ್ಘಕಾಲೀನ ನೋವಿಗೆ ಕಾರಣವಾಗಬಹುದು ಮತ್ತು ಗಂಭೀರ ಸಂದರ್ಭಗಳಲ್ಲಿ ತೆರೆದ ಗಾಯಗಳು ಗುಣವಾಗದ ಹುಣ್ಣುಗಳಾಗಿ (ಅಲ್ಸರ್‌ಗಳಾಗಿ) ಪರಿವರ್ತನೆಯಾಗಬಹುದು.
ರೋಗಕ್ಕೆ ಕಾರಣಗಳೇನು?
ಡೀಪ್ ವೀನ್ ಥ್ರಾಂಬೋಸಿಸ್ (DVT) ಸಿವಿಐಗೆ ಪ್ರಮುಖ ಕಾರಣವಾಗಿದೆ. ರಕ್ತನಾಳದಲ್ಲಿ ರಕ್ತ ಗಟ್ಟಿಯಾಗುವುದರಿಂದ ಕವಾಟಗಳಿಗೆ ಹಾನಿ ಆಗುತ್ತದೆ. ಹಾಗೆಯೇ, ಕಾಲು ಅಥವಾ ತೊಡೆಯಲ್ಲಿ ಕಾಣಿಸಿಕೊಳ್ಳುವ ತಿರುಚಿದ, ಉಬ್ಬಿದ ರಕ್ತನಾಳಗಳಾದ ವೆರಿಕೋಸ್ ವೇನ್ಸ್ ಕವಾಟದ ದೌರ್ಬಲ್ಯದಿಂದಲೂ ಆಗುತ್ತದೆ. ಕೆಲವರಿಗೆ ಜನ್ಮಜಾತವಾಗಿ ಕವಾಟ ದೋಷಗಳು ಕಂಡು ಬಂದರೆ ಯೌವನದಲ್ಲೇ ಸಿವಿಐ ಸಮಸ್ಯೆ ಉಂಟಾಗಬಹುದು.
ದೀರ್ಘಕಾಲ ಕುಳಿತಿರುವ ಅಥವಾ ನಿಂತಿರುವ ಕೆಲಸಗಳು, ಸ್ಥೂಲಕಾಯ, ಗರ್ಭಾವಸ್ಥೆ ಮತ್ತು ವಯಸ್ಸಾಗುವಿಕೆಯು ಸಿಬಿಐ ಅಪಾಯ ಹೆಚ್ಚಿಸುತ್ತವೆ. ಮಹಿಳೆಯರಲ್ಲಿ, ಗರ್ಭಾವಸ್ಥೆ, ಮುಟ್ಟು ನಿಲ್ಲುವ ವೇಳೆ, ಗರ್ಭನಿರೋಧಕ ಔಷಧಗಳು ಮತ್ತು ಹಾರ್ಮೋನ್ ಚಿಕಿತ್ಸೆಯಿಂದಾಗಿ ಈಸ್ಟ್ರೊಜೆನ್ ಪ್ರಭಾವದಿಂದ ಸಿಬಿಐ ಹೆಚ್ಚಾಗಿ ಕಂಡುಬರುತ್ತದೆ. ಕಾಲಿನ ಗಾಯ ಅಥವಾ ಶಸ್ತ್ರಚಿಕಿತ್ಸೆಯಿಂದ ರಕ್ತನಾಳಗಳಿಗೆ ಹಾನಿಯಾಗಬಹುದು ಅಥವಾ ಚಲನೆಯ ಕೊರತೆಯಿಂದ ರಕ್ತದ ಸಂಗ್ರಹ ಉಂಟಾಗಬಹುದು.
ರೋಗದ ಲಕ್ಷಣಗಳೇನು?
ಸಿವಿಐ ಲಕ್ಷಣಗಳು ಕ್ರಮೇಣ ಕಾಣಿಸಿಕೊಳ್ಳುತ್ತವೆ. ಇವುಗಳಲ್ಲಿ ಕಾಲಿನಲ್ಲಿ ನೋವು ಅಥವಾ ಭಾರವಾದ ಭಾವನೆ, ಕಣಕಾಲು ಭಾಗದಲ್ಲಿ ಊತ, ವೆರಿಕೋಸ್ ವೇನ್ಸ್, ಕೆಳಗಿನ ಕಾಲಿನ ಚರ್ಮದಲ್ಲಿ ತುರಿಕೆ, ಕಂದು ಅಥವಾ ಕೆಂಪು ಬಣ್ಣದ ಕಲೆಗಳು, ತ್ವಚೆ ಗಟ್ಟಿಯಾಗುವ ಸಮಸ್ಯೆ ಸೇರಿದೆ(ಕೆಂಪಾದ, ಊದಿಕೊಂಡ ಚರ್ಮ). ಮುಂದುವರಿದ ಹಂತದಲ್ಲಿ ಕಣಕಾಲಿನ ಬಳಿ ಗುಣವಾಗದ ಹುಣ್ಣುಗಳು (ವೆನಸ್ ಅಲ್ಸರ್‌ಗಳು) ಉಂಟಾಗಬಹುದು.
ಸಿವಿಐ ಗಂಭೀರವೇ?
ಸಿವಿಐ ತಕ್ಷಣಕ್ಕೆ ಜೀವಕ್ಕೆ ಅಪಾಯಕಾರಿಯಲ್ಲದಿದ್ದರೂ, ಚಿಕಿತ್ಸೆ ಮಾಡದಿದ್ದರೆ ಜೀವನದ ಗುಣಮಟ್ಟ ಕುಸಿಯುವಂತೆ ಮಾಡುತ್ತದೆ ಲಕ್ಷಣಗಳು ಉಲ್ಬಣಗೊಂಡು, ಅಸ್ವಸ್ಥತೆ ಹೆಚ್ಚಾಗಿ, ಸಮಸ್ಯೆಗಳು ಹೆಚ್ಚಾಗಬಹುದು. ಬಳಿಕ ಹೃದಯ ಅಥವಾ ಮೂತ್ರಪಿಂಡದ ಸಮಸ್ಯೆಗಳಂತಹ ಇತರ ರಕ್ತಪರಿಚಲನೆ ಸಮಸ್ಯೆಗಳು ಕಾಣಬಹುದು.
ಚಿಕಿತ್ಸೆ ಮತ್ತು ತಡೆಗಟ್ಟುವುದು ಹೇಗೆ?
ಜೀವನಶೈಲಿ ಬದಲಾವಣೆಗಳು ಸಿವಿಐ ಸಮಸ್ಯೆ ಪರಿಹಾರಕ್ಕೆ ನಿರ್ಣಾಯಕ. ಕಂಪ್ರೆಷನ್ ಸ್ಟಾಕಿಂಗ್‌ಗಳು ಧರಿಸುವುದು, ಕಾಲನ್ನು ಎತ್ತರದಲ್ಲಿ ಇಡುವುದು ಮತ್ತು ನಿಯಮಿತ ವ್ಯಾಯಾಮವು ಸಿವಿಐ ನಿಯಂತ್ರಿಸಲು ಸಹಾಯ ಮಾಡುತ್ತದೆ. ಆರೋಗ್ಯಕರ ತೂಕ ಕಾಪಾಡಿಕೊಳ್ಳುವುದು, ಪೌಷ್ಟಿಕ ಆಹಾರ ಸೇವನೆ, ಸಾಕಷ್ಟು ನೀರು ಕುಡಿಯುವುದು ಮತ್ತು ದೀರ್ಘಕಾಲ ಕುಳಿತಿರುವುದು ಅಥವಾ ನಿಂತಿರುವುದನ್ನು ತಪ್ಪಿಸುವುದು ಕೂಡ ಮುಖ್ಯ. ಲಕ್ಷಣಗಳು ಮುಂದುವರಿದರೆ, ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಮುಖ್ಯ. ಸಿವಿಐ ಸಂಪೂರ್ಣವಾಗಿ ಗುಣವಾಗದಿದ್ದರೂ, ಈ ಕ್ರಮಗಳಿಂದ ರೋಗವನ್ನು ನಿಯಂತ್ರಣದಲ್ಲಿಟ್ಟುಕೊಂಡು ಆರಾಮದಾಯಕ ಜೀವನವನ್ನು ನಡೆಸಬಹುದು.