ಕ್ಷೀಣಿಸಿದ ಲಿಬರಲ್ ಜನಪ್ರಿಯತೆ | ಕೆನಡಾ ಪ್ರಧಾನಿ ರಾಜೀನಾಮೆಗೆ ಸ್ವಪಕ್ಷೀಯ ಸಂಸದರ ಗಡುವು
ಕೆನಡಾ ಪ್ರಧಾನಿ ಹುದ್ದೆಯ ಮೇಲೆ ನಾಲ್ಕನೇ ಅವಧಿಗೆ ಕಣ್ಣಿಟ್ಟಿರುವ ಜಸ್ಟಿನ್ ಟ್ರುಡೊ ಅವರಿಗೆ ಸ್ವಪಕ್ಷಿಯರು ಸೇರಿ ಲಿಬರಲ್ ಪಕ್ಷದ 20 ಸಂಸದರು ಅ.28 ರೊಳಗೆ ರಾಜಕೀಯ ನಿರ್ಧಾರ ಪ್ರಕಟಿಸುವಂತೆ ಗಡುವು ನೀಡಿದ್ದಾರೆ.
ಖಲಿಸ್ಥಾನ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆ ಪ್ರಕರಣದಲ್ಲಿ ಭಾರತದ ರಾಜತಾಂತ್ರಿಕರ ಕೈವಾಡದ ಕುರಿತು ಗಂಭೀರ ಆರೋಪ ಮಾಡಿ, ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯ ಕೆಡಿಸಿದ್ದ ಕೆನಡಾ ಪ್ರಧಾನಿ ಜಸ್ಟೀನ್ ಟ್ರುಡೊ ಅವರು ಇದೀಗ ಸ್ವಪಕ್ಷಿಯರಿಂದಲೇ ತೀವ್ರ ಪ್ರತಿರೋಧ ಎದುರಿಸುವಂತಾಗಿದೆ.
ಕೆನಡಾ ಪ್ರಧಾನಿ ಹುದ್ದೆಯ ಮೇಲೆ ನಾಲ್ಕನೇ ಅವಧಿಗೆ ಕಣ್ಣಿಟ್ಟಿರುವ ಜಸ್ಟಿನ್ ಟ್ರುಡೊ ಅವರಿಗೆ ಅ.28 ರೊಳಗೆ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುವಂತೆ ಲಿಬರಲ್ ಪಕ್ಷದ 20 ಸಂಸದರು ಗಡುವು ನೀಡಿದ್ದಾರೆ.
ಪಕ್ಷದ ಕಳಪೆ ಸಾಧನೆ ಮತ್ತು ಜನಪ್ರಿಯತೆ ಕುಸಿಯಲು ಟ್ರುಡೊ ನೇರ ಕಾರಣ ಎಂದು ದೂಷಿಸಿರುವ ಸಂಸದರು, ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿಯುವಂತೆಯೂ ಒತ್ತಾಯಿಸಿದ್ದಾರೆ. 20ಸಂಸದರು ಸಹಿ ಮಾಡಿರುವ ಪತ್ರವನ್ನು ಬುಧವಾರ ಕಾಕಸ್ನಲ್ಲಿ ನಡೆದ ಲಬರಲ್ ಪಕ್ಷದ ಸಭೆಯಲ್ಲಿ ಟ್ರುಡೊ ಅವರಿಗೆ ತಲುಪಿಸಲಾಗಿದೆ ಎಂದು ಕೆನಡಾದ ಬ್ರಾಡ್ಕಾಸ್ಟಿಂಗ್ ಕಾರ್ಪ್ ಹೇಳಿದೆ.
ಕೆನಡಾದ ಹೌಸ್ ಆಫ್ ಕಾಮನ್ಸ್ ಒಟ್ಟು 153 ಸಂಸದರನ್ನು ಹೊಂದಿದೆ. 2025 ರ ಅಕ್ಟೋಬರ್ ಅಂತ್ಯದ ವೇಳೆಗೆ ಕೆನಡಾದಲ್ಲಿ ಚುನಾವಣೆ ನಡೆಯಲಿದೆ. ನಾಲ್ಕನೇ ಅವಧಿಗೆ ಸ್ಪರ್ಧಿಸಲು ಸಿದ್ಧತೆ ನಡೆಸಿರುವ ಟ್ರುಡೊ ಅವರಿಗೆ ಸಂಸದರ ಗಡುವು ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಪಕ್ಷದ ಸಂಸದರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಪ್ರಧಾನಿ ಜಸ್ಟೀನ್ ಟ್ರುಡೊ, ಲಿಬರಲ್ ಪಕ್ಷದ ಸಂಸದರು ಒಗ್ಗಟ್ಟಿನಿಂದ ಇದ್ದಾರೆ. ಆದರೆ, 20 ಸಂಸದರು ವಿಭಿನ್ನ ಕಥೆ ಹೇಳಿ ರಾಜೀನಾಮೆಗೆ ಗಡುವು ನೀಡಿದ್ದಾರೆ. ಮೊದಲು ಅವರು ಕೇಳಿಸಿಕೊಳ್ಳುವ ಗುಣ ಬೆಳೆಸಿಕೊಳ್ಳಬೇಕು. ಜನರ ಮಾತನ್ನು ಆಲಿಸಬೇಕು ಎಂದು ತಿರುಗೇಟು ನೀಡಿದ್ದಾರೆ ಎಂದು ಎಪಿ ವರದಿ ಮಾಡಿದೆ.
ಲಿಬರಲ್ ಪಕ್ಷಕ್ಕೆ ಆತಂಕ ತಂದ ಸಮೀಕ್ಷೆ
ಕೆನಡಾ ಚುನಾವಣೆಯಲ್ಲಿ ಸಾರ್ವಜನಿಕರ ಅಭಿಪ್ರಾಯ, ಸಮೀಕ್ಷೆಗಳು ಪ್ರಧಾನಿ ಜಸ್ಟೀನ್ ಟ್ರುಡೊ ವಿರುದ್ಧವಾಗಿ ಬಂದಿವೆ. ಟ್ರುಡೊ ನೇತೃತ್ವದಲ್ಲಿ ಲಿಬರಲ್ ಪಕ್ಷ ಚುನಾವಣೆ ಎದುರಿಸಿದರೆ ಕನ್ಸರ್ವೇಟಿವ್ ಪಕ್ಷದ ವಿರುದ್ಧ ಹೀನಾಯ ಸೋಲು ಕಾಣಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ನ್ಯಾನೋಸ್ ರಿಸರ್ಚ್ ಇತ್ತೀಚಿನ ಸಮೀಕ್ಷೆ ಪ್ರಕಾರ, ಕನ್ಸರ್ವೇಟಿವ್ ಪಕ್ಷ ಶೇ. 39 ರಷ್ಟು ಸಾರ್ವಜನಿಕರ ಬೆಂಬಲ ಹೊಂದಿದೆ. ಆದರೆ, ಲಿಬರಲ್ ಪಕ್ಷ ಕೇವಲ ಶೇ 23 ಹಾಗೂ ನ್ಯೂ ಡೆಮೋಕ್ರಾಟ್ ಪಕ್ಷ ಶೇ. 21 ರಷ್ಟು ಬೆಂಬಲ ಹೊಂದಿವೆ ಎಂದು ಹೇಳಿದೆ.
ಲಿಬರಲ್ ಪಕ್ಷದ ಜನಪ್ರಿಯತೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಸಂಸದರು ಟ್ರುಡೊ ವಿರುದ್ಧ ಪತ್ರ ಸಮರ ಸಾರಿದ್ದಾರೆ. ಟ್ರುಡೊ ಬದಲಿಗೆ ಹೊಸ ಮುಖವನ್ನು ಪ್ರಧಾನಿ ಅಭ್ಯರ್ಥಿಗೆ ಸೂಚಿಸಿದರೆ ಲಿಬರಲ್ ಪಕ್ಷ ಉಳಿಯಲಿದೆ ಎಂದು ಸಂಸದ ವೇಯ್ನ್ ಲಾಂಗ್ ಹೇಳಿದ್ದಾರೆ.
ಸಂಸದರ ಬೆಂಬಲ ಬೇಕಾಗಿಲ್ಲ
ಪ್ರಧಾನಿ ಜಸ್ಟೀನ್ ಟ್ರೂಡೊ ಅವರನ್ನು ಪದಚ್ಯುತಗೊಳಿಸುವ ಕಾರ್ಯವಿಧಾನ ಕೆನಡಾದಲ್ಲಿ ಭಿನ್ನವಾಗಿದೆ. ಇಲ್ಲಿ ಪ್ರಧಾನಿ ಅಥವಾ ನಾಯಕನ ಆಯ್ಕೆಗೆ ಸಂಸದರ ಬೆಂಬಲ ಬೇಕಾಗಿಲ್ಲ. ಬದಲಿಗೆ ವಿಶೇಷ ಅಧಿವೇಶನದಲ್ಲಿ ಸದಸ್ಯರು ನಾಯಕನನ್ನು ಆಯ್ಕೆ ಮಾಡುವ ವಿಧಾನ ಚಾಲ್ತಿಯಲ್ಲಿದೆ. ಹಾಗಾಗಿ ಪ್ರಧಾನಿ ಹುದ್ದೆಯಿಂದ ನಿರ್ಗಮಿಸಬೇಕೆ, ಬೇಡವೇ ಎಂಬ ನಿರ್ಧಾರ ಜಸ್ಟೀನ್ ಟ್ರುಡೊ ಅವರಿಗೇ ಸೇರಿರುತ್ತದೆ.