ಇವಿ, ಬ್ಯಾಟರಿಗಳಿಗೆ ಸಬ್ಸಿಡಿ: ವಿಶ್ವ ವಾಣಿಜ್ಯ ಸಂಘಟನೆಯಲ್ಲಿ ಭಾರತದ ವಿರುದ್ಧ ಚೀನಾ ತಗಾದೆ
ಭಾರತವು ಎಲೆಕ್ಟ್ರಾನಿಕ್ ವಾಹನ ಮತ್ತು ಅದರ ಬ್ಯಾಟರಿಗಳಿಗೆ ಸಬ್ಸಿಡಿ ನೀಡಿರುವುದು ಅದರ ದೇಶೀಯ ಉದ್ಯಮಕ್ಕೆ ಅನುಚಿತವಾದ ಲಾಭ ನೀಡುತ್ತದೆ. ಹಾಗಾಗಿ 30 ದಿನಗಳ ಒಳಗಾಗಿ WTOನಲ್ಲಿ ತನ್ನ ಜೊತೆ ಸಮಾಲೋಚನೆಗೆ ಬರಬೇಕು ಎಂಬುದು ಚೀನಾದ ವಾದ...
ವಿದ್ಯುತ್ ಚಾಲಿತ ವಾಹನಗಳು (EV) ಮತ್ತು ಬ್ಯಾಟರಿಗಳ ಮೇಲೆ ಭಾರತ ನೀಡುತ್ತಿರುವ ಸಹಾಯಧನ ಚೀನಾಕ್ಕೆ ಕಣ್ಣುರಿ ತಂದಿದೆ. ಹಾಗಾಗಿ ಅದು ವಿಶ್ವ ವಾಣಿಜ್ಯ ಸಂಘಟನೆ (WTO)ಯಲ್ಲಿ ಭಾರತದ ವಿರುದ್ಧ ತಗಾದೆ ತೆಗೆದಿದೆ.
“ಮಡಕೆ ಕೆಟಲನ್ನು ಕಪ್ಪು ಎಂದು ಕರೆಯಿತಂತೆ!” ಎಂಬ ಗಾದೆ ಮಾತಿನಂತೆ ತಾನೇ ದೋಷಯುಕ್ತನಾಗಿದ್ದರೂ ಮತ್ತೊಬ್ಬರ ಕಡೆಗೆ ಬೊಟ್ಟು ಮಾಡುವುದು ಚೀನಾ ಚಾಳಿ ಎಂದು ಇಂತಹ ದೂರುಗಳ ಬಗ್ಗೆ ಅರಿವಿದ್ದವರು ಹೇಳುವ ಮಾತಿದು.
ವಿಶ್ವ ವಾಣಿಜ್ಯ ಸಂಘಟನೆಯ ವಿವಾದ ಇತ್ಯರ್ಥ ಒಡಂಬಡಿಕೆ (DSU) ಅಡಿಯಲ್ಲಿ ಚೀನಾ ಭಾರತದ ವಿರುದ್ಧ ಆರಂಭಿಸಿರುವ ವಾಣಿಜ್ಯ ವಿವಾದದ ಪ್ರಕಾರ ಕಲಂ 4ರ ಅಡಿಯಲ್ಲಿ ಸಮಾಲೋಚನೆಗೆ ಅವಕಾಶ ನೀಡುವಂತೆ ಅದು ಬುಧವಾರ (ಅ.15) ಕೇಳಿಕೊಂಡಿದೆ. ಚೀನಾ ಎತ್ತಿರುವ ಈ ದೂರಿನ ಪೂರ್ಣ ವಿವರ ಇನ್ನೂ ಲಭ್ಯವಿಲ್ಲವಾದರೂ EV ಮತ್ತು ಬ್ಯಾಟರಿ ತಯಾರಿಕೆಗೆ ಸಂಬಂಧಿಸಿ ಭಾರತ ನೀಡುತ್ತಿರುವ ಸಬ್ಸಿಡಿ ವಿಚಾರದಲ್ಲಿ ಚರ್ಚೆ ಮಾಡಲು ಬಯಸಿರುವುದಾಗಿ ಹೇಳಿದೆ.
ಹಾಗಾದರೆ ಚೀನಾದ ನಿಜವಾದ ತಗಾದೆ ಏನು?
ಭಾರತ ಈ ವಿಚಾರದಲ್ಲಿ ಕೈಗೊಂಡಿರುವ ಕ್ರಮಗಳು ಹಲವಾರು WTO ಕಟ್ಟುಪಾಡುಗಳನ್ನು ಉಲ್ಲಂಘಿಸುತ್ತವೆ. ಅದರಲ್ಲೂ ಮುಖ್ಯವಾಗಿ ದೇಶೀಯವಾಗಿ ಉತ್ಪಾದಿಸಲಾದ ವಿದ್ಯುತ್ ಚಾಲಿತ ವಾಹನಗಳು ಮತ್ತು ಬ್ಯಾಟರಿಗಳಿಗೆ ಹೋಲಿಸಿದರೆ ಆಮದು ಮಾಡಿಕೊಂಡವುಗಳನ್ನು ಸಮಾನವಾಗಿ ಪರಿಗಣಿಸಲಾಗುತ್ತಿಲ್ಲ ಎಂಬುದು ಅದರ ಆರೋಪವಾಗಿದೆ. ಭಾರತ ಕೈಗೊಂಡಿರುವ ಕ್ರಮಗಳು ‘ಆಮದು ಬದಲಿ ಸಬ್ಸಿಡಿ’ಗಳನ್ನು ರೂಪಿಸುತ್ತವೆ, ಇದು ಸಂಪೂರ್ಣ ನಿಷಿದ್ಧವಾಗಿದೆ ಎಂಬುದು ಅದರ ವಾದವಾಗಿದೆ.
ಆಮದು ಮಾಡಿಕೊಂಡ ಉತ್ಪನ್ನಗಳನ್ನು ಸಮಾನವಾಗಿ ಗೌರವಿಸುತ್ತಿಲ್ಲ ಎಂಬ ವಾದವೂ ಸೇರಿದಂತೆ ಭಾರತವು ಇವಿಗಳು ಮತ್ತು ಅವುಗಳ ಬ್ಯಾಟರಿಗಳಿಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳು ಭಾರತದ ದೇಶೀಯ ಕೈಗಾರಿಕೋದ್ಯಮಕ್ಕೆ ಅನುಚಿತವಾದ ಸ್ಪರ್ಧಾತ್ಮಕ ಲಾಭವನ್ನು ನೀಡುತ್ತಿದೆ, ಇದರಿಂದ ಚೀನಾದ ಹಿತಾಸಕ್ತಿಗಳಿಗೆ ಧಕ್ಕೆಯಾಗುತ್ತಿದೆ ಎಂಬುದು ಚೀನಾಕ್ಕಿರುವ ಸಿಟ್ಟು.
ತನ್ನ ದೇಶೀಯ ಉದ್ಯಮದ ನ್ಯಾಯಸಮ್ಮತ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಲು ದೃಢವಾದ ಕ್ರಮ ಕೈಗೊಳ್ಳುವುದಾಗಿ ಅದು ಹೇಳಿದೆ. “ಕಳೆದ ಅನೇಕ ವರ್ಷಗಳಿಂದ ಭಾರತ ಕೈಗೊಂಡಿರುವ ಸರಣಿ ವಾಣಿಜ್ಯ ಮತ್ತು ಆರ್ಥಿಕ ಕ್ರಮಗಳು WTO ಸದಸ್ಯರಲ್ಲಿ ವ್ಯಾಪಕ ಕಳವಳ ಉಂಟುಮಾಡಿವೆ. WTOಗೆ ಸಂಬಂಧಿಸಿದ ನಿಯಮಗಳನ್ನು ಅದು ಸರಿಯಾಗಿ ಪಾಲಿಸುತ್ತಿಲ್ಲ” ಎಂದೂ ಆರೋಪಿಸಿರುವ ಚೀನಾ, WTO ಬದ್ಧತೆಗಳಿಗೆ ಅನುಗುಣವಾಗಿ ನಡೆದುಕೊಳ್ಳುವಂತೆ ಮತ್ತು ತಕ್ಷಣ ತಪ್ಪುಗಳನ್ನು ಸರಿಪಡಿಸಿಕೊಳ್ಳುವಂತೆ ಭಾರತಕ್ಕೆ ತಾಕೀತು ಮಾಡಿದೆ.
ಮುಂದಿನ ಕ್ರಮಗಳೇನು?
ಈ ಹಿನ್ನೆಲೆಯಲ್ಲಿ ಮೊದಲ ಕ್ರಮವಾಗಿ ಭಾರತವು ಚೀನಾ ಎತ್ತಿರುವ ದೂರಿಗೆ ಸಂಬಂಧಿಸಿದಂತೆ ಉತ್ತರವನ್ನು ನೀಡಲು 30 ದಿನಗಳ ಒಳಗಾಗಿ WTOನಲ್ಲಿ ಚೀನಾ ಜೊತೆ ಸಮಾಲೋಚನೆಗೆ ಬರಬೇಕಾಗುತ್ತದೆ. ಈ ಸಮಾಲೋಚನೆಯ ಸಂದರ್ಭದಲ್ಲಿ ಎರಡೂ ಕಡೆಯವರು ಸೌಹಾರ್ದಯುತ ಇತ್ಯರ್ಥಕ್ಕೆ ಬಾರದೇ ಹೋದರೆ ಪ್ರತ್ಯೇಕ ವಿವಾದ ಇತ್ಯರ್ಥ ಮಂಡಳಿಯನ್ನು ರಚಿಸಿ ನಿರ್ದಿಷ್ಟ ಆರೋಪಗಳನ್ನು ಇತ್ಯರ್ಥಪಡಿಸಿ ತೀರ್ಪು ನೀಡುವಂತೆ ಮನವಿ ಮಾಡಿಕೊಳ್ಳಬಹುದು.
ಒಂದು ವೇಳೆ WTO ಮಂಡಳಿಯು ಚೀನಾ ಪರವಾಗಿಯೇ ಏನಾದರೂ ತೀರ್ಪು ನೀಡಿದರೆ ಭಾರತವು ಮಂಡಳಿಯ ನಿರ್ಧಾರಗಳನ್ನು ಪ್ರಶ್ನಿಸಿ ಮೇಲ್ಮನವಿ ಪ್ರಾಧಿಕಾರದ ಮುಂದೆ ಮನವಿ ಮಾಡಿಕೊಳ್ಳಬಹುದು. ಆದರೆ ಸದ್ಯದ ಮಟ್ಟಿಗೆ ಮೇಲ್ಮನವಿ ಪ್ರಾಧಿಕಾರವು ಕಾರ್ಯನಿರ್ವಹಿಸದೇ ಇರುವ ಕಾರಣ ಈ ಕ್ರಮವು ವಿವಾದವನ್ನು ಜಾರಿಗೆ ತರಲು ಸಾಧ್ಯವಾಗದಂತೆ ಮಾಡುತ್ತದೆ ಎಂದು ಹೆಸರು ಹೇಳಲಿಚ್ಛಿಸದ ಕಾನೂನು ತಜ್ಞರೊಬ್ಬರು ತಿಳಿಸಿದ್ದಾರೆ.
ತಾನು ಕಳ್ಳ, ಪರರನ್ನು ನಂಬ!
ಈ ವಿವಾದದಲ್ಲಿರುವ ಗಮನಾರ್ಹ ಸಂಗತಿ ಏನೆಂದರೆ ಚೀನಾ ಕೂಡ ತನ್ನ ಇವಿ ಮತ್ತು ಬ್ಯಾಟರಿ ಉದ್ಯಮಗಳನ್ನು ಕಟ್ಟಲು ಕಳೆದ ಅನೇಕ ವರ್ಷಗಳಿಂದ ಶತಕೋಟಿ ಡಾಲರ್ ಹಣವನ್ನು ಸಬ್ಸಿಡಿಯಾಗಿ ನೀಡುತ್ತ ಬಂದಿದೆ. ಹೀಗಿರುವಾಗ ಇಂತಹ ವಿವಾದವನ್ನು ಎತ್ತಿರುವ ಚೀನಾ ಕ್ರಮವೇ ಹಾಸ್ಯಾಸ್ಪದವಾಗಿ ಕಾಣುತ್ತಿದೆ ಎಂದು ವಿಶ್ಲೇಷಕರೊಬ್ಬರು ಹೇಳುತ್ತಾರೆ.
ಸದ್ಯದ ಮಟ್ಟಿಗೆ ಚೀನಾವೇ ವಿಶ್ವದಲ್ಲಿ ಅತಿದೊಡ್ಡ ಇವಿ ಮತ್ತು ಬ್ಯಾಟರಿಗಳ ತಯಾರಿಕಾ ದೇಶ. ಯುರೋಪಿನ ಅನೇಕ ರಾಷ್ಟ್ರಗಳಲ್ಲಿ ತನ್ನ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸುತ್ತ ಸಾಗಿದೆ. ಹಾಗಿದ್ದೂ ಐರೋಪ್ಯ ರಾಷ್ಟ್ರಗಳು ಚೀನಾದ ಇವಿಗಳ ಮೇಲೆ ಸಬ್ಸಿಡಿ ವಿರೋಧಿ ಸುಂಕಗಳನ್ನು ವಿಧಿಸಿದೆ ಮತ್ತು ಅವುಗಳು ತನ್ನ ಮಾರುಕಟ್ಟೆಗೆ ಬಾರದಂತೆ ಅಮೆರಿಕ ಪರಿಣಾಮಕಾರಿಯಾಗಿ ನಿರ್ಬಂಧಿಸಿದೆ.
ಮುಂಬರುವ ತಿಂಗಳುಗಳಲ್ಲಿ ಈ ವಿವಾದವು ಯಾವ ರೀತಿಯ ತಿರುವುಗಳನ್ನು ತೆಗೆದುಕೊಳ್ಳುತ್ತದೆ ಎಂಬುದು ಕುತೂಹಲದ ಸಂಗತಿ. ಯಾಕೆಂದರೆ ಈ ವಿವಾದ ಬಹಳ ಕಾಲ ಜಗ್ಗಾಡಿದರೆ ಏಷ್ಯಾದ ಎರಡೂ ದಿಗ್ಗಜರ ನಡುವಿನ ವಿಶಾಲ ದ್ವಿಪಕ್ಷೀಯ ಆರ್ಥಿಕ ಸಂಬಂಧಗಳ ಮೇಲೆ ಪರಿಣಾಮ ಬೀರುವುದು ಮಾತ್ರ ನಿಶ್ಚಿತ ಎಂದು ತಜ್ಞರು ಹೇಳುತ್ತಾರೆ.