ಆಕ್ಸಿಯಂ-4: ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶಯಾನಕ್ಕೆ ದಿನಾಂಕ ನಿಗದಿ

ಜೂನ್ 25 ರಂದು ಬೆಳಗಿನ ಜಾವ 2:31ಕ್ಕೆ ಫ್ಲಾರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ ಎಕ್ಸ್‌ನ ಫಾಲ್ಕನ್- 9 ರಾಕೆಟ್ ಉಡಾವಣೆಯಾಗಲಿದೆ ಎಂದು ನಾಸಾ ತನ್ನ ʼಎಕ್ಸ್‌ʼ ಖಾತೆಯಲ್ಲಿ ತಿಳಿಸಿದೆ.;

Update: 2025-06-24 06:52 GMT

ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ

ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ಮೂವರನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಕಳುಹಿಸುವ 'ಆ್ಯಕ್ಸಿಯಂ-4' ಮಿಷನ್ ಬುಧವಾರ (ಜೂನ್ 25) ಉಡಾವಣೆಯಾಗಲು ಸಿದ್ಧವಾಗಿದೆ ಎಂದು ನಾಸಾ ಘೋಷಿಸಿದೆ. ವಿವಿಧ ತಾಂತ್ರಿಕ ಕಾರಣಗಳಿಂದಾಗಿ ಈ ಮಿಷನ್‌ನ ಉಡಾವಣೆಯನ್ನು ಈಗಾಗಲೇ ಹಲವು ಬಾರಿ ಮುಂದೂಡಲಾಗಿದೆ.

ಆ್ಯಕ್ಸಿಯಂ-4 ಮಿಷನ್ ಜೂನ್ 25 ರಂದು ಬೆಳಗಿನ ಜಾವ 2:31ಕ್ಕೆ (EDT) ಫ್ಲಾರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ ಎಕ್ಸ್‌ನ ಫಾಲ್ಕನ್- 9 ರಾಕೆಟ್ ಮೂಲಕ ಉಡಾವಣೆಯಾಗಲಿದೆ. ಈ ಮಾಹಿತಿಯನ್ನು ಇಂಟರ್‌ನ್ಯಾಷನಲ್ ಸ್ಪೇಸ್ ಸ್ಟೇಷನ್ ತನ್ನ 'ಎಕ್ಸ್' ಖಾತೆಯಲ್ಲಿ ದೃಢಪಡಿಸಿದೆ.

ಮಿಷನ್ ತಂಡ

ಈ ಮಹತ್ವದ ಕಾರ್ಯಾಚರಣೆಯ ನೇತೃತ್ವವನ್ನು ಕಮಾಂಡರ್ ಪೆಗ್ಗಿ ವಿಟ್ಸನ್ ವಹಿಸಿದ್ದಾರೆ. ಮಿಷನ್ ಪೈಲಟ್ ಆಗಿ ಭಾರತದ ಶುಭಾಂಶು ಶುಕ್ಲಾ ಅವರನ್ನು ನೇಮಿಸಲಾಗಿದೆ. ಇವರೊಂದಿಗೆ ಹಂಗೇರಿಯನ್ ಗಗನಯಾತ್ರಿ ಟಿಬೋರ್ ಕಾಪು ಮತ್ತು ಪೋಲೆಂಡ್‌ನ ಸ್ಲಾವೋಸ್ಟ್ ಉಜ್ಜಾನ್ನಿ-ವಿಸ್ನಿಯೆನ್ನಿ ಮಿಷನ್ ತಜ್ಞರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಸತತ ಮುಂದೂಡಿಕೆಗಳು

ಫಾಲ್ಕನ್-9 ರಾಕೆಟ್‌ನ ಈ ಉಡಾವಣೆಯನ್ನು ಈ ಹಿಂದೆ ಆರು ಬಾರಿ ಮುಂದೂಡಲಾಗಿತ್ತು. ಮೊದಲಿಗೆ ಮೇ 29 ರಂದು ಉಡಾವಣೆಗೆ ನಿರ್ಧರಿಸಲಾಗಿದ್ದರೂ, ತಾಂತ್ರಿಕ ಕಾರಣಗಳಿಂದಾಗಿ ಜೂನ್ 8, 10, 11, 19 ಮತ್ತು 22 ಕ್ಕೆ ದಿನಾಂಕಗಳನ್ನು ಮುಂದೂಡಲಾಗಿತ್ತು. ಇದೀಗ ಜೂನ್ 25ಕ್ಕೆ ಹೊಸ ಉಡಾವಣೆ ದಿನಾಂಕವನ್ನು ಘೋಷಿಸಲಾಗಿದೆ.

ಬಾಹ್ಯಾಕಾಶದಲ್ಲಿ 12 ಪ್ರಯೋಗಗಳು

ಬಾಹ್ಯಾಕಾಶಕ್ಕೆ ತೆರಳಲಿರುವ ಶುಭಾಂಶು ಶುಕ್ಲಾ ಅವರು ಪ್ರಮುಖವಾಗಿ ಆಹಾರ ಮತ್ತು ಪೌಷ್ಟಿಕಾಂಶ ಸಂಬಂಧಿತ ಪ್ರಯೋಗಗಳನ್ನು ನಡೆಸಲಿದ್ದಾರೆ. ತೀರಾ ಕಡಿಮೆ ಗುರುತ್ವಾಕರ್ಷಣ ಶಕ್ತಿ ಇರುವ ಪರಿಸರದಲ್ಲಿ ಕಾಳುಗಳನ್ನು ಮೊಳಕೆ ಬರಿಸುವುದು ಸೇರಿದಂತೆ ಹಲವು ಪ್ರಯೋಗಗಳು ಇದರಲ್ಲಿ ಸೇರಿವೆ. ಈ ಮಿಷನ್‌ನಲ್ಲಿ ಇಸ್ರೋ ಸಂಸ್ಥೆಯಿಂದ ಏಳು ಪ್ರಯೋಗಗಳಿದ್ದರೆ, ನಾಸಾ ಜತೆಗೂಡಿ ಐದು ಜಂಟಿ ಪ್ರಯೋಗಗಳು ಸಹ ನಡೆಯಲಿವೆ. ಈ ಮಿಷನ್ ಯಶಸ್ವಿಯಾದರೆ, ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತದ ಪಾತ್ರ ಮತ್ತಷ್ಟು ವಿಸ್ತಾರಗೊಳ್ಳಲಿದೆ. 

Tags:    

Similar News