ಭಾರತದ ಉತ್ಪನ್ನಗಳ ಮೇಲೆ ಶೇ 50 ರಷ್ಟು ಸುಂಕ; ಟ್ರಂಪ್‌ ಆದೇಶ ಇಂದಿನಿಂದಲೇ ಜಾರಿ

ರಷ್ಯಾದಿಂದ ಇಂಧನ ಆಮದು ಸ್ಥಗಿತಗೊಳಿಸಲು ಒತ್ತಡ ಹಾಕುತ್ತಿರುವ ಅಮೆರಿಕದ ಕ್ರಮದಿಂದ ಉಭಯ ರಾಷ್ಟ್ರಗಳ ಸಂಬಂಧ ಇನ್ನಷ್ಟು ಹದಗೆಟ್ಟಿದೆ.;

Update: 2025-08-27 08:43 GMT

ಭಾರತೀಯ ಸರಕುಗಳ ಮೇಲೆ ಶೇ 50 ಸುಂಕ ಹೇರಿಕೆಯ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆದೇಶ ಇಂದಿನಿಂದಲೇ ಜಾರಿಯಾಗಿದೆ. ರಷ್ಯಾದಿಂದ ತೈಲ ಆಮದು ಮುಂದುವರಿಸಿದ ಕಾರಣ ಪ್ರತಿಕಾರವಾಗಿ ಈ ಮೊದಲು ಶೇ 25 ರಷ್ಟು ಹೇರಿಕೆ ಮಾಡಿದ್ದ ಸುಂಕವನ್ನು ದ್ವಿಗುಣಗೊಳಿಸಲಾಗಿದೆ.

ರಷ್ಯಾದಿಂದ ಇಂಧನ ಆಮದು ಸ್ಥಗಿತಗೊಳಿಸಲು ಒತ್ತಡ ಹಾಕುತ್ತಿರುವ ಅಮೆರಿಕದ ಕ್ರಮದಿಂದ ಉಭಯ ರಾಷ್ಟ್ರಗಳ ಸಂಬಂಧ ಇನ್ನಷ್ಟು ಹದಗೆಟ್ಟಿದೆ. ಶೇ 50 ರಷ್ಟು ಸುಂಕ ಹೇರಿಕೆ ಕುರಿತಂತೆ ಅಮೆರಿಕದ ಗೃಹ ಭದ್ರತಾ ಇಲಾಖೆಯು ಆ.25ರಂದು ಕರಡು ಅಧಿಸೂಚನೆ ಪ್ರಕಟಿಸಿ, ಆ.27 ರಿಂದ ಜಾರಿಯಾಗಲಿದೆ ಎಂದು ತಿಳಿಸಿತ್ತು.

ಅಧಿಕ ಸುಂಕ ಜಾರಿಯ ಪರಿಣಾಮ ಭಾರತದಿಂದ ಅಮೆರಿಕಕ್ಕೆ ರಫ್ತು ಮಾಡುವ ಉತ್ಪನ್ನಗಳ ಮೇಲೆ ಶೇ 50 ರಷ್ಟು ಸುಂಕ ವಿಧಿಸಲಾಗಿದೆ. ಬ್ರೆಜಿಲ್ ಹೊರತುಪಡಿಸಿ ಇಂತಹ ಗರಿಷ್ಠ ಸುಂಕ ಎದುರಿಸುತ್ತಿರುವ ಏಕೈಕ ದೇಶ ಭಾರತವಾಗಿದೆ.

ಯಾವ ಉತ್ಪನ್ನಗಳಿಗೆ ಹೊಡೆತ? 

ಅಮೆರಿಕದ ಅಧಿಕ ಸುಂಕ ಹೇರಿಕೆಯಿಂದ ಗಾರ್ಮೆಂಟ್ಸ್, ಚಿನ್ನಾಭರಣ, ಪಾದರಕ್ಷೆ, ಕ್ರೀಡಾ ಸಾಮಗ್ರಿ, ಫರ್ನಿಚರ್, ರಾಸಾಯನಿಕ ವಸ್ತುಗಳಂತಹ ವಸ್ತುಗಳಿಗೆ ಹೆಚ್ಚುವರಿ ಸುಂಕ ಜಾರಿಯಾಗಲಿದೆ. ಆದರೆ, ಔಷಧಿ ಉತ್ಪನ್ನಗಳು ಮತ್ತು ಕಂಪ್ಯೂಟರ್ ಚಿಪ್‌ಗಳಿಗೆ ವಿನಾಯಿತಿ ನೀಡಲಾಗಿದೆ.

ಸುಂಕ ಹೇರಿಕೆ ಕುರಿತಂತೆ ಐದು ಸುತ್ತಿನ ವಾಣಿಜ್ಯ ಮಾತುಕತೆಗಳಾದರೂ ಯಾವುದೇ ಸಂಧಾನಕ್ಕೆ ಬರಲು ಸಾಧ್ಯವಾಗಿರಲಿಲ್ಲ.

ʼಅಮೆರಿಕಾ ಇಸ್‌ ಬ್ಯಾಕ್‌ʼ ಎಂದ ಟ್ರಂಪ್‌

ಸುಂಕ ಜಾರಿಗೊಂಡ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ತಮ್ಮ ಟ್ರೂತ್ ಸೋಶಿಯಲ್ ಖಾತೆಯಲ್ಲಿ "ಅಮೆರಿಕಾ ಫಸ್ಟ್, ಅಮೆರಿಕಾ ಇಸ್ ಬ್ಯಾಕ್" ಎಂಬ ಘೋಷಣೆಗಳಿರುವ ತೈಲ ಡ್ರಮ್‌ಗಳ ಜೊತೆಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಇನ್ನು ಸುಂಕ ಹೇರಿಕೆ ಕುರಿತಂತೆ ಸೋಮವಾರ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, "ರೈತರು, ಪಶುಪಾಲಕರು ಮತ್ತು ಸಣ್ಣ ಕೈಗಾರಿಕೆಗಳ ಹಿತಾಸಕ್ತಿ ನಮಗೆ ಮುಖ್ಯ. ಹೊರಗಿನ ಒತ್ತಡ ಹೆಚ್ಚಾದರೂ ಅದನ್ನು ತಡೆದುಕೊಳ್ಳುತ್ತೇವೆʼ ಎಂದು ಹೇಳಿದ್ದರು. 

Tags:    

Similar News