ಹಿಜ್ಬುಲ್ಲಾ ದಮನಕ್ಕೆ ಇಸ್ರೇಲ್ ತಂತ್ರ | ಪೇಜರ್ ಸ್ಫೋಟಗಳ ಬಳಿಕ ವಾಕಿ-ಟಾಕಿಗಳ ಏಕಕಾಲ ಸ್ಫೋಟ: 20 ಸಾವು, 450 ಮಂದಿಗೆ ಗಾಯ
ಲೆಬನಾನ್‌ನಲ್ಲಿ ಸಾವಿರಾರು ಪೇಜರ್‌ಗಳು ಸ್ಫೋಟಿಸಿ ಒಂಬತ್ತು ಜನ ಮೃತಪಟ್ಟು, 2,800 ಕ್ಕೂ ಹೆಚ್ಚು ಜನ ಗಾಯಗೊಂಡ ಒಂದು ದಿನದ ನಂತರ ವಾಕಿಟಾಕಿ ಸ್ಫೋಟ ಸಂಭವಿಸಿದೆ.
ಲೆಬನಾನ್‌ನ ಮೂರು ಪ್ರದೇಶಗಳಲ್ಲಿ ವಾಕಿ-ಟಾಕಿಗಳು ಮತ್ತು ರೇಡಿಯೊಗಳು ಸ್ಫೋಟಗೊಂಡು 20ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, 450 ಕ್ಕೂ ಹೆಚ್ಚು ಜನ ಬುಧವಾರ ಗಾಯಗೊಂಡಿದ್ದಾರೆ.
ಸಾವಿರಾರು ಪೇಜರ್‌ಗಳ ಸ್ಫೋಟದಿಂದ ಒಂಬತ್ತು ಜನ ಸಾವಿಗೀಡಾಗಿ, ಸುಮಾರು 2,800 ಮಂದಿ ಗಾಯಗೊಂಡ ಒಂದು ದಿನದ ಬಳಿಕ ಈ ಸ್ಪೋಟಗಳು ಸಂಭವಿಸಿವೆ. ನೂರಾರು ವಾಕಿ-ಟಾಕಿಗಳು ಸ್ಫೋಟಗೊಂಡಿವೆ ಎಂದು ಅಂದಾಜಿಸಲಾಗಿದೆ.
ಲೆಬನಾನಿನ ಮಾಧ್ಯಮಗಳ ಪ್ರಕಾರ, ಬೈರೂತ್, ಬೆಕಾ ವ್ಯಾಲಿ ಮತ್ತು ದಕ್ಷಿಣ ಲೆಬನಾನ್‌ನಲ್ಲಿ ವಾಕಿಟಾಕಿ ಸ್ಫೋಟಗಳು ಸಂಭವಿಸಿವೆ. ಸಾಮಾಜಿಕ ಮಾಧ್ಯಮದಲ್ಲಿರುವ ವಿಡಿಯೋ ಕ್ಲಿಪ್‌ಗಳು ಕಟ್ಟಡದಲ್ಲಿ ಬೆಂಕಿ, ಹೊತ್ತಿ ಉರಿಯುತ್ತಿರುವ ಕಾರು ಮತ್ತು ಸುಟ್ಟುಹೋದ ಮೋಟಾರ್‌ಬೈಕ್ ನ್ನು ತೋರಿಸಿವೆ. ಈ ವಿಡಿಯೋಗಳು ಅಧಿಕೃತವೇ ಎಂಬುದು ಸ್ಪಷ್ಟವಾಗಿಲ್ಲ.
ಪೂರ್ವ ಲೆಬನಾನ್‌ನ ಹಲವು ಪ್ರದೇಶಗಳಲ್ಲಿ ಲ್ಯಾಂಡ್‌ಲೈನ್ ಫೋನ್‌ಗಳು ಸ್ಫೋಟಿಸಿವೆ. ಲೆಬನಾನ್‌ನ ನ್ಯಾಷನಲ್ ನ್ಯೂಸ್ ಏಜೆನ್ಸಿ ಪ್ರಕಾರ, ಬೈರೂತ್‌ನ ಹಲವು ಭಾಗಗಳಲ್ಲಿ ಮನೆಗಳಲ್ಲಿ ಅಳವಡಿಸಿದ್ದ ಸೌರ ಶಕ್ತಿ ವ್ಯವಸ್ಥೆಗಳು ಸಹ ಸ್ಫೋಟಗೊಂಡಿವೆ.
ಇಸ್ರೇಲ್ ಹಸ್ತಕ್ಷೇಪದ ಶಂಕೆ
ಹಿಜ್ಬುಲ್ಲಾ ಐದು ತಿಂಗಳ ಹಿಂದೆ ತೈವಾನ್ ಮೂಲದ ಕಂಪನಿಯಿಂದ ಪೇಜರ್‌ಗಳು ಮತ್ತು ವಾಕಿ-ಟಾಕಿಗಳನ್ನು ಖರೀದಿಸಿತ್ತು. ಒಮ್ಮೆಲೆ ಈ ಸ್ಫೋಟಗಳು ಹೇಗೆ ಸಂಬವಿಸಿದವು ಎಂಬ ಬಗ್ಗೆ ಸ್ಪಷ್ಟತೆ ಇಲ್ಲದಿದ್ದರೂ, ದಾಳಿಯಲ್ಲಿ ಇಸ್ರೇಲ್ ಕೈವಾಡವನ್ನು ಶಂಕಿಸಲಾಗಿದೆ. ದೇಶದ ಬೇಹುಗಾರಿಕೆ ಸಂಸ್ಥೆ ಮೊಸಾದ್ ಇಂಥ ದಾಳಿಗಳಿಗೆ ಹೆಸರುವಾಸಿಯಾಗಿದೆ.
ರಾಕೆಟ್‌ಗಳಿಂದ ಪ್ರತಿದಾಳಿ
ಮಂಗಳವಾರ ನಡೆದ ಸ್ಫೋಟಗಳಲ್ಲಿ ಬಾಲಕಿ ಸೇರಿದಂತೆ ಕನಿಷ್ಠ ಒಂಬತ್ತು ಮಂದಿ ಸಾವನ್ನಪ್ಪಿದ್ದರು. ಲೆಬನಾನ್‌ನಲ್ಲಿರುವ ಇರಾನ್ ರಾಯಭಾರಿ ಮೊಜ್ತಾಬಾ ಅಮಾನಿ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ.
ಹಿಜ್ಬುಲ್ಲಾ ಪ್ರತೀಕಾರವಾಗಿ ಇಸ್ರೇಲಿ ಫಿರಂಗಿ ನೆಲೆಗಳ ಮೇಲೆ ರಾಕೆಟ್ ದಾಳಿ ನಡೆಸಿದೆ. ಸಂಘರ್ಷವನ್ನು ಹೆಚ್ಚಿಸುವ ಯಾವುದೇ ಕ್ರಮಗಳಿಂದ ದೂರವಿರಬೇಕೆಂದು ಅಮೆರಿಕ ಎರಡೂ ಪಕ್ಷಗಳಿಗೆ ಎಚ್ಚರಿಕೆ ನೀಡಿದೆ.