ʻಸರೋದ್‌ ಮಾಂತ್ರಿಕʼನ ನೆವದಲ್ಲಿ ʼಪಂಡಿತ ರಾಜೀವ ತಾರಾನಾಥ-ಜೀವನʼದ ಒಳ ಲೋಕದೊಳಗೊಂದು ʻರಾಗʼ ಸಂಚಾರ

Update: 2024-08-03 02:00 GMT

ತಮ್ಮದೇ ಸಂಗೀತದ ಜಾಡಿನಲ್ಲಿ ಮಂತ್ರಮುಗ್ಧರಾಗಿದ್ದ ಸರೋದ್‌ ನುಡಿಸಾಣಿಕೆ ʻಪಂಡಿತʼ, ಸಾಹಿತ್ಯ ಕೃತಿಯೊಂದನ್ನು ಅದರ ನೇಯ್ಗೆಯ ಒಪ್ಪದಲ್ಲೂ, ಸ್ನಿಗ್ಧತೆಯಲ್ಲೂ, ಅದು ಒಟ್ಟಾಗಿ ಪಡೆಯುವ ಆಕಾರದಲ್ಲೂ ಕಾಣುವ ಕಣ್ಣಿದ್ದ ನಮ್ಮ ನಡುವಿನ ಹಿರಿಯ ಜೀವ ರಾಜೀವ್‌ ತಾರಾನಾಥ್‌. ವಿಶ್ವ ಸಂಗೀತದ ದಿನದಂದು (ಜೂನ್‌ 11) ರಂದು, ಅವರನ್ನು ಬಲ್ಲವರು, ಹೃದಯಾಂತರಾಳದಿಂದ ಆರಾಧಿಸುವವರು, ನಿರುದ್ದಿಶ್ಯವಾಗಿ ಪ್ರೀತಿಸುವವರೆಲ್ಲರನ್ನೂ “ತೊರೆದು ಜೀವಿಸಬಹುದೇ, ರಾಜೀವ್‌ ನಿಮ್ಮ ಚರಣಗಳ” ಎಂದು ಕಂಬನಿಗೆರೆಯುವಂತೆ ಮಾಡಿ, ಇನ್ನು ಬಾರದ ಸಂಗೀತದ ಗಾಂಧರ್ವ ಲೋಕಕ್ಕೆ ತೆರಳಿಬಿಟ್ಟರು. “ಪ್ರತಿಭಾವಂತ ಕಲಾವಿದರ ನಿಡಿದಾದ ಬಾಳು, ದೀರ್ಘಾಯುವಿಗೆ ಮಾತ್ರ ಸಂಬಂಧಿಸಿರುವುದಿಲ್ಲ. ಪರಂಪರೆಯ ಯಾನಕ್ಕೆ, ಅದರೊಳಗಿನ ಸೃಜನಶೀಲ ಪ್ರಯೋಗ ಮತ್ತು ಸಾಹಸಗಳಿಗೆ ಲಗತ್ತಾಗಿರುತ್ತದೆ. ಇಂತಹುವೇ ಜೈವಿಕ ಮತ್ತು ಕಲಾತ್ಮಕ ಸಂಕರ ಪರಂಪರೆಯ ಉಳಿ ಸುತ್ತಿಗೆಗಳಿಂದ ಕಟೆಯಲ್ಪಟ್ಟ ವ್ಯಕ್ತಿತ್ವ ರಾಜೀವ ತಾರಾನಾಥ್‌ ಅವರದು” ಎಂದು ಖ್ಯಾತ ಚಿಂತಕ ರಹಮತ್‌ ತರೀಕೆರೆ ಅವರ ಮಾತುಗಳು ರಾಜೀವರ ಮಟ್ಟಿಗೆ ಅರ್ಥಪೂರ್ಣ. ರಾಜೀವರಿಗೆ “|ಶತಮಾನಂ ಭವತಿ ಶತಾಯುಃ ಪುರುಷಃ ಶತೇಂದ್ರಿಯ ಆಯುಷ್ಯೇವೇನ್ದ್ರಿಯೇಃ ಪ್ರತಿಷ್ಠತಿ” ಆಶೀರ್ವಾದವಿದೆ ಎಂದೇ ಎಲ್ಲರೂ ಭಾವಿಸಿರುವಾಗಲೇ, ಅವರು ತಮ್ಮ ಎಂದಿನ ಶೈಲಿಯಲ್ಲಿ ಕೈ ಬೀಸಿ ನಿರ್ಗಮಿಸಿಬಿಟ್ಟರು. ಆದರೆ ಕೊನೆಯವರೆಗೂ, ಸಂಗೀತ-ಸಾಹಿತ್ಯವನ್ನೇ ಉಸಿರಾಡಿ, , ಕೊನೆಯುಸಿರಿನಲ್ಲಿ ಸಪ್ತಸ್ವರಗಳೊಂದಿಗೆ ಚಕ್ಕಂದವಾಡುತ್ತಲೇ ಉಸಿರು ನಿಲ್ಲಿಸಿದ ಮಹಾ ಚೇತನ ರಾಜೀವ್‌ ತಾರಾನಾಥ್. ‌

ಅವರ ಕುರಿತು ಅವರಿದ್ದಾಗಲೇ ಓದುಗರಿಗೆ ದಕ್ಕಿದ್ದ ʻಸರೋದ್‌ ಮಾಂತ್ರಿಕ ಪಂಡಿತ ರಾಜೀವ ತಾರಾನಾಥ-ಜೀವನರಾಗʼ -ನಿರೂಪಣೆ ಸುಮಂಗಲಾ ಪುಸ್ತಕ ಮತ್ತೆ ರಾಜೀವ ತಾರಾನಾಥರನ್ನು ನೆನಪಿಸಿಕೊಳ್ಳುವಂತೆ ಮಾಡಿದೆ. ಸುಮಾರು 352 ಪುಟಗಳ ಗಟ್ಟಿರಟ್ಟಿನ ಈ ಪುಸ್ತಕವನ್ನು ಪ್ರಕಟಿಸಿರುವುದು ಅಂಕಿತ ಪುಸ್ತಕ. ಈ ಪುಸ್ತಕವನ್ನು ಎರಡು ಭಾಗಗಳಲ್ಲಿ ವಿಂಗಡಿಸಲಾಗಿದೆ. ಭಾಗ-ಒಂದನ್ನು ರಾಜೀವ ಸ್ವಗತವೆಂದೂ, ಭಾಗ ಎರಡನ್ನು ರಾಜೀವರು…ಇರೋದೇ ಹೀಗೆ ಎಂದೂ, ವಿಂಗಡಿಸಲಾಗಿದೆ. ಭಾಗ ಒಂದರ ರಾಜೀವರ ಸ್ವಗತದಡಿಯಲ್ಲಿ ಮೂರು ಅಧ್ಯಾಯಗಳಿವೆ; ಅರಿವಿನಿಂದ ಗುರುವಿನೆಡೆಗೆ ಅಧ್ಯಾಯದಲ್ಲಿ; ಬಾಲ್ಯದ ಗುರುತು, ಸೆಂಟ್ರಲ್‌ ಕಾಲೇಜು ದಿನಗಳು, ಸರೋದ್‌ ಮಾಯೆಯ ಬೆಂಬತ್ತಿ.., ಮರಳಿ ಮೈಸೂರಿಗೆ, ತಿರುಚ್ಚಿ, ಹೈದರಾಬಾದ್‌ ನೆನಪುಗಳು, ಪ್ರಭಾವ ಪವಾಡ- ನೆನಪುಗಳನ್ನು ರಾಜೀವ್‌ ಹಂಚಿಕೊಂಡಿದ್ದಾರೆ. ಅಧ್ಯಾಯ ಎರಡು ತ್ರಿಮೂರ್ತಿಗಳ ಸಾನ್ನಿಧ್ಯದಲ್ಲಿ; ಗೌರಿಶಂಕರದಂತೆ ನನ್ನ ಗುರು, ತಿದ್ದಿ ತೀಡಿದವರು, ಸಂಗೀತ, ರಿಯಾಜ್‌, ಪರಂಪರೆ ಇತ್ಯಾದಿ.. ಸಂಗೀತ ಮತ್ತು ನಾನು.. ಕುರಿತಂತೆ ರಾಜೀವ್‌ ಗುರುವಿನ “ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ”, ಎಂದು ತಮ್ಮ ಗುರುಗಳನ್ನು ನೆನಪಿಸಿಕೊಂಡಿದ್ದಾರೆ. ಅಧ್ಯಾಯ ಮೂರು ಅವರ ಸಿನಿಮಾ ಸಂಗೀತದ ಮಜಲು. ಅದರ ಎರಡು ಅಂಕಗಳಲ್ಲಿ ಪುಣೆ ಫಿಲ್ಮ್‌ ಇನ್ ಸ್ಟಿಟ್ಯೂಟ್‌ ನಲ್ಲಿನ ಅನುಭವ, ಹಿನ್ನೆಲೆ ಸಂಗೀತ ಕೊಟ್ಟದ್ದರ ಬಗ್ಗೆ ರಾಜೀವ್‌ ಹೇಳಿದ್ದಾರೆ. ಭಾಗ ಎರಡರಲ್ಲಿ ರಾಜೀವ್‌ ತಾರಾನಾಥ್‌ರ ಗೆಳೆಯರು, ಶಿಶ್ಯರು, ನಿಕಟವರ್ತಿಗಳು ತಮಗೆ ಕಂಡಂತೆ ರಾಜೀವರನ್ನು ಕಂಡರಿಸಿದ್ದಾರೆ. ಅವರೆಲ್ಲರೂ, ನಮ್ಮ ಸಾಂಸ್ಕೃತಿಕ ಲೋಕದ ಮಹನೀಯರೇ. ದಿ.ಡಾ. ಕೀರ್ತಿನಾಥ ಕುರ್ತಕೋಟಿ, ಯು.ಆರ್.‌ ಅನಂತಮೂರ್ತಿ, ಚಂದ್ರಶೇಖರ ಕಂಬಾರ, ಹಸನ್‌ ಮನ್ಸೂರ್‌, ರಾಮೇಶ್ವರಿ ವರ್ಮಾ, ರಮಾಕಾಂತ ಜೋಶಿ, ಕಡಿದಾಳು ಶಾಮಣ್ಣ, ಚಾಡ್‌ ಹ್ಯಾಮಿಲ್‌, ಪಾರ್ಥ ಶ್ರೀನಿವಾಸನ್‌, ಸಂಗೀತಗಾರರಾದ ಉಸ್ತಾದ್‌ ಜಾಕಿರ್‌ ಹುಸೇನ್‌, ಪಂಡಿತ್‌ ಡಿ. ಬಿ. ಹರೀಂದ್ರ, ಪಂಡಿತ್‌ ರವೀಂದ್ರ ಯಾವಗಲ್‌, ಪಂಡಿತ್‌ ಪರಮೇಶ್ವರ ಹೆಗಡೆ, ವಿದ್ವಾನದ ಡಿ. ಬಾಲಕೃಷ್ಣ. ಪಂಡಿತ್‌ ನಯನ್ ಘೋಷ್, ಇನ್ನಿತರರು.

ಸುಮಾರು ಹದಿನಾಲ್ಕು ವರ್ಷಗಳ ಹಿಂದೆ ಮೊದಲ ಮುದ್ರಣ ಕಂಡ ಈ ಪುಸ್ತವನ್ನು ಕುರಿತು ಬರೆಯುತ್ತಿರುವುದು ರಾಜೀವ್‌ ತಾರಾನಾಥ್‌ ಅವರನ್ನು ನೆನಪಿಸಿಕೊಳ್ಳಲು ಒಂದು ನೆವ ಅಷ್ಟೆ. ರಾಜೀವ್‌ ಅವರ ಕುರಿತು 80ರ ದಶಕದ ನಂತರ ಕನ್ನಡ ಮತ್ತು ಇಂಗ್ಲಿಷ್‌ ಪತ್ರಿಕೆಗಳು , ನಿಯತಕಾಲಿಕಗಳಲ್ಲಿ ಪ್ರಕಟವಾದ ಲೇಖನಗಳು, ಸಂದರ್ಶನಗಳನ್ನು ಈ ಪುಸ್ತಕದಲ್ಲಿ ಸಂಗ್ರಹಿಸಿ ಸುಮಂಗಲಾ ಓದುಗರಿಗೆ ನೀಡಿದ್ದಾರೆ. ಸುಮಂಗಲಾ ಅವರೇ ಹೇಳುವಂತೆ; ಇದು ಪಂಡಿತ ರಾಜೀವ ತಾರಾನಾಥ್‌ ಅವರ ಸಂಪೂರ್ಣ ಜೀವನ ಚರಿತ್ರೆ , ಖಂಡಿತಾ ಅಲ್ಲ. ಅವರ ಬದುಕಿನ ಕೆಲವು ಪುಟಗಳು ಮಾತ್ರ. ಏಕೆಂದರೆ ರಾಜೀವ್‌ ಗೆ ಜೀವನ ಚರಿತ್ರೆಗಳನ್ನು ಕುರಿತು ಎಂದೂ ಒಲವಿರಲಿಲ್ಲ. ತಮ್ಮ ಸಾಧನೆಯನ್ನು ತಾವೇ ಪ್ರಚುರ ಪಡಿಸಿಕೊಳ್ಳುವ, ಬಡಾಯಿ ಕೊಚ್ಚಿಕೊಳ್ಳುವ ಮಾರ್ಗದಿಂದ ರಾಜೀವರು ಸದಾ ದೂರವೇ ಇದ್ದರು. “ಅವರ ಮಾತುಗಳನ್ನು ಅಕ್ಷರಕ್ಕಿಳಿಸುವಾಗ ಕೂಡ ನನಗೆ ಅವರ ಧ್ವನಿಯೇ ಮತ್ತೆ ಕೇಳಿದಂತೆನ್ನಿಸಿ, ಅವರು ಮಾತನಾಡಿದಂತೆಯೇ ಬರೆದಿರುವೆ” ಎಂದು ಸುಮಂಗಲಾ ಹೇಳಿದ್ದಾರೆ.


ರಾಜೀವರ ಮಾತುಗಳು ಹೀಗೆ…

ಈ ಪುಸ್ತಕದಲ್ಲಿನ ರಾಜೀವರ ಮಾತುಗಳು ಓದುಗರಿಗಾಗಿ:

“ಸಂಗೀತದಲ್ಲಿ ಸ್ವರಶುದ್ಧತೆ, ರಾಗಭಾವ, ಮತ್ತು ಸ್ವಾನುಭವ-ಇವು ಮೂರು ಅತ್ಯವಶ್ಯವೆಂದು ತಂದೆಯವರು ಮನನ ಮಾಡಿಸಿದ್ದರು”.

ತಮ್ಮ ತಾಯಿಯನ್ನು ಕುರಿತು; “ನನ್ನ ತಾಯಿ ತಮಿಳು ಬೆಸ್ತರ ಕುಟುಂಬದವರು. ಅವರ ಕುಟುಂಬದಲ್ಲಿ ಅವರೇ ಮೊದಲಾಗಿ ಓದಿದವರು. ಅವರಿಗೆ ಅಪಾರವಾದ ಓದಿನ ಹಸಿವು. ನನ್ನ ತಾಯಿಯಂತೆ ಓದಿದ ಬೇರೋಬ್ಬರನ್ನು ನಾನು ನೋಡಿಲ್ಲ. ಕ್ರಾಂತಿಕಾರಿ ಹೆಣ್ಣುಮಗಳೆಂದೇ ಖ್ಯಾತರಾಗಿದ್ದರು”.

ಗೆಳೆಯ ಅನಂತಮೂರ್ತಿಯನ್ನು ಕುರಿತು: “ನಂಗೆ ಮತ್ತು ಯು.ಆರ್.‌ ಅನಂತಮೂರ್ತಿಗೆ Rank ಮತ್ತು ಕೆಲಸ ಒಟ್ಟಿಗೆ ಸಿಕ್ಕಿದ್ದು. ಆತಂಗೆ ಹಾಸನ, ನಂಗೆ ಬೆಂಗಳೂರು.

ಪ್ರಭಾವ ಬೀರಿದ ಗುರುಗಳನ್ನು ಕುರಿತು: “ಸೆಂಟ್ರಲ್‌ ಕಾಲೇಜಿನಲ್ಲಿ ಓದುವಾಗ ನನ್ನ ಮೇಲೆ ತುಂಬಾ ಪ್ರಭಾವ ಬೀರಿದ ಮೂರು ಜನರು ಅಂದರೆ; ಕೆ. ನರಸಿಂಹಮೂರ್ತಿ, ಗುರುರಾಜರಾವ್‌, ಮತ್ತು ಎ.ಎನ್‌, ಮೂರ್ತಿರಾಯರು. ನರಸಿಂಹಮೂರ್ತಿ ಮೆಟಾಫಿಸಿಕಲ್‌ ಪೊಯೆಟ್ರಿ ಅದ್ಭುತವಾಗಿ ಪಾಠ ಮಾಡ್ತಿದ್ರು”.

ಸಿನಿಮಾ ಸಂಗೀತದ ಮಜಲನ್ನು ಕುರಿತು; “ನಾನು ಪುಣೆ ಫಿಲಂ ಇನ್ಸ್‌ ಟಿಟ್ಯೂಟ್‌ಗೆ 1982ರಲ್ಲಿ ಪ್ರೊಫೆಸರ್‌ ಆಫ್‌ ಮ್ಯೂಸಿಕ್‌ ಆಗಿ ಹೋದೆ. ಅಲ್ಲಿ ನನ್ನ ಕೆಲಸವೆಂದರೆ ಸಂಗೀತದ ಬಳಕೆಯ ವಿಷಯದಲ್ಲಿ ವಿದ್ಯಾರ್ಥಿಗಳಿಗೆ ಸಹಾಯಮ ಮತ್ತು ಮಾರ್ಗದರ್ಶನ ಮಾಡುವುದು. ಸಿನಿಮಾ ಸಂಗೀತವನ್ನು ನೋಡುವ ಹೊಸ ವಿಧಾನ ವಿಕಾಸ ಮಾಡುವ ಪ್ರಯತ್ನ ಮಾಡಿದೆ. ಸಂಗೀತದ ಕುರಿತು ನಮ್ಮ ಅರಿವು ಬೆಳೆದಂತೆಲ್ಲ ಅದನ್ನು ನಿರ್ದಿಷ್ಟ ಕ್ಷೇತ್ರದಲ್ಲಿ ಆತ್ಮವಿಶ್ವಾಸದಿಂದ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎನ್ನೋದು ನನ್ನ ನಂಬಿಕೆಯಾಗಿತ್ತು. ಕ್ಲಾಸಿಕಲ್‌ ಎಂದರೆ ಪೂರ್ಣತೆಯನ್ನು, ಕಂಪ್ಲೀಟ್ ನೆಸ್‌ ಅನ್ನು ಸೂಚಿಸುವಂಥದ್ದು. ಹೀಗಾಗಿ ಶಾಸ್ತ್ರೀಯ ಸಂಗೀತ ಎನ್ನುವುದು ಸಿನಿಮಾದ ಅಪ್ಲೈಡ್‌ ಸಂಗೀತವಾಗಲಾರದು. ಇದನ್ನು ಬಳಸುವ ಒಂದೇ ವಿಧಾನವೆಂದರೆ, ಸಿನಿಮಾದ ಮೂಡ್‌ ಮತ್ತು ಅನುಕೂಲತೆಗೆ ತಕ್ಕಂತೆ ಒಗ್ಗಿಸಿಕೊಳ್ಳುವುದು. ʻಸಂಸ್ಕಾರʼ ಸನಿಮಾಗೆ ಸಂಗೀತ ಸಂಯೋಜನೆ ಮಾಡಿದ ಕೆಲಸ ಖುಷಿ ಕೊಟ್ಟಿದೆ. ಮಲೆಯಾಳಂನ ʻಕಾಂಚನ ಸೀತಾʼ, ʻಪೊಕ್ಕುವೆಯಿಲ್‌ʼ ʻಕಡವುʼ ಒಟ್ಟು ಮೂರು ಸಿನಿಮಾಗಳಿಗೆ ಸಂಗೀತ ನೀಡಿದೆ. ಅರವಿಂದನ್‌ ಅವರೊಂದಿಗೆ ʻಪೊಕ್ಕುವೆಯಿಲ್‌ʼ ಸಿನಿಮಾದಲ್ಲಿ ಕೆಲಸ ಮಾಡುವಾಗ ಹೆಚ್ಚು ಖುಷಿಯೆನ್ನಿಸಿದೆ…..”

ರಾಜೀವರು… ಇರೋದೇ ಹೀಗೆ

ರಾಜೀವರ ಗೆಳೆಯರು ಶಿಷ್ಯರು, ನಿಕಟವರ್ತಿಗಳು ರಾಜೀವರನ್ನು ಕಂಡಿರುವುದು ಹೀಗ್ಹೀಗೆ… ಅವರವರ ಭಾವಕ್ಕೆ ಅವರವರ ಭಕುತಿಗೆ…

ಡಾ. ಕೀರ್ತಿನಾಥ ಕುರ್ತಕೋಟಿ ಗ್ರಹಿಸಿದಂತೆ; “ಒಂದು ಪ್ರಗಲ್ಭವಾದ ಪ್ರತಿಭೆಯ ಅವಿಷ್ಕಾರ ಅವರ ವಾದನದಲ್ಲಿದೆ. ಸ್ವರ ಮತ್ತು ಲಯಗಳಿಂದ ಏನನ್ನೂ ಸಾಧಿಸಬಹುದೆಂಬುದು ಅವರ ಪ್ರತಿಭೆಗೆ ಮಾತ್ರ ವೇದ್ಯವಾದ ವಿಷಯವಾಗಿದೆ. ಅವರ ಒಲವೆಲ್ಲ ಇಂಗ್ಲಿಷ್‌ ಸಾಹಿತ್ಯದ ಕಡೆಗೆ. ಆ ಸಾಹಿತ್ಯವನ್ನು ಅವರು ಕಲಿತಷ್ಟು ಶ್ರದ್ಧೆಯಿಂದ ಬೇರಾರೂ ಕಲಿತಿರಲಾರರು. ಅವರ ಸಾಹಿತ್ಯ ಸಂಸ್ಕಾರವೆಲ್ಲ ಇಂಗ್ಲಿಷ್ ನಿಂದಲೇ ಬಂದದ್ದು. ಇಂಗ್ಲಿಷ್‌ ಕಾವ್ಯದ ಅಧ್ಯಯನದಲ್ಲಿ ಸೂಕ್ಷ್ಮವಾದ ಒಳನೋಟಗಳನ್ನು ಅವರು ಮೊದಲಿನಿಂದಲೇ ಬೆಳೆಸಿಕೊಂಡರು. ಅವರದು ಅವಧೂತ ವ್ಯಕ್ತಿತ್ವ . ಎಲ್ಲಿಯೂ ಮುಚ್ಚುಮರೆ ಇಲ್ಲ. ಜನರೆಂದರೆ ಇವರಿಗೆ ನಿರ್ಲಕ್ಷ್ಯ. ಆದರೆ ಸ್ನೇಹಿತರೆಂದರೆ ಪ್ರಾಣ. ದೇಹದಷ್ಟೇ ಎತ್ತರವಾದ ಅಹಂಕಾರ ಅವರದಾದರೂ, ಮಗುವಿನ ವಿನಯ ಅವರಲ್ಲಿದೆ”.

ಅನಂತಮೂರ್ತಿ ಅಂತರಂಗ; ಅರವತ್ತರ ದಶಕದಲ್ಲಿ ರಾಜೀವ ತಾರಾನಾಥ ನನ್ನನ್ನು ನನಗೆ ಸಾಧ್ಯವಾದ ಎತ್ತರಕ್ಕೆ ಏರುವಂತೆ ಪ್ರಚೋದಿಸಿದ ಗೆಳೆಯ; ಗೆಳೆಯ ಮಾತ್ರವಲ್ಲ, ಗುರು. ತಿದ್ದಿ ತೀಡಿ ಹಂಗಿಸಿ, ವಿಸ್ತರಿಸಿ, ಹೊಗಳಿ ಬೆಳೆಸಿದವನು ರಾಜೀವ. ʻಪ್ರಶ್ನೆʼ ಸಂಕಲನದ ಒಂದೊಂದು ಕಥೆಯೂ ರೂಪುಗೊಂಡಿದ್ದು, ರಾಜೀವನ ಅತೃಪ್ತಿಯಲ್ಲಿ. ಹೀಗೆ ತನ್ನ ನಿಲುವಿನಲ್ಲೂ, ನನಗಿಂತ ಎತ್ತರದ, ಪಡೆದುದಕ್ಕಿಂತ ಹೆಚ್ಚು ಕೊಡಬಲ್ಲ ರಾಜೀವನ ಔದಾರ್ಯದಲ್ಲಿ ತೊದಲುತ್ತಿದ್ದ ನನ್ನ ಸೃಜನಶೀಲತೆ ಬೆಳೆಯಿತು..”

“ಸಾಹಿತ್ಯದ ಕೃತಿಯೊಂದನ್ನು ರಾಜೀವ ಅದರ ನೇಯ್ಗೆಯ ಒಪ್ಪದಲ್ಲೂ, ಸ್ನಿಗ್ಧತೆಯಲ್ಲೂ, ಅದು ಒಟ್ಟಾಗಿ ಪಡೆಯುವ ಆಕಾರದಲ್ಲೂ, ನೋಡಬಲ್ಲ ಧೀಮಂತ. ಇದಕ್ಕೆ ಕಾರಣ ಅವನ ಸಂಗೀತ ಜ್ಞಾನವೇ ಇರಬೇಕು…”

“ನಾವು ರಾಜೀವನನ್ನು ಅನನ್ಯವೆಂದು ಮೆಚ್ಚಿಕೊಳ್ಳುವ ಸಂದರ್ಭದಲ್ಲಿಯೇ ತನಗಿಂತ ದೊಡ್ಡವರನ್ನು ಅವನು ನಮ್ಮ ಮುಂದಿ ಇಡುತ್ತಾನೆ. ರಾಜೀವನ ಆತ್ಮಪ್ರತ್ಯಯ ಮತ್ತ ಅವನ ವಿನಯ ಒಟ್ಟಾಗಿ ನಮಗೆ ಹೀಗೆ ಭಾಸವಾಗುತ್ತದೆ. ಈ ಎತ್ತರದ ಮನುಷ್ಯ ನಮ್ಮ ನಡುವೆ ಹಲವು ಕಾಲ ಬಾಳಲಿ”…(ಈಗ ಈ ಮಾತುಗಳನ್ನು ಹೇಳಿದ ಅನಂತಮೂರ್ತಿ, ಹೇಳಿಸಿಕೊಂಡ ರಾಜೀವ ಇಬ್ಬರೂ, ಆ ಲೋಕದಲ್ಲಿ ಸಾಹಿತ್ಯದ ಜುಗಲ್ಬಂದಿ ನಡೆಸುತ್ತಿರಬಹುದೇನೋ).

ಕಂಬಾರರ ಕಲಾ ತಪಸ್ವಿ; “ಆಗಿನ ಕಾಲದಲ್ಲಿ ರಾಜೀವ ತಾರಾನಾಥರ ಮಾತು, ಅಭಿಪ್ರಾಯಗಳಿಗೆ ನವ್ಯರಲ್ಲಿ ಬಹಳ ಅಂದರೆ ಬಹಳ ಬೆಲೆ ಇತ್ತು. ಒಂದು ಕವಿತೆಯನ್ನು ರಾಜೀವ ಮೆಚ್ಚಿದನೆಂದರೆ, ಅದು ಸರಸ್ವತಿಯ ಮುದ್ರೆಯೆಂದೇ ಲೆಕ್ಕ”. “ಅವರು ಸಾಹಿತ್ಯ ವಿಮರ್ಶೆಯಲ್ಲಿ ಮುಂದುವರೆಯಬೇಕಿತ್ತು. ಅವರು ವಿಮರ್ಶೆ ಬರೆಯುತ್ತಿದ್ದರೆ, ಕನ್ನಡಕಕ್ಕೆ ಸದ್ಯಕ್ಕಿರುವ ಬರಡುತನ ಬರುತ್ತಿರಲಿಲ್ಲ..”

ಡಾ. ವಿಜಯ ಕಂಡಂತೆ; “ರಾಜೀವ ಮಾತಾಡ್ತಾ ಇದ್ರೆ ನಮಗೆ ತನ್ಮಯರಾಗಿ ಕೇಳ್ತಾನೇ ಕೂಡಬೇಕು ಅನ್ನಿಸುತ್ತೆ. ಸಂತನ ಹಾಗೆ, ತತ್ವಜ್ಞಾನಿಯ ಹಾಗೆ ಮಾತಾಡ್ತಾರೆ. ಆದರೆ ಅದು ನಮ್ಮನ್ನು ಬದುಕಿಗೆ ತೊಡಗಿಸುತ್ತದೆ. ನನ್ನ ಬದುಕಿನಲ್ಲಿ ಇಷ್ಟು ಹರಿತವಾದ, ವೈಚಾರಿಕ ನಿಲುವುಗಳನ್ನು ಹೊಂದಿದ ಶ್ರೇಷ್ಠ ಚಿಂತಕ, ಉದಾತ್ತ ವ್ಯಕ್ತಿತ್ವದ ಇನ್ನೊಬ್ಬರನ್ನು ನಾನು ಕಂಡಿಲ್ಲ..”

ಪ್ರೊ. ವಿ.ಕೆ. ನಟರಾಜ್‌ ಅವರ ಮಾತುಗಳು: "ಅನಂತಮೂರ್ತಿ ಮಾತನಾಡುವಾಗ; ʻನಾವೆಲ್ಲ ವಿಮರ್ಶೆ ಮಾಡ್ತೀವಿ ನಿಜ. ಆದರೆ ರಾಜೀವ ವಿಮರ್ಶೆ ಮಾಡೋದನ್ನು ಬಿಟ್ಟ ಅಂತ ನಾವಿಲ್ಲಿದ್ದೀವಿ. ಇಲ್ಲದಿದ್ದರೆ, ನಮ್ಮ ವಿಮರ್ಶೆಯನ್ನು ಯಾರು ಕೇಳ್ತಿದ್ರುʼ ಅಂತ ಹೇಳಿದ ನೆನಪು.

ಲೆಸ್ಲೀ ಶ್ನೈಡರ್-ಕ್ಯಾಲಿಫೋರ್ನಿಯಾದಲ್ಲಿ ಕಂಡ ಮುಖ; “ನಾನು ಗಮನಿಸಿದಂತೆ ಅವರ ಸಂಗೀತದ ಕೆಲವು ಬಹುಮುಖ್ಯ ಗುಣಲಕ್ಷಣಗಳು ಹೀಗಿವೆ; ರಾಗದೊಂದಿಗೆ ಸಂಪೂರ್ಣವಾಗಿ ಗುರುತಿಸಿಕೊಳ್ಳುವಿಕೆ. ರಾಗವೊಂದನ್ನು ಸಹನೆಯಿಂದ ಬೆಳಕಿಗೆ ಹಿಡಿದು, ರಾಗದ ಎಲ್ಲ ಕೋನಗಳನ್ನೂ ಗಮನಿಸುವುದು. ರಾಗದ ಅಗತ್ಯಕ್ಕೆ ತಕ್ಕಂತೆ ಯಾವುದೇ ಒಂದು ಸ್ವರದ ಮೇಲೆ ನಿಂತು ಅತಿ ಸಹಜವಾಗಿ ಅದನ್ನೇ ಅನುರಣಿಸುವುದು; ಅದರ ಸುತ್ತಲೇ ನಾದ ಹೊಮ್ಮಿಸುವುದು. ಅನಿರೀಕ್ಷಿತ ಚಲನೆಗಳು, ಆದರೆ ಅವೆಲ್ಲವೂ ರಾಗದಲ್ಲಿಯೇ ಸಂಪೂರ್ಣವಾಗಿ ಇರುತ್ತವೆ. ಒಂದು ನಿರಂತರ ಅನ್ವೇಷಣೆ, ಹುಡುಕುವಿಕೆ ಮತ್ತು ರಾಗದ ಸಾಧ್ಯತೆಗಳನ್ನು ಮತ್ತು ಅದರ ಸಂಭಾವ್ಯ ಚಲನೆಯಲ್ಲಿ ಶೋಧಿಸುವುದು, ಸುಲಭ ಒಳನೋಟಗಳೊಂದಿಗೆ ಎಂದಿಗೂ ಸುಮ್ಮನಾಗದಿರುವುದು…”

ಚ್ಯಾಡ್‌ ಹ್ಯಾಮಿಲ್‌ ಅನಿಸಿಕೆ; ”ಸಂಗೀತವನ್ನು ಅದರ ಪೂರ್ಣತ್ವದಲ್ಲಿ ಇಡಿಯಾಗಿ ಬದುಕುತ್ತಿರುವ ಈ ಉದಾತ್ತ ವ್ಯಕ್ತಿಯ ಕುರಿತು ನಾನು ಹೇಳಲಾದರೂ ಏನಿದೆ? “

ಉಸ್ತಾದ್‌ ಜಾಕಿರ್‌ ಹುಸೇನ್;‌ “ರೇಡಿಯೋದಲ್ಲಿ ಸರೋದ್‌ ವಾದನ ಬರ್ತಾಇದ್ರೆ, ಯಾರು ನುಡಿಸ್ತಾ ಇದ್ದಾರೆ, ಉಸ್ತಾದ್‌ ಅಲಿ ಅಕ್ಬರ್‌ ಖಾನ್‌ ಅಥವಾ ರಾಜೀವ್‌ ತಾರಾನಾಥ್‌ ಅಂತ ಹೇಳೋದು ನನಗೆ ಕಷ್ಟವಾಗುತ್ತದೆ”

ಗುರುಗಳ ಬಗ್ಗೆ ರಾಜೀವ ತಾರಾನಾಥರಿಗೆ ಅಪರಮಿತ ಭಕ್ತಿ; ಅವರ ಮಾತುಗಳು ಓದುಗರ ಗಮನಕ್ಕೆ; “ …ಗುರುವಿನ ಪ್ರಜ್ಞೆ ಇದೆಯಲ್ಲ. ಅದು ಸಾಹಿತ್ಯದಲ್ಲಿ ಇಲ್ಲ. ಗುರುವಿನ ಮುಂದೆ ಮನಸ್ಸು ದೈನ್ಯದಿಂದ ಜಳಜಳ ಸ್ವಚ್ಛವಾಗಬೇಕು. ಅವರು ಎದುರಿಗೆ ಇದ್ರು ಅಂದರೆ ಮೈಯೆಲ್ಲ ಬೆಚ್ಚಗಾಗಿ ಹೆದರಿಕೆಯಾಗುತ್ತೆ. ಗುರು ಎದುರಿಗಿದ್ದಾಗ ನಾವು ಮಾಡ್ತಿರೋದು ಚೆನ್ನಾಗಿ ಹೋಗ್ತಿದೆ ಅಂತಾದ್ರೆ ಇನ್ನೂ ಚೆನ್ನಾಗಿ ಹೋಗ್ತದೆ. ಹ್ಯಾಗಾಗುತ್ತೋ ಅಂತ ಹೆದರಿಕೆಯಾದಾಗ ʻಇವೆಲ್ಲವೂ ಅವರೇ ಕೊಟ್ಟಿದ್ದು, ಎಲ್ಲ ಅವರದೇ . ತಪ್ಪಾದ್ರೆ ಅವರೇ ಸರಿಪಡಿಸುವ ಧೈರ್ಯ ಕೊಡುತ್ತಾರೆʼ ಅಂತ ಅಂದುಕೊಂಡರೆ ಮತ್ತೆ ಎಲ್ಲ ಸರಿಯಾಗುತ್ತದೆ…”

ಮುಗಿಸುವ ಮುನ್ನ:

ಕೆಲವು ದಿನಗಳ ಹಿಂದೆ ರಾಜೀವ್‌ ತಾರಾನಾಥ್‌ ನೆನಪಿನಲ್ಲಿ ಕಾರ್ಯಕ್ರಮವೊಂದು ನಡೆಯಿತು. ಆ ಕಾರ್ಯಕ್ರಮದಲ್ಲಿ ಮಾತನಾಡಿದ ಲೇಖಕ, ಸಂಗೀತ್ ಅಧ್ಯಾಪಕ; ಎಂ. ಕೆ. ಶಂಕರ ಹೇಳಿದ ಮಾತುಗಳಿವು; “ರಾಜೀವ್‌ ತಾರಾನಾಥ್‌ ಅವರ ಸಂಗೀತ ಆರಂಭದಲ್ಲಿ ತಮ್ಮ ಗುರುಗಳು ಹಾಕಿದ್ದ ದಾರಿಯಲ್ಲಿಯೇ ಸಾಗುತ್ತಿದ್ದು, ನಂತರದ ಘಟ್ಟದಲ್ಲಿ ತನ್ನದೇ ಜಾಡು ಹಿಡಿದು ಹೊರಟಿತು. ಸರೋದ್‌ ಶಬ್ದ ಸಾಧ್ಯತೆ, ತಬಲಾ ಜೊತೆಗಿನ ಹಾಸುಹೊಕ್ಕಿನ ಸಾಮರಸ್ಯ ಹಾಗೂ ಸಪ್ತಕಗಳ ನಡುವೆ ಚಲಿಸುವ ವೈಖರಿ ಇವುಗಳು ಅವರ ಸಂಗೀತಕ್ಕೆ ಒಂದು ವಿಶಿಷ್ಟತೆ ನೀಡಲು ಸಮರ್ಥವಾದವು. ರಾಜೀವರು ನಿಧಾನಗತಿಯಲ್ಲಿ, ಸಮೀಪದ ರಾಗ-ಸ್ವರಗಳಿಗೆ ತೆರಳಿ, ಹಳೆಯ ಸ್ವರ ಸಮೂಹದ ಛಾಯೆ ಇನ್ನೂ ಇದ್ದಿರುವಂತೆ ಹೊಸದನ್ನು ಬೆಸೆಯುವ ಕ್ರಿಯೆಯಲ್ಲಿ ತೊಡಗುವವರು. ಅವರು ಈ ಪ್ರಕ್ರಿಯೆಯನ್ನು ಎಷ್ಟು ವಿಲಂಬ ಮಾಡುತ್ತಿದ್ದರೆಂದರೆ, ಒಮ್ಮೊಮ್ಮೆ ರಾಗದ ಇಡೀ ಪರಿಚಯವಾಗಲು ಹಲವಾರು ನಿಮಿಷಗಳೇ ಬೇಕಾಗುತ್ತಿತ್ತು. ಇತ್ತೀಚಿನ ದಿನಗಳಲ್ಲಿಅವರು ಸರೋದನ್ನು ಒಳಮುಖಿಯಾಗಿ ಸಹೃದಯಿ ಕೇಳುಗರನ್ನು ಗಮನದಲ್ಲಿರಿಸಿಕೊಂಡು ನುಡಿಸುತ್ತಿದ್ದರು. ಅವರೇ ವ್ಯಾಖ್ಯಾನಿಸಿದ ಔನ್ನತ್ಯ, ಔತ್ತಮ್ಯದ ತುಡಿತ ಅವರನ್ನು ಸಂಗೀತದಾಳಕ್ಕೆ ಒಯ್ದದ್ದು, ತನ್ನಲ್ಲೇ ಸಂಗೀತಗಾರನನ್ನು, ಕೇಳುಗನನ್ನೂ, ಹಾಗೂ ಸಂಗೀತವನ್ನು ಕಾಣುತ್ತಿದ್ದರು. ತಾವೇ ಮಂತ್ರಮುಗ್ಧ ಸ್ಥಿತಿಗೆ ಹೋಗುತ್ತಿದ್ದರು….

ಕಡು ಸತ್ಯ ಅರ್ಥಮಾಡಿಕೊಳ್ಳಲೇಬೇಕು. ರಾಜೀವ ತಾರಾನಾಥ ಇನ್ನಿಲ್ಲ. ಇರುವುದು ಅವರು ನೀಡಿದ ಸಂಗೀತ, ಹಂಚಿದ ಜ್ಞಾನ, ಕಲಿಸಿದ ಉತ್ತಮಿಕೆಯ ಬದುಕುವ ಪರಿ. “ಎಂದರೋ ಮಹಾನುಭಾವಲು ಅಂದಿರಿಕಿ ವಂದನಂʼ ಎಂದಾಗ, ಆ ಲೆಕ್ಕದಲ್ಲಿ ರಾಜೀವ್‌ ಸೇರಿಹೋಗುತ್ತಾರೆ.

Tags:    

Similar News