ಬಿಹಾರದ ಮತದಾರರನ್ನು ಕದಲಿಸದ ಮೋದಿ ಅವರ ಅಮ್ಮನ ಅವಮಾನದ ಗುಮ್ಮ

ರಾಜಕೀಯ ವಿಶ್ಲೇಷಕರು ಮತ್ತು ಜನಸಾಮಾನ್ಯರು ವಿರೋಧಿಗಳ ವಿರುದ್ಧ ಮೋದಿ ಬಳಸಿದ ಕಠಿಣ ಮಾತುಗಳನ್ನು ಇನ್ನೂ ಮರೆತಿಲ್ಲ. ಜೊತೆಗೆ ಸಾಮಾನ್ಯ ಜನರ ಮೇಲೆ ಆಗುತ್ತಿರುವ ನಿರಂತರ ದೌರ್ಜನ್ಯ, ಅವಮಾನವನ್ನು ಎತ್ತಿ ತೋರಿಸುತ್ತಾರೆ.;

Update: 2025-09-09 00:30 GMT
ಪ್ರಧಾನಿ ನರೇಂದ್ರ ಮೋದಿ ಅವರ ತಾಯಿಯನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಬಿಜೆಪಿ ಸೆ.4ರಂದು ಬಿಹಾರ್ ಬಂದ್ ಕರೆ ನೀಡಿತ್ತು. ಈ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
Click the Play button to listen to article

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಬಿಹಾರದಲ್ಲಿ ಮುಕ್ತಾಯಗೊಂಡ 'ವೋಟರ್ ಅಧಿಕಾರ್ ಯಾತ್ರೆ' ಸಂದರ್ಭದಲ್ಲಿ ರಾಹುಲ್ ಗಾಂಧಿ ಮತ್ತು ಇತರ ವಿರೋಧ ಪಕ್ಷದ ನಾಯಕರಿಂದ ತಮ್ಮ ಹಾಗೂ ತಮ್ಮ ದಿವಂಗತ ತಾಯಿಯ ಬಗ್ಗೆ ಮಾಡಲಾಗಿದೆ ಎನ್ನಲಾದ ಅವಹೇಳನಕಾರಿ ಹೇಳಿಕೆಗಳ ಹಿನ್ನೆಲೆಯಲ್ಲಿ ರಾಜಕೀಯ ಲಾಭ ಪಡೆಯಲು ಮುಂದಾಗಿದ್ದಾರೆ.

ಮಂಗಳವಾರದ ತಮ್ಮ ಭಾವುಕ ಭಾಷಣದ ನಂತರ, ಈ ಅವಮಾನದ ಹೇಳಿಕೆ ಬಂದಿದ್ದು ಆರ್ಜೆಡಿ-ಕಾಂಗ್ರೆಸ್ ಕಡೆಯಿಂದ ಎಂದು ಮೋದಿ ಅವರು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರಿಗೆ ಸೂಚಿಸಿದರು. ಇದನ್ನು ಕೇವಲ ವೈಯಕ್ತಿಕ ದಾಳಿಯಲ್ಲದೆ, ಎಲ್ಲರಿಗೂ, ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೂ ಮಾಡಿದ ಅವಮಾನ ಎಂದು ಅವರು ವ್ಯಾಖ್ಯಾನಿಸಿದರು.

ಹೀಗಾಗುತ್ತಲೇ ಬಿಜೆಪಿ ಸಮಯ ಪೋಲು ಮಾಡಲೇ ಇಲ್ಲ. ತಕ್ಷಣ ಬಿಹಾರದಾದ್ಯಂತ ಪ್ರತಿಭಟನೆ ಕೈಗೊಂಡರು. ಜಿಲ್ಲಾ ಕೇಂದ್ರದಿಂದ ಆರಂಭಿಸಿ ಬ್ಲಾಕ್ ಮಟ್ಟದವರೆಗೂ ಈ ಪ್ರತಿಭಟನೆ ವ್ಯಾಪಕವಾಗಿ ನಡೆಯಿತು. ಜೊತೆಗೆ ಈ ಅವಮಾನವನ್ನು ಖಂಡಿಸಲು ಸೆ.4ರಂದು ಬಿಹಾರ ಬಂದ್-ಗೂ ಕರೆ ನೀಡಿತು. ಇದಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಸೇರಿದಂತೆ ಎನ್.ಡಿ.ಎ ಮಿತ್ರಪಕ್ಷಗಳು ಕೂಡ ಕೈಜೋಡಿಸಿದವು. ಈ ಬಂದ್-ಗೆ ವ್ಯಕ್ತವಾಗಿದ್ದು ಮಿಶ್ರ ಪ್ರತಿಕ್ರಿಯೆ.

ಇನ್ನೇನು ಬಿಹಾರ ವಿಧಾನ ಸಭಾ ಚುನಾವಣೆಗೆ ಕೆಲವು ವಾರಗಳು ಬಾಕಿ ಇರುವ ಹೊತ್ತಿನಲ್ಲಿ ಶತಾಯಗತಾಯ ಇದರ ಲಾಭ ಪಡೆದುಕೊಳ್ಳುವುದು ಮತ್ತು ಮತದಾರರನ್ನು ಒಲಿಸಿಕೊಳ್ಳುವುದು ಬಿಜೆಪಿಯ ಉದ್ದೇಶ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಈ ವಿವಾದವು ರಾಜಕೀಯ ವಾತಾವರಣಕ್ಕೆ ಕಿಚ್ಚು ಹಚ್ಚಿದಂತಾಗಿದೆ. ಚರ್ಚೆಯ ಪ್ರಮುಖ ವಿಷಯವಾಗಿ ಮಾರ್ಪಟ್ಟಿದೆ. ಬಹಳಷ್ಟು ಜನರು ತಾಯಿ ಯಾರೇ ಆಗಿದ್ದರೂ ಅವರನ್ನು ಅವಮಾನಿಸುವುದನ್ನು ಸ್ಪಷ್ಟವಾಗಿ ವಿರೋಧಿಸುತ್ತಾರೆ, ಅವಳನ್ನು ಪ್ರೀತಿ, ಗೌರವ, ಮತ್ತು ಶ್ರದ್ಧೆಯ ಸಂಕೇತವೆಂದು ಕಾಣುತ್ತಾರೆ. ಆದರೂ, ಈ ವಿಷಯವನ್ನು ಒಂದು ಭಾವನಾತ್ಮಕ ಚುನಾವಣಾ ವಿಷಯವಾಗಿ ಪರಿವರ್ತಿಸುವುದರ ಹಿಂದೆ ಇರುವ ರಾಜಕೀಯ ಹುನ್ನಾರವನ್ನು ಅವರು ಅರಿಯದವರೇನೂ ಅಲ್ಲ. ಇದರ ಪರಿಣಾಮವಾಗಿ, ಸಾರ್ವಜನಿಕ ಅಭಿಪ್ರಾಯವು ಒಂದು ನಿರ್ದಿಷ್ಟ ನಿಲುವನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ, ಇದು ಅಲ್ಲಿನ ವಾಸ್ತವಿಕ ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ.

ಈ ಹೇಳಿಕೆ ಬಗ್ಗೆ ಅಲ್ಪ-ಸಲ್ಪ ತಿಳಿದಿದೆ ಎನ್ನುವ ದಿನಗೂಲಿ ಕಾರ್ಮಿಕ ವಿನೋದ್ ಚೌಧರಿ, ಹೀಗೆ ಮಾಡುವುದು ತುಂಬ ತಪ್ಪು. ಕಳೆದ ಒಂದು ದಶಕದಿಂದ ಬಿಜೆಪಿಗೆ ಮತ ಚಲಾಯಿಸುತ್ತಿರುವ ತಾನು ಈ ವಿಷಯದಲ್ಲಿ ಮೋದಿ ಪರವಾಗಿ ನಿಲ್ಲುವುದಾಗಿ ಹೇಳುತ್ತಾನೆ.

ಜ್ವಲಂತ ಸಮಸ್ಯೆಗಳು ಬಹಳಷ್ಟಿವೆ

ಆತನಿಂದ ಅನತಿ ದೂರದಲ್ಲಿಯೇ ಇರುವ ಇನ್ನೊಬ್ಬ ಕಾರ್ಮಿಕ ಮಹಿಳೆ ಮೀನಾ ದೇವಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. “ಬಡ ಮಹಿಳೆಯರು ಪ್ರತಿದಿನವೂ ದೌರ್ಜನ್ಯ ಮತ್ತು ಅವಮಾನ ಎದುರಿಸುತ್ತಿರುತ್ತಾರೆ. ಅವಮಾನ ಸಹಿಸುವುದು ನಮ್ಮ ಜೀವನದ ಭಾಗವಾಗಿ ಹೋಗಿದೆ. ಮೋದಿ ಶಕ್ತಿಶಾಲಿ, ಅವರು ತಮ್ಮ ತಾಯಿಯನ್ನು ನಿಂದಿಸಿರುವುದನ್ನೇ ದೊಡ್ಡ ವಿಷಯವನ್ನಾಗಿ ಮಾಡುತ್ತಿದ್ದಾರೆ. ಹಾಗಾದರೆ ನಮ್ಮ ಕಥೆ ಏನು? ನಮ್ಮ ಹೊಟ್ಟೆ ಯಾರು ತುಂಬಿಸುತ್ತಾರೆ? ನಾವು ಜೀವನೋಪಾಯಕ್ಕಾಗಿ ಪ್ರತಿದಿನ ಹೋರಾಡಬೇಕು, ಮೋದಿ ನಮಗೆ ಅನ್ನ ಹಾಕುವುದಿಲ್ಲ" ಎನ್ನುತ್ತಾರೆ.

"ನಾಯಕರು ಉದ್ಯೋಗ, ಸಾಮಾನ್ಯ ಜನರ ಜೀವನ ಸುಧಾರಣೆ, ಆರೋಗ್ಯ ಮತ್ತು ಶಿಕ್ಷಣದ ಬಗ್ಗೆ ಮಾತನಾಡಬೇಕು, ದೌರ್ಜನ್ಯ ಅಥವಾ ವೈಯಕ್ತಿಕ ವಿಷಯಗಳ ಬಗ್ಗೆ ಅಲ್ಲ" ಎಂದು ಹೇಳುವುದನ್ನೂ ಅವರು ಮರೆಯುವುದಿಲ್ಲ.

ಪಟನಾದ ಬಿರ್ಲಾ ಕಾಲನಿಯ ನಿವಾಸಿ ಅರವಿಂದ್ ಕುಮಾರ್ ದ ಫೆಡರಲ್ ಜೊತೆಗೆ ಮಾತನಾಡಿ, “ನಮಗೆ ಬಿಜೆಪಿ ಮತ್ತು ಮೋದಿ ಬಗ್ಗೆ ಯಾವುದೇ ಕಳಕಳಿ ಇಲ್ಲ. ಯಾಕೆಂದರೆ ನಮ್ಮ ಬೆಂಬಲವೇನಿದ್ದರೂ ಲಾಲೂ ಪ್ರಸಾದ್ ಅವರ ಆರ್.ಜೆ.ಡಿಗೆ. ಮೋದಿ ಉಳಿದವರ ತಾಯಂದಿರಿಗೆ ಗೌರವ ನೀಡುವುದನ್ನು ಕಲಿಯಬೇಕು. ಅವರು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಶಶಿ ತರೂರ್ ಅವರ ಪತ್ನಿ ವಿರುದ್ಧವೂ ಕೆಟ್ಟ ಪದಗಳನ್ನು ಬಳಸಿದ್ದಾರೆ. ಅದಕ್ಕೆಲ್ಲ ಮೋದಿ ಕ್ಷಮೆ ಕೇಳಬೇಕು. ಈ ರೀತಿಯ ಭಾವನಾತ್ಮಕ ಸಂಗತಿಗಳು ಬಿಹಾರದಲ್ಲಿ ಕೆಲಸಕ್ಕೆ ಬರುವುದಿಲ್ಲ,” ಎಂದು ತರಾಟೆಗೆ ತೆಗೆದುಕೊಳ್ಳುತ್ತಾರೆ.

"ಮೋದಿ ಅವರ ತಾಯಿಗಾಗಲಿ ಅಥವಾ ಬೇರೆ ಇನ್ಯಾರಿಗೇ ಆಗಲಿ ಅವಮಾನ ಮಾಡುವುದನ್ನು ಯಾರೂ ಬೆಂಬಲಿಸುವುದಿಲ್ಲ. ಆದರೆ ಇದು ಬಿಹಾರದಲ್ಲಿ ರಾಜಕೀಯ ಅಥವಾ ಚುನಾವಣಾ ವಿಷಯವಲ್ಲ. ಮೋದಿ ಕಾಂಗ್ರೆಸ್ ಮತ್ತು ಆರ್ಜೆಡಿ ಮೇಲೆ ಗೂಬೆ ಕೂರಿಸಲು ಪ್ರಯತ್ನ ನಡೆಸಿದ್ದಾರೆ ಮತ್ತು ಭಾವನಾತ್ಮಕವಾಗಿ ಬಳಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಆದರೆ ಇದರಿಂದ ಹೆಚ್ಚಿನ ಬದಲಾವಣೆಯೇನೂ ಆಗುವುದಿಲ್ಲ. ಅಂತಿಮವಾಗಿ, ಇಲ್ಲಿನ ಜನರು ಜಾತಿ ಆಧಾರದಲ್ಲಿ ಮತ ಚಲಾಯಿಸುತ್ತಾರೆ. ಎಲ್ಲವೂ ಇಲ್ಲಿನ ಸಾಮಾಜಿಕ ಸಮೀಕರಣಗಳನ್ನು ಅವಲಂಬಿಸಿದೆ" ಎಂದು ಕಂಕರಬಾಗ್ ಕಾಲೋನಿಯಲ್ಲಿ ಕಟ್ಟಡ ಸಾಮಗ್ರಿಗಳನ್ನು ಪೂರೈಸುವ ವಿವೇಕ್ ಕುಮಾರ್ ರಾಯ್ ಹೇಳುತ್ತಾರೆ.

ಪ್ರಧಾನಿ ಮೋದಿ ಅವರೇ ಸೋನಿಯಾ ಮತ್ತು ರಾಹುಲ್ ಗಾಂಧಿ ಅವರ ವಿರುದ್ಧ ನಿಂದನೆಯ ಮಾತುಗಳನ್ನು ಆಡಿದ್ದಾರೆ ಎನ್ನುತ್ತಾರೆ ಪಟನಾದ ಬಿರ್ಲಾ ಕಾಲನಿಯ ಅರವಿಂದ್ ಕುಮಾರ್ ರಾಯ್.

ತಾಯಿ ಮೇಲಿನ ಪ್ರೀತಿ ವೈಯಕ್ತಿಕ ಸಂಗತಿ

ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಕಾಂಚನ್ ಬಾಲಾ ಮಾತನಾಡಿ, "ಮೋದಿ ತಮ್ಮ ತಾಯಿಯನ್ನು ಉಲ್ಲೇಖಿಸಿ ಸಹಾನುಭೂತಿ ಗಿಟ್ಟಿಸುತ್ತಿರುವುದು ಇದೇನು ಮೊದಲ ಬಾರಿಯಲ್ಲ. ತಮ್ಮ ತಾಯಿಯನ್ನು ಭೇಟಿಯಾಗುವುದಕ್ಕೇ ವ್ಯಾಪಕ ಪ್ರಚಾರ ನೀಡುತ್ತಿದ್ದರು. ಅವರು ತಮ್ಮ ತಾಯಿಯ ಬಗ್ಗೆ ಎಷ್ಟು ಕಾಳಜಿ ಹೊಂದಿದ್ದಾರೆ ಎಂಬುದನ್ನು ಬಿಂಬಿಸಲು ಬಹಳ ಎಚ್ಚರಿಕೆ ಪ್ರಯತ್ನ ಮಾಡುತ್ತಾರೆ. ಆದರೆ ವಾಸ್ತವ ಸಂಗತಿ ಏನೆಂದರೆ, ಒಬ್ಬ ತಾಯಿಯನ್ನು ನೋಡಿಕೊಳ್ಳುವುದು ವೈಯಕ್ತಿಕ ಸಂಗತಿ, ಅದನ್ನು ಪ್ರಚಾರಕ್ಕಾಗಿ ಬಳಸಿಕೊಳ್ಳುವಂತಹ ವಿಷಯವಲ್ಲ" ಎನ್ನುತ್ತಾರೆ.

ಪಟನಾದ ಬೇವೂರ್ ನಿವಾಸಿ ಮನೋಜ್ ಕುಮಾರ್, ಮೋದಿಯವರ ಹೇಳಿಕೆಯನ್ನು ಪ್ರಶ್ನಿಸಿ ಹೀಗೆ ಪ್ರತಿಕ್ರಿಯೆ ನೀಡುತ್ತಾರೆ: "ಪ್ರತಿಪಕ್ಷಗಳು ನಿಜವಾಗಿಯೂ ಅವರನ್ನು ಗುರಿಯಾಗಿಸಲು ಬಯಸಿದ್ದರೆ, ಕಾಂಗ್ರೆಸ್ ಅಥವಾ ಆರ್ಜೆಡಿ ಇಂತಹ ಕೆಲಸಕ್ಕೆ ಪಂಕ್ಚರ್ ಮಾಡುವ ವ್ಯಕ್ತಿಯನ್ನು ಬಳಸುವಷ್ಟು ಮೂರ್ಖರೇ? ಬಂಧಿತ ಯುವಕನು ಆ ಪಕ್ಷಗಳೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ. ರಾಹುಲ್ ಮತ್ತು ತೇಜಸ್ವಿ 20 ಜಿಲ್ಲೆಗಳಲ್ಲಿ 1300 ಕಿ.ಮೀ. ದೂರದವರೆಗೆ ಭಾರಿ ಜನ ಬೆಂಬಲದೊಂದಿಗೆ ಪ್ರವಾಸ ಕೈಗೊಂಡಿದ್ದಾರೆ. ಅವರಿಗೆ ಇಂತಹ ತಂತ್ರಗಳ ಅಗತ್ಯ ಏಕೆ ಬೇಕು? ಇದುವರೆಗೆ, ಪೊಲೀಸರು ಆತ ಕಾಂಗ್ರೆಸ್ ಅಥವಾ ಆರ್ಜೆಡಿಯ ಏಜೆಂಟ್ ಎಂದು ಸಾಬೀತುಪಡಿಸಿಲ್ಲ."

"ನಾವು ಮೋದಿ ಅವರ ತಾಯಿಯನ್ನೂ ಸೇರಿದಂತೆ ಎಲ್ಲರ ತಾಯಂದಿರನ್ನು, ಗೌರವಿಸುತ್ತೇವೆ. ಇಂತಹ ನಿಂದನೆಯನ್ನು ಯಾರೂ ಬೆಂಬಲಿಸುವುದಿಲ್ಲ. ಆದರೆ ಬಿಜೆಪಿಯವರ ದಾಖಲೆ ಏನು ಹೇಳುತ್ತದೆ? ಮೋದಿ ಅವರೇ ಸೋನಿಯಾ ಗಾಂಧಿಯವರ ವಿರುದ್ಧ ಆಕ್ಷೇಪಾರ್ಹ ಭಾಷೆ ಬಳಸಿದ್ದಾರೆ ಮತ್ತು ಇತರರು ಮಹಿಳೆಯರನ್ನು ನಿಂದಿಸಿದಾಗ ಮೌನಕ್ಕೆ ಶರಣಾಗಿದ್ದರು. ಅವರ ತಾಯಿಯ ವಿರುದ್ಧದ ಹೇಳಿಕೆಯನ್ನು ಎಲ್ಲರೂ ಖಂಡಿಸಿದ್ದಾರೆ, ಆದರೆ ಇದನ್ನು ರಾಜಕೀಯ ವಿಷಯವನ್ನಾಗಿ ಪರಿವರ್ತಿಸಿದರೆ ಅದರಲ್ಲಿ ಅವರು ಬಿಲ್-ಕುಲ್ ಯಶಸ್ವಿಯಾಗುವುದಿಲ್ಲ. ನಿಜವಾದ ಸಮಸ್ಯೆಗಳು ಏನೆಂಬುದು ಜನರಿಗೆ ತಿಳಿದಿದೆ" ಎಂದು 'ಹರ್ ಘರ್ ತಿರಂಗಾ' ಸಂದೇಶವನ್ನು ಮೊದಲು ಪ್ರಚಾರ ಮಾಡಿದ್ದಾಗಿ ಹೇಳಿಕೊಳ್ಳುವ ಸ್ಥಳೀಯ ಉದ್ಯಮಿ ಮತ್ತು ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ರೆಯಾಜ್ ಹೇಳುತ್ತಾರೆ.

ಹತಾಶ ಪ್ರಯತ್ನ ಫಲಿಸದು

ಪಾಟ್ನಾದಲ್ಲಿರುವ TISS ಸಂಸ್ಥೆಯ ಮಾಜಿ ಪ್ರೊಫೆಸರ್ ಪುಷ್ಪೇಂದರ್ ಕುಮಾರ್ ಹೀಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ; "ಮೋದಿ ಮತ್ತು ಬಿಜೆಪಿ, ರಾಹುಲ್ ಗಾಂಧಿಯವರ ವಿಷಯಾಧಾರಿತ 'ವೋಟರ್ ಅಧಿಕಾರ್ ಯಾತ್ರಾ'ದ ಪ್ರಭಾವವನ್ನು ಕುಂದಿಸಲು ವೈಯಕ್ತಿಕ ನಿಂದನೆಯ ಒಂದು ಘಟನೆಯನ್ನು ಮುಂಚೂಣಿಗೆ ತಂದಿದ್ದಾರೆ."

"ಮತದಾರರ ಹಕ್ಕುಗಳನ್ನು ಬಿಂಬಿಸಿ ರಾಹುಲ್ ಯಾತ್ರೆ ಮಾಡಿದರು. ಅದು ಚುನಾವಣೆಯ ಬಗ್ಗೆ ಇರಲಿಲ್ಲ. ಆದರೆ ಮೋದಿ ಒಂದು ವೈಯಕ್ತಿಕ ಅವಮಾನವನ್ನು ಚುನಾವಣಾ ವಿಷಯವನ್ನಾಗಿ ಮಾಡುವ ಮೂಲಕ ರಾಜಕೀಯವನ್ನು ವೈಯಕ್ತಿಕ ಮಟ್ಟಕ್ಕೆ ಇಳಿಸಿದ್ದಾರೆ. ಯಾವುದೇ ತಾಯಿಯ ನಿಂದನೆಯನ್ನು ಯಾರೂ ಸಹಿಸುವುದಿಲ್ಲ, ಆದರೂ ತಮ್ಮ ಪಕ್ಷದ ನಾಯಕರು ಇತರ ಮಹಿಳೆಯರನ್ನು ಅವಮಾನಿಸಿದಾಗ ಅಥವಾ ಮಣಿಪುರ ಹಿಂಸಾಚಾರದಂತಹ ಘಟನೆಗಳು ಸಂಭವಿಸಿದಾಗ ಮೋದಿ ಸ್ವತಃ ಮೌನವಾಗಿದ್ದರು. ತಮ್ಮ ತಾಯಿಯ ವಿಷಯವನ್ನು ಬಳಸಿಕೊಂಡು, ಆಡಳಿತ ವಿರೋಧಿ ಅಲೆಯಿಂದ ತತ್ತರಿಸಿರುವ ತಮ್ಮ ಬೆಂಬಲಿಗರನ್ನು ಒಗ್ಗೂಡಿಸಲು ಬಿಜೆಪಿ ಆಶಿಸುತ್ತಿದೆ, ಆದರೆ ಇದು ಹತಾಶ ಪ್ರಯತ್ನ" ಎಂದು ಅವರು ಹೇಳಿದರು.

ಈ ವಿಚಾರದಲ್ಲಿ ತಾನು ಸಂಪೂರ್ಣ ಮೋದಿ ಪರ ಎನ್ನುತ್ತಾನೆ ದಿನಗೂಲಿ ಕಾರ್ಮಿಕ ವಿನೋದ್ ಚೌಧರಿ. 

ಮತದಾರರನ್ನು ಆಕರ್ಷಿಸದು

ಈ ಸಂಬಂಧ ರಾಜಕೀಯ ವಿಶ್ಲೇಷಕರೊಬ್ಬರು ಮಾತನಾಡಿ, “ಈ ವಿವಾದವು ಬಿಜೆಪಿಗೆ ತನ್ನ ಮೂಲ ಬೆಂಬಲವನ್ನು ಗಟ್ಟಿ ಮಾಡಿಕೊಳ್ಳಲು ಸಹಾಯ ಮಾಡಬಹುದು, ಆದರೆ ಹೊಸ ಮತದಾರರನ್ನು ಆಕರ್ಷಿಸುವ ಸಾಧ್ಯತೆ ಇಲ್ಲ” ಎಂದಿದ್ದಾರೆ.

"ಮೋದಿ ತಮ್ಮನ್ನು ಬಲಿಪಶುವಿನಂತೆ ಬಿಂಬಿಸಿಕೊಂಡು, 'ನಾನು ನಿಂದಿಸಿದವರನ್ನು ಕ್ಷಮಿಸಬಹುದು, ಆದರೆ ಬಿಹಾರ ಮತ್ತು ಭಾರತದ ಜನರು ಈ ಅವಮಾನವನ್ನು ಸಹಿಸುವುದಿಲ್ಲ' ಎಂದು ಹೇಳಿದ್ದಾರೆ." ಇದು ಭಾವನಾತ್ಮಕ ಸಂಬಂಧಗಳನ್ನು ಬೆಸೆಯಲು ಮಾಡಿದ ಯೋಜಿತ ನಡೆ ಎಂದು ಅವರು ವಿಶ್ಲೇಷಿಸಿದರು. ಆದರೆ ಅರೆ-ಊಳಿಗಮಾನ್ಯ ಪದ್ಧತಿಯನ್ನು ಹೊಂದಿರುವ ಬಿಹಾರದಲ್ಲಿ, ಬಡ ಮತ್ತು ದುರ್ಬಲ ಸಮುದಾಯಗಳು ಪ್ರಬಲವಾಗಿದ್ದು, ಅಲ್ಲಿನ ಮತದಾರರು ಭಾವನೆಗಳಿಗಿಂತ ನೈಜ ಸಮಸ್ಯೆಗಳಿಗೆ ಆದ್ಯತೆ ನೀಡುತ್ತಾರೆ ಎಂದು ಅವರು ತಿಳಿಸಿದರು.

ಪಂಕ್ಚರ್ ಅಂಗಡಿ ಹುಡುಗ ಮಾಡಿದ ಯಡವಟ್ಟು

ಆಗಸ್ಟ್ 27 ರಂದು, 20 ವರ್ಷದ ರಸ್ತೆ ಬದಿಯಲ್ಲಿ ಪಂಕ್ಚರ್ ಅಂಗಡಿ ನಡೆಸುತ್ತಿರುವ ಎಂ.ಡಿ. ರಿಜ್ವಿ, ದರ್ಭಾಂಗದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿಯವರ 'ವೋಟರ್ ಅಧಿಕಾರ್ ಯಾತ್ರೆ'ಯ ಸ್ವಾಗತದ ವೇದಿಕೆಯಲ್ಲಿ ಮಾತನಾಡಿ, ಪ್ರಧಾನಿ ಮೋದಿ ಮತ್ತು ಅವರ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಈ ಘಟನೆಯ ವಿಡಿಯೋ ವೈರಲ್ ಆದ ನಂತರ, ಪೊಲೀಸರು ರಿಜ್ವಿಯನ್ನು ಬಂಧಿಸಿದ್ದರು. ಆ ಬಳಿಕ ನ್ಯಾಯಾಲಯವು ಅವನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ

ರಿಜ್ವಿ ಅವರ ಸ್ವಗ್ರಾಮ ಭಾಪುರದಲ್ಲಿ, ಅವರ ಕುಟುಂಬವು ಈ ಕೃತ್ಯಕ್ಕೆ ಆತನೊಬ್ಬನೇ ಕಾರಣ ಎಂದು ಒತ್ತಿ ಹೇಳಿದೆ. ಮತ್ತೊಂದು ಟೈರ್ ಪಂಕ್ಚರ್ ಅಂಗಡಿ ನಡೆಸುತ್ತಿರುವ ಆತನ ತಂದೆ ಮೊಹಮ್ಮದ್ ಅನಿಸ್, “ನನ್ನ ಮಗ ನಿಜಕ್ಕೂ ತಪ್ಪು ಮಾಡಿದ್ದಾನೆ. ಅವನಿಗೆ ಯಾವುದೇ ರಾಜಕೀಯ ಸಂಪರ್ಕಗಳಿಲ್ಲ. ಇದಕ್ಕಾಗಿ ನಾವು ಮೋದಿಜಿ ಮತ್ತು ಜನರಲ್ಲಿ ಕ್ಷಮೆ ಯಾಚಿಸುತ್ತೇವೆ" ಎಂದು ಹೇಳಿದರು. ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ರಿಜ್ವಿ ಅವರ ತಾಯಿ, ಮಗನ ಬಂಧನದಿಂದ ಆಘಾತಕ್ಕೊಳಗಾಗಿದ್ದು, ಆತನ ವಿಚಾರದಲ್ಲಿ ಮೃದು ಧೋರಣೆ ತೋರುವಂತೆ ಅಂಗಲಾಚಿದ್ದಾರೆ ಎಂದು ವರದಿಯಾಗಿದೆ. ನೆರೆಕೆರೆಯವರು ರಿಜ್ವಿಯನ್ನು ದಾರಿತಪ್ಪಿದ ಯುವಕ ಎಂದು ಬಣ್ಣಿಸಿದ್ದರೂ, ಅವನು ಇಂತಹ ವಿವಾದದ ಕೇಂದ್ರವಾಗುತ್ತಾನೆ ಎಂದು ನಂಬಲು ಸಾಧ್ಯವಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.

ಬಿಜೆಪಿ ಬೆಂಬಲಿಗರು ಬಿಹಾರದಾದ್ಯಂತ ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ವಿರುದ್ಧ ಹಲವು ಎಫ್ಐಆರ್ಗಳನ್ನು ದಾಖಲಿಸಿದ್ದಾರೆ. ಆಸಕ್ತಿಯ ಸಂಗತಿ ಎಂದರೆ, ಆರೋಪಿ ಮೋದಿಯವರನ್ನು ನಿಂದಿಸುವ ಸಂದರ್ಭದಲ್ಲಿ ರಾಹುಲ್ ಆಗಲಿ ಅಥವಾ ತೇಜಸ್ವಿ ಅವರಾಗಲಿ ವೇದಿಕೆಯ ಮೇಲೆ ಇರಲಿಲ್ಲ ಎಂದು ಸ್ಥಳೀಯ ಪೊಲೀಸರು ದೃಢಪಡಿಸಿದ್ದಾರೆ. ಆದರೂ, ಅಮಿತ್ ಶಾ ಅವರಿಂದ ರಾಜ್ಯ ಅಧ್ಯಕ್ಷ ದಿಲೀಪ್ ಜೈಸ್ವಾಲ್ ವರೆಗಿನ ಬಿಜೆಪಿ ನಾಯಕರು ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ಅವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದು, ಈ ಘಟನೆಗೆ ಅವರನ್ನು ನೈತಿಕವಾಗಿ ಹೊಣೆಗಾರರನ್ನಾಗಿ ಮಾಡಿದ್ದಾರೆ.

ಪ್ರಜ್ವಲ್ ರೇವಣ್ಣ ಪರ ಹೇಗೆ ಪ್ರಚಾರ ಮಾಡಿದಿರಿ ಮೋದಿ?

ಮತ್ತೊಂದೆಡೆ, ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರು ಪ್ರಧಾನಿ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಅತ್ಯಾಚಾರದ ಆರೋಪ ಎದುರಿಸುತ್ತಿರುವ ಪ್ರಜ್ವಲ್ ರೇವಣ್ಣ ಪರವಾಗಿ ಅವರು ಹೇಗೆ ಪ್ರಚಾರ ಮಾಡುತ್ತಾರೆ ಎಂದು ಪ್ರಶ್ನಿಸಿದರು. ಮೋದಿ ಅವರು ಒಮ್ಮೆ ಸೋನಿಯಾ ಗಾಂಧಿಯವರನ್ನು "ಜರ್ಸಿ ಹಸು" ಎಂದು ಕರೆದಿದ್ದರು ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಡಿಎನ್ಎ ಬಗ್ಗೆಯೂ ಅನುಮಾನದಿಂದ ಮಾತನಾಡಿದ್ದರು ಎಂಬುದನ್ನು ನೆನಪಿಸುತ್ತಾರೆ.

ತೇಜಸ್ವಿ ಯಾದವ್ ಕೂಡ ಪ್ರಧಾನಿಯವರನ್ನು ಗುರಿಯಾಗಿಸಿ, "ತಾಯಿ ತಾಯಿಯೇ. ನಾವು ಇಂತಹ ಯಾವುದೇ ನಿಂದನೆಯನ್ನು ವಿರೋಧಿಸುತ್ತೇವೆ. ಆದರೆ ಸೋನಿಯಾ ಗಾಂಧಿಯನ್ನು 'ಜರ್ಸಿ ಹಸು' ಎಂದು ಕರೆದವರು ಮೋದಿ ಅಲ್ಲವೇ? ನಿತೀಶ್ ಕುಮಾರ್ ಅವರ ಡಿಎನ್ಎ ಬಗ್ಗೆ ಹೇಳಿಕೆ ನೀಡಿದವರು ಯಾರು? ಬಿಜೆಪಿ ನಾಯಕರು ಪದೇ ಪದೇ ಮಹಿಳೆಯರನ್ನು ಅವಮಾನಿಸುತ್ತಿದ್ದರೂ ಪ್ರಧಾನಿ ಮೌನವಾಗಿದ್ದಾರೆ" ಎಂದು ಹೇಳಿದರು.

Tags:    

Similar News