ಮಾನ್ಸೂನ್‌ ಮಳೆ | ಈ ಬಾರಿ ಮುಂಗಾರು ತರಲಿದೆ ಹರ್ಷ: ಐಎಂಡಿ ಮುನ್ಸೂಚನೆ

ರಾಜ್ಯದಲ್ಲಿ 2023ನೇ ಸಾಲಿನಲ್ಲಿ ಹಿಂಗಾರು ಹಾಗೂ ಮುಂಗಾರು ಅವಧಿಯಲ್ಲಿ ಸಮರ್ಪಕ ಮಳೆಯಾಗದೆ ಬರಗಾಲ ಎದುರಾಗಿದೆ. ಆದರೆ, 2024ರಲ್ಲಿ ಕರ್ನಾಟಕದಲ್ಲಿ ಸಮೃದ್ಧ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

By :  Hitesh Y
Update: 2024-03-19 02:00 GMT
Rain in Karnataka

ರಾಜ್ಯದಲ್ಲಿ ಕೆರೆಕಟ್ಟೆಗಳು ಬತ್ತಿವೆ. ಅಂತರ್ಜಲ ಕುಸಿತ ಕಂಡಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗದಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಸೃಷ್ಟಿಯಾಗಿದೆ. ಹೊಲ- ಗದ್ದೆಗಳ ನೆಲ ಬರಡು ಭೂಮಿಯಂತಾಗಿದೆ. ಇದೆಲ್ಲದರ ನಡುವೆ ಬಿಸಿಲ ಝಳವೂ ಹೆಚ್ಚಾಗುತ್ತಿದೆ. ಬಿರುಬಿಸಿಲ ಬೇಗೆಯಲ್ಲಿ ಬೇಯುತ್ತಿರುವ ರಾಜ್ಯದ ಜನರಿಗೆ ಹವಾಮಾನ ಇಲಾಖೆಯು ಈ ಬಾರಿ ಉತ್ತಮ (Rain) ಮಳೆಯಾಗಲಿದೆ ಎನ್ನುವ ನೆಮ್ಮದಿಯ ಸುದ್ದಿ ನೀಡಿದೆ.

ರಾಜ್ಯದಲ್ಲಿ 2023ನೇ ಸಾಲಿನಲ್ಲಿ ಹಿಂಗಾರು ಹಾಗೂ ಮುಂಗಾರು ಅವಧಿಯಲ್ಲಿ ಸಮರ್ಪಕ ಮಳೆಯಾಗದೆ ಭೀಕರ ಬರ ಎದುರಾಗಿದೆ. ಆದರೆ, 2024ರಲ್ಲಿ ಕರ್ನಾಟಕದಲ್ಲಿ ಸಮೃದ್ಧ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬರದಿಂದ ಕಂಗೆಟ್ಟಿರುವ ರಾಜ್ಯದ ಜನತೆಗೆ ಇದು ಸಮಾಧಾನಕರ ಸಂಗತಿ. ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ. ನೈಋತ್ಯ ಮಾನ್ಸೂನ್ (ಜೂನ್-ಸೆಪ್ಟೆಂಬರ್) ಮಳೆಯ ಮಾರುತಗಳ(Southwest Monsoon) ಪ್ರಭಾವದಿಂದಾಗಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ತಗ್ಗಲಿದೆ ಎಲ್ ನಿನೋ ಪ್ರಭಾವ

ರಾಜ್ಯದಲ್ಲಿ ಎಲ್ ನಿನೋ ಪ್ರಭಾವ ತಗ್ಗಲಿದ್ದು, ಮುಂದಿನ ಎರಡು ತಿಂಗಳು ತಟಸ್ಥ (ನ್ಯೂಟ್ರಲ್) ವಾಗಲಿದೆ. ನಂತರದಲ್ಲಿ ಉತ್ತಮ ಮಾನ್ಸೂನ್ (Monsoon ) ಬರುವ  ಸಾಧ್ಯತೆ ಇದೆ ಎಂದು ಹಿರಿಯ ಹವಾಮಾನ ತಜ್ಞ ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.

ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಅವರು, ಲಾ ನಿನಾ (ಎಲ್ ನಿನೋದ ತದ್ವಿರುದ್ಧ ಹವಾಮಾನ ಪರಿಸ್ಥಿತಿ) ಪ್ರಭಾವದಿಂದ ಉತ್ತಮ ಮಳೆಯಾಗಲಿದೆ. ಆದರೆ, ಇದೇ ಸಂದರ್ಭದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯೂ ಇದೆ. ಕರ್ನಾಟಕದಲ್ಲಿ 2017ರ ವರೆಗೆ ಎಲ್ ನಿನೋ ಪ್ರಭಾವ ಇತ್ತು. 2019, 2020 ಹಾಗೂ 2021ರಲ್ಲಿ ಲಾ ನಿನಾ ಪ್ರಭಾವ ಇತ್ತು. 2023ರಲ್ಲಿ ಎಲ್ ನಿನೋ ಸೃಷ್ಟಿಯಾಗಿದ್ದು, ಈ ಬಾರಿ ಇದರ ತೀವ್ರತೆ, ಅವಧಿ ಪೂರ್ವದಲ್ಲಿಯೇ ಕಡಿಮೆಯಾಗುವ ಲಕ್ಷಣ ಕಾಣಿಸಿಕೊಳ್ಳುತ್ತಿದೆ ಎಂದು ವಿವರಿಸಿದರು.

ದಕ್ಷಿಣ ಭಾರತದಲ್ಲಿ ಉತ್ತಮ ಮಳೆ

ಈ ಬಾರಿ (2024 ನೇ ಸಾಲಿನಲ್ಲಿ) ಮುಂಗಾರು ಹಾಗೂ ಹಿಂಗಾರಿನಲ್ಲಿ ಉತ್ತಮ ಮಳೆಯಾಗಲಿದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಭಾರೀ ಮಳೆಯಾಗಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ ಕೇಂದ್ರ (KSMDNC) ಮುನ್ಸೂಚನೆ ನೀಡಿದೆ. ಭಾರತೀಯ ಹವಾಮಾನ ಇಲಖೆಯು ಪ್ರತಿ ವರ್ಷ ಏಪ್ರಿಲ್ ಮೂರನೇ ವಾರದಲ್ಲಿ ವಾರ್ಷಿಕ ಹವಾಮಾನ ವರದಿಯನ್ನು ನೀಡುತ್ತದೆ. ಮೇ ತಿಂಗಳ ಕೊನೆಯಲ್ಲಿ ಅದರ ಪರಿಷ್ಕೃತ ವರದಿಯನ್ನು ಸಹ ನೀಡುತ್ತದೆ. ಈ ವರದಿಯ ಆಧಾರದ ಮೇಲೆ ಕರ್ನಾಟಕದಲ್ಲಿ ಎಲ್ಲೆಲ್ಲಿ ಯಾವ ಪ್ರಮಾಣದಲ್ಲಿ ಮಳೆಯಾಗಲಿದೆ ಎನ್ನುವುದರ ಸ್ಪಷ್ಟ ಚಿತ್ರಣ ಸಿಗಲಿದೆ.


ಎಲ್ ನಿನೋ ತಟಸ್ಥ: ಲಾ ನಿನಾ ಪ್ರಭಾವ

ರಾಜ್ಯದಲ್ಲಿ ಇನ್ನೊಂದು ತಿಂಗಳ ಅವಧಿಯಲ್ಲಿ ಎಲ್ ನಿನೋ ಪ್ರಭಾವ ಇಳಿಕೆಯಾಗಲಿದ್ದು, ಲಾ ನಿನಾ (ಎಲ್ ನಿನೋದ ತದ್ವಿರುದ್ಧ ಹವಾಮಾನ ಬೆಳವಣಿಗೆ) ಪ್ರಭಾವ ಬಲಿಷ್ಠವಾಗಲಿದೆ ಎಂದು ಭಾರತೀಯ ಹವಾಮಾನ (Indian Meteorological Department) ಇಲಾಖೆಯ ಬೆಂಗಳೂರು ನಿರ್ದೇಶಕ ಸಿ.ಎಸ್ ಪಾಟೀಲ್ ಅವರು ತಿಳಿಸಿದ್ದಾರೆ.

ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈ ಬಾರಿ ಉತ್ತಮ ಮಳೆಯಾಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ. ಮೇ ವರೆಗೆ ಬಿಸಿಲ ಝಳ ಬಹುತೇಕ ಮುಂದುವರಿಯುವ ಸಾಧ್ಯತೆ ಇದೆ ಎಂದರು.

ನಾಲ್ಕು ವರ್ಷಗಳ ನಂತರ ಕನಿಷ್ಠ ಮಳೆ

ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2023ರಲ್ಲಿ ವಾಡಿಕೆಗಿಂತ ಅತ್ಯಂತ ಕಡಿಮೆ ಮಳೆಯಾಗಿರುವುದು ವರದಿ ಆಗಿದೆ. ಕಳೆದ ವರ್ಷ ವಾಡಿಕೆಗಿಂತ ಶೇ 24ರಷ್ಟು ಕಡಿಮೆ ಮಳೆಯಾಗಿತ್ತು. ಕರ್ನಾಟಕದಲ್ಲಿ 2016ರ ನಂತರ ಕಡಿಮೆ ಮಳೆಯಾದ ವರ್ಷ ಇದಾಗಿದೆ. ಕಳೆದ ವರ್ಷ ವಾಡಿಕೆಯ ಪ್ರಕಾರ 1153 ಮಿ.ಮೀ ಮಳೆಯಾಗಬೇಕಿತ್ತು. ಆದರೆ, 872 ಮಿ.ಮೀ. ಮಾತ್ರ ಮಳೆಯಾಗಿತ್ತು. 2016ರ ನಂತರ ಸುರಿದ ವಾಡಿಕೆಗಿಂತ ಅತ್ಯಂತ ಕಡಿಮೆ ಮಳೆ ಇದಾಗಿದೆ. ಇನ್ನು 2016ನೇ ಸಾಲಿನಲ್ಲಿ ವಾಡಿಕೆಗಿಂತ ಶೇ. 28ರಷ್ಟು ಕಡಿಮೆ ಮಳೆಯಾಗಿತ್ತು.

ಈ ಬಾರಿ ಪ್ರವಾಹ ಭೀತಿ

ರಾಜ್ಯದಲ್ಲಿ ಕಳೆದ ವರ್ಷ ಮಳೆ ಕೊರತೆಯಿಂದ ಬರ ಎದುರಾಗಿತ್ತು. ಆದರೆ, ಈ ಬಾರಿ ಭಾರೀ ಮಳೆಯಾಗಿ ಕೆಲವು ನಿರ್ದಿಷ್ಟ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುವ ಸಾಧ್ಯತೆಯೂ ಇದೆ. ಆದರೆ, ಈ ಬಗ್ಗೆ ಏಪ್ರಿಲ್ ಅಂತ್ಯದಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

Tags:    

Similar News