ಪ್ರಬಲ ಲಿಂಗಾಯತ ಸಮುದಾಯದ ಮತ ಗಳಿಕೆಗೆ-ಮನವೊಲಿಕೆಗೆ ಸಿದ್ದರಾಮಯ್ಯ ಸರ್ವ ಯತ್ನ
ಬಿಜೆಪಿಯ ಬೆನ್ನೆಲುಬು ಎಂದು ಭಾವಿಸಲಾಗಿರುವ ಪ್ರಬಲ ಲಿಂಗಾಯತ ಸಮುದಾಯವನ್ನು ತನ್ನತ್ತ ಒಲಿಸಿಕೊಳ್ಳಲು ಕಾಂಗ್ರೆಸ್, ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನಿಲ್ಲದ ಪ್ರಯತ್ನದಲ್ಲಿ ತೊಡಗಿದ್ದಾರೆ. ಇಪ್ಪತ್ತೆಂಟು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿರುವ ಬಿಜೆಪಿ ಲಿಂಗಾಯತ ಸಮುದಾಯದಿಂದ ಭಾರೀ ವಿರೋಧವನ್ನು ಎದುರಿಸುತ್ತಿರುವುದು ಕಾಗ್ರೆಸ್ ಗೆ ಒಂದರ್ಥದಲ್ಲಿ ವರವಾಗಿ ಪರಿಣಮಿಸಿದೆ.;
ರಾಜ್ಯದ ಇಪ್ಪತ್ತೆಂಟು ಕ್ಷೇತ್ರಗಳಿಗೂ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ (ಮಿತ್ರ ಪಕ್ಷಗಳ) ಅಭ್ಯರ್ಥಿಗಳು ಅಂತಿಮಗೊಂಡಿದ್ದು, ಲೋಕಸಭಾ ಚುನಾವಣಾ ಕಣ ʼವರ್ಣಾಧಾರಿತʼ ವಾಗಿದ್ದರೂ, ವರ್ಣರಂಜಿತವೂ ಆಗಿದೆ. ಬೇಕಿರಲಿ, ಬೇಡಿರಲಿ, ಜಾತಿ- ಚುನಾವಣಾ ಲೆಕ್ಕಾಚಾರದ, ಅಭ್ಯರ್ಥಿಯ ಸೋಲು ಗೆಲುವಿನ ʼಏಕೈಕʼ ಮಾನದಂಡವಾಗಿರುವುದನ್ನು ತಿರಸ್ಕರಿಸಲು ಸಾಧ್ಯವೇ ಇಲ್ಲ.
ಪ್ರಬಲ ಒಕ್ಕಲಿಗರು ನನ್ನವರು ಎಂದು ಕೆಲವರು, ಹಾಗೆಯೇ ಬಹುಸಂಖ್ಯಾತರೆಂದು ನಂಬಲಾದ ವೀರಶೈವ-ಲಿಂಗಾಯತರ ಬೆಂಬಲದ ಮೇಲೆಯೇ ನಮ್ಮ ಬಿಜೆಪಿ ಪಕ್ಷ ನಿಂತಿದೆ ಎಂದು ಮತ್ತೆ ಕೆಲವರು, ಸಮುದಾಯಗಳನ್ನು ತಮ್ಮ ಇಚ್ಛಾನುಸಾರ ಹಂಚಿಕೊಂಡು, ಆಯಾ ಸಮುದಾಯಗಳ ಪ್ರಶ್ನಾತೀತ ನಾಯಕರೆಂದು ಕೆಲವರು ತಮ್ನನ್ನು ತಾವು ಬಿಂಬಿಸಿಕೊಂಡಿದ್ದಾರೆ.
ಈ ತೆಳು ತಿಳುವಳಿಕೆಯ ಆಧಾರದಮೇಲೆಯೇ, ಈಗ ಪ್ರತಿಷ್ಠಿತ ನಾಯಕರು, ಅವರ ಪಕ್ಷಗಳು ಚುನಾವಣಾ ಕಣದಲ್ಲಿ ವಿಜೃಂಭಿಸುತ್ತಿದ್ದಾರೆ. ಉಳಿದ ಪಕ್ಷಗಳು ತಮ್ಮೊಂದಿಗೆ ಇವೆ ಎಂದು ನಂಬಿಕೊಂಡು, ತಮ್ಮೊಂದಿಗಿಲ್ಲ ಎಂದು ತಮ್ಮನ್ನು ತಾವೇ ನಂಬಿಸಿಕೊಂಡ ನಾಯಕರು, ಅಂಥ ಸಮುದಾಯಗಳ ಮನವೊಲಿಸಲು ಇನ್ನಿಲ್ಲದ ಪ್ರಯತ್ನದಲ್ಲಿ ತೊಡಗಿರುವುದು ಈ ಸಂದರ್ಭದಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ.
ಈ ಹಿನ್ನೆಲೆಯಲ್ಲಿ ಗಮನಿಸಿದರೆ, ಬಿಜೆಪಿಯ ಬೆನ್ನೆಲುಬು ಎಂದು ಭಾವಿಸಲಾಗಿರುವ ಪ್ರಬಲ ಲಿಂಗಾಯತ ಸಮುದಾಯವನ್ನು ತನ್ನತ್ತ ಒಲಿಸಿಕೊಳ್ಳಲು ಕಾಂಗ್ರೆಸ್, ವಿಶೇಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನಿಲ್ಲದ ಪ್ರಯತ್ನದಲ್ಲಿ ತೊಡಗಿದ್ದಾರೆ. ಇಪ್ಪತ್ತೆಂಟು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿರುವ ಬಿಜೆಪಿ ಲಿಂಗಾಯತ ಸಮುದಾಯದಿಂದ ಭಾರೀ ವಿರೋಧವನ್ನು ಎದುರಿಸುತ್ತಿರುವುದು ಕಾಗ್ರೆಸ್ ಗೆ ಒಂದರ್ಥದಲ್ಲಿ ವರವಾಗಿ ಪರಿಣಮಿಸಿದೆ. ಹಾಗಾಗಿ ಸಿದ್ದರಾಮಯ್ಯ ಲಿಂಗಾಯತರ ಮನವೊಲಿಕೆಗೆ, ಮತಗಳಿಕೆಗೆ ತೀವ್ರ ಪ್ರಯತ್ನ ನಡೆಸಿದ್ದಾರೆ.
ಬಿಜೆಪಿಯಲ್ಲಿ ಲಿಂಗಾಯತ ಸಮುದಾಯದ ಬಂಡಾಯ
ತುಮಕೂರಿನಲ್ಲಿ ಅಧಿಕೃತ ಅಭ್ಯರ್ಥಿ ವಿ ಸೊಮಣ್ಣ ವಿರುದ್ಧ ಮಾಧುಸ್ವಾಮಿ ಬಂಡಾಯವೆದ್ದಿದ್ದರೆ, ದಾವಣಗೆರೆಯಲ್ಲಿ ರೇಣುಕಾಚಾರ್ಯ, ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿ ವಿರುದ್ಧ ಸ್ಥಳಿಯ ಕಾರ್ಯಕರ್ತರು, ಶಿವಮೊಗ್ಗದಲ್ಲಿ ಕೆ. ಎಸ್. ಈಶ್ವರಪ್ಪ. ಧಾರವಾಡದಲ್ಲಿ ಪ್ರಹ್ಲಾದ್ ಜೋಶಿ ವಿರುದ್ಧ, ಲಿಂಗಾಯತ ದಿಂಗಾಲೇಶ್ವರ ಸ್ವಾಮೀಜಿ, ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ವಿರುದ್ಧ ಪ್ರಭಾಕರ ಕೋರೆ, ಕೊಪ್ಪಳದಲ್ಲಿ ಬಸವರಾಜ್ ವಿರುದ್ಧ ಸಂಗಣ್ಣ ಕರಡಿ, ಬೀದರ್ ನಲ್ಲಿ ಭಗವಂತ ಖೂಬಾ ವಿರುದ್ಧ ಸ್ಥಳೀಯ ಶಾಸಕರು ಮಲೆತು ನಿಂತಿದ್ದಾರೆ. ಇವರೆಲ್ಲರ ಅಸಮಾಧಾನವನ್ನು ಮೋದಿ ಹೆಸರಿನಲ್ಲಿ ತಣ್ಣಗೆ ಮಾಡಿರುವುದಾಗಿ ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕರೆಂದೇ ಬಿಂಬಿಸಿಕೊಂಡಿರುವ ಬಿ ಎಸ್ ಯಡಿಯೂರಪ್ಪ ಸಮಝಾಯಿಷಿ ನೀಡುತ್ತಿದ್ದರೂ, ಅಸಮಾಧಾನ ಮಾತ್ರ ಬೂದಿ ಮುಚ್ಚಿದ ಕೆಂಡದಂತೆ ಒಳಗೊಳಗೇ ನಿಗಿನಿಗಿ ಕೆಂಡದಂತಿದೆ.
ಲಿಂಗಾಯತರ ಮೇಲಷ್ಟೇ ಅವಲಂಬನೆ ಸಂಘ ಪರಿವಾರಕ್ಕೆ ವರ್ಜ್ಯ
ಅಖಂಡ ಹಿಂದೂ ಸಮಾಜದ ಕಲ್ಪನೆಯಲ್ಲಿ ಮುಳುಗಿರುವ ಆರ್ ಎಸ್ ಎಸ್ ಸಿದ್ಧಾಂತಕ್ಕೆ ಬದ್ಧವಾಗಿರುವ ಬಿಜೆಪಿ ಈ ರೀತಿ ಒಂದು ಸಮುದಾಯದ ಬೆಂಬಲದಿಂದ ಬೆಳೆಯುವುದು ತಪ್ಪು ಎಂದು ಗೊತ್ತಿದ್ದರೂ, ನಾಯಕರು ಅನಿವಾರ್ಯವಾಗಿ ಪ್ರಬಲ ಲಿಂಗಾಯತ ಸಮುದಾಯ ಹೊರಡಿಸುವ ಫರ್ಮಾನುಗಳಿಗೆ ತಲೆ ಬಾಗುತ್ತಿರುವುದು, ಅರ್ ಎಸ್ ಎಸ್‌ಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಹೇಳಿಕೆಯನ್ನು ನೀಡಿಯೇ ಇತ್ತೀಚಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ನೆಲಕಚ್ಚಿದೆ ಎಂಬುದು ಕೆಲವು ಹಿರಿಯ ಬಿಜೆಪಿ ನಾಯಕರ ಅನಿಸಿಕೆ.
ಪ್ರಬಲ ಲಿಂಗಾಯತ ಸಮುದಾಯದ ನಾಯಕ ಯಡಿಯೂರಪ್ಪ ನವರನ್ನು ಕೆಲವರ ಮಾತು ಕೇಳಿ ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಸಿದ್ದು ತಪ್ಪೆಂದು ಅರಿವಾದಾಗ ಬಿಜೆಪಿಯ ರಾಷ್ಟ್ರ ನಾಯಕರು ಯಡಿಯೂರಪ್ಪನವರಿಗೆ ರಾಷ್ಟ್ರೀಯ ನಾಯಕ ಸ್ಥಾನಮಾನ ನೀಡಿದ್ದೇ ಅಲ್ಲದೆ ಅವರ ಪುತ್ರ ಬಿ ವೈ ವಿಜಯೇಂದ್ರ ಅವರನ್ನು ಕರ್ನಾಟಕ ಬಿಜೆಪಿಯ ಅಧ್ಯಕ್ಷರನ್ನಾಗಿ ನೇಮಿಸಿದ್ದೇ ಅಲ್ಲದೆ, ಲೋಕಸಭಾ ಅಭ್ಯರ್ಥಿಗಳ ಆಯ್ಕೆಯ ಜವಾಬ್ದಾರಿ ನೀಡಿತು. ಆದರೆ ಈ ನಿರ್ಧಾರವೇ ತಪ್ಪಾಯಿತೇನೋ ಎಂಬ ಭಾವನೆ ಬಿಜೆಪಿಯ ರಾಷ್ಟ್ರೀಯ ನಾಯಕತ್ತವವನ್ನು ಕಾಡುತ್ತಿದೆ ಎಂದು ಕೆಲವು ಬಿಜೆಪಿಯ ಹಿರಿಯ ನಾಯಕರು ಅಲವೊತ್ತುಕೊಳ್ಳುತ್ತಿದ್ದಾರೆ.
ಬಿಜೆಪಿಯ ಮೇಲೆ ಲಿಂಗಾಯತರ ಮುನಿಸೇಕೆ?
“೨೦೦೮ ರಲ್ಲಿ ಮತ್ತು ೨೦೧೮ ರಲ್ಲಿ ಬಿಜೆಪಿಯ ಕೈಹಿಡಿದ ವೀರಶೈವ-ಲಿಂಗಾಯತ ಸಮುದಾಯ, ತಮ್ಮ ಸಮುದಾಯದ ನಾಯಕರನ್ನು ಗೌರವದಿಂದ ನಡೆಸಿಕೊಳ್ಳಲಿಲ್ಲ ಎಂದು ಮುನಿದು, ೨೦೨೩ರಲ್ಲಿ ಬಿಜೆಪಿಗೆ ಪಾಠ ಕಲಿಸಿತು” ಎಂದು ಬಿಜೆಪಿಯ ಹಿರಿಯ ನಾಯಕರೇ ಒಪ್ಪಿಕೊಳ್ಳುತ್ತಾರೆ. ಯಡಿಯೂರಪ್ಪನವರನ್ನು ಕೆಳಕ್ಕಿಸಿದ್ದು, ಅವರದೇ ಜಾಗದಲ್ಲಿ ಲಿಂಗಾಯತ ಸಮುದಾಯದ ಪ್ರಬಲರನ್ನು ಕೂಡಿಸದೆ, ದುರ್ಬಲ ಬೊಮ್ಮಾಯಿ ಅವರನ್ನು ಪ್ರತಿಷ್ಠಾಪಿಸಿದ್ದು, ಲಿಂಗಾಯತ ಸಮುದಾಯಕ್ಕೆ ಸಿಟ್ಟು ತರಿಸಿತ್ತು. ಈ ನಡುವೆ ಮುನಿದ ಲಿಂಗಾಯತ ಸಮುದಾಯದ ಒಳ ಪಂಗಡವಾದ ಪಂಚಮಸಾಲಿಗಳ ಬೇಡಿಕೆಯನ್ನು ಅರೆಬರೆಯಾಗಿ ಈಡೇರಿಸಿದ್ದು, ಅಲ್ಪ ಸಂಖ್ಯಾತರ ಮೀಸಲಾತಿಯನ್ನು ಕಿತ್ತು, ಖಾಜಿ ನ್ಯಾಯ ಮಾಡಿ ಅದನ್ನು ಒಕ್ಕಲಿಗರಿಗೆ, ಲಿಂಗಾಯತರಿಗೆ ಸಮಾನವಾಗಿ ಹಂಚಿದ್ದು, ಎಲ್ಲವೂ ಸಮುದಾಯದ ಮುನಿಸನ್ನು ಮತ್ತಷ್ಟು ಹೆಚ್ಚಿಸಿತು. ಲಿಂಗಾಯತರನ್ನು ಕೇಂದ್ರ ಇತರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಬೇಕೆಂಬ ಬೇಡಿಕೆ ಈಡೇರದಿದ್ದದ್ದು ಅವರ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿತು. ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ ಸವದಿಗೆ ವಿಧಾನ ಸಭೆ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದ್ದೂ ಸೇರಿದಂತೆ ಮುನಿದ ಲಿಂಗಾಯತ ಸಮುದಾಯ ಬಿಜೆಪಿಯಿಂದ ತುಸು ದೂರ ಸರಿಯಿತು. ಇದೆಲ್ಲದರ ಪರಿಣಾಮವಾಗಿ ೨೦೨೩ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಸ್ಥಾನಗಳ ದಕ್ಕದೆ ಅಧಿಕಾರ ಕಳೆದುಕೊಳ್ಳುವಂತಾಯಿತು.
ಮತ್ತೆ ಯಡಿಯೂರಪ್ಪ ಒಲೈಕೆ
ಹಾಗಾಗಿಯೇ ಲಿಂಗಾಯತ ಸಮುದಾಯದ ಮುನಿಸಿಗೆ ಮದ್ದು ಹಚ್ಚಲು ಬಿಜೆಪಿಯ ರಾಷ್ಟ್ರೀಯ ನಾಯಕತ್ವ ಮತ್ತೆ ಯಡಿಯೂರಪ್ಪನವರಿಗೆ ಮೊರೆಹೋಗಬೇಕಾದ ಪರಿಸ್ಥಿತಿ ಎದುರಾಯಿತು. ಇದರಿಂದ ಬಿ. ವೈ ವಿಜಯೇಂದ್ರ ರಾಜ್ಯ ಬಿಜೆಪಿಯ ಅಧ್ಯಕ್ಷರಾಗುವ ಅವಕಾಶವೂ ದಕ್ಕಿತು ಎನ್ನುತ್ತಾರೆ ಬಿಜೆಪಿಯ ಅಸಮಾಧಾನಿತ ನಾಯಕರು.
ಬಿಜೆಪಿಯ ವಿರುದ್ಧ ಮುನಿಸಿಕೊಂಡ ವೀರಶೈವ ಲಿಂಗಾಯತರನ್ನು ಸಂತೈಸಿದರೆ, ಅದರಿಂದ ಲೋಕಸಭಾ ಚುನಾವಣೆಯಲ್ಲಿ ಲಾಭವಾಗುವ ಸಾಧ್ಯತೆಯನ್ನು ಮನಗಂಡ ಕಾಂಗ್ರೆಸ್, ಬಹುಮುಖ್ಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರಬಲ ಸಮುದಾಯವನ್ನು ಒಲಿಸಿಕೊಳ್ಳಲು ಮುಂದಾಗಿದ್ದಾರೆ.
ಒಕ್ಕಲಿಗರೊಂದಿಗೆ ಸೇರಿ ಕಾಂಗ್ರೆಸ್ ನ ಜಾತಿ ಗಣತಿಯನ್ನು ವೀರಶೈವ-ಲಿಂಗಾಯತರು ವಿರೋಧಿಸಿದಾಗ, ಹಿಂದುಳಿದ ವರ್ಗಗಳ ಒತ್ತಡಕ್ಕೆ ಮಣಿದು ಜಾತಿ ಗಣತಿ ವರದಿಯನ್ನು ಸ್ವೀಕರಿಸಿದರೂ, ಅದನ್ನು ಮನ್ನಿಸದಿರಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದಾಗ ಲಿಂಗಾಯತ ಸಮುದಾಯ ನೆಮ್ಮದಿಯ ನಿಟ್ಟುಸಿರು ಬಿಟ್ಟಿತು. ಲಿಂಗಾಯತರನ್ನು ಕೇಂದ್ರ ಇತರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಬೇಕೆಂಬ ಬೇಡಿಕೆಯನ್ನು ಮನ್ನಿಸಿದ ಕಾಂಗ್ರೆಸ್‌ನತ್ತ ಲಿಂಗಾಯಿತರು ನಿಧಾನವಾಗಿ ಒಲಿಯಲಾರಂಭಿಸಿದರು.
ಬಸವಣ್ಣ ಸಾಂಸ್ಕೃತಿಕ ನಾಯಕ
ಈ ನಡುವೆ ಬಸವಣ್ಣ೧೨ ನೇ ಶತಮಾನದ ಧೀಮಂತ ಸಮಾಜ ಸುಧಾರಕ ಶರಣ ಚಳುವಳಿಯ, ಸಮಾನ ಸಮಾಜ, ಜಾತಿ ರಹಿತ ಸಮಾಜದ ಕಲ್ಪನೆಗೆ ಜೀವ ತುಂಬಿದ ಭಕ್ತಿ ಭಂಡಾರಿ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ, ರಾಜ್ಯದ ಸಾಂಸ್ಕೃತಿಕ ರಾಯಭಾರಿ ಎಂದು ಘೋಷಿಸುವ ಮೂಲಕ ಸಿದ್ದರಾಮಯ್ಯ ವೀರಶೈವ ಲಿಂಗಾಯತರ ಮನಸ್ಸನ್ನು ಗೆದ್ದರು. ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಸವಣ್ಣನವರ ಭಾವಚಿತ್ರಗಳನ್ನು ಸರ್ಕಾರಿ ಕಛೇರಿಗಳಲ್ಲಿ ತೂಗುಹಾಕಲು ಆದೇಶಿದ್ದು ಒಂದು ಐತಿಹಾಸಿಕ ತೀರ್ಮಾನವಾಗಿತ್ತು.
ವಚನ ವಿಶ್ವವಿದ್ಯಾಲಯದ ಭರವಸೆ
ಇತ್ತೀಚೆಗೆ, ಸುಮಾರು ೧೬೦ ಲಿಂಗಾಯತ ಮಠಾಧೀಶರು ಒಂದಾಗಿ ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಮಾಡಿದ ಸಿದ್ದರಾಮಯ್ಯನವರನ್ನು ಸನ್ಮಾನಿಸಿದರು. ಸಿದ್ದರಾಮಯ್ಯ ಬಸವಣ್ಣನನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕನೆಂದು ಲೋಕಸಭಾ ಚುನಾವಣೆ ಸನ್ನಿಹದಲ್ಲಿದ್ದಾಗ ಎನ್ನುವುದು ಕಾಕತಾಳೀಯ ಎನ್ನಬಹುದು. ಈ ಸಂದರ್ಭದಲ್ಲಿ ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಘೋಷಿಸಿ, ಸಿದ್ದರಾಮಯ್ಯ ಲಿಂಗಾಯತರ ಮನಸ್ಸನ್ನು ಮತ್ತಷ್ಟು ಗೆದ್ದರು ಎಂದು ಲಿಂಗಾಯತ ನಾಯಕರೇ ಒಪ್ಪಿಕೊಳ್ಳುತ್ತಾರೆ. ಏಕೆಂದರೆ ವೀರಶೈವರು ಬಸವಣ್ಣನನ್ನು ತಮ್ಮ ನಾಯಕನೆಂದು ಒಪ್ಪಿಕೊಳ್ಳಲು ಹಿಂಜರಿಯುತ್ತಿರುವ ಇಂದಿನ ಸಂದರ್ಭದಲ್ಲಿ, ಬಹುಸಂಖ್ಯಾತ ಲಿಂಗಾಯತರು ಸಿದ್ದರಾಮಯ್ಯನವರ ನಿಲುವನ್ನು ಮೆಚ್ಚಿಕೊಂಡರು. ಒಂದು ಕಾಲದಲ್ಲಿ ಇದ್ದ ಲಿಂಗಾಯತ ಧರ್ಮಕ್ಕೆ ಮತ್ತೆ ಪುನಶ್ಚೇತನ ಕೊಡುವ ಪ್ರಯತ್ನವನ್ನು ಅವರು ಮರೆತಂತೆ ಕಾಣುತ್ತಿಲ್ಲ.
ಈ ಎಲ್ಲ ಕಾರಣಗಳಿಂದ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಲಿಂಗಾಯತರನ್ನು ಒಲಿಸಿಕೊಳ್ಳುವ ಪ್ರಯತ್ನವಾಗಿ, ಈ ಎಲ್ಲ ಕ್ರಮಗಳು ಕಂಡು ಬಂದರೂ, ಲಿಂಗಾಯತ ಧರ್ಮ, ಬಸವಣ್ಣ, ವಚನ ಸಾಹಿತ್ಯದ ಬಗ್ಗೆ ಸಿದ್ದರಾಮಯ್ಯನವರಿಗೆ ಇರುವ ಬದ್ಧತೆಯನ್ನು ಪ್ರಶ್ನಿಸಲು ಯಾರಿಂದಲೂ ಸಾಧ್ಯವಿಲ್ಲ. ಬುದ್ಧ, ಬಸವಣ್ಣ, ಅಂಬೇಡ್ಕರ್ ಮೂರು ಸಮಾಜ ಸುಧಾರಕರನ್ನೂ ಒಂದೇ ಸಾಲಿನಲ್ಲಿ ಇಟ್ಟು ನೋಡುವ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಪರವಾಗಿ ಲಿಂಗಾಯತರು ನಿಂತರೆ ಆಶ್ಚರ್ಯ ಪಡಬೇಕಿಲ್ಲ ಎಂದು ಕಾಂಗ್ರೆಸ್ ನ ನಾಯಕರಷ್ಟೇ ಅಲ್ಲ. ಬಿಜೆಪಿ ನಾಯಕರೂ ಒಪ್ಪಿಕೊಳ್ಳೂತ್ತಾರೆ ಎನ್ನುವುದು ಹಿರಿಯ ಬಿಜೆಪಿ ನಾಯಕರ ಅನಿಸಿಕೆ.