ವಿಧಾನಸಭೆಗೆ ʻPayCMʼ, ಲೋಕಸಭೆಗೆ ʻಖಾಲಿ ಚೊಂಬುʼ ! ಸದ್ದು ಮಾಡುತ್ತಿದೆ ಕಾಂಗ್ರೆಸ್ ಪ್ರಚಾರ ಅಸ್ತ್ರ
ಕರ್ನಾಟಕದ ಮೊದಲ ಹಂತದ ಲೋಕಸಭಾ ಚುನಾವಣೆಗೆ ಇನ್ನು ಕೇವಲ ಐದು ದಿನಗಳಿರುವಾಗ, ಕರ್ನಾಟಕದ ಕಾಂಗ್ರೆಸ್ ಪಕ್ಷ, ಕೇಂದ್ರದ ಬಿಜೆಪಿ ವಿರುದ್ಧ ʻಚೊಂಬುʼ ಚಿತ್ರದ ಜಾಹೀರಾತು ನೀಡುವ ಮೂಲಕ, ಬಿಜೆಪಿಯನ್ನು ಇಕ್ಕಟ್ಟಿಗೆ ಸಿಕ್ಕಿಸಿದಂತೆ ಕಾಣುತ್ತಿದೆ.;
ಕರ್ನಾಟಕದ ಮೊದಲ ಹಂತದ ಲೋಕಸಭಾ ಚುನಾವಣೆಗೆ ಇನ್ನು ಕೇವಲ ಐದು ದಿನಗಳಿರುವಾಗ, ಕರ್ನಾಟಕದ ಕಾಂಗ್ರೆಸ್ ಪಕ್ಷ, ಕೇಂದ್ರದ ಬಿಜೆಪಿ ವಿರುದ್ಧ ʻಚೊಂಬುʼ ಚಿತ್ರದ ಜಾಹೀರಾತು ನೀಡುವ ಮೂಲಕ, ಬಿಜೆಪಿಯನ್ನು ಇಕ್ಕಟ್ಟಿಗೆ ಸಿಕ್ಕಿಸಿದಂತೆ ಕಾಣುತ್ತಿದೆ.
ಈ ಜಾಹೀರಾತಿನಿಂದ ರಾಜ್ಯ ಬಿಜೆಪಿ ನಾಯಕರು ಮುಜುಗರಕ್ಕೀಡಾಗಿ, ಮುನಿದುಕೊಂಡಿದ್ದಾರೆ. ತಕ್ಷಣಕ್ಕೆ ಬೇರೆ ದಾರಿ ಕಾಣದೆ ಚುನಾವಣಾ ಆಯೋಗಕ್ಕೆ ಮೊರೆ ಹೋಗಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿ ಇತ್ತು. ಆ ಸಂದರ್ಭದಲ್ಲಿಯೂ ಕಾಂಗ್ರೆಸ್ ಇದೇ ರೀತಿಯಲ್ಲಿ ʻPayCḾ ಎಂಬ ಪೋಸ್ಟರ್ ಅನ್ನು ಚುನಾವಣಾ ಅಸ್ತ್ರವಾಗಿಸಿಕೊಂಡಿತ್ತು. ಅದು ಕಾಂಗ್ರೆಸ್ ಪಕ್ಷಕ್ಕೆ ವರವಾಗಿದ್ದು ಈಗ ಇತಿಹಾಸ. ಆಗ ಬಿಜೆಪಿ ಸರ್ಕಾರದ ವಿರುದ್ಧ ವ್ಯಾಪಕ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು. ಈ ವಿಚಾರವಾಗಿ ಬೆಳಗಾವಿ ಮೂಲದ ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದು ವಿವಾದಕ್ಕೊಳಗಾಗಿ ಮಂತ್ರಿ ಈಶ್ವರಪ್ಪ ರಾಜೀನಾಮೆ ಕೂಡ ಕೊಡಬೇಕಾಯಿತು. ಕರ್ನಾಟಕ ಗುತ್ತಿಗೆದಾರರ ಸಂಘ ಕೂಡ ಸರ್ಕಾರದ ವಿರುದ್ಧ ಹಣ ಕೇಳಿದ ಆರೋಪ ಮಾಡಿತ್ತು. ಲಿಂಗಾಯತ ಸಮುದಾಯದ ಪ್ರಾತಿನಿಧಿಕ ಮಠಗಳ ಗುರುಗಳಾಗ ದಿಂಗಾಲೇಶ್ವರ ಸ್ವಾಮೀಜಿ ಕೂಡ ಮಠಕ್ಕೆ ಬರಬೇಕಿದ್ದ ಅನುದಾನದಲ್ಲೂ ಸರ್ಕಾರ ಶೇಕಡಾವಾರು ವ್ಯವಹಾರ ಮಾಡಿದೆ ಎಂದು ಆರೋಪ ಮಾಡಿದ್ದರು.
ಇದೀಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಎಲ್ಲ ಅಭ್ಯರ್ಥಿಗಳು ಮೋದಿ ನೋಡಿ ಓಟು ಕೊಡಿ ಎನ್ನುತ್ತಿರುವ ಕಾರಣಕ್ಕೆ ಮೋದಿ ಮತ್ತು ಕೇಂದ್ರ ಬಿಜೆಪಿಯನ್ನು ಗುರಿಯಾಗಿಸಿಕೊಂಡಿದೆ. ಇದರ ಭಾಗವಾಗಿ ವಿನೂತನವಾಗಿ ʻಖಾಲಿ ಚೊಂಬುʼ ಚಿತ್ರದ ಜಾಹೀರಾತು ನೀಡುವ ಮೂಲಕ ಕೇಂದ್ರದ ಕೊಡುಗೆ, ಸಾಧನೆಗಳು ಏನಿಲ್ಲ, ಎಲ್ಲವೂ ಖಾಲಿ ಖಾಲಿ ಎಂದು ರಾಜ್ಯ ಕಾಂಗ್ರೆಸ್ ಘಟಕ ಹೇಳಲು ಹೊರಟಿದೆ.
ʻʻಲೋಕಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳನ್ನು ಗೆಲ್ಲಿಸಿದರೆ ಜನತೆಗೆ ಚೊಂಬು ಸಿಗುತ್ತದೆʼʼ ಎಂದು ಜಾಹೀರಾತು ಪ್ರಚಾರ ಆರಂಭಿಸಿದೆ.
ʻಅಚ್ಚೇ ದಿನಗಳಲ್ಲ ದೌರ್ಭಾಗ್ಯದ ದಿನಗಳುʼ ಶೀರ್ಷಿಕೆಯಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಕೇಂದ್ರ ಸರ್ಕಾರದ ಆಡಳಿತದಲ್ಲಿ ಬೆಲೆ ಏರಿಕೆಯಾಗಿದ್ದ ಅಂಕಿ ಸಂಖ್ಯೆ ತಿಳಿಸಿದೆ. ಇಂಧನ, ಗ್ಯಾಸ್ ಸಿಲೆಂಡರ್, ಬೇಳೆ, ಟೀ ಪುಡಿ ಸೇರಿದಂತೆ ನಿತ್ಯ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿವೆ ಎಂದು ಜಾಹೀರಾತಿನಲ್ಲಿ ತಿಳಿಸಿದೆ.
ಚೊಂಬು ಜಾಹೀರಾತಿಗೆ ಕಾಂಗ್ರೆಸ್ ವಿವರಣೆ
ʻʻಜನರು ಈ ಬೆಲೆ ಏರಿಕೆ ವಿರುದ್ಧ ಈ ಚುನಾವಣೆಯಲ್ಲಿ ತಮ್ಮ ತೀರ್ಮಾನ ʼಕೈʼ ಗೊಳ್ಳಬೇಕು. ಬಿಜೆಪಿ ಸೋಲಿಸಿ, ಬೆಲೆಯೇರಿಕೆಗೆ ಬೇಲಿ ಹಾಕಬೇಕು. ಕಾಂಗ್ರೆಸ್‌ಗೆ ಮತ ನೀಡಬೇಕು ಎಂದು ಪಕ್ಷವು ಮನವಿ ಮಾಡಿದೆ. ಈ ಮೂಲಕ ಕೇಂದ್ರ ಸರ್ಕಾರ ಜನರಿಗೆ ಆರ್ಥಿಕ ಹೊರೆ ಹೊರಿಸಿದೆʼʼ ಎಂದು ಕಾಂಗ್ರೆಸ್ ಜಾಹೀರಾತನ್ನು ಸಮರ್ಥಿಸಿಕೊಂಡಿದೆ.
ಬೆಲೆ ಏರಿಕೆ ಅಸ್ತ್ರ
ಒಂದು ಲೀಟರ್ ಪೆಟ್ರೋಲ್ ದರ 100 ರೂ., ಡೀಸೆಲ್ 85 ರೂ., ಗ್ಯಾಸ್ ಸಿಲೆಂಡರ್ ಬೆಲೆ ರೂ.1100ಕ್ಕೆ ಏರಿಕೆ ಆಗಿದೆ. ಅಡುಗೆ ಎಣ್ಣೆ ಲೀಟರ್ 180 ರೂಪಾಯಿ ಇದೆ. ತೊಗರಿ ಬೇಳೆ ಕೆ. ಜಿಗೆ 200 ಇದೆ. ಟೀ ಪುಡಿ ಕೆ. ಜಿಗೆ 300 ರೂಪಾಯಿ ಆಗಿದೆ ಎಂದು ಕಾಂಗ್ರೆಸ್ ಲೆಕ್ಕ ಹೇಳುತ್ತಿದೆ.
ʻʻಹೀಗೆ ಬಡವರು ಸೇರಿದಂತೆ ಎಲ್ಲ ವರ್ಗದ ಜನರು ಬಳಸುವ; ಇಂಧನ, ಆಹಾರ ಪದಾರ್ಥಗಳ ಬೆಲೆ ಏರಿಕೆ ಆಗಿದೆ. ಇದು ಮಧ್ಯಮ ವರ್ಗದವರನ್ನು ಆರ್ಥಿಕ ಸಂಕಷ್ಟಕ್ಕೆ ನೂಕಿದೆ. ಬಡವರು ದುಡಿದ ದುಡ್ಡು ಬದುಕು ನಡೆಸಲು ಸಾಕಾಗುತ್ತಿಲ್ಲ. ಬೆಲೆ ಏರಿಕೆಯ ಬಿಸಿ ತಟ್ಟಿದೆʼʼ ಎಂದು ಹೇಳುವ ಮೂಲಕ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬೆಲೆ ಏರಿಕೆಯನ್ನೇ ಅಸ್ತ್ರವಾಗಿಸಿಕೊಂಡಿದೆ. ಈ ಮೂಲಕ ಮತದಾರರನ್ನು ತನ್ನತ್ತ ಸೆಳೆಯುತ್ತಿದೆ.
ʻʻಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಜನಸಾಮಾನ್ಯರ ಅಕೌಂಟ್‌ಗೆ 15 ಲಕ್ಷ ರೂ. ಹಾಕುತ್ತೇವೆ ಎಂದು ಹೇಳಿದ್ದರು. ಹಾಕಿದರೇ? ವರ್ಷಕ್ಕೆ 2 ಲಕ್ಷ ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ವಾಗ್ದಾನ ಮಾಡಿದ್ದರು. ಆದರೆ ಮಾಡಲಿಲ್ಲ ಅಲ್ಲವೇ? ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದಿದ್ದರು. ದ್ವಿಗುಣವಾಯಿತೇ? ಜನರಿಗೆ ಅಚ್ಛೇ ದಿನ್ ಆಸೆ ತೋರಿಸಿದ್ದರು. ಅಚ್ಛೇ ದಿನ್ ಬಂತೇ. ಹೀಗೆ ಕಾಂಗ್ರೆಸ್ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದೆ.
ಇಂದು ರಾಜ್ಯಕ್ಕೆ ಮತ್ತೆ ಮೋದಿ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು, ನರೇಂದ್ರ ಮೋದಿ ಅವರಿಗೆ ಖಾಲಿ ಚೊಂಬಿನ ಸ್ವಾಗತ ಕೋರಿದ್ದಾರೆ.
ಸಾಮಾಜಿಕ ಜಾಲತಾಣದಲ್ಲೂ ಖಾಲಿ ಚೊಂಬು ಸದ್ದು
ಬಿಜೆಪಿ ಬಳಸಿಕೊಂಡು ಲಾಭ ಮಾಡಿಕೊಂಡ ಸಾಮಾಜಿಕ ಜಾಲತಾಣವನ್ನು ಕಾಂಗ್ರೆಸ್ ವಿಧಾನ ಸಭಾ ಚುನಾವಣೆಯಲ್ಲಿ ಯಶಸ್ವಿಯಾಗಿ ಬಳಸಿಕೊಂಡಿತ್ತು. ಈಗ ಮತ್ತೆ ಅದೇ ಸೂತ್ರವನ್ನು ಅನುಸರಿಸಿ, ಬಿಜೆಪಿಗೆ ಭೀತಿ ಹುಟ್ಟಿಸಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ಗಳನ್ನು ಹಾಕುವ ಮೂಲಕ ಸದ್ದು ಮಾಡುತ್ತಿದೆ. ಕಾಂಗ್ರೆಸ್ ಹಗಲು-ರಾತ್ರಿ ಬಿಜೆಪಿಯ ನಿದ್ದೆ ಗೆಡಿಸಿದೆ. “ನಮ್ಮ ತೆರಿಗೆ ನಮ್ಮ ಹಕ್ಕುʼ ಅಭಿಯಾನದ ಮೂಲಕ, ಬಿಜೆಪಿಯನ್ನು ನಿರುತ್ತರ ಪಕ್ಷವನ್ನಾಗಿಸಿದೆ.
ʻʻಬರ ಪರಿಹಾರ ನೀಡಲು ರಾಜ್ಯ ಸರ್ಕಾರ ಹಲವಾರು ಬಾರಿ ಕೇಂದ್ರ ಸರ್ಕಾರವನ್ನು ಆಗ್ರಹಿಸಿತ್ತು, ಆದರೆ ಕರ್ನಾಟಕ ವಿರೋಧಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ನೀಡಿದ್ದು ಖಾಲಿ ಚೊಂಬು ಮಾತ್ರ. ಕನ್ನಡಿಗರಿಗೆ ಖಾಲಿ ಚೊಂಬು ನೀಡಿದ ಬಿಜೆಪಿ ಸರ್ಕಾರಕ್ಕೆ ಮರಳಿ ಅದೇ ಖಾಲಿ ಚೊಂಬನ್ನೇ ನೀಡುವುದು ನ್ಯಾಯಯುತ ಪರಿಹಾರ! ʼʼ ಎಂದು ಕಾಂಗ್ರೆಸ್ ತಿರುಮಂತ್ರ ಜಪಿಸುತ್ತಿದೆ.