Rain in Bengaluru | ಮಳೆಗಾಲಕ್ಕೆ ಸಿದ್ಧವಾಗಿದೆಯೇ ಬೆಂಗಳೂರು, ಬಿಬಿಎಂಪಿ ತೆಗೆದುಕೊಂಡ ಕ್ರಮಗಳೇನು ?
ಬೆಂಗಳೂರಿನಲ್ಲಿ ಕಳೆದ ಒಂದು ವಾರದಿಂದ ಪೂರ್ವ ಮುಂಗಾರು ಮಳೆಯಾಗುತ್ತಿದ್ದು, ಮಳೆಯಿಂದ ಸಮಸ್ಯೆ ಆಗಿರುವುದು ವರದಿಯಾಗಿದೆ. ಮುಂಗಾರು ಮಳೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ಬಾರಿಯ ಮಳೆಗಾಲಕ್ಕೆ ಬಿಬಿಎಂಪಿ ಯಾವ ರೀತಿ ಸಿದ್ಧತೆ ಮಾಡಿಕೊಂಡಿದೆ ಎನ್ನುವ ವಿವರ ಇಲ್ಲಿದೆ...;
ಬೆಂಗಳೂರಿನಲ್ಲಿ ಒಂದು ವಾರದಿಂದ ಪೂರ್ವ ಮುಂಗಾರು ಮಳೆಯಾಗುತ್ತಿದ್ದು, ಮಳೆಯಿಂದ ನಗರದ ಹಲವು ಭಾಗದಲ್ಲಿ ಮರಗಳು ಧರೆಗುರುಳಿವೆ. ಮೈಸೂರು ರಸ್ತೆಯ ಗುಡ್ಡದಹಳ್ಳಿ ಹಾಗೂ ಹೊಸಕೆರೆಹಳ್ಳಿ ಸೇರಿದಂತೆ ವಿವಿಧ ಭಾಗದಲ್ಲಿ ಮನೆಗಳಿಗೆ ನೀರು ನುಗ್ಗಿ ಸಮಸ್ಯೆ ಆಗಿರುವುದು ವರದಿಯಾಗಿದೆ.
ಕಳೆದ ವರ್ಷ ಬೆಂಗಳೂರಿನಲ್ಲಿ ಸಮರ್ಪಕ ಮಳೆಯಾಗದೆ ಕುಡಿಯುವ ನೀರಿಗೂ ತೀವ್ರ ಸಮಸ್ಯೆ ಎದುರಾಗಿತ್ತು. ಇದೀಗ ಮುಂಗಾರು ಮಳೆ ಪ್ರಾರಂಭವಾಗುವುದಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ಬಾರಿಯೂ ಬೆಂಗಳೂರಿನಲ್ಲಿ ಮಳೆಯಿಂದ ಸಮಸ್ಯೆ ಎದುರಾಗುವ ಸಾಧ್ಯತೆ ದಟ್ಟವಾಗಿದೆ.
ಕಳೆದ ಐದಾರು ತಿಂಗಳಿನಿಂದ ನಗರದಲ್ಲಿ ನೀರಿನ ಸಮಸ್ಯೆ ಇದ್ದು, ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಜಲಮಂಡಳಿ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಬೆಂಗಳೂರಿನ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ನಿರತವಾಗಿದ್ದವು. ಈಗ ಬೆಂಗಳೂರಿನಲ್ಲಿ ಮಳೆಯಾಗುತ್ತಿದ್ದು, ಮಳೆ ಅನಾಹುತಗಳು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕಿದೆ. ಲೋಕಸಭೆ ಚುನಾವಣೆಯಿಂದಲೂ ಮುಂಗಾರು ಪೂರ್ವ ಸಿದ್ಧತೆಗೆ ಅಲ್ಪ ಪ್ರಮಾಣದ ಹಿನ್ನಡೆಯಾಗಿದೆ ಎಂದು ಹೆಸರು ಹೇಳಲು ಇಚ್ಛಿಸದ ಬಿಬಿಎಂಪಿಯ ಅಧಿಕಾರಿಯೊಬ್ಬರು ತಿಳಿಸಿದರು.
ಬೆಂಗಳೂರಿನಲ್ಲಿ 2022ರಲ್ಲಿ ಸುರಿದ ಮಳೆಯಿಂದ ಕೃಷ್ಣರಾಜಪುರ (ಕೆ.ಆರ್. ಪುರ) ಮಹದೇವಪುರ ಹಾಗೂ ವೈಟ್‌ಫೀಲ್ಡ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಸಮಸ್ಯೆ ಆಗಿತ್ತು. ಮಹದೇವಪುರದ ನಲ್ಲೂರಹಳ್ಳಿಯಲ್ಲಿರುವ ಡಿಎನ್ಎ ಈಡನ್ ವ್ಯೂ ಎನ್ನುವ ಅಪಾರ್ಟ್‌ಮೆಂಟ್‌ಗೆ ನೀರು ನುಗ್ಗಿತ್ತು. ದೊಡ್ಡನೆಕ್ಕುಂದಿ ಬಳಿಯ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿತ್ತು. ಅಲ್ಲದೇ ಸರ್ಜಾಪುರ, ಯಮಲೂರು ಲೇಔಟ್, ರೇನ್ಬೋ ಡ್ರೈವ್ ಲೇಔಟ್, ಮಾರತ್‌ಹಳ್ಳಿ ವರ್ತುಲ ರಸ್ತೆ(ರಿಂಗ್ರಸ್ತೆ) ಇಕೋಸ್ಪೇಸ್, ಸರ್ಜಾಪುರ ಹಾಗೂ ಚನ್ನಸಂದ್ರ ಹಾಗೂ ಬೆಳ್ಳಂದೂರಿನ ಲೇಕ್ ವೀವ್ ಅಪಾರ್ಟ್‌ಮೆಂಟ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿತ್ತು. ಹಲವು ಅಪಾರ್ಟ್‌ಮೆಂಟ್‌ಗಳು ಜಲಾವೃತವಾಗಿತ್ತು.
ರೈನ್ಬೋ ಡ್ರೈವ್ ಲೇಔಟ್ ಸೇರಿದಂತೆ ವಿವಿಧ ಪ್ರದೇಶದಲ್ಲಿ ಮಳೆ ನೀರು ನಿಂತಿದ್ದರಿಂದ ಟ್ರ್ಯಾಕ್ಟರ್, ಬೋಟ್‌ಗಳ ಮೂಲಕ ಜನರನ್ನು ಸ್ಥಳಾಂತರಿಸಲಾಗಿತ್ತು. ಕಳೆದ ವರ್ಷ ಸಮರ್ಪಕ ಮಳೆಯಾಗಿರಲಿಲ್ಲ. ಈಗ ಮುಂಗಾರು ಪೂರ್ವ ಮಳೆ ಪ್ರಾರಂಭವಾಗಿದ್ದು, ಉತ್ತಮ ಮುಂಗಾರು ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಮಳೆ: ಬಿಬಿಎಂಪಿ ತೆಗೆದುಕೊಂಡಿರುವ ಕ್ರಮಗಳೇನು ?
ಬೆಂಗಳೂರಿನಲ್ಲಿ ಮಳೆಯಿಂದ ಎದುರಾಗುವ ಸಮಸ್ಯೆಗಳನ್ನು ತಪ್ಪಿಸಲು ಬಿಬಿಎಂಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬೆಂಗಳೂರಿನ 8 ವಲಯ ಕಚೇರಿ ಹಾಗೂ ಮುಖ್ಯ ಕಚೇರಿಯಲ್ಲಿ ಈಗಾಗಲೇ ನಿಯಂತ್ರಣ ಕೊಠಡಿ (ಕಂಟ್ರೋಲ್ ರೂಮ್) ಇದ್ದು, ಇದರೊಂದಿಗೆ ಮಳೆಗಾಲದಲ್ಲಿ ತಾತ್ಕಾಲಿಕವಾಗಿ 63 ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ನಿರ್ದೇಶನ ನೀಡಿದ್ದಾರೆ.
ನಗರದ 124 ಜಾಗದಲ್ಲಿ ಸೆನ್ಸಾರ್ ಅಳವಡಿಕೆ
ರಾಜಕಾಲುವೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗಿ ಪ್ರವಾಹ ಪರಿಸ್ಥಿತಿ ಎದುರಾದರೆ, ಅದನ್ನು ತಪ್ಪಿಸುವ ಉದ್ದೇಶದಿಂದ ಬೆಂಗಳೂರಿನ 124 ರಾಜಕಾಲುವೆಗಳ ಮೇಲ್ಭಾಗದಲ್ಲಿ ನೀರಿನ ಮಟ್ಟ ಅಳೆಯುವ ಸಂವೇದಕ(Water Level Sensor)ಗಳನ್ನು ಅಳವಡಿಸಲಾಗಿದೆ.
ಸೆನ್ಸಾರ್ ಅಳವಡಿಸಿರುವ ರಾಜಕಾಲುವೆಗಳಲ್ಲಿ ಹರಿಯುವ ನೀರಿನ ಮಟ್ಟವನ್ನು ಬಣ್ಣದ ಆಧಾರದಲ್ಲಿ ತಿಳಿಯಬಹುದಾಗಿದೆ. ಅದರಂತೆ ಹಸಿರು, ನೀಲಿ, ಕೆಂಪು ಹಾಗೂ ಕಪ್ಪು ಬಣ್ಣದಲ್ಲಿ ಗುರುತಿಸಲಾಗುತ್ತದೆ. ಹಸಿರು ಹಾಗೂ ನೀಲಿ ಬಣ್ಣವಿದ್ದರೆ ಯಾವುದೇ ಅಪಾಯ ಇಲ್ಲದೆ, ನೀರು ಸರಾಗವಾಗಿ ಹರಿದು ಹೋಗಲಿದೆ. ಕೆಂಪು ಬಣ್ಣವಿದ್ದರೆ ಅಪಾಯ ಹಾಗೂ ಕಪ್ಪು ಬಣ್ಣಕ್ಕೆ ತಿರುಗಿದರೆ ಪ್ರವಾಹ ಉಂಟಾಗಲಿದೆ ಎಂಬ ಮಾಹಿತಿ ಕೇಂದ್ರ ಕಚೇರಿಗೆ ರವಾನೆಯಾಗಲಿದ್ದು, ಪ್ರವಾಹ ಉಂಟಾಗುವ ಸ್ಥಳದ ಸುತ್ತಮುತ್ತಲಿನ ನಿವಾಸಿಗಳನ್ನು ಬೇರೆಡೆ ಸ್ಥಳಾಂತರಿಸಲಾಗುತ್ತದೆ.
ಬೆಂಗಳೂರಿನಲ್ಲಿ 74 ಪ್ರವಾಹ ಪೀಡಿತ ಪ್ರದೇಶಗಳು
ಬೆಂಗಳೂರಿನಲ್ಲಿ ಈ ಹಿಂದೆ 198 ಪ್ರವಾಹ ಪೀಡಿತ ಪ್ರದೇಶಗಳು ಇದ್ದವು. ಅವುಗಳಲ್ಲಿ 124 ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಬಿಬಿಎಂಪಿ ಈಗಾಗಲೇ ಶಾಶ್ವತ ಪರಿಹಾರ ಕಂಡುಕೊಂಡಿದ್ದು, ಉಳಿದ 74 ಪ್ರದೇಶಗಳಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಂಡಿದೆ.
ವಿಪತ್ತು ನಿರ್ವಹಣೆಗೆ 10 ಕೋಟಿ ರೂಪಾಯಿ ಮೀಸಲು
ಬ್ರ್ಯಾಂಡ್ ಬೆಂಗಳೂರು ಪರಿಕಲ್ಪನೆಯಲ್ಲಿ ವಿಪತ್ತು ನಿರ್ವಹಣೆಗಾಗಿ 2023 – 24ನೇ ಸಾಲಿನ ಬಜೆಟ್‌ನಲ್ಲಿ 10 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಮೀಸಲಿಟ್ಟಿರುವ ಅನುದಾನದಲ್ಲಿ ಪ್ರವಾಹ ಪೀಡಿತ ಪ್ರದೇಶ, ಪಂಪ್ ವ್ಯವಸ್ಥೆ ಸೇರಿದಂತೆ ತುರ್ತು ಸಮಸ್ಯೆಗಳ ಪರಿಹಾರಕ್ಕೆ ಮೀಸಲಿರಿಸಲಾಗಿದೆ. ಬೆಂಗಳೂರಿನ 225 ವಾರ್ಡ್‌ಗಳಲ್ಲಿ ರಸ್ತೆ ಬದಿಯ ಚರಂಡಿಗಳಲ್ಲಿ (ಸೈಡ್‌ಡ್ರೈನ್) ಹೂಳೆತ್ತುವುದಕ್ಕೆ ಪ್ರತಿ ವಾರ್ಡ್‌ಗೆ ತಲಾ 30 ಲಕ್ಷ ರೂಪಾಯಿ ಮೀಸಲಿಡಲಾಗಿದೆ.
ಧರೆಗುರುಳುತ್ತಿವೆ ಮರಗಳು
ಬೆಂಗಳೂರಿನಲ್ಲಿ ಕಳೆದ ಒಂದು ವಾರದಲ್ಲಿ ಸುರಿದ ಮಳೆಯಿಂದ 325ಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, 320 ಮರಗಳನ್ನು ತೆರವುಗೊಳಿಸಲಾಗಿದೆ. 698 ರೆಂಬೆ ಕೊಂಬೆಗಳು ಬಿದ್ದಿದ್ದು, 650 ತೆರವುಗೊಳಿಸಲಾಗಿದೆ. ಮಳೆಯಿಂದ ಧರೆಗುರುಳುವ ಮರ ಹಾಗೂ ರೆಂಬೆ - ಕೊಂಬೆಗಳನ್ನು ತೆರವುಗೊಳಿಸುವುದಕ್ಕೆ 39 ತಂಡಗಳನ್ನು ನಿಯೋಜಿಸಲಾಗಿದೆ ಎಂದು ಬಿಬಿಎಂಪಿಯ ಅರಣ್ಯ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಮೇಘ ಸಂದೇಶ, ವರಣಮಿತ್ರ
ಮಳೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಕೇಂದ್ರ (KSNDMC) ಮತ್ತು ಭಾರತೀಯ ವಿಜ್ಞಾನ ಸಂಸ್ಥೆ(IISc) ವತಿಯಿಂದ "ಬೆಂಗಳೂರು ಮೇಘ ಸಂದೇಶ" ಮೊಬೈಲ್ ಆ್ಯಪ್ ಹಾಗೂ ವರುಣಮಿತ್ರ ವೆಬ್‌ಸೈಟ್ ಸಹ ಪರಿಚಯಿಸಲಾಗಿದೆ.
ಮಳೆ ನೀರು ಸಂಗ್ರಹಕ್ಕೆ ಸಿದ್ಧತೆ
ಬೆಂಗಳೂರಿನಲ್ಲಿ ಈಚೆಗೆ ಎದುರಾದ ನೀರಿನ ಸಮಸ್ಯೆಯಿಂದ ಎಚ್ಚೆತ್ತುಕೊಂಡಿರುವ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳು ಈ ಬಾರಿ ಮಳೆ ನೀರು ಸಂಗ್ರಹ ಮಾಡುವುದಕ್ಕೆ ಸಿದ್ಧತೆ ಮಾಡಿಕೊಂಡಿವೆ. ʻಹಲವು ಅಪಾರ್ಟ್‌ಮೆಂಟ್‌ಗಳಲ್ಲಿ ಮಳೆನೀರು ಕೊಯ್ಲು ಅಳವಡಿಸಿಕೊಳ್ಳಲಾಗಿದ್ದು, ಮಳೆ ನೀರು ವ್ಯರ್ಥವಾಗಿ ಹರಿದು ಹೋಗದಂತೆ ತಡೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆʼ ಎಂದು ಬೆಂಗಳೂರು ಅಪಾರ್ಟ್‌ಮೆಂಟ್‌ಗಳ ಒಕ್ಕೂಟದ ಅಧ್ಯಕ್ಷ ವಿಕ್ರಮ್ ರೈ ತಿಳಿಸಿದ್ದಾರೆ.
ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಅವರು, ʻಕಳೆದ ವರ್ಷ ಮಳೆಯಾಗದೆ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಎದುರಾಗಿತ್ತು. ಈಗ ಮಳೆಯಾಗುತ್ತಿದ್ದು, ಮಳೆ ನೀರು ಸಂಗ್ರಹಕ್ಕೆ ಆದ್ಯತೆ ನೀಡುತ್ತಿದ್ದೇವೆ. ಕಳೆದ ಬಾರಿ ಭಾರೀ ಮಳೆ ಹಾಗೂ ರಾಜಕಾಲುವೆ ಸಮಸ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ಸಮಸ್ಯೆ ಎದುರಾಗಿತ್ತು. ಹಲವು ಭಾಗದಲ್ಲಿ ಪರಿಸ್ಥಿತಿ ಸುಧಾರಿಸಿದೆ. ಆದರೆ, ಇನ್ನೂ ಕೆಲವು ಕಡೆ ಪರಿಸ್ಥಿತಿ ಸುಧಾರಿಸಬೇಕಿದೆʼ ಎಂದು ಹೇಳಿದರು.
ಮಳೆ ಅನಾಹುತ ತಪ್ಪಿಸಲು ಕ್ರಮ : ತುಷಾರ್ ಗಿರಿನಾಥ್
ʻಬೆಂಗಳೂರಿನಲ್ಲಿ ಮಳೆ ಅನಾಹುತ ತಡೆಯುವುದಕ್ಕೆ ಬಿಬಿಎಂಪಿಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲ ವಲಯಗಳಲ್ಲೂ ಮುಂಜಾಗ್ರತೆ ವಹಿಸಲಾಗಿದ್ದು, 75 ಲಕ್ಷ ಪ್ರತಿ ವಾರ್ಡ್‌ಗೂ ಮೀಸಲಿರಿಸಲಾಗಿತ್ತು. ಈ ಬಾರಿ ಬ್ರ್ಯಾಂಡ್ ಬೆಂಗಳೂರು ಯೋಜನೆ ಅಡಿಯೂ ಅನುದಾನ ಮೀಸಲಿರಿಸಲಾಗಿದೆ. ಕಾರ್ಯಕಾರಿ ಸಮಿತಿಯನ್ನೂ ರಚಿಸಲಾಗಿದೆʼ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದರು.
ʻರಾಜಕಾಲುವೆ ಒತ್ತುವರಿ ತೆರವು ಸಹ ನಡೆಯುತ್ತಿದೆ. ಮೇ ಹಾಗೂ ಏಪ್ರಿಲ್‌ನಲ್ಲಿ ವಿವಿಧ ಇಲಾಖೆಯ ಕಾಮಗಾರಿಗಳು ನಡೆಯುತ್ತಿದ್ದು,ಕಾಮಗಾರಿ ನಡೆಯುತ್ತಿರುವ ಪ್ರದೇಶದಲ್ಲೂ ಮಳೆಯಿಂದ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆʼ ಎಂದರು.