ಇಂದಿರಾ ಕ್ಯಾಂಟೀನ್ | ಹೊಸ ಮೆನು ಇನ್ನೂ ಮರೀಚಿಕೆ; ಬದಲಾಗದ ವ್ಯವಸ್ಥೆ!
ಬಡವರ ಹಸಿವು ತಣಿಸುವ ಉದ್ದೇಶದಿಂದ ಪ್ರಾರಂಭವಾಗಿದ್ದ ಇಂದಿರಾ ಕ್ಯಾಂಟೀನ್ ಬೆಂಗಳೂರಿನಲ್ಲಿ ಬಹುತೇಕ ಕಳೆಗುಂದಿದೆ ಎಂದು ಇಂದಿರಾ ಕ್ಯಾಂಟೀನ್ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ.;
ಬಡವರ ಹಸಿವು ತಣಿಸುವ ಉದ್ದೇಶದಿಂದ ಪ್ರಾರಂಭವಾಗಿದ್ದ ಇಂದಿರಾ ಕ್ಯಾಂಟೀನ್ ಬೆಂಗಳೂರಿನಲ್ಲಿ ಬಹುತೇಕ ಕಳೆಗುಂದಿದೆ ಎಂದು ಇಂದಿರಾ ಕ್ಯಾಂಟೀನ್ ಆಹಾರ ಸೇವಿಸುತ್ತಿರುವ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ. 10 ರೂಪಾಯಿಗೆ ಈ ಪ್ರಮಾಣದ ಆಹಾರ ಎಲ್ಲೂ ಸಿಗುವುದಿಲ್ಲ. ವ್ಯವಸ್ಥೆ ಉತ್ತಮಪಡಿಸಿದರೆ, ಬಡವರಿಗೆ ಅನುಕೂಲವಾಗಲಿದೆ ಎಂದೂ ಕೆಲವರು ಹೇಳಿದ್ದಾರೆ.
ಇಂದಿರಾ ಕ್ಯಾಂಟೀನ್ ಈಗ ಯಾವ ರೀತಿ ಕಾರ್ಯುನಿರ್ವಹಿಸುತ್ತಿದೆ ಎನ್ನುವ ವಿವರ ಇಲ್ಲಿದೆ..
ರಾಜ್ಯದಲ್ಲಿ ಯಾರೂ ಹಸಿವಿನಿಂದ ಇರಬಾರದು ಎನ್ನುವ ಉದ್ದೇಶದಿಂದ 2017ರಲ್ಲಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಇಂದಿರಾ ಕ್ಯಾಂಟೀನ್‌ಗಳನ್ನು ಆರಂಭಿಸಿತ್ತು. ಬಡವರು, ಕೂಲಿ ಕಾರ್ಮಿಕರು ಮತ್ತು ಮಧ್ಯಮ ವರ್ಗದ ಜನರ ಹಸಿವನ್ನು ತಣಿಸಲು ಹಾಗೂ ಕಡಿಮೆ ಮೊತ್ತದಲ್ಲಿ ಗುಣಮಟ್ಟದ ಆಹಾರ ಪೂರೈಸುವ ಉದ್ದೇಶದಿಂದ ಕರ್ನಾಟಕದಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ಪ್ರಾರಂಭಿಸಲಾಗಿತ್ತು.
2013ರಲ್ಲಿ ತಮಿಳುನಾಡಿನಲ್ಲಿ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ನಾಯಕಿ ಹಾಗೂ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಜೆ ಜಯಲಲಿತಾ ಅವರು ʻಅಮ್ಮಾ ಕ್ಯಾಂಟೀನ್ʼ ಯೋಜನೆಯನ್ನು ಪ್ರಾರಂಭಿಸಿದ್ದರು. ಅದರಿಂದ ಪ್ರೇರಣೆ ಪಡೆದು ಕರ್ನಾಟಕದಲ್ಲಿ ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲಾಗಿತ್ತು.
ಪ್ರಾರಂಭದ ದಿನಗಳಲ್ಲಿ ಹಾಗೂ ಕೊರೊನಾ ಸೋಂಕಿನ ಸಂದರ್ಭದಲ್ಲಿ ಇಂದಿರಾ ಕ್ಯಾಂಟೀನ್‌ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ, ದಿನ ಕಳೆದಂತೆ ಇಂದಿರಾ ಕ್ಯಾಂಟೀನ್‌ನಲ್ಲಿ ಸಿಗುವ ಆಹಾರದ ಗುಣಮಟ್ಟ ಹಾಗೂ ಪ್ರಮಾಣದ ಬಗ್ಗೆ ಸಾರ್ವಜನಿಕರಿಂದ ಆಕ್ಷೇಪಣೆಗಳು ವ್ಯಕ್ತವಾಗಿದ್ದವು.
2017-18ನೇ ಸಾಲಿನ ವರೆಗೆ ಬಹುತೇಕ ಉತ್ತಮವಾಗಿ ನಡೆಯುತ್ತಿದ್ದ ಇಂದಿರಾ ಕ್ಯಾಂಟೀನ್‌ಗಳು ಕ್ರಮೇಣ ಜನರಿಂದ ದೂರವಾಗಲು ಪ್ರಾರಂಭವಾದವು. ಇದಕ್ಕೆ ಅಂದಿನ ಬಿಜೆಪಿ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸದೆ ಇರುವುದು ಸಹ ಪ್ರಮುಖ ಕಾರಣವಾಗಿತ್ತು ಎನ್ನುವ ಆರೋಪಗಳೂ ಕೇಳಿಬಂದಿದ್ದವು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇದ್ದ ಅವಧಿಯಲ್ಲಿ ಇಂದಿರಾ ಕ್ಯಾಂಟೀನ್‌ಗೆ ಸಮರ್ಪಕವಾಗಿ ಅನುದಾನ ಬಿಡುಗಡೆ ಮಾಡಿರಲಿಲ್ಲ. ಇಂದಿರಾ ಕ್ಯಾಂಟೀನ್‌ನ ಹೆಸರನ್ನು ಅನ್ನಪೂರ್ಣ ಕ್ಯಾಂಟೀನ್ ಅಥವಾ ಅಟಲ್ ಕ್ಯಾಂಟೀನ್ ಎಂದು ಬದಲಾಯಿಸುವ ಬಗ್ಗೆಯೂ ಚರ್ಚೆಗಳು ನಡೆದಿದ್ದವು. ಅನುದಾನದ ಕೊರತೆ ಹಾಗೂ ವಿವಾದಗಳಿಂದಲೇ ಇಂದಿರಾ ಕ್ಯಾಂಟೀನ್ ಕಳೆಗುಂದಿತ್ತು.
ಮತ್ತೆ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್‌ಗೆ ಹೊಸ ರೂಪ ಹಾಗೂ ಮೆನು ಸೇರಿದಂತೆ ಹಲವು ಬದಲಾವಣೆ ಮಾಡುವುದಾಗಿ ಕಾಂಗ್ರೆಸ್ ಹೇಳಿತ್ತು. ಆದರೆ, ಮೆನು ಸೇರಿದಂತೆ ಯಾವುದೇ ಬದಲಾವಣೆ ಇಲ್ಲಿಯವರೆಗೂ ಆಗಿಲ್ಲ.
ಬೆಂಗಳೂರಿನಲ್ಲಿ ಸಿದ್ದರಾಮಯ್ಯ ಅವರ ಅಧಿಕಾರ ಅವಧಿಯಲ್ಲಿ 171 ಇಂದಿರಾ ಕ್ಯಾಂಟೀನ್‌ಗಳನ್ನು ಪ್ರಾರಂಭಿಸಲಾಗಿತ್ತು. ಇದರಲ್ಲಿ 20ಕ್ಕೂ ಹೆಚ್ಚು ಮೊಬೈಲ್ ಕ್ಯಾಂಟೀನ್‌ಗಳನ್ನು ಸಹ ತೆರೆಯಲಾಗಿತ್ತು. ಆದರೆ, ಅನುದಾನದ ಕೊರತೆಯಿಂದ ಇಂದಿರಾ ಕ್ಯಾಂಟೀನ್‌ಗಳು ಕಳೆಗುಂದಿದ್ದವು. 2023ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಬಳಿಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಜೂನ್‌ನಿಂದಲೇ ಇಂದಿರಾ ಕ್ಯಾಂಟೀನ್ ಪುನರುಜ್ಜೀವನದ ಭರವಸೆ ನೀಡಿತ್ತು.
ಇಂದಿರಾ ಕ್ಯಾಂಟೀನ್ ಅಭಿವೃದ್ಧಿಗೆ ಬದ್ಧ ಎಂದಿದ್ದ ಸಿ.ಎಂ
ʻರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್‌ಗಳ ಪುನರಾರಂಭಕ್ಕೆ ನಾವು ಬದ್ಧರಾಗಿದ್ದೇವೆʼ ಎಂದು ಮುಖ್ಯಮಂತ್ರಿ ಸಿದ್ದರಾಮ್ಯಯ ಅವರು ಹೇಳಿದ್ದರು. ʻನಗರ-ಪಟ್ಟಣಗಳಲ್ಲಿರುವ ಮತ್ತು ಕಾರ್ಯನಿಮಿತ್ತ ನಗರಗಳಿಗೆ ಬರುವ ಬಡವರ ಹಸಿವು ತಣಿಸುವ ಸದುದ್ದೇಶದಿಂದ ನಮ್ಮ ಸರ್ಕಾರ ಪ್ರಾರಂಭಿಸಿದ್ದ ಇಂದಿರಾ ಕ್ಯಾಂಟೀನ್‌ಗಳನ್ನು ಬಿಜೆಪಿ ಸರ್ಕಾರ ನಿರ್ಲಕ್ಷಿಸಿದ್ದರಿಂದ ಕೆಲವು ಮುಚ್ಚಿವೆ. ಹಲವು ಮುಚ್ಚುವ ಸ್ಥಿತಿಯಲ್ಲಿವೆ. ಇಂದಿರಾ ಕ್ಯಾಂಟೀನ್‌ಗಳನ್ನು ಮುಚ್ಚಲು ನಾವು ಅವಕಾಶ ನೀಡುವುದಿಲ್ಲ. ಅಗತ್ಯ ಸಂಪನ್ಮೂಲ ಒದಗಿಸಿ ಅವುಗಳನ್ನು ಪುನಶ್ಚೇತನಗೊಳಿಸುವುದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಶೀಘ್ರದಲ್ಲೇ ಇಂದಿರಾ ಕ್ಯಾಂಟೀನ್‌ಗಳಲ್ಲಿ ಸ್ವಸ್ಥ ಮತ್ತು ರುಚಿಕರವಾದ ಊಟ-ತಿಂಡಿಗಳೊಂದಿಗೆ ಜನರ ಸೇವೆ ಶುರುಮಾಡಲಿವೆ. ಹಸಿದವರ ಪಾಲಿಗೆ ಅನ್ನವೇ ದೇವರುʼ ಎಂದು ಹೇಳಿದ್ದರು.
ಇಂದಿರಾ ಕ್ಯಾಂಟೀನ್ ಮೆನು ಬದಲಾಗಿಲ್ಲ
ಇಂದಿರಾ ಕ್ಯಾಂಟೀನ್‌ಗಳಲ್ಲಿ ಮೆನು ಬದಲಾಯಿಸುವುದಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಕಳೆದ ವರ್ಷವೇ ಹೇಳಿತ್ತು. ಆದರೆ, ಇಲ್ಲಿಯವರೆಗೂ ಮೆನು ಬದಲಾವಣೆ ಆಗಿಲ್ಲ. ಹೊಸ ಮೆನುವಿನಲ್ಲಿ ಮಂಗಳೂರು ಬನ್ಸ್, ರಾಗಿ ಮುದ್ದೆ, ಇಡ್ಲಿ ಹಾಗೂ ಪಾಯಸ, ಸೊಪ್ಪು ಸಾರು ಊಟ, ಬಿಸಿಬೇಳೆ ಬಾತ್ ಸೇರಿದಂತೆ ಹಲವು ತಿನಿಸುಗಳನ್ನು ಸೇರಿಸಲಾಗಿತ್ತು. ಆದರೆ, ಅದು ಕಾರ್ಯರೂಪಕ್ಕೆ ಬಂದಿಲ್ಲ.
ಗುಣಮಟ್ಟದ ಆಹಾರ ಸಿಗುತ್ತಿಲ್ಲ; ಗ್ರಾಹಕರ ಆರೋಪ
ʻಇಂದಿರಾ ಕ್ಯಾಂಟೀನ್‌ನಲ್ಲಿ ಗುಣಮಟ್ಟದ ಆಹಾರ ಸಿಗುತ್ತಿಲ್ಲʼ ಎಂದು ಬೆಂಗಳೂರಿನ ಭಾಗ್ಯ ಎನ್ನುವವರು ಆರೋಪಿಸಿದರು. ʻಕೆ.ಆರ್ ಮಾರುಕಟ್ಟೆ ಮುಖ್ಯ ಬಸ್‌ನಿಲ್ದಾಣದಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರದ ಗುಣಮಟ್ಟ ಸಮರ್ಪಕವಾಗಿ ಇಲ್ಲ. ಸಾಂಬಾರಿನಲ್ಲಿ ತರಕಾರಿಗಳನ್ನೇ ಬಳಸುವುದಿಲ್ಲ. ಸುಮ್ಮನೆ 10 ರೂಪಾಯಿಗೆ ಆಹಾರ ಕೊಡಬೇಕು ಎನ್ನುವಂತೆ ಆಹಾರ ನೀಡುತ್ತಿದ್ದಾರೆʼ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂತಿಮ ಹಂತದಲ್ಲಿ ಟೆಂಡರ್ ಪ್ರಕ್ರಿಯೆ
ʻಹೊಸ ಟೆಂಡರ್ ಹಾಗೂ ಹೊಸ ಮೆನುವಿಗೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆಗಳು ಪೂರ್ಣವಾಗಿದ್ದು, ಕಡತವನ್ನು ಸರ್ಕಾರದ ಒಪ್ಪಿಗೆಗಾಗಿ ಕಳುಹಿಸಲಾಗಿದೆ. ಹೊಸ ಪ್ರಕ್ರಿಯೆಗೆ ಅನುಮತಿ ಸಿಗುವ ವರೆಗೂ ಹಳೆಯ ಮೆನು ಮುಂದುವರಿಸಲಾಗುವುದುʼ ಎಂದು ಬಿಬಿಎಂಪಿಯ ವಿಶೇಷ ಆಯುಕ್ತರು(ಆರೋಗ್ಯ) ಸುರೋಳ್ಕರ್ ವಿಕಾಶ್ ಕಿಶೋರ್ ತಿಳಿಸಿದ್ದಾರೆ.
ಇಂದಿರಾ ಕ್ಯಾಂಟೀನ್‌ನ ಕಾರ್ಯ ನಿರ್ವಹಣೆಯ ಬಗ್ಗೆ ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಅವರು, ʻಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಬಿಡ್ ಕಿರುಪಟ್ಟಿ ಸಹ ಅಂತಿಮವಾಗಿದೆ. ಕೊನೆಯ ಹಂತದ ಪ್ರಕ್ರಿಯೆ ಸರ್ಕಾರದ ಹಂತದಲ್ಲಿ ಇದೆ. ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಗೆ ಅಂದಾಜು 75 ಕೋಟಿ ಮೀಸಲಿಡಲಾಗಿದೆʼ ಎಂದು ಮಾಹಿತಿ ನೀಡಿದರು.
ʻಇಂದಿರಾ ಕ್ಯಾಂಟೀನ್‌ನಲ್ಲಿ ಆಹಾರದ ಗುಣಮಟ್ಟ ಹಾಗೂ ಆಹಾರ ಪೂರೈಕೆಯಲ್ಲಿ ಲೋಪಗಳು ಕಂಡುಬಂದರೆ, ಕ್ರಮ ತೆಗೆದುಕೊಳ್ಳುತ್ತೇವೆʼ ಎಂದೂ ಅವರು ಭರವಸೆ ನೀಡಿದರು.