ಅರ್ಧಕ್ಕೆ ನಿಲ್ಲಿಸಿದ ಸಂತಾನಹರಣ ಶಸ್ತ್ರ ಚಿಕಿತ್ಸೆ; ವೈದ್ಯರ ಅವಾಂತರದ ಬಗ್ಗೆ ಸಂತ್ರಸ್ತೆಯ ಅಳಲೇನು?
ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಂತ್ರಸ್ತೆ ಕಡೆಯವರು "ಆಕೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಸೋಮವಾರವೇ ಕರೆದುಕೊಂಡು ಬಂದಿದ್ದೇವೆ. ಗಾಯ ಇನ್ನೂ ವಾಸಿಯಾಗಿಲ್ಲ, ಆರೋಗ್ಯ ಸುಧಾರಿಸಿಕೊಳ್ಳುತ್ತಿದೆʼʼ ಎಂದು ತಿಳಿಸಿದರು;
ತುಮಕೂರು ಜಿಲ್ಲೆಯ ಗುಬ್ಬಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾ.19ರಂದು ಮಹಿಳೆಯೊಬ್ಬರಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಯುವ ವೇಳೆ ವೈದ್ಯೆಯೊಬ್ಬರು ಅರ್ಧಕ್ಕೆ ನಿಲ್ಲಿಸಿ ಹೊಲಿಗೆ ಹಾಕಿದ ಘಟನೆ ನಡೆದಿತ್ತು. ಈ ಬಗ್ಗೆ ಕುಟುಂಬಸ್ಥರು ಸಿಡಿಪಿಒ(ಮಹಿಳಾ ಮತ್ತು ಕಲ್ಯಾಣ ಅಧಿಕಾರಿ)ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಈ ಬಗ್ಗೆ ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಮಹಿಳೆಯ ಸಂಬಂಧಿಯೊಬ್ಬರು, "ಮಹಿಳೆಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಸೋಮವಾರವೇ ಕರೆದುಕೊಂಡು ಬಂದಿದ್ದೇವೆ. ಗಾಯ ಇನ್ನೂ ವಾಸಿಯಾಗಿಲ್ಲ, ಆರೋಗ್ಯ ಸುಧಾರಿಸಿಕೊಳ್ಳುತ್ತಿದೆʼʼ ಎಂದು ತಿಳಿಸಿದರು.
ದೂರು ನೀಡಿದ್ದರ ವಿಚಾರವಾಗಿ ಮಾಹಿತಿ ನೀಡಿದ ಅವರು, "ನಾವು ಅಲ್ಲಿಯ ವೈದ್ಯರ ಮೇಲಿನ ಸಿಟ್ಟಿಗಾಗಿ ʼಸಿಡಿಪಿಒʼಗೆ ದೂರು ನೀಡಲಿಲ್ಲ. ನಮಗಾದ ನೋವು ಯಾರಿಗೂ ಆಗಬಾರದು ಎನ್ನುವುದು ನಮ್ಮ ಉದ್ದೇಶ. ಹಾಗಾಗಿ ದೂರು ನೀಡಿದೆವು. ಆ ಬಳಿಕ ನಾಗಲಕ್ಷ್ಮಿ ಮೇಡಂ ನಮಗೆ ಬೆಂಬಲವಾಗಿ ನಿಂತು ಡಿಹೆಚ್‌ಓಗೆ ಪತ್ರ ಬರೆದರು. ಈಗ ತನಿಖೆ ಏನಾಗಿದೆ ಅನ್ನೋದರ ಬಗ್ಗೆ ನಮಗೆ ಮಾಹಿತಿ ಇಲ್ಲʼʼ ಎಂದು ಅವರು ತಿಳಿಸಿದರು.
ಘಟನೆ ಬಗ್ಗೆ ಮಾಹಿತಿ ತಿಳಿದ ಬಳಿಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷ ಡಾ. ನಾಗಲಕ್ಷ್ಮಿ ಚೌಧರಿ ಆಸ್ಪತ್ರೆಗೆ ಭೇಟಿ ನೀಡಿ, ಅಲ್ಲಿಯ ರೋಗಿಗಳ ಕಷ್ಟಗಳಿಗೆ ಕಿವಿಯಾದರು. ಆ ಬಳಿಕ ಅಲ್ಲಿಯ ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದರು.
ಈ ಪ್ರಕರಣದ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಹೆಚ್‌ಓ) ಡಾ.ಮಂಜುನಾಥ್ ಅವರಿಗೆ ನಾಗಲಕ್ಷ್ಮಿ ಚೌಧರಿ ಪತ್ರ ಬರೆದಿದ್ದಾರೆ.
ಪ್ರಕರಣದ ತನಿಖೆ ಕುರಿತು ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ, ʼʼನಾನು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇನೆ. ಈಗಾಗಲೇ ತುಮಕೂರು ಡಿಎಚ್‌ಓ ಮಂಜುನಾಥ್ ಅವರಿಗೆ ಪತ್ರ ಬರೆದಿದ್ದೇನೆ. ಯಾಕೆ ತುಮಕೂರು ಜಿಲ್ಲೆಯಲ್ಲಿಯೇ ಈ ರೀತಿಯ ಘಟನೆಗಳು ನಡೆಯುತ್ತಿವೆ?, ಈಗಾಗಲೇ ಮೂವರು ಮಹಿಳೆಯರು ಸಾವಿಗೀಡಾದ ಬಳಿಕ ನೀವು ಯಾಕೆ ಎಚ್ಚೆತ್ತುಕೊಂಡಿಲ್ಲ? ಹೀಗೆ ಅನೇಕ ಪ್ರಶ್ನೆಗಳನ್ನು ಕೇಳಿ ಪತ್ರ ಬರೆದಿದ್ದೇನೆ. ಅದೇ ರೀತಿ ಗುಬ್ಬಿ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೂ ಪತ್ರ ಬರೆದಿದ್ದೇವೆ. ತನಿಖೆ ನಡೆಸಿ ವರದಿ ಬರುವವರೆಗೂ ಪ್ರಕರಣವನ್ನು ನಾವು ಕೈ ಬಿಡುವುದಿಲ್ಲ. ಮಹಿಳಾ ಆಯೋಗವು ಡಿಎಚ್‌ಓ, ಎಂಎಲ್‌ಎ ಹಾಗೂ ಕ್ಷೇತ್ರದ ಉಸ್ತುವಾರಿ ಮಂತ್ರಿಗಳಿಂದ ಉತ್ತರ ಪಡೆಯುತ್ತದೆʼʼ ಎಂದು ತಿಳಿಸಿದರು.
ಘಟನೆಯ ಹಿನ್ನೆಲೆ
ಮಹಿಳೆಯೊಬ್ಬರು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆಂದು ಗುಬ್ಬಿ ನಗರ ಸಾರ್ವಜನಿಕ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ಅಲ್ಲಿಯ ವೈದ್ಯರೊಬ್ಬರು ಲೋಡ್ ಶೆಡ್ಡಿಂಗ್ ಕಾರಣಕ್ಕೆ ಶಸ್ತ್ರಚಿಕಿತ್ಸೆಯನ್ನು ಮುಂದೂಡಿದ್ದರು. ಆದರೆ ಮತ್ತೋರ್ವ ವೈದ್ಯೆ ಕರೆಂಟ್ ಹೋಗಿ-ಬಂದು ಮಾಡುತ್ತಿದ್ದರೂ ಶಸ್ತ್ರಚಿಕಿತ್ಸೆಗೆ ಮುಂದಾದರು.
ಮಹಿಳೆಯರ ಸಂತಾನಶಕ್ತಿ ಹರಣದಂತಹ ಶಸ್ತ್ರಚಿಕಿತ್ಸೆ ಮಾಡುವಾಗ ವೈದ್ಯರು ಅರವಳಿಕೆ ಮದ್ದು (ಅನಸ್ತೇಷಿಯಾ ಇಂಜಕ್ಷನ್) ನೀಡುತ್ತಾರೆ. ಆದರೆ, ಈ ವೈದ್ಯರು ಲೋಕಲ್ ಅನಸ್ತೇಷಿಯಾ ನೀಡಿದ್ದಾರೆ. ಲೋಕಲ್ ಅನಸ್ತೇಷಿಯಾ ಕಡಿಮೆ ಪರಿಣಾಮಕಾರಿ ಚುಚ್ಚುಮದ್ದಾಗಿರುತ್ತದೆ. ಇಂತಹ ಶಸ್ತ್ರ ಚಿಕಿತ್ಸೆಗಳಲ್ಲಿ ಎಪಿಡ್ಯೂರಲ್ ಅನಸ್ತೇಶಿಯಾ ನೀಡಲಾಗುತ್ತದೆ. ಆದರೆ ಇಲ್ಲಿ ವೈದ್ಯರು ಲೋಕಲ್ ಅನಸ್ತೇಷಿಯಾ ನೀಡುವ ಮೂಲಕ ಮಹಿಳೆಯ ಪ್ರಾಣದ ಜೊತೆ ಆಟವಾಡಿದ್ದಾರೆ. ಅದೃಷ್ಟವಷಾತ್ ಮಹಿಳೆ ಬದುಕುಳಿದಿದ್ದಾರೆ.