ಲೋಕ ಕದನ| ದೇವೇಗೌಡ ಸಿದ್ದರಾಮಯ್ಯ ಮಖಾಮುಖಿ
ಮೇಲ್ನೋಟಕ್ಕೆ ಹಳೇ ಮೈಸೂರು ಪ್ರಾಂತದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನಡೆಯುತ್ತಿರುವ ʼಲೋಕ ಕದನʼ ಪಕ್ಷಾಧಾರಿತವೆಂಬಂತೆ ಕಂಡರೂ ಆಂತರ್ಯದಲ್ಲಿ ಈ ಘರ್ಷಣೆ ಜೆಡಿಎಸ್ ನ ಸರ್ವೋಚ್ಛ ನಾಯಕ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಹಾಗೂ ಅವರ ಒಂದು ಕಾಲದ ಶಿಷ್ಯ ಹಾಗೂ ಕಾಂಗ್ರೆಸ್ ನಾಯಕ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡುವಿನ ʼಮುಖಾಮುಖಿʼ ಎಂಬುದು ಢಾಳಾಗಿ ತೋರುತ್ತಿದೆ
ಮೈಸೂರು-ಚಾಮರಾಜನಗರದಲ್ಲಿನ ʼ ಲೋಕ ಕದನ ʼ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನಡುವಿನ ಚುನಾವಣಾ ಘರ್ಷಣೆಯಾಗಿಯಷ್ಟೇ ಉಳಿಯದೆ ಮಾಜಿ ಪ್ರಧಾನಿ ದೇವೇಗೌಡರ ʼಗರ್ವಭಂಗʼ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ʼಸತ್ಯದ ಗರ್ವಭಂಗʼದ ನಡುವಿನ ಕದನವಾಗಿ ಮಾರ್ಪಟ್ಟು, ಹದಿನಾರು ವರ್ಷಗಳ ಹಿಂದೆ ನಡೆದ ಚಾಮುಂಡೇಶ್ವರಿ ಉಪಚುನಾವಣೆಯನ್ನು ನೆನಪಿಸುತ್ತದೆ
ಮೇಲ್ನೋಟಕ್ಕೆ ಹಳೇ ಮೈಸೂರು ಪ್ರಾಂತದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನಡೆಯುತ್ತಿರುವ ʼಲೋಕ ಕದನʼ ಪಕ್ಷಾಧಾರಿತವೆಂಬಂತೆ ಕಂಡರೂ ಆಂತರ್ಯದಲ್ಲಿ ಈ ಘರ್ಷಣೆ ಜೆಡಿಎಸ್ ನ ಸರ್ವೋಚ್ಛ ನಾಯಕ, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಹಾಗೂ ಅವರ ಒಂದು ಕಾಲದ ಶಿಷ್ಯ ಹಾಗೂ ಕಾಂಗ್ರೆಸ್ ನಾಯಕ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡುವಿನ ʼಮುಖಾಮುಖಿʼ ಎಂಬುದು ಢಾಳಾಗಿ ತೋರುತ್ತಿದೆ.
ಮೈಸೂರು, ಚಾಮರಾಜನಗರ ಕ್ಷೇತ್ರಗಳ ಚುನಾವಣಾ ಫಲಿತಾಂಶ ಸಿದ್ದರಾಮಯ್ಯನವರಿಗೆ ಕೇವಲ ಪ್ರತಿಷ್ಠೆಯ ಪ್ರಶ್ನೆಯಾಗಿಯಷ್ಟೇ ಉಳಿದಿಲ್ಲ. ಫಲಿತಾಂಶ- ಅವರ ಮುಖ್ಯಮಂತ್ರಿ ಸ್ಥಾನಕ್ಕೆ ಕುತ್ತು ತರುವ ಅಥವಾ ಸ್ಥಾನದಲ್ಲಿ ಮುಖ್ಯಮಂತ್ರಿಯಾಗಿ ಐದು ವರ್ಷಗಳ ಅವಧಿ ಪೂರೈಸಿ ಹೊಸ ದಾಖಲೆ ಸ್ಥಾಪಿಸುವ ಎರಡು ಆಯ್ಕೆಗಳನ್ನು ಅವರ ಮುಂದಿಟ್ಟಿದೆ.
ಇದೇ ರೀತಿ ನೋಡಿದರೆ, ಮೈಸೂರು, ಚಾಮರಾಜನಗರದ ಗೆಲುವು, ಮಾಜಿ ಪ್ರಧಾನಿ ದೇವೇಗೌಡರ ಪಾಲಿಗೆ ಕೇವಲ ಗೆಲುವಲ್ಲ ಅದು, ಅವರಿಗೆ ಸಿದ್ದರಾಮಯ್ಯನವರ ʼಗರ್ವಭಂಗʼ ಮಾಡಿದ ವಿಜೃಂಬಣೆ. ಅಷ್ಟೇ ಅಲ್ಲ. ಅದು ಹಳೇ ಮೈಸೂರು ಪ್ರಾಂತದ ಮೇಲೆ ಮತ್ತೆ ಜೆಡಿಎಸ್ ಹಿಡಿತ ಸಾಧಿಸಿರುವುದರ ಋಜುವಾತು ಕೂಡ.
2006 ರಲ್ಲಿ, ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಸಿದ್ದರಾಮಯ್ಯ ಅವರು ಮೈಸೂರಿನ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದಲ್ಲಿ ಪುನಃ ಸ್ಪರ್ಧಿಸಿದಾಗ, ಅವರನ್ನು ಮಣಿಸಲು ಬಿಜೆಪಿ, ಜೆಡಿಎಸ್ ಎರಡೂ ಪಕ್ಷಗಳು ಒಳ ಒಪ್ಪಂದ ಮಾಡಿಕೊಂಡು ಪ್ರಯತ್ನಿಸಿದವು. ಐತಿಹಾಸಿಕ ಎನ್ನುವಂಥ ಈ ಚುನಾವಣೆಯಲ್ಲಿ ಜೆಡಿಎಸ್ ನ ಸಾರಥ್ಯ ವಹಿಸಿದವರು ದೇವೇಗೌಡರೇ. ಕತ್ತಿಯಲಗಿನಂಥ ಹೋರಾಟದ ಈ ಚುನಾವಣೆಯಲ್ಲಿ ಸಿದ್ದರಾಮಯ್ಯ ಪ್ರಯಾಸದ ಜಯ ಸಾಧಿಸಿ, ಕೇವಲ 257 ಮತಗಳಿಂದ ಜೆಡಿಎಸ್ ನ ಎಂ ಶಿವಬಸಪ್ಪ ಅವರ ವಿರುದ್ಧ ವಿಜಯ ಸಾಧಿಸಿದ್ದರು. ಆಗ ತಮ್ಮ ಗುರು ದೇವೇಗೌಡರು ನಡೆದುಕೊಂಡ ರೀತಿಯನ್ನು ಸಿದ್ದರಾಮಯ್ಯ ಇದುವರೆಗೆ ಮರೆತಂತೆ ತೋರುತ್ತಿಲ್ಲ.
ಹದಿನಾರು ವರ್ಷಗಳ ನಂತರ ಮತ್ತೆ ಗುರು-ಶಿಷ್ಯರು ಮುಖಾಮುಖಿಯಾಗಿರುವಂತೆ ತೋರುತ್ತಿದೆ. ಆದರೆ ಈ ಬಾರಿ ಅಭ್ಯರ್ಥಿ ಮಾತ್ರ ಸಿದ್ದರಾಮಯ್ಯ ಅಲ್ಲ. ಬಿಜೆಪಿ-ಜೆಡಿಎಸ್ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರೇ ಅಭ್ಯರ್ಥಿ ಎಂದು ಭಾವಿಸಿ ಮತ ಹಾಕಿ ಎಂದು ಮತದಾರರಲ್ಲಿ ಮನವಿ ಮಾಡಿಕೋಳ್ಳುತ್ತಿರುವಾಗ. ಸಿದ್ದರಾಮಯ್ಯ, “ನಾನು ಮುಖ್ಯಮಂತ್ರಿಯಾಗಿ ಐದು ವರ್ಷಗಳ ಅವಧಿಯನ್ನು ಪೂರೈಸುವುದು ನಿಮ್ಮ ಕೈಯಲ್ಲಿದೆ ಎಂದು ತಮ್ಮ ಕ್ಷೇತ್ರದ ಮತದಾರರ ಮುಂದೆ ಕೈ ಮುಗಿದು ನಿಂತಿದ್ದಾರೆ.
ಈ ನಡುವೆ ತೊಂಭತ್ತೊಂದು ವರ್ಷ ವಯಸ್ಸಿನ ದೇವೇಗೌಡರು, ಇದು ನನ್ನ ಬದುಕಿನ ಕೊನೆಯ ಚುನಾವಣಾ ಹೋರಾಟ ಎಂಬ ತಮ್ಮ ಅಮೂಲ್ಯ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಭಾವನಾತ್ಮಕವಾಗಿ ಮತದಾರರ ಆಂತರ್ಯಕ್ಕೆ ಲಗ್ಗೆ ಹಾಕುತ್ತಿದ್ದಾರೆ.
ವಯಸ್ಸಿನ ಕಾರಣದಿಂದ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ನನಗೀಗ ತೊಂಭತ್ತು ವರ್ಷ ದಾಟಿದೆ. ಮಾತನಾಡಲು ಸ್ವಲ್ಪ ಶಕ್ತಿ, ಮತ್ತು ನೆನಪಿನ ಶಕ್ತಿಇದೆ. ನಾನು ಪ್ರಚಾರಕ್ಕೆ ಹೋಗುತ್ತೇನೆ ಎಂದು ಹೇಳಿರುವ ದೇವೇಗೌಡರು ಇತ್ತೀಚಿನ ಒಂದು ಸಭೆಯಲ್ಲಿ ಸಿದ್ದರಾಮಯ್ಯನವರ ರಾಜಕೀಯ ವಿರೋಧಿ ಮೈಸೂರಿನ ಜಿ.ಟಿ. ದೇವೇಗೌಡ ಅವರನ್ನು ಉದ್ಧೇಶಿಸಿ, ಮೈಸೂರು ಹಾಗೂ ಚಾಮರಾಜನಗರ ಕ್ಷೇತ್ರ ಗೆಲ್ಲುವ ಶಕ್ತಿ ನಿಮಗಿದೆ. ಅವರನ್ನು ಮಣಿಸುವ ಮೂಲಕ ಆ ಸಿದ್ದರಾಮಯ್ಯನವರ ʼಗರ್ವ ಭಂಗʼ ಆಗಬೇಕು ಎಂದು ಹೇಳಿರುವುದು ಇಂದು ವಿವಾದಕ್ಕೊಳಗಾಗಿದೆ.
ಇದಕ್ಕೆ ಪ್ರತ್ಯುತ್ತರ ನೀಡಿರುವ ಸಿದ್ದರಾಮಯ್ಯ. “ನನಗೆ ಗರ್ವ ಇದ್ದರೆ ತಾನೇ ಗರ್ವಭಂಗ ಆಗುವುದು. ದೇವೇಗೌಡರು ಹೇಳಿರುವುದನ್ನೇ ನಾನು ಹೇಳಿರುವುದು. ಸತ್ಯ ಹೇಳುವುದು ಗರ್ವದ ಸಂಗತಿಯೇ? ಎಂದು ಪ್ರಶ್ನಿಸಿದ್ದಾರೆ. ಮೋದಿ ಪ್ರಧಾನಿ ಆದರೆ ದೇಶ ಬಿಟ್ಟು ಹೋಗುತ್ತೇನೆ ಎಂದರು. ಮುಂದಿನ ಜನ್ಮ ಅಂತ ಒಂದಿದ್ದರೆ ನಾನು ಮುಸಲ್ಮಾನನಾಗಿ ಹುಟ್ಟುತ್ತೇನೆ ಎಂದೂ ಹೇಳಿದ್ದರು. ಈ ಮಾತುಗಳನ್ನು ನೆನಪಿಸಿದ್ದಕ್ಕೆ ನನಗೆ ಗರ್ವಅನ್ನುತ್ತಾರೆ.” ಎಂದು ಹೇಳಿರುವ ಸಿದ್ದರಾಮಯ್ಯ, ಸತ್ಯ ಮತ್ತು ಗರ್ವಗಳ ನಡುವಿನ ಸೂಕ್ಷ್ಮ ಗೆರೆಯನ್ನು ಮತದಾರರ ಮುಂದೆ ತೆರೆದಿಡುವ ಪ್ರಯತ್ನ ಮಾಡಿದ್ದಾರೆ.
ಹಾಗಾಗಿ ಮೈಸೂರು ಮತ್ತು ಚಾಮರಾಜನಗರ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲು ಸಿದ್ದರಾಮಯ್ಯ ತಮ್ಮ ಬತ್ತಳಿಕೆಯಲ್ಲಿರುವ ಎಲ್ಲ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ವಿಶ್ರಾಂತಿ ನೆಪದಲ್ಲಿ ಅವರು ಇತ್ತೀಚೆಗೆ ಹೆಗ್ಗಡದೇವನ ಕೋಟೆ ತಾಲ್ಲೂಕಿನ ಕಬಿನಿ ಹಿನ್ನೀರು ಪ್ರದೇಶದಲ್ಲಿರುವ ರೆಸಾರ್ಟ್ ನಲ್ಲಿ ವಾಸ್ತವ್ಯ ಹೂಡಿದ್ದರೂ, ಮೂರು ರಾತ್ರಿ ಹಾಗೂ ಎರಡು ಹಗಲು ಸಿದ್ದರಾಮಯ್ಯ ಎರಡೂ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗಾಗಿ ರಾಜಕೀಯ ತಂತ್ರಗಳನ್ನು ಹೆಣೆದಿದ್ದು ಇಂದು ರಹಸ್ಯವಾಗೇನೂ ಉಳಿದಿಲ್ಲ.
ಸಿದ್ದರಾಮಯ್ಯನವರ ಸಮೀಪವರ್ತಿಗಳ ಪ್ರಕಾರ ಕಾಂಗ್ರೆಸ್ ಮೈಸೂರು ಕ್ಷೇತ್ರವನ್ನು ಪ್ರತಿಷ್ಠೆಯ ಕಣವಾಗಿ ಸ್ವೀಕರಿಸಿದೆ. ಇದು ಸಿದ್ದರಾಮಯ್ಯನವರ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ತವರು ಕ್ಷೇತ್ರದಲ್ಲೇನಾದರೂ ಸೋತರೆ ಸಿದ್ದರಾಮಯ್ಯನವರಿಗೆ ತೀವ್ರತರ ಮುಖಭಂಗವಾಗಲಿದೆ. ಹಾಗಾಗಿ ವಿಶ್ರಾಂತಿ ನೆಪದಲ್ಲಿ ಅವಿಶ್ರಾಂತ ರಾಜಕೀಯ ಚಟುವಟಿಕೆಯಲ್ಲಿ ಸಿದ್ದರಾಮಯ್ಯ ತೊಡಗಿದ್ದು ಆಶ್ಚರ್ಯವನ್ನೇನೂ ಹುಟ್ಟಿಸುವುದಿಲ್ಲ. ಮೈಸೂರಿನಿಂದ ಹಿಂದಿರುಗಿದ ಕೇವಲ ಮೂರೇ ದಿನಗಳಲ್ಲಿ ಮತ್ತೆ ಮೈಸೂರಿಗೆ ತೆರಳಿ ತಮ್ಮ ವರುಣಾ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿರುವ ಸಿದ್ದರಾಮಯ್ಯ, ಮತದಾರರ ಮನಸ್ಸನ್ನು ಗೆಲ್ಲಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ.
ಈ ನಡುವೆ ತಮ್ಮ ಒಂದು ಕಾಲದ ಶಿಷ್ಯನ ಗರ್ವಭಂಗ ಮಾಡಲು, ಮಾಜಿ ಪ್ರಧಾನಿ ದೇವೇಗೌಡರು, ಬಿಜೆಪಿ ನಾಯಕ ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು ಸಜ್ಜಾಗಿದ್ದಾರೆ. ಜೆಡಿಎಸ್ ಮೂಲಗಳ ಪ್ರಕಾರ, ತೊಂಭತ್ತರ ಹರೆಯದ ದೇವೇಗೌಡರು ಸದ್ಯದಲ್ಲೇ ನಡೆಯಲಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ೨೫ ಕಿ. ಮೀ ದೂರದ ಮೋದಿ ಅವರ ರೋಡ್ ಷೋ ನಲ್ಲಿ ಭಾಗವಹಿಸಲಿದ್ದಾರೆ.
ಒಟ್ಟಾರೆಯಾಗಿ ಮೈಸೂರು-ಚಾಮರಾಜನಗರದಲ್ಲಿ ಮತದಾರರು ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಉಳಿಸಲು ಬೆಂಬಲಿಸುವರೋ, ದೇವೇಗೌಡರ ಅಣತಿಯಂತೆ ಅವರ ಗರ್ವಭಂಗ ಮಾಡುವರೋ ಎಂಬುದನ್ನು ಕಾದುನೋಡಬೇಕಿದೆ.