ಪ್ರತಿಷ್ಠಿತ ʻCannesʼ ಚಿತ್ರೋತ್ಸವಕ್ಕೆ ಕ್ಷಣಗಣನೆ| ವಿಶ್ವದ ಸಿನಿ ಜಾತ್ರೆಯಲ್ಲಿ ಕನ್ನಡ ಚಿತ್ರದ ಮೆರವಣಿಗೆ

ಇಂದು ತೆರೆಏಳಲಿರುವ ಜಗತ್ತಿನ ಪ್ರತಿಷ್ಠಿತ ಕಾನ್‌ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕನ್ನಡ ನೆಲದ ಪ್ರತಿಭೆಗಳ ʻಪ್ರದರ್ಶನʼವಾಗಲಿದೆ. ಮೈಸೂರಿನ ಚಿದಾನಂದ ನಾಯಕ್‌ ನಿರ್ದೇಶನದ ಕಿರು ಚಿತ್ರ "ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾಗಿದ್ದು” ಪ್ರದರ್ಶನಕ್ಕೆಂದು ಆಯ್ಕೆಯಾಗಿದೆ.;

Update: 2024-05-14 00:38 GMT

ಜಗತ್ತಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಒಂದಾದ ಕಾನ್‌ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಬಾರಿಯ ವಿಶೇಷವೆಂದರೆ ಮೈಸೂರಿನ ಚಿದಾನಂದ ನಾಯಕ್‌ ನಿರ್ದೇಶನದ ಕಿರು ಚಿತ್ರ "ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾಗಿದ್ದು” ಪ್ರದರ್ಶನಕ್ಕೆಂದು ಆಯ್ಕೆಯಾಗಿದೆ. ಬಂಜಾರ ಸಮುದಾಯದ ಜನಪ್ರಿಯ ಜನಪದ ಕಥೆ ಅಜ್ಜಿ ಹುಂಜ ಕದ್ದ ಕಥೆಯನ್ನು ಆಧರಿಸಿ ಈ ಕಿರುಚಿತ್ರ ನಿರ್ಮಾಣವಾಗಿದೆ.

ಮೈಸೂರಿನ ಡಾ. ಚಿದಾನಂದ ನಾಯಕ್‌ ಎಂಬ ವೈದ್ಯಕೀಯ ಕಲಿತ ಲಂಬಾಣಿ ಜನಾಂಗದ ಈ ಹುಡುಗನ ಕಲ್ಪನೆಯ ಪಾತ್ರಕ್ಕೆ ಜೀವ ತುಂಬಿದವರು ಕನ್ನಡದ ಹೆಮ್ಮೆಯ ನಟ ಜಹಾಂಗೀರ್‌. ಕಾನ್‌ ಚಿತ್ರೋತ್ಸವದ ಕಿರುಚಿತ್ರ ವಿಭಾಗದಲ್ಲಿ ಪ್ರದರ್ಶನ ಕಾಣುತ್ತಿರುವ ಮೊದಲ ಕನ್ನಡ ಚಿತ್ರ "ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾಗಿದ್ದು”.

ಈ ಚಿತ್ರೋತ್ಸವದ ಸ್ಪರ್ಧಾ ವಿಭಾಗದಲ್ಲಿ ಪ್ರವೇಶ ಪಡೆದಿದ್ದ ೨೨೬೩ ಚಿತ್ರಗಳ ಪೈಕಿ ೧೮ ಚಿತ್ರಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದು, ಈ ಪೈಕಿ "ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾಗಿದ್ದು” ಅವುಗಳ ಪೈಕಿ ಭಾರತದ ಏಕೈಕ ಚಿತ್ರ. ಈ ಚಿತ್ರದ ಸಂಕಲನಕಾರ ಮನೋಜ್‌ ಕೂಡ ಕನ್ನಡದವರು ಎಂಬುದು ಹೆಮ್ಮೆಯ ಸಂಗತಿ. ಬಂಜಾರ ಸಂಸ್ಕೃತಿಯನ್ನು ದೃಶ್ಯದ ಮೂಲಕ ಕಟ್ಟಿ ಜಗತ್ತಿನ ಸಿನಿಮಾ ಜಗಲಿಗೆ ಕೊಂಡೊಯ್ದ ಕೀರ್ತಿ ಚಿದಾನಂದರದು.

 

ಮೌಖಿಕ ಸಂಸ್ಕೃತಿಯಲ್ಲಿ ಒಬ್ಬರಿಂದ ಒಬ್ಬರಿಗೆ ದಾಟಿದ ಕದ್ದ ಹುಂಜದ ಜಾನಪದ ಕಥೆಯನ್ನು ಮತ್ತೊಂದು ಪೀಳಿಗೆಗೆ ದಾಟಿಸುವ ನಮ್ರ ಪ್ರಯತ್ನ ಇದು. ಹಾಗಾಗಿ ಇದು ಇನ್ನು ಮುಂದೆ ವಿಶ್ವ ಕಥನದ ಒಂದು ಭಾಗವಾಗಲಿದೆ ಎನ್ನುತ್ತಾರೆ ಚಿದಾನಂದ.

ಶಿವಮೊಗ್ಗ ಜಿಲ್ಲೆಯ ಒಂದು ಬಂಜಾರ ಕುಗ್ರಾಮದಲ್ಲಿ ಹುಟ್ಟಿದ ಚಿದಾನಂದ ತಮ್ಮ ಸಮುದಾಯದಕ ಜಾನಪದ ಕಥೆಗಳನ್ನು ಸಂಗ್ರಹಿಸಲು ಆರಂಭಿಸಿದರು. ಅವರೇ ಹೇಳುವಂತೆ ಬಂಜಾರ ಸಮುದಾಯದಲ್ಲಿ, ಈ ರೀತಿ ಕಥೆ ಹೇಳುವವರು ಹೆಚ್ಚು ಮಂದಿ ಇಲ್ಲ. ಅಂಥವರು ಇರುವುದು ಕೇವಲ ಎಂಟೊಂಬತ್ತು ಮಂದಿ ಹಿರಿಯರು ಮಾತ್ರ.

ಪುಣೆಯ ಫಿಲಂ ಅಂಡ್‌ ಟೆಲಿವಿಷನ್‌ ಇನ್ಸಿಟಿಟ್ಯೂಟ್‌ನಲ್ಲಿ ಕಲಿಯುತ್ತಿರುವಾಗ, ಕೋರ್ಸ್‌ನ ಒಂದು ಭಾಗವಾಗಿ ನಾಲ್ಕು ದಿನಗಳಲ್ಲಿ ಒಂದು ಚಿತ್ರ ಮಾಡಬೇಕಾಗಿ ಬಂದಾಗ ಚಿದಾನಂದ ಅವರು ಮಾಡಿದ ಚಿತ್ರವಿದು. ಪುಣೆಯಿಂದ ೪೮ ಕಿಮೀ ದೂರದ ಹಳ್ಳಿಯೊಂದರಲ್ಲಿ ಈ ಚಿತ್ರವನ್ನು ಚಿತ್ರೀಕರಿಸಲಾಯಿತು. ಜುಲೈ ೨೦೨೩ರಲ್ಲಿ ಚಿತ್ರದ ಮೊದಲ ಪ್ರತಿ ಸಿದ್ಧವಾಯಿತು. ಪುಣೆ ಫಿಲಂ ಅಂಡ್‌ ಟೆಲಿವಿಷನ್‌ ಇನ್ಸಿಟಿಟ್ಯೂಟ್‌ (ಎಫ್‌ಟಿಐಐ) ಚಿತ್ರವನ್ನು ಕಾನ್‌ ಚಿತ್ರೋತ್ಸವಕ್ಕೆ ಕಳುಹಿಸಿತ್ತು. ಆದರೆ ಚಿತ್ರ ಆಯ್ಕೆಯಾಗುವವರೆಗೂ (ಎಫ್‌ಟಿಐಐ) ಚಿತ್ರವನ್ನು ಸ್ಪರ್ಧೆಗೆ ಕಳುಹಿಸಿದ್ದು ಗೊತ್ತಿರಲಿಲ್ಲ, ಎಂದು ನಮ್ರವಾಗಿಯೇ ಹೇಳುತ್ತಾರೆ, ಚಿದಾನಂದ

ಈ ಪೈಕಿ "ಸೂರ್ಯಕಾಂತಿ ಹೂವಿಗೆ ಮೊದಲು ಗೊತ್ತಾಗಿದ್ದು” ಜೊತೆಯಲ್ಲಿ ಬೆಂಗಳೂರಿನ ಸುಚಿತ್ರ ಚಲನಚಿತ್ರ ಸಮಾಜದ ಕೊಡುಗೆಯೆಂದು ಭಾವಿಸಬಹುದಾದ ತನಿಕಾಚಲಂ ಎಂಬ ಹುಡುಗ ನಿರ್ಮಿಸಿದ “ಇನ್‌ ರಿಟ್ರೀಟ್‌"”ಚಿತ್ರ ಕೂಡ ಪ್ರದರ್ಶನಗೊಳ್ಳಲಿದೆ. ಲಡಾಖ್‌ ಪ್ರದೇಶವನ್ನು ಅಲ್ಲಿನ ಸಂಸ್ಕೃತಿಯನ್ನು ವಿಭಿನ್ನ ದೃಷ್ಟಿಕೋನದಿಂದ ನೋಡುವ ಚಿತ್ರವಿದು.

ಈ ಚಿತ್ರೋತ್ಸವದಲ್ಲಿ ತಮ್ಮ ಚಿತ್ರಗಳು ಪ್ರದರ್ಶನಗೊಂಡರೆ ಆಸ್ಕರ್‌ ಪ್ರಶಸ್ತಿ ಪಡೆದಂತೆ ಎಂದು ಭಾವಿಸುವ ಈ ಸಂದರ್ಭದಲ್ಲಿ, ಕನ್ನಡದ ಪ್ರತಿಭೆಗಳು ಕಾನ್‌ ನಲ್ಲಿ ತಮ್ಮ ಚಿತ್ರಗಳನ್ನು ಪ್ರದರ್ಶಿಸುತ್ತಿರುವುದು ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ.

ಪಾಯಲ್‌ ಕಪಾಡಿಯಾ ಎಂಬ ದೃಶ್ಯ ಮಾಂತ್ರಿಕೆ

ಈ ೭೭ನೇ ಕಾನ್‌ ಚಿತ್ರೋತ್ಸವದಲ್ಲಿ ಭಾರತದ ಪಾಯಲ್‌ ಕಪಾಡಿಯಾ ಅವರ ʻಆಲ್‌ ವಿ ಇಮ್ಯಾಜಿನ್‌ ಆಸ್‌ ಲೈಟ್‌ʼ ಚಿತ್ರದ ವಿಶ್ವದ ೨೨ ಅತ್ಯುತ್ತಮ ಚಿತ್ರಗಳೊಂದಿಗೆ ಸ್ಪರ್ಧಾ ವಿಭಾಗದಲ್ಲಿ ಪ್ರದರ್ಶನಗೊಳ್ಳುತ್ತಿದೆ. ಪುಣೆಯ ಫಿಲಂ ಅಂಡ್‌ ಟೆಲಿವಿಷನ್‌ ಇನ್ಸ್ಟಿಟ್ಯೂಟ್‌ ನಲ್ಲಿ ಕಲಿತ ಈ ಪಾಯಲ್‌ ಕಪಾಡಿಯಾ ಅವರ ಮೊದಲ ಚಿತ್ರ; ʼಆಫ್ಟರ್ನೂನ್ ಕ್ಲೌಡ್‌ʼ ೨೦೧೭ರಲ್ಲಿ ಕಾನ್‌ ಚಿತ್ರೋತ್ಸವದಲ್ಲಿ ಮೊದಲ ಬಾರಿಗೆ ಪ್ರದರ್ಶನಗೊಂಡಿತ್ತು. ಅದೇ ರೀತಿ ೨೦೨೧ರಲ್ಲಿ ಪಾಯಲ್‌ ಕಪಾಡಿಯಾ ಅವರ ʻಎ ನೈಟ್‌ ಆಫ್‌ ನೋಯಿಂಗ್‌ ನಥಿಂಗ್‌ʼ, ಕಾನ್‌ ನ ಸಾಕ್ಷ್ಯಾಚಿತ್ರ ವಿಭಾಗದಲ್ಲಿ ಪ್ರದರ್ಶನಗೊಂಡಿತ್ತು.

Tags:    

Similar News