ಆಸ್ಪತ್ರೆ ಅವಾಂತರ | ಸಂತಾನಹರಣ ಆಪರೇಷನ್ ಅರ್ಧಕ್ಕೇ ಬಿಟ್ಟು ಹೋದ ವೈದ್ಯೆ!
ಮಹಿಳೆಯರ ಸಂತಾನಶಕ್ತಿ ಹರಣದಂತಹ ಶಸ್ತ್ರಚಿಕಿತ್ಸೆ ಮಾಡುವಾಗ ವೈದ್ಯರು ಅರವಳಿಕೆ ಮದ್ದು (ಅನಸ್ತೇಷಿಯಾ ಇಂಜಕ್ಷನ್) ನೀಡುತ್ತಾರೆ. ಆದರೆ, ಇಲ್ಲಿ ವೈದ್ಯರು ಲೋಕಲ್ ಅನಸ್ತೇಷಿಯಾ ನೀಡುವ ಮೂಲಕ ಮಹಿಳೆಯ ಪ್ರಾಣದ ಜೊತೆ ಆಟವಾಡಿದ್ದಾರೆ.;
ಗೃಹ ಸಚಿವ ಡಾ. ಜಿ ಪರಮೇಶ್ವರ ಅವರ ತವರು ಜಿಲ್ಲೆಯಲ್ಲಿಯೇ ಮಹಿಳೆಯರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ ಎನ್ನುವ ಆರೋಪಗಳಿಗೆ ಪುಷ್ಟಿ ನೀಡುವಂತೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ನಿರ್ಲಕ್ಷ್ಯದ ಮತ್ತೊಂದು ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಗುಬ್ಬಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾ.19ನೇ ತಾರೀಖಿನಂದು ಮಹಿಳೆಯೊಬ್ಬರಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯ ನಡೆಸುತ್ತಿದ್ದ ವೈದ್ಯರು ಅರ್ಧದಲ್ಲೇ ನಿಲ್ಲಿಸಿ, ಹೊಲಿಗೆ ಹಾಕಿರುವ ಘಟನೆ ನಡೆದಿದೆ.
ತಾಲ್ಲೂಕಿನ ಬಿಳೆಕಲ್ಲುಪಾಳ್ಯ ಗ್ರಾಮದ ರೇಣುಕಾ (34) ಎನ್ನುವ ಮಹಿಳೆಗೆ ಈ ತೊಂದರೆ ಆಗಿದ್ದು, ಇದೀಗ ಮಹಿಳೆ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಆ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಹಿಳೆಯರ ಸಂತಾನಶಕ್ತಿ ಹರಣದಂತಹ ಶಸ್ತ್ರಚಿಕಿತ್ಸೆ ಮಾಡುವಾಗ ವೈದ್ಯರು ಅರವಳಿಕೆ ಮದ್ದು (ಅನಸ್ತೇಷಿಯಾ ಇಂಜಕ್ಷನ್) ನೀಡುತ್ತಾರೆ. ಆದರೆ, ವೈದ್ಯರು ಲೋಕಲ್ ಅನಸ್ತೇಷಿಯಾ ನೀಡಿದ್ದಾರೆ ಎಂದು ಹೇಳಲಾಗಿದೆ. ಲೋಕಲ್ ಅನಸ್ತೇಷಿಯಾ ಕಡಿಮೆ ಪರಿಣಾಮಕಾರಿ ಚುಚ್ಚುಮದ್ದಾಗಿರುತ್ತದೆ. ಇಂತಹ ಶಸ್ತ್ರ ಚಿಕಿತ್ಸೆಗಳಲ್ಲಿ ಎಪಿಡ್ಯೂರಲ್ ಅನಸ್ತೇಶಿಯಾ ನೀಡಲಾಗುತ್ತದೆ. ಆದರೆ ಇಲ್ಲಿ ವೈದ್ಯರು ಲೋಕಲ್ ಅನಸ್ತೇಷಿಯಾ ನೀಡುವ ಮೂಲಕ ಮಹಿಳೆಯ ಪ್ರಾಣದ ಜೊತೆ ಆಟವಾಡಿದ್ದಾರೆ. ಅದೃಷ್ಟವಶಾತ್ ಮಹಿಳೆ ಬದುಕುಳಿದಿದ್ದಾರೆ.
ಘಟನೆ ಬಗ್ಗೆ ಮಹಿಳೆಯ ಪತಿ ತಿಮ್ಮರಾಜು ಅವರು ಮಾಧ್ಯಮದವರೊಂದಿಗೆ ಮಾತನಾಡಿದ್ದು, ʼʼಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯಿಂದ ನೋವಿನಿಂದ ಚಿರಾಡುವ ಶಬ್ದ ಕೇಳಿ ಬಂದಿತು. ಕೊಠಡಿ ಹೊರಗೆ ನಿಂತಿದ್ದ ನಾವು ಒಳ ಹೋಗಿ ನೋಡಿದಾಗ ರೇಣುಕಾ ಕೈ, ಕಾಲು ಗಟ್ಟಿಯಾಗಿ ಹಿಡಿದುಕೊಂಡು ಶಸ್ತ್ರಚಿಕಿತ್ಸೆ ಮಾಡುತ್ತಿದ್ದರುʼʼ ಎಂದು ಆರೋಪಿಸಿದ್ದಾರೆ.
“ಅರವಳಿಕೆ ಮದ್ದು ನೀಡದೆ ಶಸ್ತ್ರಚಿಕಿತ್ಸೆ ಮಾಡುತ್ತಿದ್ದ ಕಾರಣ ನೋವು ತಡೆದುಕೊಳ್ಳಲಾಗದೆ ನನ್ನ ಹೆಂಡತಿ ಕೂಗಿಕೊಳ್ಳುತ್ತಿದ್ದಳು. ನಾವು ಒಳಗೆ ಹೋಗಿ ಗಲಾಟೆ ಮಾಡಿದ ನಂತರ ಶಸ್ತ್ರಚಿಕಿತ್ಸೆ ನಿಲ್ಲಿಸಿದರು. ತಡೆದುಕೊಳ್ಳಲು ಆಗುವುದಿಲ್ಲ ಅಂತ ಮೊದಲೇ ಹೇಳಬೇಕಲ್ಲವೇ ಎಂದು ನಮ್ಮ ಮೇಲೆಯೇ ವೈದ್ಯರು ರೇಗಾಡಿದರುʼʼ ಎಂದು ತಿಮ್ಮರಾಜು ತಿಳಿಸಿದರು.
“ಮುಂಜಾಗ್ರತಾ ಕ್ರಮ ತೆಗೆದುಕೊಳ್ಳದೆ ವೈದ್ಯರು ನಿರ್ಲಕ್ಷ್ಯದಿಂದ ಶಸ್ತ್ರಚಿಕಿತ್ಸೆ ಮಾಡಲು ಹೊರಟಿದ್ದರು. ಬೆಳಿಗ್ಗೆ ಚಿಕಿತ್ಸೆಗೂ ಮುನ್ನ 5 ಸಾವಿರ ಹಣ ಕೇಳಿದರು. ಕೊಡಲು ಆಗುವುದಿಲ್ಲ ಎಂದು ಹೇಳಿದ್ದೆ. ಇದರಿಂದ ಕೋಪಗೊಂಡು ಈ ರೀತಿ ಮಾಡಿದ್ದಾರೆʼʼ ಎಂದು ಅವರು ಗಂಭೀರ ಆರೋಪ ಮಾಡಿದರು.
ಇನ್ನು ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ದಿವಾಕರ್ ಅವರು ತಮ್ಮ ವೈದ್ಯರನ್ನು ಸಮರ್ಥನೆ ಮಾಡಿಕೊಂಡಿದ್ದು, ʼʼಅರವಳಿಕೆ ಮದ್ದು ಕೊಟ್ಟ ನಂತರವೇ ಶಸ್ತ್ರಚಿಕಿತ್ಸೆ ಮಾಡುತ್ತಿದ್ದೆವು. ಆದರೆ, ಅರವಳಿಕೆ ಮದ್ದು ಸರಿಯಾಗಿ ಕೆಲಸ ಮಾಡಿಲ್ಲʼʼ ಎಂದು ಹೇಳಿದ್ದಾರೆ.
ಈ ಬಗ್ಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾಕ್ಟರ್ ನಾಗಲಕ್ಷ್ಮಿ ಚೌಧರಿ ಅವರು ʻದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ್ದು, ʼʼಈ ಪ್ರಕರಣದ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಹೆಚ್‌ಓ) ಡಾ.ಮಂಜುನಾಥ್ ಅವರಿಗೆ ಪತ್ರ ಬರೆದಿದ್ದೇವೆ" ಎಂದು ತಿಳಿಸಿದರು.
"ಕಳೆದ ತಿಂಗಳು ಒಂದೇ ದಿನ ಮೂರು ಹೆಣ್ಣುಮಕ್ಕಳು ತುಮಕೂರು ಜಿಲ್ಲೆಯಲ್ಲಿಯೇ ಇಂತಹ ಶಸ್ತ್ರ ಚಿಕಿತ್ಸೆಗಳಲ್ಲಿ ಪ್ರಾಣ ಕಳೆದುಕೊಂಡಿದ್ದರು. ಈ ಪ್ರಕರಣದಲ್ಲಿ ಎಷ್ಟೊಂದು ನಿರ್ಲಕ್ಷ್ಯ ವಹಿಸಿದ್ದಾರೆ ಎಂದರೆ, ಕರೆಂಟ್ ಹೋಗೋದು-ಬರೋದು ಮಾಡ್ತಿದ್ರನೂ ಆಪರೇಷನ್ ಮಾಡಲು ಮುಂದಾಗಿದ್ದಾರೆ. ಅನಸ್ತೇಶಿಯಾ ಕೊಡುವ ವಿಚಾರದಲ್ಲೂ ಜನರಲ್ ಅನಸ್ತೇಶಿಯಾ ಕೊಡುವ ಬದಲಿಗೆ ಲೋಕಲ್ ಅನಸ್ತೇಶಿಯಾ ಕೊಟ್ಟಿದ್ದಾರೆ. ಆರಂಭದಲ್ಲಿಯೇ ಆ ಮಹಿಳೆ ನೋವು ತಾಳಲಾರದೆ ಕೂಗಿಕೊಂಡಿದ್ದಾಳೆ. ಆಗಲಾದರೂ ವೈದ್ಯರು ಆಪರೇಷನ್ ಕೈಬಿಡಬೇಕಿತ್ತು. ಆದರೆ, ಕೈ ಕಾಲು ಹಿಡಿದು ಆಪರೇಷನ್ ಮಾಡಲು ಮುಂದಾಗಿದ್ದಾರೆ. ಇದು ಅವರ ಪೈಶಾಚಿಕ ಮನಸ್ಥಿತಿ ತೋರಿಸುತ್ತದೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ʼʼಲೋಕಲ್ ಅನಸ್ತೇಶಿಯಾ ಕೊಟ್ಟು ಇಂತಹ ಚಿಕಿತ್ಸೆ ಮಾಡಿದರೆ, ಅದರ ನೋವು ತಡೆದುಕೊಳ್ಳುವ ಶಕ್ತಿ ಇವತ್ತಿನ ಹೆಣ್ಣುಮಕ್ಕಳಲ್ಲಿ ಇರುವುದಿಲ್ಲ. ನೋವು ತಾಳಲಾಗದೇ ಪ್ರಜ್ಞೆಕಳೆದುಕೊಳ್ಳಬಹುದು ಅಥವಾ ಸಾವು ಸಂಭವಿಸುವ ಸಾಧ್ಯತೆಗಳು ಇರುತ್ತವೆ. ಒಂದು ಬೇಜವಾಬ್ದಾರಿಯಿಂದ ಹೆಣ್ಣುಮಕ್ಕಳು ಪ್ರಾಣವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಈಗಾಗಲೇ ಜಿಲ್ಲೆಯಲ್ಲಿ ಮೂವರು ಸಾವಿಗೀಡಾಗಿದ್ದಾರೆ, ಆ ಎಚ್ಚರಿಕೆ ವೈದ್ಯರಲ್ಲಿ ಇರಬೇಕಾಗಿತ್ತುʼʼ ಎಂದರು.
ʼʼಈ ಆಸ್ಪತ್ರೆಯಲ್ಲಿ ವೈದ್ಯರು ರೋಗಿಗಳ ಜೊತೆ ಅಹಂಕಾರದಿಂದ ವರ್ತಿಸುತ್ತಾರೆ. ಪ್ರತಿ ಕೇಸ್‌ಗೂ 5000 ರೂ. ಪಡೆಯುತ್ತಾರೆ ಎಂದು ಅಲ್ಲಿಯ ರೋಗಿಗಳ ಸಂಬಂಧಿಕರು ಆರೋಪ ಮಾಡುತ್ತಾರೆ. ಲೋಡ್ ಶೆಡ್ಡಿಂಗ್ ಇದೆ. ಹಾಗಾಗಿ ಆಪರೇಷನ್ ಬೇಡ ಎಂದು ವೈದ್ಯರೊಬ್ಬರು ಹೇಳಿದ್ದರೂ ಮತ್ತೊರ್ವ ವೈದ್ಯರು ಆಪರೇಷನ್ ಗೆ ಮುಂದಾಗಿದ್ದಾರೆ. ಈ ಬಗ್ಗೆ ಮಹಿಳೆಯ ಗಂಡ ಸಿಡಿಪಿಒ(ಮಹಿಳಾ ಮತ್ತು ಕಲ್ಯಾಣ ಅಧಿಕಾರಿ) ಗೆ ದೂರು ನೀಡಿದ್ದಾರೆ. ಆದರೂ ಯಾರು ಕೂಡ ಆಸ್ಪತ್ರೆಗೆ ಭೇಟಿ ನೀಡಿರಲಿಲ್ಲʼʼ ಎಂದು ಹೇಳಿದರು.
"ಆ ಬಳಿಕ ನನಗೆ ಯಾರೋ ಈ ಘಟನೆ ಬಗ್ಗೆ ಮಾಹಿತಿ ನೀಡಿದರು. ಆಗ ನಾನು ಆಸ್ಪತ್ರೆಗೆ ಭೇಟಿ ನೀಡಿ ಮಹಿಳೆಯೊಂದಿಗೆ ಮಾತನಾಡಿದೆ. ಅಲ್ಲಿಯ ವೈದ್ಯರು ಹಾಗೂ ಅಧಿಕಾರಿಗಳನ್ನು ಕರೆಸಿ ವಿಚಾರಿಸಿದ್ದೇನೆ. ಆಮೇಲೆ ಅಲ್ಲಿಯ ಡಿಹೆಚ್‌ಒಗೆ ತನಿಖೆ ನಡೆಸಬೇಕು ಎಂದು ಪತ್ರ ಬರೆದಿದ್ದೇನೆ. ಜಿಲ್ಲಾ ಉಸ್ತುವಾರಿ ಹಾಗೂ ಶಾಸಕರಿಗೂ ನಾನು ಪತ್ರ ಬರೆಯುತ್ತೇನೆ, ಇಂತಹ ಪ್ರಕರಣಗಳು ಮತ್ತೆ ಮರುಕಳಿಸಬಾರದುʼʼ ಎಂದು ನಾಗಲಕ್ಷ್ಮಿ ಚೌಧರಿ ಅವರು ಹೇಳಿದರು.
ವೈದ್ಯರ ನಿರ್ಲಕ್ಷ್ಯಕ್ಕೆ ಮೂವರು ಮಹಿಳೆಯರ ಬಲಿ
ಇದೇ ರೀತಿ ಘಟನೆ ಕಳೆದ ತಿಂಗಳು ತುಮಕೂರು ಜಿಲ್ಲೆಯಲ್ಲಿಯೇ ಸಂಭವಿಸಿತ್ತು. ಹೌದು, ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮೂವರು ಮಹಿಳೆಯರು ನಂಜಾಗಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಸ್ತ್ರೀರೋಗ ತಜ್ಞೆ ಹಾಗೂ ಇಬ್ಬರು ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ನ್ಯಾಷನಲ್ ಹೆಲ್ತ್ ಮಿಷನ್ ಯೋಜನೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಸೂತಿ ತಜ್ಞರು ಹಾಗೂ ಸ್ತ್ರೀರೋಗ ತಜ್ಞರಾದ ಡಾ.ಪೂಜ, ಶುಶ್ರೂಷಣಾಧಿಕಾರಿ ಜಿ.ಪದ್ಮಾವತಿ ಹಾಗೂ ಶಸ್ತ್ರ ಚಿಕಿತ್ಸಾ ವಿಭಾಗದ ತಜ್ಞ ಸಿಬ್ಬಂದಿ ಬಿ.ಆರ್.ಕಿರಣ್ ಅವರನ್ನು ವಜಾ ಮಾಡಲಾಗಿದೆ.
ಪ್ರಕರಣ ಸಂಬಂಧ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಹೆಚ್‌ಓ) ಡಾ.ಮಂಜುನಾಥ್ ತನಿಖೆ ನಡೆಸಿ ವರದಿ ಸಲ್ಲಿಸಿದ್ದರು. ಶಸ್ತ್ರ ಚಿಕಿತ್ಸೆಯ ನಂತರ ಸೋಂಕು ಹರಡಿ ಮಹಿಳೆಯರು ಸಾವನ್ನಪ್ಪಿರುವುದು ಮೇಲು ನೋಟಕ್ಕೆ ಕಂಡು ಬಂದಿದೆ. ಶಸ್ತ್ರ ಚಿಕಿತ್ಸಾ ಪ್ರಕ್ರಿಯೆಯಲ್ಲಿ ಲೋಪ ಕಂಡು ಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದ್ದರು.