No To Child Pregnancy Part -6 |ಪಲ್ಲಟಗಳ ಸೂಕ್ಷ್ಮ ಹಂತ ಕಿಶೋರಾವಸ್ಥೆ; ಸಂಯಮಕ್ಕೆ ಬೇಕು ಜಾಗೃತಿ

ಮಕ್ಕಳ ಸ್ನೇಹಿ ಆರೋಗ್ಯ ಸೇವೆಗಳು, ಸಮಾಲೋಚನೆ ಮತ್ತು ಗರ್ಭನಿರೋಧಕ ವ್ಯವಸ್ಥೆಗಳ ಸುಲಭ ಲಭ್ಯತೆಯಿಂದ ಅಪಾಯಕಾರಿ ಪರಿಣಾಮಗಳನ್ನು ತಗ್ಗಿಸಬಹುದು ಎನ್ನುತ್ತಾರೆ ಮನೋವೈದ್ಯರು.;

Update: 2025-09-08 03:30 GMT

ರಾಜ್ಯದಲ್ಲಿ ಬಾಲ ಗರ್ಭಿಣಿಯರ ಪ್ರಕರಣಗಳು ಹೆಚ್ಚುತ್ತಿರುವುದು ತೀವ್ರ ಕಳವಳ ಮೂಡಿಸಿದೆ. ವಿಧಾನಸಭೆ ಅಧಿವೇಶನದಲ್ಲೂ ಈ ಕುರಿತು ಚರ್ಚೆ ನಡೆದಿರುವುದು ಪ್ರಕರಣದ ಗಂಭೀರತೆಗೆ ಹಿಡಿದ ಕನ್ನಡಿಯಂತಿದೆ. ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ ತಡೆಗೆ ಕಠಿಣ ಕಾನೂನುಗಳು ಜಾರಿಯಲ್ಲಿದ್ದರೂ ಪ್ರಕರಣಗಳ ಏರಿಕೆ ಸಹಜವಾಗಿಯೇ ಆತಂಕ ಸೃಷ್ಟಿಸಿದೆ. 

ಅಪ್ರಾಪ್ತರ ಮೇಲಿನ ಅತ್ಯಾಚಾರ, ದೌರ್ಜನ್ಯಗಳನ್ನು ತಜ್ಞರು ಹಲವು ಆಯಾಮಗಳಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ಮಕ್ಕಳ ರಕ್ಷಣಾ ಆಯೋಗದ ಕೂಡ ಪ್ರಕರಣಗಳಿಗೆ ಕಡಿವಾಣ ಹಾಕಲು ಸಾಕಷ್ಟು ಶ್ರಮಿಸುತ್ತಿದೆ. ಸರ್ಕಾರದ ಮೇಲೂ ಒತ್ತಡ ಹಾಕುತ್ತಿದೆ. ಬಾಲ ಗರ್ಭಿಣಿಯರ ಪ್ರಕರಣಗಳ ಏರಿಕೆಗೆ ಮನಶಾಸ್ತ್ರಜ್ಞರು ಹಲವು ಕಾರಣಗಳು, ಸಾಧ್ಯತೆಗಳನ್ನು ಮುಂದಿಟ್ಟಿದ್ದಾರೆ. 

ಬೆಂಗಳೂರಿನ ವಿದ್ಯಾರಣ್ಯಪುರದ ಅಕ್ಷ್ಯ ವೈದ್ಯಕೀಯ ಕೇಂದ್ರದ  ಮನೋವೈದ್ಯೆ ಡಾ.ಪಾವನ ಅವರು ʼದ ಫೆಡರಲ್‌ ಕರ್ನಾಟಕʼದ ಜೊತೆ ಈ ಕುರಿತು ನೀಡಿದ ಸಂದರ್ಶನದಲ್ಲಿ ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅದರ ಪೂರ್ಣಪಾಠ ಇಲ್ಲಿದೆ. 

1.ಅಪ್ರಾಪ್ತ ಬಾಲೆಯರಲ್ಲಿ ಹೆರಿಗೆಯ ಪ್ರಕರಣಗಳು ಹೆಚ್ಚಲು ಕಾರಣಗಳೇನು?

ಶಾಲಾ ವಯಸ್ಸಿನ ಹುಡುಗಿಯರಲ್ಲಿ ಹೆರಿಗೆ ಪ್ರಮಾಣ ಏರಿಕೆಯಾಗಲು ಹಲವಾರು ಕಾರಣಗಳಿವೆ. ಅದರಲ್ಲಿ ಸಮಗ್ರ ಲೈಂಗಿಕ ಶಿಕ್ಷಣದ ಕೊರತೆಯೂ ಒಂದು. ಅನೇಕ ಹದಿಹರೆಯದವರಿಗೆ ಆರೋಗ್ಯಯುತ ಸಂತಾನೋತ್ಪತ್ತಿ, ಗರ್ಭನಿರೋಧಕ ಕ್ರಮ, ಸುರಕ್ಷಿತ ಹಾಗೂ ವಯೋನುಸಾರ ಸಂಬಂಧಗಳ ಕುರಿತ ಸಮರ್ಪಕ ಮಾಹಿತಿ ಇರುವುದಿಲ್ಲ. ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಅಪಾಯ ಹೆಚ್ಚಲಿದೆ.

ಸ್ನೇಹಿತರ ಒತ್ತಡ ಅಥವಾ ಕುತೂಹಲದಿಂದಾಗಿ ಹದಿಹರೆಯದವರಲ್ಲಿ ಶೀಘ್ರದಲ್ಲೇ ಪ್ರೇಮ ಅಂಕುರಿಸಲಿದೆ. ಮುಂದಾಗುವ ಪರಿಣಾಮಗಳ ಅರಿವಿಲ್ಲದೇ ಲೈಂಗಿಕ ಸಂಬಂಧಗಳಲ್ಲಿ ತೊಡಗಿಸಿಕೊಂಡು ಅಪಾಯವನ್ನು ಮೈ ಮೇಲೆ ಎಳೆದುಕೊಳ್ಳುತ್ತಾರೆ.

ಅಂತರ್ಜಾಲದ ಅಸಮರ್ಪಕ ಬಳಕೆ, ಸಾಮಾಜಿಕ ಮಾಧ್ಯಮಗಳ ಪ್ರಭಾವ ಮತ್ತು ಸುಲಭವಾಗಿ ಲಭ್ಯವಿರುವ ಆನ್‌ಲೈನ್‌ ವಿಷಯವು ಅಪ್ರಾಪ್ತರಲ್ಲಿ ಅಪಾಯಕಾರಿ ವರ್ತನೆಗಳನ್ನು ತಂದೊಡ್ಡಲಿದೆ. ಪೋಷಕರು ಮತ್ತು ಮಕ್ಕಳ ನಡುವೆ ಸಂವಹನದ ಕೊರತೆ, ಯೌವನ ಮತ್ತು ಸಂಬಂಧಗಳ ಬಗ್ಗೆ ಮುಕ್ತ ಚರ್ಚೆಯಿಲ್ಲದಿರುವುದು, ಸಮುದಾಯ ಬೆಂಬಲದ ಕೊರತೆ ಕೂಡ ದೌರ್ಜನ್ಯ ಪ್ರಕರಣಗಳ ಹೆಚ್ಚಳಕ್ಕೆ ಕಾರಣವಾಗಲಿದೆ. 

ಬಡತನ, ಮೇಲ್ವಿಚಾರಣೆ ಕೊರತೆ, ಲಿಂಗ ಅಸಮಾನತೆ ಮತ್ತು ಆರೋಗ್ಯ ಸೇವೆಗಳ ಅಭಾವ ಕೂಡ ಕಿಶೋರಿಯರಲ್ಲಿ ಅಪ್ರಾಪ್ತ ವಯಸ್ಸಲ್ಲೇ ಗರ್ಭ ಧರಿಸಲು ಕಾರಣವಾಗುತ್ತದೆ. 

2. ಕಿಶೋರಿಯರಲ್ಲಿ ಮನಃಪಲ್ಲಟ ಮಾಡುವ ಅಂಶಗಳು ಯಾವುವು?

ಕಿಶೋರಾವಸ್ಥೆ ಅಥವಾ ಬಾಲ್ಯವು ಶಾರೀರಿಕ, ಮಾನಸಿಕ ಮತ್ತು ಸಾಮಾಜಿಕ ಬದಲಾವಣೆಗಳ ಸೂಕ್ಷ್ಮ ಹಂತವಾಗಿದೆ. ಈ ಸಮಯದಲ್ಲಿ ಆಗುವ ಮಾನಸಿಕ ಬದಲಾವಣೆಗಳಿಗೆ ಹಲವು ಕಾರಣಗಳಿವೆ.

ಯೌವನದಲ್ಲಿ ಉಂಟಾಗುವ ಹಾರ್ಮೋನಲ್ ಬದಲಾವಣೆ, ಭಾವನಾತ್ಮಕ ನಿಯಂತ್ರಣ ಮತ್ತು ವರ್ತನೆಯೂ ಒಂದು.

ಹೊಸ ರೀತಿಯ ಚಿಂತನೆ, ಸ್ವಾತಂತ್ರ್ಯದ ಹಂಬಲ ಮತ್ತು ಸಹಪಾಠಿಗಳ ಒಪ್ಪಿಗೆಯ ಅವಶ್ಯಕತೆಯಂತಹ ನಿರ್ಧಾರಗಳಲ್ಲಿಅವಧಾನ ಕೇಂದ್ರೀಕೃತವಾಗಿರುತ್ತದೆ. ಪೋಷಕರ ನಿರ್ಲಕ್ಷ್ಯ ಅಥವಾ ಕಠಿಣ ಶಿಸ್ತು, ಓದಿನ ಒತ್ತಡ ಮತ್ತು ಸಾಮಾಜಿಕ ಮಾಧ್ಯಮಗಳ ಪ್ರಭಾವವು ಭಾವನಾತ್ಮಕ ಅಸ್ಥಿರತೆ ಉಂಟು ಮಾಡಲಿದೆ.

3. ಅಪ್ರಾಪ್ತರಲ್ಲಿ ಇಂತಹ ವರ್ತನೆ ನಿಯಂತ್ರಿಸಲು ಏನು ಮಾಡಬೇಕು?

ಅಪ್ರಾಪ್ತರಲ್ಲಿ ಮೂಡುವ ಪಲ್ಲಟಗಳನ್ನು ನಿಯಂತ್ರಿಸಲು ಕುಟುಂಬ, ಶಾಲೆ, ಸಮುದಾಯ ಮತ್ತು ಸರ್ಕಾರಗಳು ಕೈ ಜೋಡಿಸಬೇಕಾಗಿದೆ. ಶಾಲೆಗಳಲ್ಲಿ ವಯೋನುಸಾರ ಲೈಂಗಿಕ ಶಿಕ್ಷಣ ನೀಡುವುದು ಕಡ್ಡಾಯವಾಗಬೇಕು. ಪೋಷಕರು ಮಕ್ಕಳೊಂದಿಗೆ ಮುಕ್ತವಾಗಿ ವ್ಯವಹರಿಸಬೇಕು. ಮಕ್ಕಳಲ್ಲಿ ಮೂಡುವ ಕೌತುಕಗಳಿಗೆ ಅಳುಕಿಲ್ಲದೇ ಪರಿಹಾರ ಸೂಚಿಸಬೇಕು.

ಸರ್ಕಾರದ ಬೆಂಬಲದಿಂದ ಮಕ್ಕಳ ರಕ್ಷಣಾ ಕಾನೂನುಗಳ ಕಠಿಣ ಜಾರಿ, ಶಿಕ್ಷಕರು ಹಾಗೂ ಆರೋಗ್ಯ ಕಾರ್ಯಕರ್ತರಿಂದ ಸೂಕ್ತ ತರಬೇತಿ ಕೊಡಿಸಬೇಕು. ಶಾಲೆಗಳಲ್ಲಿ ಜೀವನ ಕೌಶಲ ಮತ್ತು ಭಾವನಾತ್ಮಕ ಶಿಕ್ಷಣವನ್ನು ಒದಗಿಸಬೇಕು. ಮಕ್ಕಳಲ್ಲಿ ಆತ್ಮವಿಶ್ವಾಸ, ಒತ್ತಡ ನಿರ್ವಹಣೆ ಮತ್ತು ಡಿಜಿಟಲ್ ಜಾಗೃತಿ ಮೂಡಿಸಬೇಕು.

ಮಕ್ಕಳ ಸ್ನೇಹಿ ಆರೋಗ್ಯ ಸೇವೆಗಳು, ಸಮಾಲೋಚನೆ ಮತ್ತು ಗರ್ಭನಿರೋಧಕ ವ್ಯವಸ್ಥೆಗಳ ಸುಲಭ ಲಭ್ಯತೆಯಿಂದ ಅಪಾಯಕಾರಿ ಪರಿಣಾಮಗಳನ್ನು ತಗ್ಗಿಸಬಹುದಾಗಿದೆ.

ಅವಮಾನ ಕಡಿಮೆ ಮಾಡುವ ಅಭಿಯಾನ, ಆರೋಗ್ಯಕರ ಸಂಬಂಧಗಳ ಉತ್ತೇಜನ, ಅವಧಿಗೂ ಮುನ್ನ ಗರ್ಭಧಾರಣೆಯ ಪರಿಣಾಮಗಳನ್ನು ಕುರಿತು ಅರಿವು ಮೂಡಿಸುವ ಸಮುದಾಯ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕು.

ಕಿಶೋರಿಯರ ಆರೋಗ್ಯ ಕಾರ್ಯಕ್ರಮಗಳಿಗೆ ಸರ್ಕಾರ ಬೆಂಬಲ ನೀಡಬೇಕು. ಮಕ್ಕಳ ರಕ್ಷಣಾ ಕಾನೂನುಗಳ ಕಠಿಣ ಜಾರಿ, ಶಿಕ್ಷಕರು ಹಾಗೂ ಆರೋಗ್ಯ ಕಾರ್ಯಕರ್ತರ ಸಾಮರ್ಥ್ಯ ವೃದ್ಧಿಯಿಂದ ಅಪ್ರಾಪ್ತರ ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಬಹುದಾಗಿದೆ.

ರಾಜ್ಯದಲ್ಲಿ 80,813 ಬಾಲ ಗರ್ಭಿಣಿಯರು

ಆರ್‌ಸಿಎಚ್‌ (ಸಂತಾನೋತ್ಪತ್ತಿ/ಮಕ್ಕಳ ಆರೋಗ್ಯ ) ಪೋರ್ಟಲ್‌ನಲ್ಲಿ ಒದಗಿಸಿರುವ ಅಂಕಿ ಅಂಶಗಳ ಪ್ರಕಾರ 2023ರಿಂದ 2025(ಜುಲೈವರೆಗೆ) ರವರೆಗೆ ಪ್ರತಿ ವರ್ಷ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಮೂರು ವರ್ಷಗಳಲ್ಲಿ ಒಟ್ಟು 80,813 ಬಾಲ ಗರ್ಭಿಣಿಯರ ಪ್ರಕರಣಗಳು ದಾಖಲಾಗಿವೆ.

ಬೆಂಗಳೂರಿನಲ್ಲಿ 8,891, ಬೆಳಗಾವಿಯಲ್ಲಿ 8,169, ವಿಜಯಪುರ-6,229, ತುಮಕೂರು-4,282, ರಾಯಚೂರು-4,100, ಮೈಸೂರು-3,952, ಚಿತ್ರದುರ್ಗ-3,448, ಬಾಗಲಕೋಟೆ-3,384, ಕಲಬುರಗಿ-3,383, ಬಳ್ಳಾರಿ-2,677, ಹಾಸನ-2,526 ಇದೆ. ಪ್ರಕರಣಗಳ ಏರಿಕೆಯನ್ನು ಗಂಭೀರವಾಗಿ ಪರಿಗಣಿಸಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಮಕ್ಕಳು ಮತ್ತು ಮಹಿಳೆಯರ ರಕ್ಷಣೆಗೆ ಕಾವಲು ಸಮಿತಿಗಳನ್ನು ರಚಿಸಲಾಗಿದೆ.

ಸಮಿತಿಯಲ್ಲಿ ಶಿಕ್ಷಕರು, ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರು, ಗ್ರಾಮ ಲೆಕ್ಕಾಧಿಕಾರಿ, ಪೊಲೀಸ್ ಇನ್‌ಸ್ಪೆಕ್ಟರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಇದ್ದು, ವಾರದಲ್ಲಿ ಒಂದು ಬಾರಿಯಾದರೂ ಕಾವಲು ಸಮಿತಿ ಸಭೆ ನಡೆಸಬೇಕು. ಬಾಲ್ಯ ವಿವಾಹ, ಬಾಲ ಗರ್ಭಿಣಿಯರ ಪ್ರಕರಣಗಳು, ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ತಡೆಯುವ ಕುರಿತು ಚರ್ಚಿಸಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ. 

Tags:    

Similar News