ಉಪೇಂದ್ರ, ಪ್ರಿಯಾಂಕಾ ಫೋನ್ ಹ್ಯಾಕ್; ಹಣ ಕೇಳಿದರೆ ಕೊಡಬೇಡಿ ಎಂದು ಮನವಿ
ಉಪೇಂದ್ರ ಅವರ ಫೋನ್ ಕೂಡ ಹ್ಯಾಕ್ ಆಗಿದ್ದು, ತಮ್ಮ ಹಾಗೂ ಪತ್ನಿಯ ಫೋನ್‌ನಿಂದ ಯಾರಾದರೂ ಹಣ ಕೇಳಿ ಕರೆ ಅಥವಾ ಸಂದೇಶ ಕಳುಹಿಸಿದರೆ, ದಯವಿಟ್ಟು ಹಣವನ್ನು ಕಳುಹಿಸಬೇಡಿ ಎಂದು ಅಭಿಮಾನಿಗಳು ಮತ್ತು ಸ್ನೇಹಿತರಿಗೆ ಮನವಿ ಮಾಡಿದ್ದಾರೆ.;
ನಟ ಉಪೇಂದ್ರ ಮತ್ತು ಅವರ ಪತ್ನಿ, ನಟಿ ಪ್ರಿಯಾಂಕಾ ಉಪೇಂದ್ರ ಅವರ ಫೋನ್‌ಗಳು ಹ್ಯಾಕ್ ಆಗಿವೆ.
ಸ್ಯಾಂಡಲ್‌ವುಡ್‌ನ 'ರಿಯಲ್ ಸ್ಟಾರ್' ಉಪೇಂದ್ರ ಮತ್ತು ಅವರ ಪತ್ನಿ, ನಟಿ ಪ್ರಿಯಾಂಕಾ ಉಪೇಂದ್ರ ಅವರ ಮೊಬೈಲ್ ಫೋನ್‌ಗಳು ಸೋಮವಾರ ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಹ್ಯಾಕ್ ಆಗಿವೆ. ಈ ಆಘಾತಕಾರಿ ವಿಷಯವನ್ನು ಸ್ವತಃ ಉಪೇಂದ್ರ ಅವರು ತಮ್ಮ 'ಎಕ್ಸ್' ಖಾತೆಯಲ್ಲಿ ವಿಡಿಯೋ ಮೂಲಕ ಬಹಿರಂಗಪಡಿಸಿದ್ದು, ಅಭಿಮಾನಿಗಳು ಮತ್ತು ಸ್ನೇಹಿತರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಈ ಸೈಬರ್ ವಂಚನೆ ಶುರುವಾಗಿದ್ದು ನಟಿ ಪ್ರಿಯಾಂಕಾ ಉಪೇಂದ್ರ ಅವರಿಗೆ ಬಂದ ಒಂದು ಸಂದೇಶದಿಂದ. ಅವರು ಆನ್‌ಲೈನ್‌ನಲ್ಲಿ ವಸ್ತುವೊಂದನ್ನು ಆರ್ಡರ್ ಮಾಡಿದ್ದರು. ಸೋಮವಾರ, ಸೆಪ್ಟೆಂಬರ್ 15ರಂದು ಬೆಳಿಗ್ಗೆ, ಅಪರಿಚಿತ ಸಂಖ್ಯೆಯಿಂದ ಬಂದ ಸಂದೇಶದಲ್ಲಿ, "ನಿಮ್ಮ ಆರ್ಡರ್ ವಿತರಣೆಗಾಗಿ ಕೆಲವು ವಿಶೇಷ ಅಕ್ಷರಗಳು ಮತ್ತು ಕೋಡ್ ಅನ್ನು ಟೈಪ್ ಮಾಡಿ" ಎಂದು ಸೂಚಿಸಲಾಗಿತ್ತು. ಆ ಕೋಡ್ ಅನ್ನು ಟೈಪ್ ಮಾಡಿದ ತಕ್ಷಣ, ಅವರ ಮೊಬೈಲ್ ಹ್ಯಾಕರ್‌ಗಳ ನಿಯಂತ್ರಣಕ್ಕೆ ಸಿಕ್ಕಿದೆ. ಇದೇ ರೀತಿ ಉಪೇಂದ್ರ ಅವರ ಫೋನ್ ಕೂಡ ಹ್ಯಾಕ್ ಆಗಿದೆ.
ಅಭಿಮಾನಿಗಳಿಗೆ ಉಪೇಂದ್ರ ಮನವಿ
ತಮ್ಮ ಮತ್ತು ಪತ್ನಿಯ ಫೋನ್‌ಗಳು ಹ್ಯಾಕ್ ಆಗಿರುವುದನ್ನು ಖಚಿತಪಡಿಸಿದ ಉಪೇಂದ್ರ, "ನಮ್ಮಿಬ್ಬರ ಫೋನ್‌ನಿಂದ ನಿಮ್ಮ ಯಾರಿಗಾದರೂ ಹಣ ಕೇಳಿ ಕರೆ ಅಥವಾ ಸಂದೇಶ ಬಂದರೆ, ದಯವಿಟ್ಟು ಹಣ ಕಳುಹಿಸಬೇಡಿ. ಅದು ನಾವು ಮಾಡುವ ಕರೆಯಲ್ಲ. ನಮ್ಮ ಫೋನ್ ಸಂಖ್ಯೆಗಳನ್ನು ದುರ್ಬಳಕೆ ಮಾಡಿಕೊಂಡು ವಂಚಕರು ಈ ಕೃತ್ಯ ಎಸಗುತ್ತಿದ್ದಾರೆ" ಎಂದು ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.
ಈ ಘಟನೆಯಿಂದ ಆತಂಕಗೊಂಡಿರುವ ತಾರಾ ದಂಪತಿ, ತಕ್ಷಣವೇ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ. ಸೈಬರ್ ವಂಚನೆಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಅಪರಿಚಿತ ಸಂದೇಶಗಳಿಗೆ ಮತ್ತು ಲಿಂಕ್‌ಗಳಿಗೆ ಪ್ರತಿಕ್ರಿಯಿಸುವಾಗ ಅತ್ಯಂತ ಜಾಗರೂಕರಾಗಿರಬೇಕು ಎಂದು ಈ ಘಟನೆ ಮತ್ತೊಮ್ಮೆ ಎಚ್ಚರಿಸಿದೆ..