ಭೀಮ ಕೊರೆಗಾಂವ್ ಮೇಲೆ ಈಗ ಕನ್ನಡ ಚಿತ್ರರಂಗದ ಕಣ್ಣು

ಪ್ರೀತಿ, ಪ್ರೇಮದ ಕಥೆಗಳನ್ನು ಹೇಳುತ್ತಿದ್ದ ನಿರ್ದೇಶಕ ನಾಗಶೇಖರ ಈಗ ತಮ್ಮ ಹಾದಿಯನ್ನು ಬದಲಿಸಿಕೊಂಡು ಗಂಭೀರ ಚಿತ್ರವೊಂದನ್ನು ಮಾಡಲು ಸಜ್ಜಾಗುತ್ತಿದ್ದಾರೆ. ಅದಕ್ಕೊಂದು ಬಲವಾದ ಕಾರಣವೂ ಇದೆ.

Update: 2024-02-05 06:30 GMT

1818ರ ಜನವರಿ 8ರಂದು ಸಮಾಜದಲ್ಲಿನ ಅಸಮಾನತೆಯ ವಿರುದ್ಧ ನಡೆದ ಭೀಮ ಕೊರೆಗಾಂವ್‌ನ ದಲಿತ-ದಮನಿತರ ಹೋರಾಟವನ್ನು ತೆರೆಗೆ ತರಲು ಕನ್ನಡ ಚಿತ್ರರಂಗ ಸಜ್ಜಾಗುತ್ತಿದೆ. ಪ್ರೀತಿ, ಪ್ರೇಮದ ಕಥೆಗಳನ್ನು ಹೇಳುತ್ತಿದ್ದ ನಿರ್ದೇಶಕ ನಾಗಶೇಖರ ಈಗ ತಮ್ಮ ಹಾದಿಯನ್ನು ಬದಲಿಸಿಕೊಂಡು ಗಂಭೀರ ಚಿತ್ರವೊಂದನ್ನು ಮಾಡಲು ಸಜ್ಜಾಗುತ್ತಿದ್ದಾರೆ. ಅದಕ್ಕೊಂದು ಬಲವಾದ ಕಾರಣವೂ ಇದೆ.

ನಾನೂ ಸಹ ನನ್ನ ಬದುಕಿನ ಒಂದು ಹಂತದಲ್ಲಿ ಶೋಷಿತನಾಗಿದ್ದೆ. ಇದು ನನ್ನ ಹಾಗೂ ನನ್ನೊಳಗಿನ ಕಥೆಯೂ ಹೌದು. ಈ ಚಿತ್ರವು ಭೀಮ ಕೊರೆಗಾಂವ್ ಕದನವನ್ನು ಆಧರಿಸಿದೆ. ಇದು ಅಂದು ಬ್ರಿಟಿಷ್ ಈಸ್ಟ್ ಇಚಿಡಿಯಾ ಕಂಪನಿ ಸೈನ್ಯ ಮತ್ತು ಮರಾಠ ಒಕ್ಕೂಟದ ಪೇಶ್ವೆ ಬಣಗಳು ನಡುವೆ ೧೮೧೮ ಜನವರಿ ೧ರಂದು ನಡೆದ ಐತಿಹಾಸಿಕ ಮಹಾಕದನ, ಈ ಯುದ್ಧದಲ್ಲಿ ೫೦೦ ಮಂದಿ ಮಹಾರ್ ಸಮುದಾಯಕ್ಕೆ ಸೇರಿದ ದಲಿತ ಸೈನಿಕರು ಅನ್ನ ನೀರು, ವಿಶ್ರಾಂತಿ ಇಲ್ಲದೆ, ನಿರಂತರವಾಗಿ ಹನ್ನೆರಡು ಗಂಟೆ ಇಪ್ಪಂತೆಂಟು ಸಾವಿರ ಪೇಶ್ವೆ ಸೈನ್ಯದೊಂದಿಗೆ ಹೋರಾಡಿದ್ದರು. ಮರಾಠ ರ ಸೈನ್ಯವನ್ನು ಹಿಮ್ಮೆಟ್ಟಿಸಿದ್ದರು. ಇದು ಅವರ ಆತ್ಮಾಭಿಮಾನದ ಹೋರಾಟ. , ಎನ್ನುತ್ತಾರೆ ನಾಗಶೇಖರ.

ಭೀಮ ಕೊರೆಗಾಂವ್ ಬಹುಭಾಷಾ ಚಿತ್ರವಾಗಲಿದ್ದು, ಈ ಚಿತ್ರ ಜನವರಿ 1, 2025ಕ್ಕೆ ಸೆಟ್ಟೇರಲಿದೆ ಎನ್ನುತ್ತಾರೆ ನಾಗಶೇಖರ. ಸದ್ಯ ಅವರು ಸಂಜು ಮತ್ತು ಗೀತಾ ಚಿತ್ರದ ಚಿತ್ರೀಕರಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ಚಿತ್ರವನ್ನು ಛಲವಾದಿ ಕುಮಾರ್ ನಿರ್ದೇಶಿಸುತ್ತಿದ್ದು, ನಿರ್ಮಾಪಕರ ಪ್ರಕಾರ ಕಾಶ್ಮೀರ್ ಫೈಲ್ಸ್ ಹಾಗೂ ಕೇರಳ ಫೈಲ್ಸ್ ಮಾದರಿಯ ದಲಿತ್ ಫೈಲ್ಸ್. ಭೀಮ ಕೊರೆಗಾಂವ್ ಚಿತ್ರದ ಕಥೆಯನ್ನು ಡಿ,ಜೆ ಚಕ್ರವರ್ತಿ ಹಾಗೂ ಖ್ಯಾತ ಪತ್ರಕರ್ತ ಸರ್ಜೂ ಕಾಟ್ಕರ್ ಜಂಟಿಯಾಗಿ ಬರೆದಿದ್ದಾರೆ.

ಸುಮಾರು 125 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಈ ಚಿತ್ರ ನಿರ್ಮಾಣವಾಗಲಿದೆ. ಈ ಚಿತ್ರಕ್ಕೆ ಸ್ಟಾರ್ ನಟರೊಬ್ಬರನ್ನು ಕರೆತರುವ ಸಾಧ್ಯತೆ ಇದೆ. ನಾಯಕಿಯ ಪಾತ್ರಕ್ಕೆ ಬಾಲಿವುಡ್ ಟಿ ದೀಪಿಕಾ ಪಡುಕೋಣೆ ಅವರನ್ನು ಕರೆತರುವ ಬಗ್ಗೆ ಮಾತುಕತೆ ನಡೆಯುತ್ತಿದೆ, ಎನ್ನುತ್ತಾರೆ ನಿರ್ಮಾಪಕ ಛಲವಾದಿ ಕುಮಾರ್.

ಛಲವಾದಿ ಕುಮಾರ್ ಮತ್ತು ನಾಗಶೇಖರ ಅವರ ಪ್ರಯತ್ನಕ್ಕೆ ಪಕ್ಕದ ತಮಿಳು ನಾಡಿನಲ್ಲಿ ದಲಿತರ ಸಿನಿಮಾಗಳಿಗೆ ದಕ್ಕುತ್ತಿರುವ ಪ್ರೇಕ್ಷಕರ ಉತ್ಸಾಹಪೂರಿತ ಪ್ರತಿಕ್ರಿಯೆ ಕಾರಣವಿರಬಹುದು. ಮಾಮನ್ನನ್, ಅಸುರನ್, ಪೆರಿಯೂರು ಪೆರುಮಾಳ್, ಕರ್ಣನ್, ಸರ್ವಂ ತಾಳಮಯಂ ಚಿತ್ರಗಳ ಯಶಸ್ಸು ನಾಗಶೇಖರ್ ಅವರಿಗೆ ಸ್ಫೂರ್ತಿಯಾಗಿರುವುದಂತೂ ಸತ್ಯ.

ಕನ್ನಡ ಚಿತ್ರರಂಗಲ್ಲಿ ದಲಿತ-ದಮನಿತರ ಚಿತ್ರಗಳಾಗೇ ಇಲ್ಲ ಎಂದೇನಿಲ್ಲ. ೭೦-೮೦ರ ದಶಕದಲ್ಲಿ ಹಲವಾರು ಚಿತ್ರಗಳು ಬಂದಿವೆ. ಆದರೆ ಆ ಚಿತ್ರಗಳಿಗೆ ಕಲಾತ್ಮಕ ಚಿತ್ರಗಳೆಂಬ ಹಣೆಪಟ್ಟಿ ಬಂದು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಾರದ ಕಾರಣ, ನಿರ್ದೇಶಕರು ನಿರ್ಮಾಪಕರು, ಜಾತಿಸಂಘರ್ಷ ಕುರಿತು ಚಿತ್ರ ಮಾಡುವುದನ್ನೇ ಕೈಬಿಟ್ಟರು. ಏಕೆಂದರೆ ಆರ್ಥಿಕ ರಿಸ್ಕ್ ತೆಗೆದುಕೊಳ್ಳಲು ಯಾರೂ ಸಿದ್ಧರಿಲ್ಲ.

ಇತ್ತೀಚಿನ ವರ್ಷಗಳಲ್ಲಿ ತೆರೆಕಂಡು ನೆಲಕಚ್ಚಿದ ಕಂಬಾಲಪಲ್ಲಿ ಚಿತ್ರವೇ ಇದಕ್ಕೆ ನಿದರ್ಶನ. ಏಳು ಮಂದಿ ದಲಿತರನ್ನು ಕೋಲಾರ ಭಾಗದ ಕಂಬಾಲಪಲ್ಲಿಯಲ್ಲಿ ಜೀವಂತವಾಗಿ ಸುಟ್ಟು ಕೊಂದ ಕಥೆಯನ್ನು ಆದರಿಸಿದ್ದು, ಕಂಬಾಲಪಲ್ಲಿ ಆದರೆ ಈ ಸೋಲುಗಳು ನಾಗಶೇಖರ್ ಮತ್ತು ಕುಮಾರ್ ಅವರನ್ನು ಕಂಗೆಡಿಸಿಲ್ಲ. ಶತಮಾನಗಳ ಕಾಲ ಪೇಶ್ವೆಗಳು ಮಹಾರ್ ಜನಾಂಗದವರನ್ನು ಶೋಷಿಸಿದ ಸಿಟ್ಟಿನ ಫಲಶೃತಿ ಭೀಮ ಕೊರೆಗಾಂವ್. ಸಿದ್ದನಾಕ್ ಮಹಾರ್ ಎಂಬ ಯುವಕ ನೇತೃತ್ವ ವಹಿಸಿದ ಕಥನವಿದು. ನಾಗಶೇಖರ್ ಅವರು ಈಗ ಭೀಮ ಕೊರೆಗಾಂವ್ ಮಹಾನ್ ದಲಿತ ಕಥಾನಕವನ್ನು ತೆರೆಗೆ ತರಲು ಎಲ್ಲ ಸಿದ್ಧತೆಗಳನ್ನೂ ನಡೆಸಿದ್ದಾರೆ.

ಮಹಾರ್ ದಲಿತರ ನೋವು ನಾಗಶೇಖರ್ ಅವರನ್ನು ಕಾಡಿದೆ. ಅವರು ಈ ಕುರಿತು ಸಾಕಷ್ಟು ಸಂಶೋಧನೆ ಅಧ್ಯಯನ ನಡೆಸಿದ್ದಾರೆ. ಚಕ್ರವರ್ತಿ ಇವರೊಂದಿಗೆ ಕೈ ಜೋಡಿಸಿದ್ದಾರೆ. ಈ ಚಿತ್ರವನ್ನು ತುರ್ತಿನಲ್ಲಿ ಮಾಡುವ ಯಾವ ಇರಾದೆಯೂ ನಮ್ಮದಲ್ಲ. ಇದು ದಲಿತರ ಮಹಾಕಥನ. ಇದನ್ನು ಸಕಲ ಸಿದ್ಧತೆ ಮಾಡಿಕೊಂಡೇ ಚಿತ್ರೀಕರಿಸುತ್ತೇವೆ ಎನ್ನುತ್ತಾರೆ ನಾಗಶೇಖರ್.

ಈ ಚಿತ್ರ ನಿರ್ಮಾಣಕ್ಕೆ ಛಲವಾದಿ ಮಹಾಸಭಾ ಹಾಗೂ ಈ ಸಮುದಾಯದ ಗುರುಗಳಾದ ಛಲವಾಗಿ ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮಿಜಿ ಜೊತೆಗಿದ್ದಾರೆ. ದಲಿತ ರಾಜಕೀಯ ನಾಯಕರಾದ ಸಚಿವ ಜಿ. ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ನೆಹರೂ ಓಲೆಕಾರ್ ಮುಂತಾದವರು ಛಲವಾದಿ ಕುಮಾರ್ ಅವರಿಗೆ ಸಾಥ್ ನೀಡಿದ್ದಾರೆ.

ಹಾಗೆಂದು ಭೀಮ ಕೊರೆಗಾಂವ್ ಘಟನೆ ಕುರಿತು ಇದುವರೆಗೆ ಚಿತ್ರವೇ ಆಗಿಲ್ಲ ಎನ್ನುವಂತಿಲ್ಲ. 2017ರಲ್ಲಿ ಭೀಮಾ ಕೊರೆಗಾಂವ್-ಎನ್ ಅನ್‌ಎಂಡಿಂಗ್ ಜರ್ನಿ ಎಂಬ ಸಾಕ್ಷ್ಯಚಿತ್ರವನ್ನು ಸೋಮನಾಥ ವಾಗ್ಮೋರೆ ಅವರು ನಿರ್ದೇಶಿಸಿದ್ದರು. ಈಗ ರಮೇಶ್ ತೆಟೆ ಎಂಬ ನಿರ್ದೇಶಕ ದ ಬ್ಯಾಟಲ್ ಆಫ್ ಕೊರೆಗಾಂವ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ಅರ್ಜುನ್ ರಾಮ್ಫಾಲ್ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಮುಂದಿನವರ್ಷ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Tags:    

Similar News