ಬಾಲಿವುಡ್‌ನ ʼರಾಮಾಯಣʼ ಸಿನಿಮಾಗೆ ಯಶ್ ನಿರ್ಮಾಪಕ
ನಿತೇಶ್ ತಿವಾರಿ ಅವರ ರಾಮಾಯಣ ಸಿನಿಮಾಗೆ ಸ್ಯಾಂಡಲ್‌ವುಡ್ ನಟ ಯಶ್ ಬಂಡವಾಳ ಹೂಡುತ್ತಿದ್ದಾರೆ.;
ಬಾಲಿವುಡ್ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ರಾಮಾಯಣ ಚಿತ್ರೀಕರಣ ಆರಂಭವಾಗಿದ್ದು, ನಿತೇಶ್ ತಿವಾರಿ ಅವರ ರಾಮಾಯಣ ಸಿನಿಮಾಗೆ ಸ್ಯಾಂಡಲ್‌ವುಡ್ ನಟ ಯಶ್ ಬಂಡವಾಳ ಹೂಡುತ್ತಿದ್ದಾರೆ.
ನಟ ಯಶ್ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಿಸಲಿದ್ದಾರೆ. ನಮಿತ್ ಅವರ ಪ್ರೊಡಕ್ಷನ್ ಹೌಸ್ ಪ್ರೈಮ್ ಫೋಕಸ್ ಸ್ಟುಡಿಯೋಸ್ ಮತ್ತು ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಒಟ್ಟಾಗಿ ಈ ಮಹಾಕಾವ್ಯ ಕಥೆಯನ್ನು ತೆರೆಗೆ ತರಲಿವೆ.
ಈ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿರುವ ನಮಿತ್ ಮಲ್ಹೋತ್ರಾ “ಯಶ್ ಅವರಲ್ಲಿ ನಮ್ಮ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಆಕಾಂಕ್ಷೆಯನ್ನು ಕಂಡುಕೊಂಡಿದ್ದೇನೆ. ಕೆಜಿಎಫ್ ಚಾಪ್ಟರ್ 2 ರ ಯಶಸ್ಸಿಗೆ ಕರ್ನಾಟಕದಿಂದ ಅವರ ಪ್ರಯಾಣದಿಂದ ನಾನು ಸ್ಫೂರ್ತಿ ಪಡೆದಿದ್ದೇನೆ. ಇದರೊಂದಿಗೆ ಪ್ರಮುಖ ಜಾಗತಿಕ ಪ್ರಭಾವವನ್ನು ಸೃಷ್ಟಿಸಲು ಸಹಾಯ ಮಾಡುವ ಉತ್ತಮ ಪಾಲುದಾರನನ್ನು ನಾನು ಕಂಡುಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಯಶ್,ನನ್ನ ಮತ್ತು ನಮಿತ್ ನಡುವೆ ಸಾಕಷ್ಟು ಚರ್ಚೆಗಳು ನಡೆದವು. ನಮ್ಮ ನಡುವಿನ ಸಾಕಷ್ಟು ಕಲ್ಪನೆಗಳು ಒಂದೇ ರೀತಿಯಲ್ಲಿದ್ದವು. ಭಾರತೀಯ ಚಿತ್ರರಂಗದ ದೃಷ್ಟಿಯಲ್ಲಿ ನಮ್ಮ ವಿಚಾರಗಳು ಸಂಪೂರ್ಣವಾಗಿ ಹೊಂದಾಣಿಕೆಯಾಯಿತು. ಈ ಚರ್ಚೆಗಳ ಸಮಯದಲ್ಲಿ, ರಾಮಾಯಣದ ವಿಷಯವು ಬಂತು" ಎಂದು ಯಶ್ ಹೇಳಿದ್ದಾರೆ.
ರಾಮಾಯಣವು ನಮ್ಮ ಬದುಕಿನೊಂದಿಗೆ ಬೆಸೆಯಲ್ಪಟ್ಟಿದೆ. ಅದು ನಮ್ಮೆಲ್ಲರಿಗೂ ಚೆನ್ನಾಗಿ ತಿಳಿದಿದೆ ಎಂದು ನಾವು ನಂಬುತ್ತೇವೆ. ಆದರೂ ಪ್ರತಿಯೊಂದು ಹೊಸ ಮುಖಾಮುಖಿಯು ಹೊಸದೊಂದು ಬುದ್ಧಿವಂತಿಕೆಯನ್ನು ಅನಾವರಣಗೊಳಿಸುತ್ತದೆ, ಹೊಸ ಜ್ಞಾನವನ್ನು ಮತ್ತು ಅನನ್ಯವಾದ ದೃಷ್ಟಿಕೋನಗಳನ್ನು ನೀಡುತ್ತದೆ" ಎಂದು ಯಶ್ ತಿಳಿಸಿದ್ದಾರೆ.
ರಾಮಾಯಣ ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾಗಿ ಮತ್ತು ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿದ್ದಾರೆ. ಯಶ್ ಅವರು ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತದೆ.