ಸ್ಪೈಸ್ ಜೆಟ್: 1,000 ಉದ್ಯೋಗಿಗಳ ವಜಾ ಸಾಧ್ಯತೆ

Update: 2024-02-12 11:27 GMT

ಫೆ.12- ಹಲವು ಸಂಕಷ್ಟಗಳನ್ನು ಎದುರಿಸುತ್ತಿರುವ ಸ್ಪೈಸ್‌ಜೆಟ್, ಮುಂಬರುವ ದಿನಗಳಲ್ಲಿ ಕನಿಷ್ಠ 1,000 ಉದ್ಯೋಗಿಗಳ ವಜಾಕ್ಕೆ ಯೋಜಿಸಿದೆ. ವಿಮಾನ ಸಂಸ್ಥೆಯು ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಲು ಮತ್ತು ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಕೆಲಸ ಮಾಡುತ್ತದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಹಣಕಾಸು ಬಿಕ್ಕಟ್ಟು, ಕಾನೂನು ಕದನಗಳು ಮತ್ತು ಇನ್ನಿತರ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸೇವೆಯಲ್ಲಿರುವ ವಿಮಾನಗಳ ಸಂಖ್ಯೆಗೆ ಹೋಲಿಸಿದರೆ ಮಾನವಶಕ್ತಿ ಅಧಿಕ ಇರುವುದರಿಂದ, ಹೆಚ್ಚುವರಿ ಸಿಬ್ಬಂದಿಯನ್ನು ಕಳಿಸಲು ನಿರ್ಧರಿಸಿದೆ. ಎಷ್ಟು ಜನರನ್ನು ವಜಾಗೊಳಿಸ ಲಾಗುವುದು ಎಂಬ ಕುರಿತು ಈ ವಾರ ನಿರ್ಧಾರ ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಪೈಸ್‌ಜೆಟ್ ವಕ್ತಾರರನ್ನು ಸಂಪರ್ಕಿಸಿದಾಗ, ಲಾಭದಾಯಕ ಬೆಳವಣಿಗೆಗೆ ಮಾನವಶಕ್ತಿಯ ತರ್ಕಬದ್ಧಗೊಳಿಸುವಿಕೆ ಸೇರಿದಂತೆ ಹಲವು ಕ್ರಮ ಗಳನ್ನು ಆರಂಭಿಸಲಾಗಿದೆ. ಆದರೆ, ಎಷ್ಟು ಸಿಬ್ಬಂದಿ ಕಡಿತ ಎಂಬ ಮಾಹಿತಿ ಇಲ್ಲ ಎಂದು ಹೇಳಿದರು.

ಶೇ. 10-15 ಸಿಬ್ಬಂದಿ ಕಡಿತ: ವಿಮಾನಯಾನ ಸಂಸ್ಥೆ ಸುಮಾರು 9,000 ಉದ್ಯೋಗಿಗಳನ್ನು ಹೊಂದಿದ್ದು, ಅದರಲ್ಲಿ ಶೇ.10-15 ರಷ್ಟು ಕಡಿಮೆ ಮಾಡಲು ನೋಡುತ್ತಿದೆ. ಇದರಿಂದ ವಾರ್ಷಿಕ 100 ಕೋಟಿ ರೂ. ಉಳಿತಾಯ ಆಗಲಿದೆ ಮತ್ತು ಸುಮಾರು 1,350 ಜನರು ಉದ್ಯೋಗ ಕಳೆದುಕೊಳ್ಳುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಆದರೆ, ಉದ್ಯೋಗ ಕಡಿತದ ಕುರಿತು ಸ್ಪೈಸ್‌ಜೆಟ್‌ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.ಕೆಲವು ಪ್ರಾಂತೀಯ ಸಂಪರ್ಕ ಕಾರ್ಯಕ್ರಮ (ಆರ್‌ಸಿಎಸ್‌, ರೀಜನಲ್ ಕನೆಕ್ಟಿವಿಟಿ ಸ್ಕೀಮ್) ಮಾರ್ಗಗಳಲ್ಲಿ ಸಂಸ್ಥೆ ಕಾರ್ಯಾಚರಣೆ ನಿಲ್ಲಿಸಿದೆ. ಅಲ್ಲಿ ಹೆಚ್ಚುವರಿ ಮಾನವಶಕ್ತಿ,ವಿಶೇಷವಾಗಿ ಕಡಿಮೆ ಸಂಬಳ ಹೊಂದಿರುವ ಸಿಬ್ಬಂದಿ ಇದ್ದಾರೆ. ಅಂಥವರನ್ನು ಬೇರೆಡೆಗೆ ಸ್ಥಳಾಂತರಿಸುವುದು ಸವಾಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಸ್ತುತ ಸ್ಪೈಸ್‌ ಜೆಟ್ 30 ಕ್ಕಿಂತ ಕಡಿಮೆ ವಿಮಾನಗಳನ್ನು ಹೊಂದಿದೆ. ಆರಂಭದಿಂದಲೂ ಅನೇಕ ಮಾಲೀಕತ್ವ ಬದಲಾವಣೆಗಳಿಗೆ ಒಳಗಾಗಿದೆ. ಪ್ರಸ್ತುತ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಅಜಯ್ ಸಿಂಗ್ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿವಿಧ ಹೂಡಿಕೆದಾರರಿಂದ ಹಣ ಸಂಗ್ರಹಿಸುವ ಪ್ರಕ್ರಿಯೆಯಲ್ಲಿದೆ. ಜನವರಿ 26 ರಂದು ಸೆಕ್ಯೂರಿಟಿಗಳ ವಿತರಣೆಯಿಂದ ಸಂಗ್ರಹಿಸಲು ಉದ್ದೇಶಿಸಿರುವ 2,250 ಕೋಟಿ ರೂ.ಗಳ ಮೊದಲ ಕಂತಾಗಿ 744 ಕೋಟಿ ರೂ. ಸ್ವೀಕರಿಸಿದೆ.

ದೇಶ ಜಗತ್ತಿನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಾಗರಿಕ ವಿಮಾನಯಾನ ಮಾರುಕಟ್ಟೆಗಳಲ್ಲಿ ಒಂದು. ಸ್ಪೈಸ್‌ಜೆಟ್ 2023ರಲ್ಲಿ 83.90 ಲಕ್ಷ ಪ್ರಯಾಣಿಕರನ್ನು ಸಾಗಿಸಿತು ಮತ್ತು ದೇಶಿ ಮಾರುಕಟ್ಟೆಯಲ್ಲಿ ಶೇ.5.5 ಪಾಲು ಹೊಂದಿದೆ.


Tags:    

Similar News