ದೆಹಲಿ: ಉತ್ತರ ಕಾಶಿಯ ಸಿಲ್ಕ್ಯಾರ್ ಸುರಂಗದಿಂದ 41 ಜನರ ಜೀವ ರಕ್ಷಿಸಿದ್ದ ಹಸನ್ ಮನೆ ಧ್ವಂಸ
ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯಾಚರಣೆಗೆ ಸಾರ್ವಜನಿಕರಿಂದ ವಿರೋಧ;
ಈಚೆಗೆ ಉತ್ತರಕಾಶಿಯ ಸಿಲ್ಕ್ಯಾರ್ ಸುರಂಗದಲ್ಲಿ ಸಿಲುಕಿದ್ದ 41 ಜನ ಕಾರ್ಮಿಕರ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗಣಿಗಾರರ ಗುಂಪಿನ ಮುಖ್ಯಸ್ಥ ವಕೀಲ್ ಹಸನ್ ಅವರ ಮನೆಯನ್ನು ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಬುಧವಾರ ನೆಲಸಮಗೊಳಿಸಿದೆ.
ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಬುಲ್ಡೋಜರ್ ತಂದು ಹಸನ್ ಅವರ ಮನೆಯನ್ನುಕೆಡವಿದ್ದು, ಅವರನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಮನೆ ನೆಲಸಮಗೊಳಿಸುವುದಕ್ಕಿಂತ ಮುಂಚೆ ಡಿಡಿಎ ಯಾವುದೇ ನೋಟಿಸ್ ಜಾರಿ ಮಾಡಿರಲಿಲ್ಲ ಎಂದು ಹಸನ್ ವಿಡಿಯೋವೊಂದರಲ್ಲಿ ಆರೋಪಿಸಿದ್ದಾರೆ. ʻನಾನು ಬಹುಮಾನವಾಗಿ ಕೇಳಿದ್ದು ನನ್ನ ಮನೆ ಮಾತ್ರ. ಆದರೆ, ಡಿಡಿಎ ಅಧಿಕಾರಿಗಳು ಯಾವುದೇ ಸೂಚನೆ ನೀಡದೆ ನನ್ನ ಮನೆಯನ್ನು ಕೆಡವಿದ್ದಾರೆ. ಆದರೆ, ಸರ್ಕಾರ ಈ ಹಿಂದೆ ನನ್ನ ಮನೆಗೆ ಹಾನಿ ಮಾಡುವುದಿಲ್ಲ ಎಂದು ಭರವಸೆ ನೀಡಿತ್ತುʼ ಎಂದಿದ್ದಾರೆ.
ರಕ್ಷಣಾ ತಂಡದ ಮತ್ತೊಬ್ಬ ಸದಸ್ಯ ಮುನ್ನಾ ಖುರೇಷಿ ಮಾತನಾಡಿ, ಪೊಲೀಸರು ಹಸನ್ ಅವರ ಅಪ್ರಾಪ್ತ ವಯಸ್ಸಿನ ಮಕ್ಕಳನ್ನು ಠಾಣೆಗೆ ಕರೆದುಕೊಂಡು ಹೋಗಿ ಥಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಉದ್ದೇಶಿತ ಅಭಿವೃದ್ಧಿ ಕಾಮಗಾರಿಗಾಗಿ ನಿಗದಿ ಪಡಿಸಿರುವ ಜಾಗದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಡಿಡಿಎ ಅಧಿಕಾರಿಗಳು ತಿಳಿಸಿದ್ದಾರೆ. ಫೆ. 28 ರಂದು ಡಿಡಿಎ ಸ್ವಾಧೀನಪಡಿಸಿಕೊಂಡ ಭೂಮಿಯಿಂದ ಅತಿಕ್ರಮಣವನ್ನು ತೆರವು ಮಾಡಲು ಕಾರ್ಯಾಚರಣೆ ನಡೆಸಿರುವುದಾಗಿ ತಿಳಿಸಿದ್ದಾರೆ.
ಕಳೆದ ವರ್ಷ ನವೆಂಬರ್ 15 ರಂದು ಉತ್ತರ ಕಾಶಿಯಲ್ಲಿ ಸಿಲ್ಕ್ಯಾರ್ ಸುರಂಗ ಮಾರ್ಗ ನಿರ್ಮಾಣದ ವೇಳೆ ಸುರಂಗ ಕುಸಿದು ಸಿಲುಕಿಕೊಂಡಿದ್ದ 41 ಕಾರ್ಮಿಕರನ್ನು ರಕ್ಷಿಸುವಲ್ಲಿ ಹಸನ್ ಮತ್ತು ಗಣಿಗಾರರ ತಂಡ ಪ್ರಮುಖ ಪಾತ್ರ ನಿರ್ವಹಿಸಿತ್ತು. 41 ಕಾರ್ಮಿಕರನ್ನು ಯಶಸ್ವಿಯಾಗಿ ಸ್ಥಳಾಂತರಿಸಿದ್ದರು. ಉತ್ತರಾಖಂಡದ ಮುಖ್ಯಮಂತ್ರಿ ಘೋಷಿಸಿದ್ದ ಪರಿಹಾರದ ಮೊತ್ತವನ್ನೂ ತಂಡ ಸ್ವೀಕರಿಸಿರಲಿಲ್ಲ.