Adani Group | ಅದಾನಿ ಕಂಪನಿಯಲ್ಲಿ ಫ್ರಾನ್ಸ್‌ನ ಟೋಟಲ್ ಎನರ್ಜೀಸ್ ಹೂಡಿಕೆ ಸ್ಥಗಿತ; ಷೇರು ಮೌಲ್ಯ 11 ಶೇಕಡಾ ಇಳಿಕೆ
ಗೌತಮ್ ಮತ್ತು ಸಾಗರ್ ಅದಾನಿ ಅವರು ಭಾರತದ ಅತಿದೊಡ್ಡ ಸೌರ ಪಾರ್ಕ್‌ನ ಒಂದು ಭಾಗವನ್ನು ಫ್ರಾನ್ಸ್‌ನ ಟೋಟಲ್ ಎನರ್ಜಿಸ್‌ಗೆ ಮಾರಾಟ ಮಾಡಿದೆ. ಈ ಯೋಜನೆಗೆ ಹಿನ್ನಡೆಯಾಗುವ ಸಾಧ್ಯತೆಗಳಿವೆ.;
ಅಮೆರಿಕದ ನ್ಯಾಯಾಲಯವು ಭಾರತದ ಉದ್ಯಮಿ ಗೌತಮ್ ಅದಾನಿ ವಿರುದ್ಧ ಮಾಡಿರುವ ಬಂಧನ ವಾರಂಟ್ ನಿಧಾನವಾಗಿ ಪರಿಣಾಮ ಬೀರಲು ಆರಂಭಿಸಿದೆ. ಫ್ರಾನ್ಸ್ ಮೂಲದ ಟೋಟಲ್ ಎನರ್ಜೀಸ್ ಸಂಸ್ಥೆಯು ಅಮೆರಿಕದ ಪ್ರಕರಣದಲ್ಲಿ ಸ್ಪಷ್ಟತೆ ಮೂಡುವ ತನಕ ಅದಾನಿ ಕಂಪನಿಯಲ್ಲಿ ಯಾವುದೇ ರೀತಿ ಬಂಡವಾಳ ಹೂಡುವುದಿಲ್ಲ ಎಂದು ಹೇಳಿದೆ. ಈ ಹೇಳಿಕೆ ನೀಡಿದ ತಕ್ಷಣ ಅದಾನಿ ಗ್ರೀನ್ ಎನರ್ಜಿ ಷೇರುಗಳು ಮೌಲ್ಯ ಶೇಕಡಾ 11ರಷ್ಟು ಕುಸಿತ ಕಂಡಿದೆ.
ಸೋಮವಾರ ಟೋಟಲ್ ಎನರ್ಜಿಸ್ ಪತ್ರಿಕಾ ಹೇಳಿಕೆ ಪ್ರಕಟಿಸಿತ್ತು. ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್‌ನ (AGEL) ವ್ಯವಹಾರದ ಮೇಲೆ ಹಾಗೂ ಅದಾನಿ ಗ್ರೂಪ್ ಕಾರ್ಯನಿರ್ವಾಹಕರ ಮೇಲಿನ ದೋಷಾರೋಪವು ಅಮೆರಿಕದ ಪೊಲೀಸರ ಸಾರ್ವಜನಿಕ ಪ್ರಕಟಣೆ ಮೂಲಕ ಗೊತ್ತಾಗಿದೆ. ಟೋಟಲ್ ಎನರ್ಜೀಸ್ ಯಾವುದೇ ರೀತಿಯ ಭ್ರಷ್ಟಾಚಾರವನ್ನು ಪ್ರೇರೇಪಿಸುವುದಿಲ್ಲ ಎಂದು ಹೇಳಿದೆ. ಅಲ್ಲದೆ ಯಾವುದೇ ಬಂಡವಾಳ ಹೂಡಿಕೆ ಮಾಡುವುದಿಲ್ಲ. ಆದರೆ ಈ ಹೇಳಿಕೆಯು ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್ ಅಥವಾ ಅದಕ್ಕೆ ಸಂಬಂಧಿಸಿದ ಕಂಪನಿಗಳ ವಿರುದ್ಧವಲ್ಲ ಎಂದು ಹೇಳಿದೆ.
ಗೌತಮ್, ಸಾಗರ್ ಅದಾನಿಗೆ ತನಿಖೆ ಬಗ್ಗೆ ತಿಳಿದಿತ್ತು
ಅಮೆರಿಕದಲ್ಲಿ ಮಾಡಿರುವ ಆರೋಪಗಳಿಗೆ ಟೋಟಲ್ ಎನರ್ಜಿಸ್ ಗುರಿಯಾಗಿಲ್ಲ. ಅದಾನಿ ಗ್ರೀನ್ ಕಂಪನಿಯ ಸಣ್ಣ ಪ್ರಮಾಣದ (19.75 ಪ್ರತಿಶತ) ಷೇರುದಾರರಾಗಿ ಮತ್ತು ಜಂಟಿ ಉದ್ಯಮ ಪಾಲುದಾರರಾಗಿ (50 ಪ್ರತಿಶತ) ಇರುವ ಕಾರಣ ತನ್ನ ಹಿತಾಸಕ್ತಿಗಳನ್ನು ರಕ್ಷಿಸಲು ಎಲ್ಲಾ ಸಂಬಂಧಿತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಅದಾನಿ ಗ್ರೀನ್ ಎನರ್ಜಿ ಕಂಪನಿ ಜೊತೆಗಿನ ಪ್ರಾಜೆಕ್ಟ್ ಕಂಪನಿಗಳಲ್ಲಿ ಎದ್ದಿರುವ ಆರೋಪಗಳು ಮತ್ತು ಅವುಗಳ ಪರಿಣಾಮಗಳನ್ನು ಸ್ಪಷ್ಟಪಡಿಸುವವರೆಗೆ ಟೋಟಲ್ ಎನರ್ಜಿಸ್ ಯಾವುದೇ ಹೊಸ ಹಣಕಾಸು ಹೂಡಿಕೆ ಮಾಡುವುದಿಲ್ಲ ಎಂದು ಹೇಳಿಕೆ ತಿಳಿಸಿದೆ.
ತಮ್ಮ ಕಂಪನಿಯ ವಿರುದ್ಧ ಅಮರಿಕದಲ್ಲಿ ತನಿಖೆ ಆರಂಭಗೊಂಡಿದೆ ಎಂಬ ಮಾಹಿತಿ ಗೊತ್ತಿದ್ದ ಹೊರತಾಗಿಯೂ ಗೌತಮ್ ಮತ್ತು ಸಾಗರ್ ಅದಾನಿ ಭಾರತದ ಅತಿದೊಡ್ಡ ಸೋಲಾರ್ ಪಾರ್ಕ್‌ನ ಒಂದು ಭಾಗವನ್ನು ಫ್ರಾನ್ಸ್‌ನ ಟೋಟಲ್ ಎನರ್ಜಿಸ್‌ಗೆ ಮಾರಾಟ ಮಾಡಿದೆ ಎಂಬುದಾಗಿ ರಾಯಿಟರ್ಸ್ ವರದಿ ಮಾಡಿದೆ.