ಐವರು ಶ್ರೀಮಂತರ ಸಂಪತ್ತು ದ್ವಿಗುಣ, 5 ಶತಕೋಟಿ ಜನ ಬಡವರು: ಆಕ್ಸ್ಫ್ಯಾಮ್

Update: 2024-02-05 06:30 GMT

ದಾವೋಸ್, ಜನವರಿ 15: 2020 ರ ಬಳಿಕ ಐವರು ಅತಿ ಶ್ರೀಮಂತರ ಐಶ್ವರ್ಯ ದುಪ್ಪಟ್ಟಾಗಿದೆ. ಒಂದು ದಶಕದೊಳಗೆ ಜಗತ್ತು ಮೊದಲ ಟ್ರಿಲಿಯನೇರ್ ನ್ನುಕಾಣಲಿದೆ. ಅದೇ ಹೊತ್ತಿನಲ್ಲಿ ಬಡತನವನ್ನು ಕೊನೆಗೊಳಿಸಲು ಎರಡು ಶತಮಾನಕ್ಕಿಂತ ಹೆಚ್ಚು ಸಮಯ ಬೇಕಾಗಲಿದೆ ಎಂದು ಆಕ್ಸ್ ಫ್ಯಾಮ್ ಹೇಳಿದೆ.

ವರ್ಲ್ಡ್ ಎಕನಾಮಿಕ್ ಫೋರಮ್ (ವಿಶ್ವ ಆರ್ಥಿಕ ವೇದಿಕೆ)ಯಲ್ಲಿ ವಾರ್ಷಿಕ ಅಸಮಾನತೆ ವರದಿ ಬಿಡುಗಡೆಗೊಳಿಸಿ, ವಿಶ್ವದ ಅಗ್ರ 10 ಕಂಪನಿಗಳಲ್ಲಿ ಏಳರ ಸಿಇಒ ಅಥವಾ ಪ್ರಮುಖ ಶೇರುದಾರ ಶತಕೋಟಿಪತಿಗಳಾಗಿದ್ದಾರೆ ಎಂದು ಹೇಳಿತು.

148 ಪ್ರಮುಖ ಕಂಪನಿಗಳು 1.8 ಟ್ರಿಲಿಯನ್ ಡಾಲರ್ ಲಾಭ ಗಳಿಸಿವೆ. ಲಾಭ ಶೇ.52 ರಷ್ಟು ಹೆಚ್ಚಿದೆ ಮತ್ತು ಷೇರುದಾರರಿಗೆ ಭಾರಿ ಬೋನಸ್ ನೀಡಲಾಗಿದೆ. ಆದರೆ, ನೂರಾರು ದಶಲಕ್ಷ ಮಂದಿ ವೇತನದಲ್ಲಿ ಕಡಿತ ಎದುರಿಸಿದ್ದಾರೆ. ಸಾರ್ವಜನಿಕ ಸೇವೆಗಳು, ಕಾರ್ಪೊರೇಟ್ ನಿಯಂತ್ರಣ, ಏಕತೆಯ ಉತ್ತೇಜನ ಮತ್ತು ಸಂಪತ್ತಿನ ವಿತರಣೆ ಮತ್ತು ಹೆಚ್ಚುವರಿ ಲಾಭಕ್ಕೆ ತೆರಿಗೆ ಹೆಚ್ಚಳ ಸೇರಿದಂತೆ ಸಾರ್ವಜನಿಕ ಕ್ರಿಯಾಶೀಲತೆಯ ನೂತನ ಯುಗಕ್ಕೆ ದಾರಿ ಮಾಡಿಕೊಡಬೇಕು ಎಂದು ಆಕ್ಸ್ ಫ್ಯಾಮ್ ಹೇಳಿದೆ.

ಜಗತ್ತಿನ ಐವರು ಅತಿ ಶ್ರೀಮಂತರ ಸಂಪತ್ತು 405 ಶತಕೋಟಿಯಿಂದ 869 ಶತಕೋಟಿ ಡಾಲರ್ ಗೆ ಹೆಚ್ಚಿದೆ; ಗಂಟೆಗೆ 14 ದಶಲಕ್ಷ ಡಾಲರ್ ಗಳಿಸಿದ್ದಾರೆ. ಅದೇ ಹೊತ್ತಿನಲ್ಲಿ ಐದು ಶತಕೋಟಿ ಜನ ಬಡವರಾದರು. ಇದೇ ಪ್ರವೃತ್ತಿ ಮುಂದುವರಿದರೆ, ಬಡತನ ನಿವಾರಣೆಗೆ 229 ವರ್ಷ ಬೇಕಾಗುತ್ತದೆ.

ʻಅಸಮಾನತೆ ಇಂಕ್ʼ ಹೆಸರಿನ ಈ ವರದಿ ಪ್ರಕಾರ, ವಿಶ್ವದ ಹತ್ತು ಪ್ರಮುಖ ಕಂಪನಿಗಳ ಒಟ್ಟು ಮೌಲ್ಲುಯ 10.2 ಟ್ರಿಲಿಯನ್ ಡಾಲರ್. ಇದು ಆಫ್ರಿಕ ಮತ್ತು ಲ್ಯಾಟಿನ್ ಅಮೆರಿಕದ ಎಲ್ಲ ದೇಶಗಳ ಸಂಯೋಜಿತ ಜಿಡಿಪಿಗಿಂತ ಹೆಚ್ಚು. ಸಾಂಕ್ರಾಮಿಕ ರೋಗ, ಆರ್ಥಿಕ ಅಸಮಾನತೆ ಮತ್ತು ಯುದ್ಧದ ಆರ್ಥಿಕ ಪರಿಣಾಮವನ್ನು ಶತಕೋಟಿ ಜನರು ಎದುರಿಸುತ್ತಿದ್ದಾರೆ. ಆದರೆ, ಕೋಟ್ಯಧಿಪತಿಗಳ ಸಂಪತ್ತು ಹೆಚ್ಚುತ್ತಲೇ ಇದೆ. ʻಈ ಅಸಮಾನತೆಯು ಆಕಸ್ಮಿಕವಲ್ಲ; ಬಿಲಿಯನೇರ್ ವರ್ಗಗಳು ಇತರರಿಗಿಂತ ಹೆಚ್ಚು ಹಣ ತಮಗೆ ತಲುಪುವುದನ್ನು ಖಾತ್ರಿಪಡಿಸಿಕೊಳ್ಳುತ್ತಿವೆ ʼಎಂದು ಆಕ್ಸ್ಫ್ಯಾಮ್ ಇಂಟರ್ನ್ಯಾಶನಲ್ನ ಸಿಇಒ ಅಮಿತಾಬ್ ಬೆಹರ್ ಹೇಳಿದರು.

ಜಾಗತಿಕ ಜನಸಂಖ್ಯೆಯ ಶೇ. 21 ರಷ್ಟು ಮಂದಿ ಇರುವ ಶ್ರೀಮಂತ ರಾಷ್ಟ್ರಗಳು ಒಟ್ಟು ಸಂಪತ್ತಿನ ಶೇ. 69 ರಷ್ಟನ್ನು ಹೊಂದಿವೆ ಮತ್ತು ಒಟ್ಟು ಸಂಪತ್ತಿನಲ್ಲಿ ಶೇ.74ರ ಮೇಲೆ ನಿಯಂತ್ರಣ ಹೊಂದಿವೆ ಎಂದು ಆಕ್ಸ್ಫ್ಯಾಮ್ ಹೇಳಿದೆ.

(ಪಿಟಿಐ)



Similar News