'ಪಾಕಿಸ್ತಾನ ಜಿಂದಾಬಾದ್' ಘೋಷಣೆ ಕೂಗಲಾಗಿದೆಯೇ?: ಬಿಜೆಪಿಯಿಂದ ಅಸ್ಪಷ್ಟ ವಿಡಿಯೋದ ರಾಜಕೀಕರಣ
ಸೋಲಿನ ಹತಾಶೆಯಲ್ಲಿ ಬಿಜೆಪಿಯವರು ‘ಹುಸೇನ್‌ಸಾಬ್ ಜಿಂದಾಬಾದ್ʼ’ ಘೋಷಣೆಯನ್ನು ʼಪಾಕಿಸ್ತಾನ್ ಜಿಂದಾಬಾದ್ʼ ಘೋಷಣೆ ಕೂಗಲಾಗಿದೆ ಎಂದು ತಿರುಚಿದ್ದಾರೆಯೇ? ಮಾಧ್ಯಮಗಳು ಕಾಂಗ್ರೆಸ್ ನಾಯಕನ ಮೇಲೆ ಮುಗಿಬಿದ್ದಿದ್ದೇಕೆ?;
ಮಂಗಳವಾರ ರಾಜ್ಯಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಗೆಲುವು ಸಾಧಿಸಿದ ಕಾಂಗ್ರೆಸ್‌ನ ಸೈಯದ್ ನಾಸಿರ್ ಹುಸೇನ್ ಅವರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸುತ್ತಿದ್ದಾಗ ಅವರ ಬೆಂಬಲಿಗನೊಬ್ಬ ʼಪಾಕಿಸ್ತಾನ್ ಜಿಂದಾಬಾದ್ʼ ಘೋಷಣೆ ಕೂಗಿದ್ದಾರೆ ಎಂದು ಬಿಜೆಪಿ ಸೇರಿದಂತೆ ಹಲವು ಮಾಧ್ಯಮಗಳು ಆರೋಪ ಮಾಡುತ್ತಿವೆ. ಆದರೆ ಅಲ್ಲಿ ʼಹುಸೇನ್ ಸಾಬ್ ಜಿಂದಾಬಾದ್ʼ ಎಂದು ಘೋಷಣೆ ಕೂಗಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ.
ಈ ವಿಚಾರ ಇದೀಗ ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಕಾಂಗ್ರೆಸ್ - ಬಿಜೆಪಿ ನಡುವೆ ತೀವ್ರ ತಿಕ್ಕಾಟಕ್ಕೆ ಕಾರಣವಾಗಿದೆ. ಮಾಧ್ಯಮಗಳು ಈ ವಿಚಾರವನ್ನು ದೊಡ್ಡ ಸುದ್ದಿಯಾಗಿಸುವ ಜೊತೆಜೊತೆಗೆ ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡಿದೆ.
'ಪಾಕಿಸ್ತಾನ ಜಿಂದಾಬಾದ್' ಎಂದು ಘೋಷಣೆ ಕೂಗಲಾಗಿದೆಯೇ?
ಕನ್ನಡ ಸುದ್ದಿ ಮಾಧ್ಯಮಗಳು ತೋರಿಸಿರುವ ವಿಡಿಯೋದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿರುವುದಕ್ಕೆ ಸ್ಪಷ್ಟತೆ ಇಲ್ಲ. ಇದು ಕಾಂಗ್ರೆಸ್ ನಾಯಕರನನ್ನು ಸಿಲುಕಿಸುವ ಪ್ರಯತ್ನವಾ ಎನ್ನುವುದು ಅನುಮಾನ ಮೂಡಿಸುತ್ತದೆ.
ಫ್ಯಾಕ್ಟ್ ಚೆಕ್ಕರ್ ಹಾಗೂ ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮುಹಮ್ಮದ್ ಝುಬೈರ್ ಅವರು ಈ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ವಿಡಿಯೋವನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಬೆಂಬಲಿಗ ʼನಾಸೀರ್ ಸಾಬ್ ಜಿಂದಾಬಾದ್ʼ ಎಂದು ಕೂಗಿರುವುದು ಸ್ಪಷ್ಟವಾಗಿದೆ. ಕರ್ನಾಟಕ ಮಾಧ್ಯಮಗಳು ಸುಳ್ಳು ಸುದ್ದಿಯನ್ನು ಹರಡುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿರುವ ಸಂದರ್ಭದಲ್ಲಿ ಸ್ಥಳದಲ್ಲೇ ಹಾಜರಿದ್ದ ಮತ್ತೊಬ್ಬ ಪತ್ರಕರ್ತ ಕೂಡ ಅಂತಹ ಯಾವುದೇ ಘೋಷಣೆಗಳನ್ನು ಕೂಗಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ನಾಸಿರ್ ಸಾಬ್ ಜಿಂದಾಬಾದ್ ಎಂದು ಬೆಂಬಲಿಗರು ಕೂಗಿದ್ದನ್ನೇ ಪಾಕಿಸ್ತಾನ ಜಿಂದಾಬಾದ್ ಎಂದು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
ಪತ್ರಕರ್ತೆ ಅನೂಷ ರವಿಸೂದ್ ಕೂಡ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದು, ನಾಸಿರ್ ಸಾಬ್ ಜಿಂದಾಬಾದ್ ಎಂದು ಬೆಂಬಲಿಗರು ಕೂಗಿದ್ದನ್ನೇ ಪಾಕಿಸ್ತಾನ ಜಿಂದಾಬಾದ್ ಎಂದು ಮಾಧ್ಯಮಗಳು ವರದಿ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ. ಅಲ್ಲಿದ್ದ ವರದಿಗಾರರು ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿಲ್ಲ ಎಂದಿರುವುದಾಗಿ ಹೇಳಿದ್ದಾರೆ.
ಹತಾಶೆಯಿಂದ ಬಿಜೆಪಿ ನಾಯಕರು ಈ ಆರೋಪ ಮಾಡಿದ್ದಾರೆಯೇ?
ಈ ಮೊದಲು ವಿಧಾನ ಪರಿಷತ್‌ನ ಶಿಕ್ಷಕರ ಮತ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪುಟ್ಟಣ್ಣ ವಿರುದ್ಧ ಸೋಲು ಕಾಣುವ ಮೂಲಕ ಬಿಜೆಪಿ ಮೊದಲ ಮುಖಭಂಗ ಅನುಭವಿಸಿತು. ಇದೀಗ ರಾಜ್ಯಸಭಾ ಚುನಾವಣೆಯಲ್ಲಿ ತನ್ನ ಹೆಚ್ಚುವರಿ ಅಭ್ಯರ್ಥಿಯ ಸೋಲು ಮತ್ತು ಇಬ್ಬರು ಶಾಸಕರ ಅಡ್ಡಮತದಾನದ ಮೂಲಕ ಅವಮಾನಕ್ಕೀಡಾಯಿತು.
ಈ ಸರಣಿ ಸೋಲುಗಳು ಹಾಗೂ ಅವಮಾನದಿಂದ ತೀವ್ರ ಹತಾಶೆಯಾಗಿದ್ದ ಬಿಜೆಪಿ ನಾಯಕರು, ನಾಸೀರ್ ಸಾಬ್ ಜಿಂದಾಬಾದ್ ಘೋ಼ಷಣೆಯನ್ನು ಪಾಕಿಸ್ತಾನ್ ಜಿಂದಾಬಾದ್ ಎಂದು ತಿರುಚಿದ್ದಾರೆಂದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗಳು ನಡೆಯುತ್ತಿವೆ.