WATER CRISIS | ಆರು ದಶಕ ಕಳೆದರೂ ಆರದ ಕರ್ನಾಟಕದ ನೀರಿನ ದಾಹ
ಕುಂಟುತ್ತಿರುವ ಕರ್ನಾಟಕದ ನೀರಾವರಿ ಯೋಜನೆಗಳು;
ಸುದೀರ್ಘ 67 ವರ್ಷಗಳ ನಂತರವೂ ಕರ್ನಾಟಕವನ್ನು ಜಲಸಮೃದ್ಧ ರಾಜ್ಯವನ್ನಾಗಿ ಮಾಡುವ ಕನಸನ್ನು ನನಸಾಗಿಸುವಲ್ಲಿ ಸತತವಾಗಿ ಸರ್ಕಾರಗಳು ವಿಫಲವಾಗಿವೆ. ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ದೂರದೃಷ್ಟಿ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಇದಕ್ಕೆಲ್ಲಾ ಕಾರಣ. ಬಳಕೆಯಾಗದ ನೀರು ನೆರೆಯ ರಾಜ್ಯಗಳಿಗೆ ಅಥವಾ ಸಮುದ್ರಕ್ಕೆ ನಿರಂತರವಾಗಿ ಉಚಿತವಾಗಿ ಹರಿದುಹೋಗುತ್ತಿದೆ.
ನವೆಂಬರ್ 1 ರಿಂದ ಒಂದು ತಿಂಗಳ ಕಾಲ ಕರ್ನಾಟಕದ ಸುವರ್ಣ ಮಹೋತ್ಸವವನ್ನು ಆಚರಿಸಲು ಸಜ್ಜಾಗಿರುವ ಕನ್ನಡಿಗರ ಉತ್ಸಾಹವನ್ನು ಕಾವೇರಿ ವಿವಾದವೇ ಕುಗ್ಗಿಸಿದೆ.
ಕರ್ನಾಟಕವು ಅಕ್ಟೋಬರ್ನಲ್ಲಿ ಶೇ 62 ರಷ್ಟು ಮಳೆಯ ಕೊರತೆಯನ್ನು ಎದುರಿಸಿದೆ. ಹಾಗಾಗಿ ನೀರಿನ ಬಿಕ್ಕಟ್ಟು ಮತ್ತಷ್ಟು ಹೆಚ್ಚಾಗಿದೆ. ಈ ಸಂಕಷ್ಟದ ಹೊತ್ತಿನಲ್ಲಿ ಕಾವೇರಿ ನೀರು ನಿರ್ವಹಣಾ ಮಂಡಳಿ (ಸಿಡಬ್ಲ್ಯುಆರ್ಸಿ) ತಮಿಳುನಾಡಿಗೆ 2,600 ಕ್ಯೂಸೆಕ್ ನೀರು ಬಿಡುವಂತೆ ರಾಜ್ಯ ಸರ್ಕಾರಕ್ಕೆ ನವೆಂಬರ್ 1ರಂದು ಸೂಚಿಸಿದೆ. ಆದರೆ, ಕಾವೇರಿಯ ಒಳಹರಿವು ಗಣನೀಯವಾಗಿ ಕುಸಿದಿರುವ ಕಾರಣ ಜಲಾಶಯಗಳಲ್ಲಿ ನೀರು ಸಮರ್ಪಕವಾಗಿಲ್ಲ. ಹಾಗಾಗಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ. ನಮಗೆ ನಮ್ಮ ರೈತರ ಹಿತಾಸಕ್ತಿ ಮುಖ್ಯ ಮತ್ತು ರೈತರ ವಿಷಯದಲ್ಲಿ ರಾಜೀ ಮಾಡಿಕೊಂಡು ನಾವು ಅಧಿಕಾರಕ್ಕೆ ಅಂಟಿಕೊಂಡು ಸುಮ್ಮನೆ ಕೂರುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಡಬ್ಲ್ಯುಆರ್ಸಿಗೆ ಖಚಿತವಾಗಿ ತಿಳಿಸಿದ್ದಾರೆ;
ತಮಿಳುನಾಡಿನಿಂದ ಪಾಠ ಕಲಿಯಿರಿ
ದುರಂತವೆಂದರೆ; ರಾಜ್ಯದ ಹಿತಾಸಕ್ತಿ ರಕ್ಷಣೆಯ ಭರದಲ್ಲಿ, ವಿರೋಧ ಪಕ್ಷ ಬಿಜೆಪಿ, ಕಾವೇರಿ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ. ರಾಜ್ಯದ ಪಾಲಿನ ಕಾವೇರಿ ನೀರನ್ನು ಬಳಸಿಕೊಳ್ಳುವಲ್ಲಿ ಸತತವಾಗಿ ಸರ್ಕಾರಗಳು ವಿಫಲವಾಗಿವೆ ಎಂಬುದನ್ನು ಒಪ್ಪಿಕೊಳ್ಳುತ್ತಲೇ, ಮೈಸೂರಿನ ಅಸೋಸಿಯೇಷನ್ ಆಫ್ ಕನ್ಸರ್ನನ್ಡ್ ಅಂಡ್ ಇನ್ಫಾರ್ಮಡ್ ಸಿಟಿಜನ್ಸ್ (ACIC) ಸಂಘಟನೆಯ ಸಂಚಾಲಕ ಲಕ್ಷ್ಮಣ್, ಕಾವೇರಿ ವಿಷಯದಲ್ಲಿ ರಾಜ್ಯದ ರಾಜಕೀಯ ನಾಯಕರ ನಡವಳಿಕೆಯ ಬಗ್ಗೆ ವಿಷಾದ ವ್ಯಕ್ತಪಡಿಸುತ್ತಾರೆ. ಕಾವೇರಿಯ ವಿಷಯದಲ್ಲಿ ತಮ್ಮ ನಡುವಿನ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗೂಡಿ ತಮ್ಮ ರಾಜ್ಯದ ಹಕ್ಕಿಗಾಗಿ ಕೈಜೋಡಿಸುವುದನ್ನ ತಮಿಳುನಾಡಿನ ರಾಜಕಾರಣಿಗಳಿಂದ ಕಲಿಯಬೇಕಿದೆ. ಆದರೆ, ಕರ್ನಾಟಕದ ರಾಜಕಾರಣಿಗಳು ರಾಜ್ಯದ ಹಿತಾಸಕ್ತಿ ಕಾಪಾಡಲು ನೆರೆಯ ರಾಜ್ಯದಂತೆ ಒಂದಾಗುವುದೇ ಇಲ್ಲ ಎಂದು ಅವರು ಅಭಿಪ್ರಾಯಪಡುತ್ತಾರೆ.
ವರ್ಷಗಳ ನಿರ್ಲಕ್ಷ್ಯ
ನೀರಾವರಿ ತಜ್ಞರ ಪ್ರಕಾರ, ನೆರೆಯ ರಾಜ್ಯಗಳೊಂದಿಗೆ ಮುಂದುವರಿದಿರುವ ಈ ನೀರು ಹಂಚಿಕೆ ಬಿಕ್ಕಟ್ಟಿಗೆ; ಅದರಲ್ಲೂ ವಿಶೇಷವಾಗಿ ಕಾವೇರಿ ಮತ್ತು ಕೃಷ್ಣಾ ನದಿಗಳ ನೀರು ಹಂಚಿಕೆ ವಿವಾದಕ್ಕೆ ಮೂಲ ಕಾರಣ ರಾಜ್ಯದ ಪಾಲಿನ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ರಾಜ್ಯದ ವರ್ಷಗಳ ನಿರ್ಲಕ್ಷ್ಯ ಮತ್ತು ನೀರು ನಿರ್ವಹಣೆಯ ವಿಷಯದಲ್ಲಿ ತೋರುತ್ತಿರುವ ನಿರಾಸಕ್ತಿ. ತನ್ನ ಪಾಲಿನ ನೀರನ್ನು ಬಳಸಿಕೊಳ್ಳಲು ಅಗತ್ಯ ಜಲಾಶಯ, ಸಮರ್ಪಕ ಕಾಲುವೆ ಜಾಲ ನಿರ್ಮಿಸುವಲ್ಲಿ ಅಗತ್ಯ ಹಣಕಾಸು ಕಾಯ್ದಿಡುವಲ್ಲಿ ರಾಜ್ಯ ಸರ್ಕಾರಗಳ ನಿರ್ಲಕ್ಷ್ಯವೇ ಈ ಪರಿಸ್ಥಿತಿಗೆ ಕಾರಣ ಎಂಬುದು ನೀರಾವರಿ ತಜ್ಞರ ಅಭಿಪ್ರಾಯ.
ಕಾವೇರಿ ಬಿಕ್ಕಟ್ಟಿಗೆ ಮೇಕೆದಾಟು ಮಾತ್ರ ಪರಿಹಾರ
ಎಂಟು ದಶಕಗಳಷ್ಟು ಹಳೆಯದಾದ ಮೇಕೆದಾಟು ಯೋಜನೆಯೇ ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಇರುವ ಏಕೈಕ ಪರಿಹಾರ ಎಂದು ಕರ್ನಾಟಕ ಕಳೆದ ಕೆಲವು ವರ್ಷಗಳಿಂದ ವಾದಿಸುತ್ತಿದೆ. ಬೆಂಗಳೂರು ಮತ್ತು ಅದರ ಆಸುಪಾಸಿನ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ಕನಕಪುರ ಬಳಿ ಸಮತೋಲನ ಜಲಾಶಯ ನಿರ್ಮಾಣವನ್ನು ಒಳಗೊಂಡ ಬಹುಪಯೋಗಿ ಯೋಜನೆ ಅದು. ಆದರೆ, ಕರ್ನಾಟಕ ಮತ್ತು ತಮಿಳುನಾಡು ನಡುವಿನ ಈ ಯೋಜನೆ ಕುರಿತ ವಿವಾದವನ್ನು ಬಗೆಹರಿಸಲು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರ ಮತ್ತು ಕರ್ನಾಟಕದ ಸಂಸದರು ಯಾವುದೇ ಕಾಳಜಿ ವಹಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಒಂದು ಲಕ್ಷ ಕೋಟಿ ಬೇಕು
ಹೊಸ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಮತ್ತು ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಿಸಲು ತಮ್ಮ ಸರ್ಕಾರಕ್ಕೆ ಸಾಧ್ಯವಾಗದಂತೆ ರಾಜ್ಯದ ಆರ್ಥಿಕ ಮುಗ್ಗಟ್ಟನ್ನು ಸೃಷ್ಟಿಸಿದೆ ಎಂದು ಹಿಂದಿನ ಬಿಜೆಪಿ ಸರ್ಕಾರವನ್ನು ದೂಷಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ 14ನೇ ಬಜೆಟ್ ಮಂಡಿಸುವಾಗ ಜಲಸಂಪನ್ಮೂಲ ಇಲಾಖೆಗೆ ಯೋಜಿತ ಕಾಮಗಾರಿಗಳನ್ನು ಕೈಗೊಳ್ಳಲು ಸುಮಾರು 1 ಲಕ್ಷ ಕೋಟಿ ರೂ.ಗಳ ಅಗತ್ಯವಿದೆ ಎಂದು ಹೇಳಿದ್ದರು..
ಎತ್ತಿನಹೊಳೆ ಮತ್ತು ಮೇಕೆದಾಟು ಸೇರಿದಂತೆ ವಿವಿಧ ಕುಡಿಯುವ ನೀರಿನ ಯೋಜನೆಗಳ ವೆಚ್ಚವು ಭೂಸ್ವಾಧೀನ ವೆಚ್ಚದ ಹೆಚ್ಚಳದ ಕಾರಣದಿಂದ ದ್ವಿಗುಣಗೊಂಡಿದೆ ಎಂದು ಭೂಮಿಯ ಮೌಲ್ಯ ಹೆಚ್ಚಳವನ್ನು ಉಲ್ಲೇಖಿಸಿ ಸಿದ್ದರಾಮಯ್ಯ ಹೇಳಿದ್ದರು. ಕಾಂಗ್ರೆಸ್ ಸರ್ಕಾರ ಆರು ಪ್ರಮುಖ ನೀರಾವರಿ ಯೋಜನೆಗಳನ್ನು ಘೋಷಿಸಿದ್ದರೂ, ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತಾನು ಬದ್ಧ ಎಂದು ಸರ್ಕಾರ ಪ್ರತಿಪಾದಿಸುತ್ತಿದ್ದರೂ, ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ.
ಎತ್ತಿನಹೊಳೆ ಯೋಜನೆ
ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ ಮತ್ತು ಬೆಂಗಳೂರು ಗ್ರಾಮಾಂತರ ಸೇರಿದಂತೆ ಬರಪೀಡಿತ ಜಿಲ್ಲೆಗಳ ದಾಹ ನೀಗಿಸಲು ಉದ್ದೇಶಿಸಿರುವ ಎತ್ತಿನಹೊಳೆ ಯೋಜನೆ ದಶಕಕ್ಕೂ ಹೆಚ್ಚು ಕಾಲದಿಂದ ನೆನಗುದಿಗೆ ಬಿದ್ದಿದೆ. ಯೋಜನೆಯ ಅಂದಾಜು ವೆಚ್ಚವು 12,912 ಕೋಟಿಯಿಂದ 23,252 ಕೋಟಿ ರೂ. ಏರಿಕೆಯಾಗಿದೆ ಎಂದು ಸಿದ್ದರಾಮಯ್ಯ ಅವರ ಬಜೆಟ್ ಹೇಳುತ್ತದೆ.
ಮೂರು ದಶಕ ಹಳೆಯ ಮಹದಾಯಿ ಯೋಜನೆ
ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ನವಲಗುಂದ ರೈತರು ಕಳೆದ ಎಂಟು ವರ್ಷಗಳಿಂದ ಧರಣಿ ನಡೆಸುತ್ತಿದ್ದಾರೆ. ಮಹದಾಯಿಯ ಉಪನದಿಗಳಾದ ಕಳಸಾ-ಬಂಡೂರಿ ಹೊಳೆಗಳಿಂದ ಪಡೆಯುವ 7.56 ಟಿಎಂಸಿ ಅಡಿ ನೀರು ಮಾತ್ರ ರೈತರ ಬೇಡಿಕೆಯಾಗಿದೆ. ಈ ಯೋಜನೆಯು ಅಂತರರಾಜ್ಯ ವಿವಾದಗಳು ಸೇರಿದಂತೆ ಕಳೆದ ಮೂರು ದಶಕಗಳಲ್ಲಿ ಹಲವಾರು ಅಡ್ಡಿಗಳನ್ನು ಎದುರಿಸುತ್ತಿದೆ. ಜೊತೆಗೆ ಈ ಸುದೀರ್ಘ ಅವಧಿಯಲ್ಲಿ ಯೋಜನೆಯ ರೂಪುರೇಷೆಯಲ್ಲಿ ಕೂಡ ಸಾಕಷ್ಟು ಬದಲಾವಣೆಗಳಾಗಿವೆ.
ಅತಿ ವಿಸ್ತಾರದ ಕೃಷ್ಣಾ ಜಲಾನಯನ ಪ್ರದೇಶ
ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಗಳಲ್ಲಿ, ಕೃಷ್ಣಾ ಜಲಾನಯನ ಪ್ರದೇಶವು ಅತಿ ವಿಸ್ತಾರವಾದುದು. ಉತ್ತರ ಕರ್ನಾಟಕದ ಸುಮಾರು 60 ಪ್ರತಿಶತದಷ್ಟು ಪ್ರದೇಶವನ್ನು ಒಳಗೊಳ್ಳುವ ಈ ಜಲಾನಯನ ಪ್ರದೇಶ, ಆ ಭಾಗದ ಒಟ್ಟು 19 ಜಿಲ್ಲೆಗಳ ಪೈಕಿ 14 ಜಿಲ್ಲೆಗಳಿಗೆ ವ್ಯಾಪಿಸಿದೆ. ರಾಜ್ಯದ ಒಟ್ಟಾರೆ ವಿಸ್ತೀರ್ಣದ ಪೈಕಿ ಸುಮಾರು ಶೇ.18ರಷ್ಟು ಪ್ರದೇಶವನ್ನು ವ್ಯಾಪಿಸಿರುವ ಈ ಜಲಾನಯನ ವ್ಯಾಪ್ತಿ, ಕಾವೇರಿ ಜಲಾನಯನ ಪ್ರದೇಶದ ನಂತರದ ಪ್ರಾಮುಖ್ಯತೆ ಪಡೆದಿದೆ.
ನೀರಾವರಿ ಯೋಜನೆ ವೆಚ್ಚ ಹೆಚ್ಚಳ
ಕೃಷ್ಣಾ ಜಲಾನಯನ ಪ್ರದೇಶದ ಯೋಜನೆಗಳು, ಭದ್ರಾ ಮೇಲ್ದಂಡೆ ಮತ್ತು ಎತ್ತಿನಹೊಳೆ ಯೋಜನೆಗಳ ಯೋಜನಾ ವೆಚ್ಚದಲ್ಲಿ ದೊಡ್ಡ ಮೊತ್ತದ ಏರಿಕೆ ಕಂಡಿವೆ. ಅಂತರರಾಜ್ಯ ಜಲ ವಿವಾದ, ಪರಿಸರ ಮತ್ತು ಅರಣ್ಯ ಒಪ್ಪಿಗೆ, ಭೂಸ್ವಾಧೀನಕ್ಕೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಅನುದಾನ ಹಂಚಿಕೆ ವಿಳಂಬದಿಂದಾಗಿ ಈ ಯೋಜನೆಗಳು ನಿಧಾನಗತಿಯಲ್ಲಿ ಸಾಗುತ್ತಿವೆ.
ಮಹದಾಯಿ ಯೋಜನಾ ವೆಚ್ಚ ಭಾರೀ ಏರಿಕೆ ಕಂಡಿದ್ದು 2000ನೇ ಸಾಲಿನಲ್ಲಿ 94 ಕೋಟಿ ರೂ. ಇದ್ದ ಯೋಜನಾ ವೆಚ್ಚ, ಈಗ 1,667 ಕೋಟಿಗೆ ಏರಿಕೆಯಾಗಿದೆ. ಭದ್ರಾ ಮೇಲ್ಡಂಡೆ ಯೋಜನೆ ಕೂಡ 2008ರಲ್ಲಿ 6,000 ಕೋಟಿಗಳಿಂದ 2020ರಲ್ಲಿ 20,900 ಕೋಟಿಗಳಿಗೆ ಏರಿಕೆಯಾಗಿದೆ.
ನಾಲ್ಕು ದಶಕಗಳ ಹಿಂದಿನ ಕೃಷ್ಣಾ ಮೇಲ್ದಂಡೆ ಯೋಜನೆ
ಕೃಷ್ಣಾ ಮೇಲ್ದಂಡೆ ಯೋಜನೆ (ಯುಕೆಪಿ) ದೇಶದ ಅತಿದೊಡ್ಡ ನೀರಾವರಿ ಯೋಜನೆಗಳಲ್ಲಿ ಒಂದಾಗಿದೆ. ಉತ್ತರ ಕರ್ನಾಟಕ ಪ್ರದೇಶದ ಕೃಷಿ ಭೂಮಿಗೆ ನೀರಾವರಿ ಸೌಲಭ್ಯಗಳನ್ನು ವಿಸ್ತರಿಸಲು ಈ ಯೋಜನೆಯನ್ನು ಕಳೆದ ನಾಲ್ಕು ದಶಕಗಳಿಂದ ಅನುಷ್ಠಾನಗೊಳಿಸಲಾಗುತ್ತಿದೆ. ಯುಕೆಪಿಗೆ ರಾಷ್ಟ್ರೀಯ ಯೋಜನೆಯ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡುವಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಎಲ್ಲ ಸರ್ಕಾರಗಳು ವಿಫಲವಾಗಿವೆ. ಈ ಯೋಜನೆಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಅಂತರರಾಜ್ಯ ಜಲ ವಿವಾದಗಳ ನ್ಯಾಯಮಂಡಳಿಯಲ್ಲಿ ಬಾಕಿ ಉಳಿದಿವೆ.
ಕೃಷ್ಣಾ ಜಲ ವಿವಾದ ನ್ಯಾಯಮಂಡಳಿ ಕರ್ನಾಟಕಕ್ಕೆ ಹಂಚಿಕೆ ಮಾಡಿರುವ 173 ಟಿಎಂಸಿ ಅಡಿ ನೀರನ್ನು ಬಳಸಿಕೊಂಡು ಉತ್ತರ ಕರ್ನಾಟಕದ ಆರು ಜಿಲ್ಲೆಗಳ ಆರು ಲಕ್ಷ ಹೆಕ್ಟೇರ್ ಭೂಮಿಗೆ ನೀರೊದಗಿಸುವುದು ಯುಕೆಪಿ ಯೋಜನೆಯ ಗುರಿ. ಆಲಮಟ್ಟಿ ಅಣೆಕಟ್ಟಿನ ಎತ್ತರವನ್ನು ಈಗಿನ 519 ಮೀಟರ್ನಿಂದ 524 ಮೀಟರ್ಗೆ ಏರಿಸುವ ಮೂಲಕ ಯೋಜನೆ ಜಾರಿ ಮಾಡುವುದು ಯೋಜನೆಯ ರೂಪುರೇಷೆ. ಯೋಜನೆಯಿಂದ 20 ಗ್ರಾಮಗಳು ಮುಳುಗಡೆಯಾಗಲಿದ್ದು, 150ಕ್ಕೂ ಹೆಚ್ಚು ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ದೊರೆಯಲಿದೆ. ಜೊತೆಗೆ 210 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯ ನಿರೀಕ್ಷೆ ಇದೆ. ಆಲಮಟ್ಟಿ ಜಲಾಶಯದ ಎತ್ತರವನ್ನು ಹೆಚ್ಚಿಸಲು ಕೇಂದ್ರದಿಂದ ಗೆಜೆಟ್ ಅಧಿಸೂಚನೆಗಾಗಿ ಕಾಯಲಾಗುತ್ತಿದೆ.
ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯ ಪ್ರಸ್ತುತ ಸ್ಥಿತಿಗತಿ
2023ರ ಜನವರಿಯಲ್ಲಿ, ಕೇಂದ್ರ ಜಲ ಶಕ್ತಿ ಸಚಿವಾಲಯದ (MoJS) ಕೇಂದ್ರ ಜಲ ಆಯೋಗದ (CWC) ಅಡಿಯಲ್ಲಿ ಉನ್ನತ ಮಟ್ಟದ ನಿರ್ವಹಣಾ ಸಮಿತಿಯು ಭದ್ರಾ ಮೇಲ್ದಂಡೆ ಯೋಜನೆಗೆ (UBP) ರಾಷ್ಟ್ರೀಯ ಯೋಜನಾ ಸ್ಥಾನಮಾನವನ್ನು ಘೋಷಿಸಿತು. ಇದು ಆ ಸ್ಥಾನಮಾನ ಪಡೆದ ರಾಜ್ಯದ ಮೊದಲ ಯೋಜನೆಯಾಗಿದ್ದು, ಮಧ್ಯ ಕರ್ನಾಟಕದ ನೀರಾವರಿ ಚಿತ್ರಣವನ್ನೇ ಈ ಯೋಜನೆ ಬದಲಾಯಿಸುವ ನಿರೀಕ್ಷೆಯಿದೆ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ 2009ರಲ್ಲಿ ಯುಬಿಪಿಯನ್ನು ಕೈಗೆತ್ತಿಕೊಂಡಿತ್ತು ಮತ್ತು ಈ ಯೋಜನೆಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ವಾಣಿ ವಿಲಾಸ ಸಾಗರ ಅಣೆಕಟ್ಟಿಗೆ ಭದ್ರಾ ನೀರು ಹರಿಯತೊಡಗಿತ್ತು.
ತುಂಗಾ ಮೇಲ್ದಂಡೆ ಯೋಜನೆ
ಮಹತ್ವದ ಬೆಳವಣಿಗೆಯಲ್ಲಿ, ತುಂಗಾ ಮೇಲ್ದಂಡೆ ಯೋಜನೆ (ಯುಟಿಪಿ) ಮತ್ತು ಯುಬಿಪಿಗೆ ನೀಡಲಾದ ಎಲ್ಲಾ ಅನುಮತಿಗಳನ್ನು ತಡೆಹಿಡಿಯಲು ಜಲಶಕ್ತಿ ಸಚಿವಾಲಯವು ಕಳೆದ ವರ್ಷ ಕರ್ನಾಟಕ ಸರ್ಕಾರವನ್ನು ಕೇಳಿದೆ. ಜಲ ವಿವಾದ ನ್ಯಾಯಮಂಡಳಿಯಿಂದ ಹಂಚಿಕೆಗೆ ಸಂಬಂಧಿಸಿದ ಹಲವು ಅಂತರರಾಜ್ಯ ಅಂಶಗಳನ್ನು ಪರಿಶೀಲಿಸುವಲ್ಲಿ ಎರಡೂ ಯೋಜನೆಗಳು ವಿಫಲವಾಗಿವೆ ಎಂಬ ಕಾರಣವನ್ನೂ ನೀಡಿ ಆ ಆದೇಶ ನೀಡಲಾಗಿದೆ.
2,34,000 ಎಕರೆ ಭೂಮಿಗೆ ನೀರಾವರಿಗಾಗಿ ಶಿವಮೊಗ್ಗ ಸಮೀಪದ ತುಂಗಾ ಅಣೆಕಟ್ಟೆಯಿಂದ 12.24 ಟಿಎಂಸಿ ಅಡಿ ನೀರನ್ನು ಬಳಸಿಕೊಳ್ಳಲು 90 ರ ದಶಕದ ಆರಂಭದಲ್ಲಿ ಯುಟಿಪಿ ಯೋಜನೆ ರೂಪಿಸಲಾಗಿತ್ತು. ಯೋಜನೆಯ ಆಗಿನ ಅಂದಾಜು ವೆಚ್ಚ ಕೇವಲ ರೂ.379.87 ಕೋಟಿ. ಹೆಚ್ಚು ನೀರಾವರಿ ಮಾಡುವ, ಕಡಿಮೆ ವೆಚ್ಚದ ಯೋಜನೆಯಾಗಿದ್ದರೂ ಮೂರು ದಶಕಗಳ ನಂತರವೂ ಅದನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಯೋಜನೆ ಕಾರ್ಯಗತಗೊಳಿಸಿದ್ದರೆ, ಅದು ಉತ್ತರ ಕರ್ನಾಟಕದ ನೀರಿನ ದಾಹವನ್ನು ಸ್ವಲ್ಪಮಟ್ಟಿಗಾದರೂ ತಣಿಸುತ್ತಿತ್ತು.
ನೀರಾವರಿ ಯೋಜನೆಗಳ ಪರಿಣಿತ, ಹಿರಿಯ ಕಾಂಗ್ರೆಸ್ ನಾಯಕರೊಬ್ಬರು(ಹೆಸರು ಬಹಿರಂಗಪಡಿಸಲು ಇಚ್ಛಿಸಿಲ್ಲ) ಫೆಡರಲ್ ಜೊತೆ ಮಾತನಾಡಿ, "ದೂರದೃಷ್ಟಿ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಉತ್ತರ ಕರ್ನಾಟಕದ ಬಹುಪಾಲು ಇಂದಿಗೂ ಬಂಜರಾಗಿಯೇ ಉಳಿದಿದೆʼʼ ಎಂದು ವಿಷಾದ ವ್ಯಕ್ತಪಡಿಸಿದರು.
ನ್ಯಾಯಮಂಡಳಿಗಳ ಮೂಲಕ ನೀರು ಹಂಚಿಕೆಯಾಗಿದ್ದರೂ, ರಾಜ್ಯದ ನೆಲವನ್ನು ತೋಯಿಸಿ, ಕೃಷಿ ಭೂಮಿಯನ್ನು ತೇವಗೊಳಿಸಿ ರಾಜ್ಯದ ಉತ್ಪಾದನೆಯ ಕಣಜ ತುಂಬಬೇಕಾಗಿದ್ದ, ಜನ-ಜಾನುವಾರುಗಳ ನೀರಿನ ದಾಹ ಇಂಗಿಸಬೇಕಿದ್ದ ಯೋಜನೆಗಳು, ರಾಜಕಾರಣಿಗಳು ಮತ್ತು ಸರ್ಕಾರಗಳ ಇಚ್ಛಾಶಕ್ತಿ ಮತ್ತು ಬದ್ಧತೆಯ ಬರದಿಂದಾಗಿ ನೆರೆ ರಾಜ್ಯಗಳ ಪಾಲಿಗೆ ನೀರು ಕೊಡುವ ಉಚಿತ ಯೋಜನೆಗಳಾಗಿವೆ!