ಶಿವಮೊಗ್ಗ: ಅಂದು ಚಳವಳಿಗಳ ತೊಟ್ಟಿಲು, ಈಗ ಕೋಮು ದ್ವೇಷದ ಕೆಂಡ

ಶಿವಮೊಗ್ಗದವರಾದ ಜ್ಞಾನಪೀಠ ಪುರಸ್ಕೃತ ಸಾಹಿತಿ ಕುವೆಂಪು ಅವರು ಪ್ರತಿಪಾದಿಸಿರುವ “ಸರ್ವ ಜನಾಂಗದ ಶಾಂತಿಯ ತೋಟ” (ಎಲ್ಲಾ ಸಮುದಾಯಗಳ ಶಾಂತಿಯುತ ಮತ್ತು ಸಾಮರಸ್ಯದ ಸಹಜೀವನದ ತೋಟ) ಎಂದು ಕರೆಯಲಾಗುತ್ತಿದ್ದ ಮಧ್ಯ ಕರ್ನಾಟಕದ ಶಿವಮೊಗ್ಗ ಜಿಲ್ಲೆ ಇದೀಗ ಕೋಮು ಘರ್ಷಣೆಯ ಅಖಾಡವಾಗಿ ಮಾರ್ಪಟ್ಟಿದೆ.;

Update: 2024-02-05 06:30 GMT

'ಮಲೆನಾಡಿನ ಹೆಬ್ಬಾಗಿಲು' ಎಂದೇ ಹೆಸರಾಗಿರುವ ಶಿವಮೊಗ್ಗ ಒಂದು ಕಾಲದಲ್ಲಿ ಎಲ್ಲಾ ಸಮುದಾಯಗಳ ಸಾಮರಸ್ಯದ ಜೀವನಕ್ಕೆ ಹೆಸರಾದ ಸುಸಂಸ್ಕೃತ ಊರು. ಈಗ ಎರಡು ಸಮುದಾಯಗಳ ನಡುವೆ ಈ ನಗರ ಸೀಳಿಹೋಗಿದೆ. ಹಿಂದೂಗಳು ಮತ್ತು ಮುಸ್ಲಿಮರು ಎಂದು ನಗರವನ್ನು ಭಾವನಾತ್ಮಕವಾಗಿ ವಿಭಜಿಸಿ ರಾಜಕಾರಣದ ಫಸಲು ಕೊಯ್ಯಲಾಗುತ್ತಿದೆ. ಶಿವಮೊಗ್ಗದಲ್ಲಿ ಪದೇಪದೆ ಭುಗಿಲೇಳುತ್ತಿರುವ ಕೋಮು ಘರ್ಷಣೆಗಳು ಅಲ್ಲಿನ ಈ ಕೋಮು ವಿಭಜನೆಯನ್ನು ಇನ್ನಷ್ಟು ಹಿಗ್ಗಿಸಿವೆ. ಕಳೆದ ಅಕ್ಟೋಬರ್ ನಲ್ಲಿ ಭುಗಿಲೆದ್ದ ಕೋಮುಗಲಭೆ ಶಿವಮೊಗ್ಗ ನಗರದಲ್ಲಿ ಹೆಚ್ಚುತ್ತಿರುವ ಕೋಮು ಉದ್ವಿಗ್ನತೆಗೆ ತಾಜಾ ನಿದರ್ಶನ.

ಶಿವಮೊಗ್ಗ ನಗರದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಸದಸ್ಯರ ನಡುವೆ ಟಿಪ್ಪು ಸುಲ್ತಾನ್ ಕಟೌಟ್ ವಿಷಯದಲ್ಲಿ ಆರಂಭವಾದ ವಿವಾದ ಹಿಂಸಾತ್ಮಕ ಘರ್ಷಣೆಗೆ ಕಾರಣವಾಯಿತು. ಈ ಹಿಂಸೆಯ ಫಲಿತಾಂಶವೆಂದರೆ; ಇಬ್ಬರು ಪೊಲೀಸರು ಸೇರಿದಂತೆ ಆರು ಮಂದಿ ಗಾಯಗೊಂಡಿರುವುದು. ಅಕ್ಟೋಬರ್ 1 ರ ಸಂಜೆ ಈ ಘಟನೆ ಸಂಭವಿಸಿದ್ದು, ಇದರಿಂದಾಗಿ ಪೊಲೀಸರು 'ಶಾಂತಿ ನಗರ' ಪ್ರದೇಶದಲ್ಲಿ (ರಾಗಿ ಗುಡ್ಡ ಎಂಬುದು ವಾಡಿಕೆಯ ಹೆಸರು) ನಿಷೇಧಾಜ್ಞೆ ವಿಧಿಸಲು ಕಾರಣವಾಗಿದೆ.

ಟಿಪ್ಪು ಕಟೌಟ್ ವಿವಾದ

ಗಲಭೆಯ ಬಳಿಕ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈದ್ ಮಿಲಾದ್ ಮೆರವಣಿಗೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದೇ ಕೋಮು ಘರ್ಷಣೆಗೆ ಕಾರಣ ಎಂದು ಹೇಳಿದ್ದಾರೆ. ಕೋಮು ಘರ್ಷಣೆಗೆ ಸಂಬಂಧಿಸಿದಂತೆ, ಎರಡೂ ಸಮುದಾಯಗಳಿಗೆ ಸೇರಿದ 60 ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಪ್ರತಿಪಕ್ಷ ಬಿಜೆಪಿ, ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನೊಳಗೊಂಡ ಬಿಜೆಪಿ ಸತ್ಯಶೋಧನಾ ಸಮಿತಿ, ಗಲಭೆಪೀಡಿತ ಶಾಂತಿನಗರಕ್ಕೆ ಭೇಟಿ ನೀಡಿ ರಾಗಿ ಗುಡ್ಡ ಪ್ರದೇಶದಲ್ಲಿ ನಡೆದಿರುವ ಕೋಮು ಘರ್ಷಣೆ ಹಾಗೂ ವಿಧ್ವಂಸಕ ಕೃತ್ಯಕ್ಕೆ ಮುಸ್ಲಿಂ ಸಂಘಟನೆಗಳೇ ಕಾರಣ ಎಂದು ಆರೋಪಿಸಿದ್ದಾರೆ. ಆದಾಗ್ಯೂ, ಈದ್ ಮಿಲಾದ್ ಮೆರವಣಿಗೆಯ ಮೇಲೆ ಬಜರಂಗದಳಕ್ಕೆ ಸೇರಿದ ಕೆಲವರು ಕಲ್ಲು ತೂರಾಟ ನಡೆಸಿದ್ದೇ ಘರ್ಷಣೆಗೆ ಕಾರಣ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ಮೂಲಗಳು ಫೆಡರಲ್ಗೆ ತಿಳಿಸಿವೆ.

ಕೋಮುಗಲಭೆಯಲ್ಲಿ ಶಿವಮೊಗ್ಗ ಮುಂದೆ

ಬಿಜೆಪಿ ಅಧಿಕಾರಕ್ಕೆ ಬಂದ ವರ್ಷವಾದ 2019 ರಿಂದ, ಕರ್ನಾಟಕದಲ್ಲಿ ಸುಮಾರು 163 ಕೋಮು ಘಟನೆಗಳು ವರದಿಯಾಗಿವೆ. ಅವುಗಳಲ್ಲಿ ಸುಮಾರು ಐದನೇ ಒಂದು ಭಾಗದಷ್ಟು ಅಂದಿನ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿನಿಧಿಸುವ ಮಲೆನಾಡು ಜಿಲ್ಲೆ ಶಿವಮೊಗ್ಗದಲ್ಲಿಯೇ ವರದಿಯಾಗಿವೆ. ಸೆಪ್ಟೆಂಬರ್ 2022 ರ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಲಾದ ಅಂಕಿಅಂಶಗಳ ಪ್ರಕಾರ; ಆ ವರ್ಷ ವರದಿಯಾದ 96 ಕೋಮು ಗಲಭೆ ಪ್ರಕರಣಗಳಲ್ಲಿ 42 ಶಿವಮೊಗ್ಗದಲ್ಲೇ ನಡೆದಿವೆ.

ಪಿಎಫ್ ಐ ವರ್ಸಸ್ ವಿಎಚ್ಪಿ ಸಂಘರ್ಷ

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) 2015 ರ ಫೆಬ್ರವರಿಯಲ್ಲಿ ಶಿವಮೊಗ್ಗ ನಗರದಲ್ಲಿ ನಡೆಸಿದ ರ್ಯಾಲಿಯ ಬಳಿಕ ನಡೆದ ಘರ್ಷಣೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟು ಹಲವರು ಗಾಯಗೊಂಡಿದ್ದರು. ಮುಸ್ಲಿಂ ಸಂಘಟನೆಯಾದ ಪಿಎಫ್ ಐನ ಸಂಸ್ಥಾಪಕರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ರ್ಯಾಲಿಯ ಬಳಿಕ ಹಿಂಸಾಚಾರ ಭುಗಿಲೆದ್ದಿತ್ತು. ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಹಿಂದೂ ಬಲಪಂಥೀಯ ಗುಂಪುಗಳು ಆಯೋಜಿಸಿದ್ದ ಭಾರೀ ರ್ಯಾಲಿಯ ಬೆನ್ನಲ್ಲೇ ಶಿವಮೊಗ್ಗದಲ್ಲಿ ಪಿಎಫ್ಐ ಆ ರ್ಯಾಲಿ ಆಯೋಜಿಸಿತ್ತು.

ಕಾರ್ಯಕರ್ತನ ಸಾವು

ಶಿವಮೊಗ್ಗ ನಗರ 2022 ರಲ್ಲಿ ಮತ್ತೊಂದು ಅತ್ಯಂತ ಭೀಕರ ಕೋಮು ಗಲಭೆಗೆ ಸಾಕ್ಷಿಯಾಯಿತು. ‘ಹಿಜಾಬ್’ ವಿವಾದದ ಪ್ರತಿಭಟನೆಯ ಮುಂಚೂಣಿಯಲ್ಲಿದ್ದ ಬಜರಂಗದಳದ ಕಾರ್ಯಕರ್ತ ಹರ್ಷನ ಹತ್ಯೆ ಆ ಬಾರಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಭೀಕರ ಕೋಮು ಸಂಘರ್ಷಕ್ಕೆ ಕಾರಣವಾಗಿತ್ತು. ಬಿಜೆಪಿಯ ಹಿರಿಯ ನಾಯಕರ ನೇತೃತ್ವದಲ್ಲಿ ನಡೆದ ಹರ್ಷನ ಮೃತ ದೇಹದ ಮೆರವಣಿಗೆ ವೇಳೆ ಕೋಮು ಗಲಭೆ ಭುಗಿಲೆದ್ದಿತ್ತು. ಮುಸಲ್ಮಾನರ ಪ್ರಾಬಲ್ಯವಿರುವ ಶಿವಮೊಗ್ಗದ ಆಜಾದ್ ನಗರ, ಓ ಟಿ ರಸ್ತೆ, ಗಾಂಧಿ ಬಜಾರ್, ಸೀಗೆಹಟ್ಟಿ, ಕ್ಲಾರ್ಕ್ ಪೇಟೆ ಮತ್ತು ಉರ್ದು ಬಜಾರ್ನಲ್ಲಿ ಪೊಲೀಸರ ಉಪಸ್ಥಿತಿಯ ನಡುವೆಯೂ ಹಿಂಸಾಚಾರ ನಡೆಯಿತು. ಉದ್ರಿಕ್ತ ಗುಂಪನ್ನು ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು ಮತ್ತು ಲಾಠಿ ಚಾರ್ಜ್ ಮಾಡಿದರು. ಶಿವಮೊಗ್ಗ ಪೊಲೀಸ್ ಮೂಲಗಳ ಪ್ರಕಾರ, ಆ ಗಲಭೆಯ ವೇಳೆ ನಡೆದ ಕಲ್ಲು ತೂರಾಟದಲ್ಲಿ ಕನಿಷ್ಠ 10 ಜನರು ಗಾಯಗೊಂಡಿದ್ದರು.

ರಾಷ್ಟ್ರೀಯವಾದಿಗಳ ಕೇಂದ್ರ ಹಿಂದೂ ಮಹಾಸಭಾ ಗಣಪತಿ

ಸೇರಿದಂತೆ ಅನೇಕ ಸಾಮಾಜಿಕ ಚಳುವಳಿಗಳ ಫಲವತ್ತಾದ ನೆಲ ಎಂದು ವ್ಯಾಪಕವಾಗಿ ನಂಬಲಾಗಿದೆ; ರೈತರು, ಸಮಾಜವಾದಿಗಳು ಮತ್ತು ಭೂಸುಧಾರಣೆಗಳು, 2007 ರಲ್ಲಿ ಕರ್ನಾಟಕದಲ್ಲಿ ಬಿಜೆಪಿಯ ಬೆಳವಣಿಗೆಯ ನಂತರ ಇತ್ತೀಚಿನ ವರ್ಷಗಳಲ್ಲಿ ಶಿವಮೊಗ್ಗವು ಕೋಮುವಾದದ ಕೇಂದ್ರವಾಗಿದೆ.

ಆದರೆ, ಜಿಲ್ಲೆಯ ಬೇಯುತ್ತಿರುವ ಈ ಕೋಮು ದಳ್ಳುರಿ ತೀರಾ ಇತ್ತೀಚಿನ ಬೆಳವಣಿಗೆಯಲ್ಲ; ಅಲ್ಲಿ ಸ್ವಾತಂತ್ರ್ಯ ಪೂರ್ವಕ್ಕೆ ಮುನ್ನವೇ ಕೋಮುವಾದದ ಹೆಜ್ಜೆ ಗುರುತುಗಳು ಮೂಡಿದ್ದವು ಎಂಬುದು ಹೆಚ್ಚು ಮಂದಿಗೆ ತಿಳಿದಿಲ್ಲ. ಕೋಮು ಧ್ರುವೀಕರಣದ ಆ ಹೆಜ್ಜೆ ಗುರುತುಗಳು ಬ್ರಿಟಿಷ್ ಆಡಳಿತದ ಅವಧಿಯಲ್ಲೇ ಮೂಡಿದ್ದವು. ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದವರು, ಪ್ರಸ್ತುತ ಕೋಮು ಧ್ರುವೀಕರಣದಿಂದ ಅಸಮಾಧಾನಗೊಂಡವರು ಆ ಸಮಯದಲ್ಲಿ ಹಿಂದೂ ಮಹಾಸಭಾ ಗಣಪತಿ ರಾಷ್ಟ್ರೀಯವಾದಿಗಳ ಕೇಂದ್ರವಾಗಿತ್ತು ಎಂದು ನೆನಪಿಸಿಕೊಳ್ಳುತ್ತಾರೆ. “ಹಿಂದೂ ಮಹಾಸಭಾ ಗಣಪತಿಯ ವಿಸರ್ಜನಾ ಮೆರವಣಿಗೆಯ ವೇಳೆ ಕೋಮು ಗಲಭೆಗಳು ಉಂಟಾಗುತ್ತಿದ್ದುದು ವಾಡಿಕೆಯಾಗಿತ್ತು" ಎಂದು ಅವರು ನೆನಪಿಸಿಕೊಳ್ಳುತ್ತಾರೆ. "ದೇಶ ಸ್ವತಂತ್ರವಾಗುವ ಮುನ್ನವೇ ಸಂಘಪರಿವಾರ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ಗಳು ಶಿವಮೊಗ್ಗದಲ್ಲಿ ಗಟ್ಟಿಯಾಗಿ ನೆಲೆಯೂರಿದ್ದವು. ವಿನಾಯಕ ದಾಮೋದರ್ ಸಾವರ್ಕರ್ ರಾಜ್ಯ ಮಟ್ಟದ ಹಿಂದೂ ಮಹಾಸಭಾ ಸಮಾವೇಶದಲ್ಲಿ ಭಾಗವಹಿಸಲು ಶಿವಮೊಗ್ಗಕ್ಕೆ ಭೇಟಿ ನೀಡಿದ್ದರು. ಆ ವೇಳೆ ಅವರೊಂದಿಗೆ ನಾಥೂರಾಂ ಗೋಡ್ಸೆ ಕೂಡ ಬಂದಿದ್ದರು" ಎಂಬುದನ್ನು ಈಶ್ವರ್ ರಾವ್ ನೆನಪಿಸಿಕೊಂಡರು.

ಕೋಮು ಘರ್ಷಣೆಯ ಹುತಾತ್ಮ ಶಿವಮೂರ್ತಿ

ಶಿವಮೂರ್ತಿ ಸರ್ಕಲ್ - ಶಿವಮೊಗ್ಗದ ಪ್ರಮುಖ ಹೆಗ್ಗುರುತಾಗಿರುವ ಒಂದು ವೃತ್ತ. ಆ ವೃತ್ತದಲ್ಲಿ ಇರುವ ನಾಮಫಲಕದಲ್ಲಿ 'ಹುತಾತ್ಮ ಶಿವಮೂರ್ತಿ ಸರ್ಕಲ್' ಎಂಬ ನಮೂದಿಸಲಾಗಿದೆ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡವರು ಇವರಿರಬಹುದು ಎಂದು ಬಹಳಷ್ಟು ಮಂದಿ ಅಂದುಕೊಂಡಿದ್ದಾರೆ. ಆದರೆ, ಸ್ವತಂತ್ರ ಕರ್ನಾಟಕದಲ್ಲಿ ನಡೆದ ಕೋಮು ಘರ್ಷಣೆಯ ಮೊದಲ ಬಲಿಪಶು ಈ ಶಿವಮೂರ್ತಿ. 1948 ರಲ್ಲಿ ಹಿಂದೂ ಮಹಾಸಭಾ ಗಣೇಶ ಮೂರ್ತಿಯ ವಿಸರ್ಜನೆ ಸಂದರ್ಭದಲ್ಲಿ ಮತಾಂಧ ಗುಂಪು ಶಿವಮೂರ್ತಿಯನ್ನು ಚಾಕುವಿನಿಂದ ಇರಿದು ಕೊಂದಿತ್ತು. ಅಂದಿನಿಂದ ಈವರೆಗೆ ಶಿವಮೊಗ್ಗ ನಗರವು ಅನೇಕ ಕೋಮು ಘರ್ಷಣೆಗಳಿಗೆ ಸಾಕ್ಷಿಯಾಗಿದೆ ಮತ್ತು ಕೆಲವು ಡಜನ್ ಜೀವಗಳನ್ನು ಬಲಿ ತೆಗೆದುಕೊಂಡಿದೆ.

ಸಾಮಾಜಿಕ ಚಳವಳಿಗಳ ತೊಟ್ಟಿಲು

ಶಿವಮೊಗ್ಗದ ಜನರು ತಮ್ಮನ್ನು ತಾವು ಅಲ್ಲಮಪ್ರಭುವಿನಿಂದ ಹಿಡಿದು ಸಾರೆಕೊಪ್ಪದ ಬಂಗಾರಪ್ಪ ಅವರವರೆಗೆ ತಮ್ಮ ನೆಲದ ಹೆಮ್ಮೆಯ ವ್ಯಕ್ತಿಗಳೊಂದಿಗೆ ಗುರುತಿಸಿಕೊಳ್ಳಲು ಹೆಮ್ಮೆ ಪಡುತ್ತಾರೆ. 12ನೇ ಶತಮಾನದ ಸಮಾಜ ಸುಧಾರಕರಾದ ಅಲ್ಲಮಪ್ರಭು, ಅಕ್ಕ ಮಹಾದೇವಿ ಆದಿಯಾಗಿ, ಆಧುನಿಕ ಕಾಲದ ಸಮಾಜವಾದಿ ನಾಯಕರಾದ ಶಾಂತವೇರಿ ಗೋಪಾಲ ಗೌಡ, ಜೆ ಎಚ್ ಪಟೇಲ್, ಕಡಿದಾಳ್ ಮಂಜಪ್ಪ, ಸಾರೆಕೊಪ್ಪ ಬಂಗಾರಪ್ಪ, ರಾಮ್ ಮನೋಹರ್ ಲೋಹಿಯಾ, ಮಹಾನ್ ಲೇಖಕರಾದ ಕುವೆಂಪು, ಯು ಆರ್ ಅನಂತಮೂರ್ತಿ, ಲಂಕೇಶ್ ಅವರೊಂದಿಗೆ ತಮ್ಮ ಪರಂಪರೆಯನ್ನು ಗುರುತಿಸುತ್ತಾರೆ. ಭೂಸುಧಾರಣಾ ಚಳವಳಿಯ ಕಾಗೋಡು ಸತ್ಯಾಗ್ರಹದ ಬಗ್ಗೆ ಜನತೆ ಈಗಲೂ ಹೆಮ್ಮೆಪಡುತ್ತಾರೆ. ಆದಾಗ್ಯೂ, ಅನೇಕ ಸಾಮಾಜಿಕ ಚಳವಳಿಗಳನ್ನು ಹುಟ್ಟುಹಾಕಿದ ಶಿವಮೊಗ್ಗದ ಚಿತ್ರಣವನ್ನು ಕೆಡಿಸುವ ಪುನರಾವರ್ತಿತ ಕೋಮು ಘರ್ಷಣೆಗಳ ಬಗ್ಗೆ ಜನ ಆತಂಕ ಮತ್ತು ನೋವು ವ್ಯಕ್ತಪಡಿಸುತ್ತಾರೆ. 1951ರಲ್ಲಿ, ಕುಗ್ರಾಮವಾದ ಕಾಗೋಡು, ಸ್ವಾತಂತ್ರ್ಯ ಹೋರಾಟಗಾರ ಎಚ್ ಗಣಪತಿಯಪ್ಪ ನೇತೃತ್ವದ ಹಿಂದುಳಿದ ಸಮುದಾಯಗಳ ಭೂರಹಿತ ಕೃಷಿ ಕಾರ್ಮಿಕರ ದಂಗೆಗೆ ಸಾಕ್ಷಿಯಾಯಿತು. ಆ ಭೂರಹಿತ ಗೇಣಿದಾರರ ಹೋರಾಟವೇ ದೇಶದ ಇತಿಹಾಸದಲ್ಲೇ ಮೊಟ್ಟಮೊದಲ ರಕ್ತರಹಿತ ರೈತ ಕ್ರಾಂತಿಯಾದ ಕಾಗೋಡು ಸತ್ಯಾಗ್ರಹ. ಈ ಚಳವಳಿಯು, ಹೋರಾಟದ ಎರಡು ದಶಕಗಳ ನಂತರ ರಾಜ್ಯದಲ್ಲಿ ಭೂಸುಧಾರಣೆಗೆ ಕಾರಣವಾಯಿತು. ಹಾಗೇ, ಎಂಭತ್ತರ ದಶಕದಲ್ಲಿ ಎಚ್ ಎಸ್ ರುದ್ರಪ್ಪ ಮತ್ತು ಪ್ರೊ.ಎಂ ಡಿ ನಂಜುಂಡಸ್ವಾಮಿ ನೇತೃತ್ವದಲ್ಲಿ ಶಿವಮೊಗ್ಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ (ಕೆಆರ್ಆರ್ಎಸ್) ಉದಯವಾಯಿತು. 1950 ರ ದಶಕದ ಆರಂಭದಲ್ಲಿ ನಡೆದ ಕಾಗೋಡು ಸತ್ಯಾಗ್ರಹದಂತೆಯೇ ರೈತ ಸಂಘದ ನೇತೃತ್ವದ ರೈತ ಚಳವಳಿ ಕೂಡ ದೇಶದಾದ್ಯಂತ ವ್ಯಾಪಕ ಮನ್ನಣೆ ಗಳಿಸಿತು.

ಆದರೆ, ಕಳೆದ ಎರಡು ದಶಕಗಳಲ್ಲಿ, ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರದ ರುಚಿ ನೋಡುವ ಹೊತ್ತಿಗೆ ಶಿವಮೊಗ್ಗದ ಪರಿಸ್ಥಿತಿ ಕೂಡ ದೊಡ್ಡ ಬದಲಾವಣೆ ಕಂಡಿದೆ. ಕಾಂಗ್ರೆಸ್ ನ ಚುನಾವಣಾ ಪಾರುಪತ್ಯವನ್ನು ಹಿಮ್ಮೆಟ್ಟಿಸುವ ಮೂಲಕ 1983ರಲ್ಲಿ ಬಿಜೆಪಿಯ ಎಂ.ಆನಂದ ರಾವ್ ಅವರು ಶಿವಮೊಗ್ಗದಿಂದ ವಿಧಾನಸಭೆಗೆ ಪ್ರವೇಶಿಸಿದರು. ಆ ಮೂಲಕ ವರ್ಷಗಳ ಕಾಲ ನೆಲಕಚ್ಚಿದ್ದ ಬಿಜೆಪಿ ನಿಧಾನವಾಗಿ ತನ್ನ ರಾಜಕೀಯ ನೆಲೆಯನ್ನು ವಿಸ್ತರಿಸಿಕೊಳ್ಳತೊಡಗಿತು. 80 ರ ದಶಕದ ಆರಂಭದಲ್ಲಿ ಬಿಜೆಪಿಯು ತೀವ್ರ ಪ್ರಾಬಲ್ಯ ಸಾಧಿಸಲು ಪ್ರಾರಂಭಿಸಿದರೂ, 1935 ರ ಆರಂಭದಲ್ಲಿ ಆರೆಸ್ಸೆಸ್ ಸಾಮಾಜಿಕ ವಲಯದಲ್ಲಿ ಕಾಣಿಸಿಕೊಳ್ಳುವ ಮೂಲಕ ಹಿಂದುತ್ವ ಸಿದ್ಧಾಂತವು ಜಿಲ್ಲೆಯಲ್ಲಿ ತನ್ನನ್ನು ತಾನು ನೆಲೆಯೂರಿಸಿಕೊಂಡಿತ್ತು.

ಈಗ ಬಿಜೆಪಿಯ ಭದ್ರಕೋಟೆ

ಸಂಘ-ಪರಿವಾರದ ಬೆಂಬಲದೊಂದಿಗೆ ಬಿಜೆಪಿ ತನ್ನ ಕೋಮುವಾದಿ ಅಜೆಂಡಾವನ್ನು ಬಿರುಸುಗೊಳಿಸಿತು ಮತ್ತು ಶಿವಮೊಗ್ಗವನ್ನು ತನ್ನ ಭದ್ರ ನೆಲೆಯನ್ನಾಗಿ ಮಾಡಿಕೊಂಡಿತು. ʼಮಲೆನಾಡು ಭಾಗದಲ್ಲಿ ಹಂತಹಂತವಾಗಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಕೆಲವು ನಾಯಕರಿಗೆ ಆ ಪಕ್ಷ ಋಣಿಯಾಗಿರಬೇಕು' ಎಂದು ಅಭಿಪ್ರಾಯಪಡುವ ಶಿವಮೊಗ್ಗದ ಕೆಲವು ಕಾಂಗ್ರೆಸ್ ನಾಯಕರು, ಬಿಜೆಪಿಯ ಬೆಳವಣಿಗೆಯಲ್ಲಿ ಬಿ ಎಸ್ ಯಡಿಯೂರಪ್ಪ, ಡಿ ಎಚ್ ಶಂಕರಮೂರ್ತಿ ಮತ್ತು ಕೆ ಎಸ್ ಈಶ್ವರಪ್ಪ ಅವರ ಕೊಡುಗೆಯನ್ನು ಉದಾಹರಿಸುತ್ತಾರೆ. ಎಂಭತ್ತರ ದಶಕದ ಬಳಿಕ ನಿಧಾನವಾಗಿ, ಮಲೆನಾಡು ಪ್ರದೇಶದ ಹಚ್ಚ ಹಸಿರಿನ ಪರಿಸರವು ಕೇಸರಿ ಬಣ್ಣಕ್ಕೆ ತಿರುಗಿತು ಮತ್ತು ಕೋಮು ವಿಭಜನೆಯಿಂದಾಗಿ ಅಲ್ಲಿನ ಭೂದೃಶ್ಯದ ಬಣ್ಣವೂ ಬದಲಾಯಿತು.

"ಅದು ಕೋಮುವಾದದ ಕೇಂದ್ರವಾಗಿತ್ತು, ಕೋಮು ಘರ್ಷಣೆಗಳಿಗಲ್ಲ"

ʼದಿ ಫೆಡರಲ್ʼನೊಂದಿಗೆ ಮಾತನಾಡಿದ ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಇಂಗ್ಲಿಷ್ ಪ್ರಾಧ್ಯಾಪಕ ಪ್ರೊ. ರಾಜೇಂದ್ರ ಚೆನ್ನಿ, “ಶಿವಮೊಗ್ಗವು ಸ್ವಾತಂತ್ರ್ಯದ ಮೊದಲು ಕೋಮುವಾದದ ಪ್ರಮುಖ ಕೇಂದ್ರವೆಂದು ಕರೆಯಲಾಗುತ್ತಿತ್ತು. ಆದರೆ, ಕೋಮು ಸಂಘರ್ಷಗಳ ನೆಲೆಯಾಗಿರಲಿಲ್ಲ" ಎನ್ನುತ್ತಾರೆ. ಅಂದಿನಿಂದ ನಗರದಲ್ಲಿ ಹಿಂದೂ ಮಹಾಸಭಾ ಬೆಳೆಯುತ್ತಿದೆ. ಕ್ಷುಲ್ಲಕ ವಿಷಯಗಳಿಗೂ ಕೋಮು ಘರ್ಷಣೆಗಳು ಉಂಟಾಗುವುದನ್ನು ಗಮನಿಸಬಹುದು. ಎರಡೂ ಕಡೆಯ ಕೋಮುವಾದಿ ಸಂಘಟನೆಗಳು ಇಂತಹ ಘಟನೆಗಳನ್ನು ವೈಭವೀಕರಿಸಿ, ಧರ್ಮವನ್ನು ಬೆರೆಸಿ ರಾಜಕಾರಣ ಮಾಡುತ್ತಿವೆ. ಈಗಂತೂ, ಜನರು ಹಿಂದೆಂದಿಗಿಂತಲೂ ಹೆಚ್ಚು ಧ್ರುವೀಕರಣಗೊಂಡಂತೆ ತೋರುತ್ತಿದೆ.

ಕರ್ನಾಟಕ ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಡಿ ಹೆಚ್ ಶಂಕರಮೂರ್ತಿ ಅವರು, ಒಂದು ಕಾಲದಲ್ಲಿ ಸಂಸ್ಕೃತಿಯ ತೊಟ್ಟಿಲಾಗಿದ್ದ ಶಿವಮೊಗ್ಗ, ಕೋಮುಗಲಭೆಯ ಕುದಿನೆಲವಾಗಿ ಬದಲಾಗಲು ಎಸ್ಡಿಪಿಐ ಮತ್ತು ಪಿಎಫ್ಐ ಕಾರಣ" ಎನ್ನುತ್ತಾರೆ.> ಶಿವಮೊಗ್ಗವನ್ನು ಕೋಮುದಳ್ಳುರಿಯ ಕುಂಡವಾಗಿಸುವಲ್ಲಿ ಬಿಜೆಪಿಯ ಪಾತ್ರವೇನು ಎಂದು ಕೇಳಿದಾಗ ಅವರು, "80ರ ದಶಕದ ಬಿಜೆಪಿಗೂ ಈಗಿನ ಬಿಜೆಪಿಗೂ ಸಾಕಷ್ಟು ವ್ಯತ್ಯಾಸವಿದೆ" ಎಂದು ಸಮರ್ಥಿಸಿಕೊಂಡರು. "ಬಿಜೆಪಿ ಅಧಿಕಾರದಲ್ಲಿದ್ದಾಗ, ಪಿಎಫ್ಐ ಮತ್ತು ಇತರ ಸಂಘಟನೆಗಳ ಸದ್ಡಡಗುತ್ತದೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೇ ಅವು ಸಕ್ರಿಯವಾಗುತ್ತವೆ" ಎಂದು ಅವರು ಆರೋಪಿಸಿದರು. ಆದಾಗ್ಯೂ, "ನಾವು 'ಅವರೊಂದಿಗೆ' ಬದುಕಲು ಕಲಿಯಬೇಕು. ನಾವು ಅವರನ್ನು ಶಾಶ್ವತವಾಗಿ ದೂರವಿಡಲು ಸಾಧ್ಯವಿಲ್ಲ, ಅಲ್ಲವೇ?” ಎಂಬ ಮಾತನ್ನು ಸೇರಿಸುವುದನ್ನು ಅವರು ಮರೆಯಲಿಲ್ಲ.

ಇತ್ತೀಚೆಗಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ಗೆ ಸೇರ್ಪಡೆಯಾದ ಕಾಂಗ್ರೆಸ್ ವಕ್ತಾರ ಹಾಗೂ ಮಾಜಿ ಎಂಎಲ್ಸಿ ಆಯನೂರು ಮಂಜುನಾಥ್ ಹೇಳಿದ್ದು ಹೀಗೆ; “ಬಿಜೆಪಿ, ಹಿಂದೂ ಮಹಾಸಭಾದೊಂದಿಗೆ ಬೆರೆತುಹೋಗಿದೆ ಮತ್ತು ಆ ಪಕ್ಷವು ಎರಡೂ ಸಮುದಾಯಗಳ ಆಕ್ರೋಶ ಆರಿಹೋಗಲು ಎಂದೂ ಬಿಡುವುದೂ ಇಲ್ಲ". ಈ ಮೊದಲು, ಹಿಂದಿನ ದಿನ ರಾತ್ರಿ ಹಿಂದೂ ಮಹಾಸಭಾ ಗಣಪತಿಯ ವಿಸರ್ಜನೆ ಸಮಯದಲ್ಲಿ ಏನಾಯಿತು ಎಂಬುದನ್ನು ನೆನಪಿಸಿಕೊಳ್ಳದೆ ಎರಡೂ ಸಮುದಾಯಗಳು ಒಟ್ಟಿಗೆ ವಾಸಿಸುತ್ತಿದ್ದವು. ಆದರೆ, ಇತ್ತೀಚಿನ ವರ್ಷಗಳಲ್ಲಿ ಎರಡು ಸಮುದಾಯಗಳ ನಡುವಿನ ಪರಸ್ಪರ ಸಹಬಾಳ್ವೆ, ಕೊಡುಕೊಳುವಿಕೆ ವಾಸ್ತವಿಕವಾಗಿ ಸಂಪೂರ್ಣ ನಾಶವಾಗಿದೆ ಎಂದು ಅವರು ಹೇಳುತ್ತಾರೆ. ಈಗ ಈ ಊರಲ್ಲಿ ಬೇರೆ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಂದಿಗೆ ಒಂದು ಕಪ್ ಚಹಾ ಕುಡಿಯುವುದು ಕಷ್ಟ. ಶಿವಮೊಗ್ಗದಲ್ಲಿ ‘ಅಸ್ ವರ್ಸಸ್ ಅವರ್’ ನಿರೂಪಣೆಯನ್ನು ಮೀರಿ ಸಾಗುವ ಸಮಯ ಬಂದಿದೆ.

Similar News