ರಾಷ್ಟ್ರೀಯತಾವಾದಿ ಅಜೆಂಡಾವನ್ನು ಸೋಲಿಸುವುದೇ ಲಾಲು-ನಿತೀಶ್ ಇಬಿಸಿ ಬೆಂಬಲ?
ಇಬಿಸಿ (ಆರ್ಥಿಕವಾಗಿ ಹಿಂದುಳಿದ ವರ್ಗ)ಗಳು ಗಮನಾರ್ಹ ಸಂಖ್ಯೆಯಲ್ಲಿರುವುದರಿದ, ಅವರನ್ನು ಸೆಳೆಯಲು ಹೆಚ್ಚು ಗಮನ ಹರಿಸುತ್ತಿವೆ. ಮಂಡಲ್ 1.0 ನಂತರದ ಅವಧಿಯಲ್ಲಿ ಇಬಿಸಿಗಳು ರಾಜಕೀಯದ ಮೇಲೆ ಪ್ರಭಾವ ಬೀರಿದ್ದಾರೆ; ಮಂಡಲ 2.0 ಹಂತದಲ್ಲಿ ಮತ್ತೆ ಪ್ರಭಾವ ಬೀರುವ ನಿರೀಕ್ಷೆಯಿದೆ. ಆದರೆ, ಪ್ರಮುಖ ಪ್ರಶ್ನೆಯೆಂದರೆ, ಬಿಹಾರದಲ್ಲಿ ಆರ್‌ಜೆಡಿ-ಜೆಡಿಯು ಅಧಿಕಾರವನ್ನು ಕೈವಶ ಮಾಡಿಕೊಳ್ಳುವುದೇ? ಎಂಬುದು.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಹುನಿರೀಕ್ಷಿತ ಜಾತಿ ಸಮೀಕ್ಷೆಯನ್ನು ಬಹಿರಂಗಗೊಳಿಸಿದ್ದಾರೆ. ಇದು ದೇಶದಾದ್ಯಂತ ಮಂಡಲ್ 2.0 ಎಂದು ಕರೆಯಲ್ಪಡುವ ರಾಜಕೀಯದ ಹೊಸ ಯುಗವನ್ನು ಪ್ರಾರಂಭಿಸಿದೆ. ಈ ರಾಜಕೀಯ ಆಂದೋಲನದ ಗುರಿ ಬಿಜೆಪಿಯ ಹಿಂದುತ್ವ ಅಜೆಂಡಾವನ್ನು ಎದುರಿಸುವುದು. ಬಿಹಾರ ಮತ್ತು ದೇಶಾದ್ಯಂತ ರಾಜಕೀಯ ಲಾಭ ಪಡೆಯಲು ಈ ಸಮೀಕ್ಷೆಯ ದತ್ತಾಂಶವನ್ನು ಬಳಸಲು ಯೋಜಿಸಲಾಗಿದೆ.
ಲಾಲು ಪ್ರಸಾದ್ ಮತ್ತು ನಿತೀಶ್ ಕುಮಾರ್ ಅವರು 30 ವರ್ಷಗಳ ನಂತರ ಮತ್ತೆ ಒಂದಾಗಿದ್ದಾರೆ. ಈ ಜೋಡಿ ಶರದ್ ಯಾದವ್ ಅವರೊಂದಿಗೆ ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಅವರಿಗೆ ಮಂಡಲ್ ಆಯೋಗದ ವರದಿಯನ್ನು ಕಾರ್ಯ ರೂಪಕ್ಕೆ ತರುವಂತೆ ಮನವರಿಕೆ ಮಾಡಿತ್ತು. ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ವರದಿಯನ್ನು ಆಗಸ್ಟ್ 1990 ರಲ್ಲಿ ಬಿಡುಗಡೆ ಮಾಡಲಾಯಿತು. ಸ್ವಲ್ಪ ಸಮಯದ ನಂತರ ಬಿಜೆಪಿಯ ಪ್ರಮುಖ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಸೆಪ್ಟೆಂಬರ್ 1990ರಲ್ಲಿ ಸೋಮನಾಥದಿಂದ ಅಯೋಧ್ಯೆಗೆ ರಥಯಾತ್ರೆ ಆರಂಭಿಸಿದರು. ಮಂಡಲ್ ಆಯೋಗದಿಂದ ಜನರ ಗಮನವನ್ನು ಸೆಳೆಯಲು ʻಕಮಂಡಲʼ ಎಂದು ಕರೆಯಲಾಗುವ ಈ ತಂತ್ರವನ್ನು ಬಳಸಲಾಯಿತು. ಆಗ ಬಿಹಾರದ ಮುಖ್ಯಮಂತ್ರಿಯಾಗಿದ್ದ ಲಾಲು ಅವರು 1990ರ ಅಕ್ಟೋಬರ್ 24ರಂದು ಬಿಹಾರದ ಸಮಸ್ತಿಪುರದಲ್ಲಿ ಅಡ್ವಾಣಿ ಅವರನ್ನು ಬಂಧಿಸಿದರು. ಈ ಘಟನೆ ವಿ.ಪಿ. ಸಿಂಗ್ ಸರ್ಕಾರದ ಪತನಕ್ಕೆ ಕಾರಣವಾಯಿತು. ಹಿಂದುತ್ವ ಅಜೆಂಡಾವನ್ನು ಲಾಲು ಎಷ್ಟು ಬಲವಾಗಿ ವಿರೋಧಿಸಿದರು ಎಂಬುದನ್ನು ಇದು ತೋರಿಸುತ್ತದೆ.
ನಿತೀಶ್ ಮತ್ತು ಲಾಲು ಹಿಂದೂ ರಾಷ್ಟ್ರೀಯವಾದಿ ಸಿದ್ಧಾಂತವನ್ನು ವಿರೋಧಿಸಿದರು. ಮಂಡಲ್ ರಾಜಕೀಯದ ಮೇಲೆ ಕೇಂದ್ರೀಕರಿಸುವುದರಿಂದ, ಬಿಜೆಪಿಯ ಹಿಂದುತ್ವ ಅಜೆಂಡಾವನ್ನು ಎದುರಿಸಬಹುದು ಎಂದು ಅವರು ಬಲವಾಗಿ ನಂಬಿದ್ದರು. ಕೌಬೆಲ್ಟ್ ಎಂದು ಕರೆಯಲಾಗುವ ಉತ್ತರ ಭಾರತದಲ್ಲಿ ಕೇಸರಿ ಪಡೆಗಳನ್ನು ತಡೆಯುವುದು ಅವರ ಉದ್ದೇಶವಾಗಿತ್ತು. ಶೇ.80 ರಷ್ಟು ಹಿಂದುಳಿದ ಜಾತಿಗಳು ಸಂಘ ಪರಿವಾರದ ನಿರೂಪಣೆಯಿಂದ ಪ್ರಭಾವಿತವಾಗದಂತೆ ನೋಡಿಕೊಳ್ಳಲು ಜಾತಿ ಸಮೀಕ್ಷೆಗೆ ಮುಂದಾದರು. ಇಂಡಿಯ ಮೈತ್ರಿಕೂಟದ ಪ್ರಮುಖ ಆದ್ಯತೆಯಾಗಿ ಜಾತಿ ಗಣತಿಯನ್ನು ಸೇರಿಸಲು ಒತ್ತಾಯಿಸುತ್ತಿದ್ದಾರೆ ಮತ್ತು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅದನ್ನು ರಾಷ್ಟ್ರವ್ಯಾಪಿ ಪ್ರಚಾರ ಮಾಡುತ್ತಿದ್ದಾರೆ.
ನಿತೀಶ್ ಕುಮಾರ್ ಬಿಜೆಪಿಯೊಂದಿಗೆ ಪಾಲುದಾರಿಕೆಯಲ್ಲಿದ್ದಾಗ ಜಾತಿ ಗಣತಿ ನಡೆಸುವ ಸಲಹೆಯನ್ನು ಪ್ರಸ್ತಾಪಿಸಲಾಗಿತ್ತು. ಬಿಹಾರದ ಶಾಸಕಾಂಗ ಮತ್ತು ಸಚಿವ ಸಂಪುಟ ಫೆಬ್ರವರಿ 2022ರಲ್ಲಿ ಎರಡು ಹಂತಗಳಲ್ಲಿ ಸಮೀಕ್ಷೆಯನ್ನು ನಡೆಸಿ, ಜನವರಿ 2023ಯೊಳಗೆ ಪೂರ್ಣಗೊಳಿಸಲು ನಿರ್ಧರಿಸಿದವು. ಆದರೆ, ಕಾನೂನು ಅಡೆತಡೆಗಳು ಎದುರಾದವು. ಸಮೀಕ್ಷೆ ಮಾಡುವ ರಾಜ್ಯ ಸರ್ಕಾರದ ಅಧಿಕಾರವನ್ನು ಕೇಂದ್ರ ಪ್ರಶ್ನಿಸಿತು; ಇದು ಪಟಣಾ ಹೈಕೋರ್ಟ್‌ನಿಂದ ಸುಪ್ರೀಂ ಕೋರ್ಟ್‌ವರೆಗೆ ಎಳೆದಾಡಿತು.
ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಾಷ್ಟ್ರೀಯ ಜನಗಣತಿ ವೇಳೆಯಲ್ಲಿ ಎಸ್‌ಸಿ/ಎಸ್‌ಟಿಗಳನ್ನು ಹೊರತುಪಡಿಸಿ, ಬೇರೆ ಜಾತಿಗಳನ್ನು ಎಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ರಾಜಕೀಯ ಸ್ಥಾನಮಾನದ ಮೇಲೆ ಬೀರಬಹುದಾದ ಋಣಾತ್ಮಕ ಪರಿಣಾಮಗಳ ಬಗ್ಗೆ ಕಳವಳ ಇದಕ್ಕೆ ಕಾರಣ. ಅತ್ಯಂತ ಹಿಂದುಳಿದ ವರ್ಗ(ಇಬಿಸಿ) ಮತ್ತು ಹಿಂದುಳಿದ ವರ್ಗ(ಬಿಸಿ)ಗಳು ರಾಜ್ಯದ ಒಟ್ಟು ಜನಸಂಖ್ಯೆಯ ಶೇ. 63 ರಷ್ಟಿದ್ದಾರೆ; ಅಂದರೆ, 13.07 ಕೋಟಿ. ಇಬಿಸಿಗಳು ಜನಸಂಖ್ಯೆ ಯ ಶೇ. 36ರಷ್ಟಿರುವ ದೊಡ್ಡ ಗುಂಪು. ಬಿಸಿಗಳು ಶೇ.27.13 ಇದ್ದಾರೆ. ಜಾತಿ ಸಮೀಕ್ಷೆಯ ದತ್ತಾಂಶವು ಹೆಚ್ಚು ಇಬಿಸಿ ಮತ್ತು ಬಿಸಿಗಳು ಹೆಚ್ಚು ಸಂಖ್ಯೆಯಲ್ಲಿದ್ದಾರೆ ಎಂಬುದನ್ನು ತೋರಿಸಿದೆ. ಮುಂದಿನ ನಡೆಯನ್ನು ನಿರ್ಧರಿಸಲು ಒಂಬತ್ತು ಪಕ್ಷಗಳೊಂದಿಗೆ ಸಭೆ ನಡೆಸಲು ನಿತೀಶ್ ಯೋಜಿಸಿದ್ದಾರೆ. ಸಭೆಯಲ್ಲಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಭಾಗವಹಿಸಲಿದ್ದಾರೆ. ಆರ್ಜೆಡಿ-ಜೆಡಿ(ಯು) ಮೈತ್ರಿಕೂಟ, ಇತರೆ ಬೆಂಬಲಿಗರೊಂದಿಗೆ ಸೇರಿ ಬಿಸಿ ಕೋಟಾ ಹೆಚ್ಚಳ ಘೋಷಣೆ ಮಾಡುವ ಸಾಧ್ಯತೆ ಇದೆ. ಪ್ರಸ್ತುತ, ಈ ಕೋಟಾ ಶೇ.27 ಇದೆ.
ಬಿಹಾರದಲ್ಲಿ ಬಿಸಿಗಳಲ್ಲಿ ಎರಡು ವರ್ಗಗಳಿವೆ;- 120 ಕ್ಕಿಂತ ಹೆಚ್ಚು ಇಬಿಸಿಗಳನ್ನು ಒಳಗೊಂಡಿರುವ ಪರಿಶಿಷ್ಟ ಒಂದು ಮತ್ತು ನಾಲ್ಕು ಪ್ರಮುಖ ಬಿಸಿಗಳ ಪರಿಶಿಷ್ಟ ಎರಡು. ಸಮೀಕ್ಷೆಯ ಫಲಿತಾಂಶಗಳು ಖಾಸಗಿ ವಲಯದ ಉದ್ಯೋಗಗಳಲ್ಲಿ ಮೀಸಲು ಅನ್ವಯಿಸಬೇಕೆಂಬ ಬೇಡಿಕೆಯನ್ನು ಬೆಂಬಲಿಸುತ್ತದೆ; ಬಿಹಾರ ಹಾಗೂ ಮತ್ತು ದೇಶದ ಇತರ ಭಾಗಗಳಲ್ಲಿ ಸಾಮಾಜಿಕ ಸಮಾನತೆಯ ಪ್ರಯತ್ನಗಳನ್ನು ಬಲಪಡಿಸುತ್ತದೆ.
ನಿತೀಶ್ ಅವರು ಪಂಚಾಯತಿ ಚುನಾವಣೆಗಳಲ್ಲಿ ಶೇ.33 ಮೀಸಲು ನೀಡುವ ಮೂಲಕ ಮಹಿಳಾ ಪ್ರಾತಿನಿಧ್ಯವನ್ನು ಸುಧಾರಿಸಲು ಪ್ರಯತ್ನ ಮಾಡಿದ್ದಾರೆ. ಪರಿಶಿಷ್ಟ ಜಾತಿ(ಎಸ್‌ಸಿ)ಗಳ ಯೋಗಕ್ಷೇಮವನ್ನು ನೋಡಿಕೊಳ್ಳಲು ಮಹಾದಲಿತ್ ಆಯೋಗವನ್ನು ರಚಿಸಿದ್ದಾರೆ. ಸಮೀಕ್ಷೆ ಪ್ರಕಾರ, ಯಾದವರು ಶೇ.14.27 ಇರುವ ಅತಿ ದೊಡ್ಡ ಜಾತಿ. ಮುಸ್ಲಿಂ-ಯಾದವ್ (ಎಂವೈ) ಸಂಯೋಜನೆ ಶೇ. 31.97 ಮತ್ತು ಮುಸ್ಲಿಂ ಸಮುದಾಯದವರು ಶೇ.17.7ರಷ್ಟು ಮತಗಳನ್ನು ಹೊಂದಿದ್ದಾರೆ. ಆರ್‌ಜೆಡಿ ಮತ್ತು ಅದರ ಮಿತ್ರಪಕ್ಷಗಳು ಶೇ.32 ರಷ್ಟು ಮತದಾರರ ಬೆಂಬಲವನ್ನು ಹೊಂದಿವೆ. ಇಬಿಸಿಗಳು, ಇತರ ಬಿಸಿಗಳು ಮತ್ತು ದಲಿತರ ಮತಗಳನ್ನು ಸೇರಿಸಿದರೆ, ಇಂಡಿಯ ಮೈತ್ರಿಕೂಟವು ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಿಗಿಂತ ಮುನ್ನಡೆ ಸಾಧಿಸಲಿದೆ ಎಂದು ಮಾಜಿ ಸಚಿವ ಮತ್ತು ಆರ್‌ಜೆಡಿ ಸದಸ್ಯ ಶ್ಯಾಮ್ ರಜಾಕ್ ಹೇಳಿದ್ದಾರೆ.
ಜನಗಣತಿಯ ಫಲಿತಾಂಶಗಳು ಅಂಚಿನಲ್ಲಿರುವ ಗುಂಪುಗಳಿಗೆ ಹೊಸ ಗುರುತು ನೀಡಲು ಸಹಾಯ ಮಾಡುತ್ತದೆ. ಎಸ್ಸಿ ಮತ್ತು ಎಸ್ಟಿ ಜನಸಂಖ್ಯೆ ಶೇ.21.33 ಕ್ಕೆ ಏರಿದೆ. ಇದು ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ) ಮತ್ತು ಹಿಂದೂಸ್ತಾನಿ ಅವಾಮ್ ಮೋರ್ಚಾ (ಎಚ್‌ಎಎಂ) ದಂಥ ಪಕ್ಷಗಳಿಗೆ ಲಾಭದಾಯಕವಾಗಿದೆ. ಈ ಪಕ್ಷಗಳು ದುಸಾದ್(ಪಾಸ್ವಾನ್) ಮತ್ತು ಮುಸಾಹರ್‌ಗಳ ಬೆಂಬಲವನ್ನು ಹೊಂದಿವೆ.
ಇಬಿಸಿ ಮತಗಳನ್ನು ಸೆಳೆಯುವ ಬಿಜೆಪಿಯ ಯೋಜನೆಗೆ ನಿತೀಶ್ ಅವರ ರಾಜಕೀಯ ನಿರ್ಧಾರ ತಡೆ ಒಡ್ಡುತ್ತದೆ. ಸಾಮಾಜಿಕ ನ್ಯಾಯದ ಗುಂಪನ್ನು ವಿಭಜಿಸಲು ಮತ್ತು ಅದರೊಳಗಿನ ಸಣ್ಣ ವಿಭಾಗಗಳನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಸಾಮ್ರಾಟ್ ಚೌಧರಿ ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ ಮತ್ತು ಒಟ್ಟು ಜನಸಂಖ್ಯೆಯ ಶೇ. 4.21ರಷ್ಟಿರುವ ಕುಶ್ವಹ (ಕೋರಿಗಳು) ಜಾತಿ ಮತಗಳನ್ನು ಸೆಳೆಯುವ ಸಲುವಾಗಿ ಮಾಜಿ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಅವರನ್ನು ಪಕ್ಷಕ್ಕೆ ಆಹ್ವಾನಿಸಿದೆ. 2024ರ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮಂಡಲ್ ಸಮುದಾಯವನ್ನು ಒಟ್ಟುಗೂಡಿಸಿ, ಮತದಾರರ ಮೇಲೆ ಪ್ರಭಾವ ಬೀರಲು ವಿವಿಧ ತಂತ್ರಗಳನ್ನು ಮಾಡಲಾಗುತ್ತಿದೆ.
ಇಬಿಸಿ (ಆರ್ಥಿಕವಾಗಿ ಹಿಂದುಳಿದ ವರ್ಗ)ಗಳು ಗಮನಾರ್ಹ ಸಂಖ್ಯೆಯಲ್ಲಿರುವುದರಿದ, ಅವರನ್ನು ಸೆಳೆಯಲು ಹೆಚ್ಚು ಗಮನ ಹರಿಸುತ್ತಿವೆ. ಮಂಡಲ್ 1.0 ನಂತರದ ಅವಧಿಯಲ್ಲಿ ಇಬಿಸಿಗಳು ರಾಜಕೀಯದ ಮೇಲೆ ಪ್ರಭಾವ ಬೀರಿದ್ದಾರೆ; ಮಂಡಲ 2.0 ಹಂತದಲ್ಲಿ ಮತ್ತೆ ಪ್ರಭಾವ ಬೀರುವ ನಿರೀಕ್ಷೆಯಿದೆ. ಆದರೆ, ಪ್ರಮುಖ ಪ್ರಶ್ನೆಯೆಂದರೆ, ಬಿಹಾರದಲ್ಲಿ ಆರ್‌ಜೆಡಿ-ಜೆಡಿಯು ಅಧಿಕಾರವನ್ನು ಕೈವಶ ಮಾಡಿಕೊಳ್ಳುವುದೇ? ಎಂಬುದು.