ಚಂಡಮಾರುತದಿಂದ ಹಾನಿ ಕಡಿಮೆ ಮಾಡುವ ನಾಲ್ಕು ಮಾರ್ಗ

ಚಂಡಮಾರುತಗಳು ಜನರು, ಮೂಲಸೌಲಭ್ಯ ಮತ್ತು ಮನೆ-ಆಸ್ತಿಗಳಿಗೆ ಮಾತ್ರ ಹಾನಿಕರವೇ? ಕೊಂಕಣದ ಆರ್ಥಿಕತೆ ಪ್ರವಾಸೋದ್ಯಮವನ್ನು ಅವಲಂಬಿಸಿದೆ. ಆದರೆ, ಸದ್ಯದ ಪರಿಸ್ಥಿತಿ ಪರಿಸರಕ್ಕೆ ಮಾರಕವಾಗಿದೆ.

Update: 2024-02-05 06:30 GMT

ಎರಡು ಚಂಡಮಾರುತಗಳು (ಮೇ 2021ರಲ್ಲಿ ಟೌಕ್ಟೇ ಮತ್ತು ಸೆಪ್ಟೆಂಬರ್‌ 2023 ರಲ್ಲಿ ನಿಸರ್ಗ್‌) ದೇಶವನ್ನು ಒಂದರ ನಂತರ ಇನ್ನೊಂದು ಅಪ್ಪಳಿಸಿದವು. ಪ್ರಬಲ ಚಂಡಮಾರುತಗಳು ದೇಶದ ಪಶ್ಚಿಮ ಕರಾವಳಿಯಲ್ಲಿ ಸಾಕಷ್ಟು ಹಾನಿಯನ್ನುಂಟು ಮಾಡಿವೆ.

ಸರ್ಕಾರಗಳು ಮತ್ತು ಆ ಪ್ರದೇಶದಲ್ಲಿ ವಾಸಿಸುವವರು ನೈಸರ್ಗಿಕ ವಿಕೋಪಗಳಿಗೆ ಸನ್ನದ್ಧರಾಗಬೇಕಿದೆ. ಪರಿಸರಶಾಸ್ತ್ರಜ್ಞ ಡಾ. ಮಾಧವ್ ಗಾಡ್ಗೀಳ್‌ ʻನಿಸರ್ಗಾಚೆ ತಾಯಿಮಾನ್’(ನಿಸರ್ಗ್ ಚಂಡಮಾರುತದ ವಿನಾಶಕಾರಿ ಜಾಡು) ಎಂಬ ಅಧ್ಯಯನ ನಡೆಸಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಪರಿಸರ, ಕಟ್ಟಡಗಳು, ಸಮುದಾಯಗಳು ಮತ್ತು ಆಸ್ತಿಯನ್ನು ಹೇಗೆ ರಕ್ಷಿಸುವುದು ಎಂಬ ಕುರಿತು ಶಿಫಾರಸುಗಳನ್ನು ನೀಡುತ್ತದೆ. ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯನ್ನು ನಿರ್ಲಕ್ಷಿಸಿದರೆ, ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವ ಪ್ರಯತ್ನಗಳು ಯಶಸ್ವಿಯಾಗುವುದಿಲ್ಲ. ಪ್ರಕೃತಿಗೆ ಹಾನಿ ಮಾಡುವುದು ಸಮಸ್ಯೆಗಳಿಗೆ ಕಾರಣವಾಗುತ್ತದೆ.

2011 ರಲ್ಲಿ ಪಶ್ಚಿಮ ಘಟ್ಟಗಳ ಪರಿಸರ ಪರಿಣತ ಸಮಿತಿ(ಡಬ್ಲ್ಯುಜಿಇಇಪಿ) ವರದಿಯ ಸೃಷ್ಟಿಕರ್ತರಾದ ಡಾ. ಗಾಡ್ಗೀಳ್‌, ಕೈಗಾರಿಕಾ ಅಭಿವೃದ್ಧಿಯ ಹೊಸ ಮಾದರಿಗಳನ್ನು ಪರಿಗಣಿಸುವಾಗ ನೀತಿ ನಿರೂಪಕರಿಗೆ ಇದನ್ನು ನೆನಪಿಟ್ಟುಕೊಳ್ಳಲು ಸಲಹೆ ನೀಡುತ್ತಾರೆ. ಕಳೆದ ನವೆಂಬರ್ ಆರಂಭದಲ್ಲಿ ಸರ್ಕಾರಕ್ಕೆ ಹಲವು ಮಹತ್ವದ ಸಲಹೆಗಳನ್ನು ನೀಡಲಾಗುವುದು ಎಂದು ‘ನಿಸರ್ಗಾಚೆ ತಾಯಿಮಾನ್’ ಅಧ್ಯಯನದ ಮುಖ್ಯ ಲೇಖಕ ಡಾ.ಗುರುದಾಸ್ ನೂಲ್ಕರ್ ಹೇಳಿದರು.

ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವುದು ಮುಖ್ಯ ಸಲಹೆ. ಸಮುದ್ರದ ನೀರನ್ನು ಸಾರಿಗೆಗೆ ಬಳಸುವ ಸಾಗರ್ ಮಾಲಾದಂತಹ ಯೋಜನೆಗಳು ಪರಿಸರದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಅಲ್ಲದೆ, ಈ ಪ್ರದೇಶದಲ್ಲಿ ವಾಸಿಸುವ ಜನರಿಗೆ ಇಂಥ ಮೂಲಸೌಕರ್ಯ ಯೋಜನೆಗಳಿಂದ ಹೆಚ್ಚು ಪ್ರಯೋಜನ ಆಗುವುದಿಲ್ಲ. ದೊಡ್ಡ ಬಂದರುಗಳ ನಿರ್ಮಾಣ ಸ್ಥಳೀಯ ಮೀನುಗಾರರ ನಿರುದ್ಯೋಗಕ್ಕೆ ಕಾರಣವಾಗಬಹುದು. ಇದರಿಂದ ಅವರು ಕಡಿಮೆ ಸಂಬಳದ ಉದ್ಯೋಗಗಳನ್ನು ಹುಡುಕಿಕೊಂಡು, ನಗರಗಳಿಗೆ ವಲಸೆ ಹೋಗುತ್ತಾರೆ. ಭಾರಿ ಮೂಲಸೌಕರ್ಯ ಯೋಜನೆಗಳು ಸ್ಥಳೀಯ ಪ್ರದೇಶದಲ್ಲಿನ ಗಿಡ-ಮರಗಳ ನಾಶವನ್ನು ಒಳಗೊಂಡಿರುತ್ತವೆ. ಇದರಿಂದ ಕರಾವಳಿ ಪ್ರದೇಶಗಳು ಸಾಗರದ ಉತ್ಪಾತಗಳಿಗೆ ಸಿಲುಕುತ್ತವೆ.

ಶ್ರೀಮಂತರು ಮತ್ತು ಪ್ರಭಾವಿಗಳಿಗೆ ಮಾತ್ರ ಅನುಕೂಲವಾಗುವ ದೊಡ್ಡ ಕೈಗಾರಿಕೆಗಳ ಬದಲು ಸಣ್ಣ ಮತ್ತು ಪರಿಸರಸ್ನೇಹಿ ಕೈಗಾರಿಕೆಗಳನ್ನು ಸರ್ಕಾರ ಪ್ರೋತ್ಸಾಹಿಸಬೇಕು. ಪ್ರಸ್ತುತ, ಸರ್ಕಾರಗಳು ʻಹೊರಹಾಕುವಿಕೆಯಿಂದ ಅಭಿವೃದ್ಧಿʼ ಮಾದರಿಯನ್ನು ಅನುಸರಿಸುತ್ತಿವೆ; ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಸ್ಥಳೀಯ ಸಮುದಾಯಗಳನ್ನು ಒಳಗೊಳ್ಳುವುದಿಲ್ಲ. ಇಂಥ ಪ್ರವೃತ್ತಿಯಿಂದ ದಾಭೋಲ್ ಪವರ್, ಜೈತಾಪುರ್ ಮತ್ತು ನಾನಾರ್ ಸೂಪರ್ ರಿಫೈನರಿ ಯಂತಹ ಯೋಜನೆಗಳು ವಿಫಲವಾಗಿವೆ.

ಮೊದಲನೆಯದಾಗಿ, ನಿರ್ದಿಷ್ಟ ಸ್ಥಳದಲ್ಲಿ ವಾಸಿಸುವ ಜನರು, ವಿಶೇಷವಾಗಿ ಸ್ಥಳೀಯ ಸಮುದಾಯಗಳಿಗೆ ಸೇರಿದವರು, ದೀರ್ಘಾವಧಿ ಅಭಿವೃದ್ಧಿ ಸಾಧಿಸುವಲ್ಲಿ ಮೌಲ್ಯಯುತ ಜ್ಞಾನ ಮತ್ತು ಅನುಭವವನ್ನು ಹೊಂದಿರುತ್ತಾರೆ. ಕರಾವಳಿ ಪ್ರದೇಶಗಳ ಅಭಿವೃದ್ಧಿಯನ್ನು ಯೋಜಿಸುವಾಗ ಈ ಸಮುದಾಯಗಳನ್ನು ಒಳಗೊಳ್ಳುವುದು ಮುಖ್ಯ ಎಂದು ವರದಿ ಸೂಚಿಸುತ್ತದೆ. 2002ರ ಜೀವವೈವಿಧ್ಯ ಕಾಯಿದೆಯನ್ನು ಜಾರಿಗೊಳಿಸಬೇಕು ಮತ್ತು ಕಟ್ಟುನಿಟ್ಟು ಅನುಸರಿಸಬೇಕು. ಶಾಲೆಗಳಲ್ಲಿ ಪರಿಸರ ಕುರಿತು ಕಲಿಸುವತ್ತ ಗಮನ ಹರಿಸುವುದು ಮುಖ್ಯ. ಇದರಿಂದ ಪರಿಸರ ವ್ಯವಸ್ಥೆಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಅವುಗಳನ್ನು ಸಂರಕ್ಷಿಸುವ ಅಥವಾ ಹಾನಿ ಮಾಡುವಲ್ಲಿ ಮಾನವರ ಪಾತ್ರವನ್ನು ಮಕ್ಕಳು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿದೆ. ಕರಾವಳಿಯುದ್ದಕ್ಕೂ ಸ್ಥಳೀಯ ಮರಗಳನ್ನು ನೆಡಬೇಕು. ಈ ಮರಗಳು ಪ್ರವಾಹಗಳು ಮತ್ತು ಗಾಳಿಯನ್ನು ಪ್ರತಿರೋಧಿಸಬಲ್ಲವು.

ಎರಡನೆಯ ಸಲಹೆ ಎಂದರೆ, ಮಾನವ ಸಂಪನ್ಮೂಲವನ್ನು ಪುನರ್ ನಿರ್ಮಿಸುವುದು.‌ ಸುಸ್ಥಿರ ಮತ್ತು ಪರಿಸರಸ್ನೇಹಿ ಕೈಗಾರಿಕೆಗಳನ್ನು ರಚಿಸುವತ್ತ ಗಮನಹರಿಸಬೇಕು. ಕೊಂಕಣ ಪ್ರದೇಶದಲ್ಲಿ ಮೀನುಗಾರಿಕೆ ಮತ್ತು ಉಪ್ಪು ಸಂಸ್ಕರಣೆ ಎರಡು ಪರಿಸರಸ್ನೇಹಿ ವ್ಯವಹಾರಗಳು ಎಂದು ವರದಿ ಸೂಚಿಸುತ್ತದೆ. ಚಂಡಮಾರುತ ಬೀಸಿದಾಗ ತೆಂಗಿನ ಮರಗಳು ಮನೆ ಮೇಲೆ ಬಿದ್ದು ಅಪಾರ ಹಾನಿ ಸಂಭವಿಸಿದೆ. ತೆಂಗಿನ ಮರ ಆಳವಾಗಿ ಬೇರೂರದ ಕಾರಣ ಇದು ಸಂಭವಿಸುತ್ತದೆ. ಈ ಪ್ರದೇಶದ ಜನರು ಸ್ಥಳೀಯ ಮತ್ತು ಗಾಳಿಯನ್ನು ತಡೆದುಕೊಳ್ಳುವ ವಿವಿಧ ರೀತಿಯ ಸಸ್ಯಗಳನ್ನು ನೆಡುವಂತೆ ಪ್ರೇರೇಪಿಸಬೇಕು. ಇಂಥ ಸಸ್ಯಗಳು ಆರ್ಥಿಕ ಮೌಲ್ಯವನ್ನು ಹೊಂದಿರಬೇಕಾಗುತ್ತದೆ.

ದುಃಖದ ಸಂಗತಿಯೆಂದರೆ, ತೆಂಗಿನಕಾಯಿಯಿಂದ ತೈಲ ಹೊರತೆಗೆಯುವ ಸಾಂಪ್ರದಾಯಿಕ ವಿಧಾನಗಳು ಕಣ್ಮರೆಯಾಗಿವೆ. ಜನ ಎಲ್ಲಿಂದಲೋ ಬಂದ ಬ್ರಾಂಡ್ ತೈಲವನ್ನು ಖರೀದಿಸಲು ಬಯಸುತ್ತಾರೆ. ಇದನ್ನು ತಪ್ಪಿಸಲು ಸ್ಥಳೀಯ ಉದ್ಯಮ ಮತ್ತು ಸಾಂಪ್ರದಾಯಿಕ ಉದ್ಯೋಗಗಳನ್ನು ಉತ್ತೇಜಿಸಬೇಕಿದೆ. 50 ವರ್ಷಗಳ ಹಿಂದೆ ಮಹಾಡ್, ರೋಹಾ ಮತ್ತು ಲೋಟೆ ತಾಲೂಕುಗಳಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಲಾಯಿತು. ಈ ಕಾರ್ಖಾನೆಗಳು ಯಂತ್ರಗಳನ್ನು ಅವಲಂಬಿಸಿರುವುದರಿಂದ, ಸ್ಥಳೀಯ ರಿಗೆ ಉದ್ಯೋಗಾವಕಾಶ ಕಡಿಮೆಯಾಗಿದೆ.

ಇದಲ್ಲದೆ, ಕಾರ್ಖಾನೆಗಳು ನದಿಗಳು ಮತ್ತು ಸರೋವರಗಳನ್ನು ಮಲಿನಗೊಳಿಸುತ್ತವೆ. ಸರ್ಕಾರ ಯಂತ್ರಗಳನ್ನು ಅವಲಂಬಿಸದ ಮತ್ತು ಸಣ್ಣ ಉದ್ಯಮಗಳನ್ನು ಸೃಷ್ಟಿಸಬೇಕಿದೆ. ಮೀನುಗಾರಿಕೆಗೆ ದೊಡ್ಡ ಟ್ರಾಲರ್‌ಗಳನ್ನು ಬಳಸುವ ಬದಲು ಸಾಂಪ್ರದಾಯಿಕ ಮೀನುಗಾರಿಕೆ ವಿಧಾನಗಳನ್ನು ಬಳಸುವುದು ಉತ್ತಮ ಎಂದು ಡಾ.ಗಾಡ್ಗೀಳ್ ನಂಬುತ್ತಾರೆ; ಏಕೆಂದರೆ‌, ಟ್ರಾಲರ್‌ಗಳು ಸಮುದ್ರದಲ್ಲಿರುವ ವಿವಿಧ ಜೀವಗಳಿಗೆ ಹಾನಿಯುಂಟು ಮಾಡುತ್ತವೆ. ಸಿಂಧುದುರ್ಗ ಜಿಲ್ಲೆಯಲ್ಲಿ ಸ್ಥಳೀಯರು ಬಿದಿರು ಬೆಳೆದು, ತಮ್ಮ ಕೌಶಲದಿಂದ ವಿವಿಧ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಸಲಹೆ 3- ಸಾಮಾಜಿಕ ಬಂಧಗಳ ಸಂರಕ್ಷಣೆ. ನೈಸರ್ಗಿಕ ವಿಕೋಪ ಸಂಭವಿಸಿದ ನಂತರ ಕುಟುಂಬಗಳು, ವಿಶೇಷವಾಗಿ ಮಹಿಳೆಯರು, ಅಡುಗೆಮನೆಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದು ಸವಾಲಿನ ಸಂಗತಿ. ಸಮುದಾಯ ಅಡುಗೆ ಮನೆಗಳನ್ನು ಸ್ಥಾಪಿಸಿದಲ್ಲಿ, ಚಂಡಮಾರುತದ ನಂತರದ ಪರಿಣಾಮಗಳನ್ನು ನಿಭಾಯಿಸಲು ಮಹಿಳೆಯರಿಗೆ ನೆರವಾಗುತ್ತದೆ. ಚಂಡಮಾರುತದ ನಂತರ ಆರ್ಥಿಕ ನಷ್ಟವನ್ನು ಭರಿಸಲು ಕುಟುಂಬದ ಎಲ್ಲ ಸದಸ್ಯರು ಹೊರಗೆ ಹೋಗಿ ಕೆಲಸ ಮಾಡಬೇಕಾಗುತ್ತದೆ. ಪ್ರತಿಯೊಂದು ಗ್ರಾಮದಲ್ಲಿ ತರಬೇತಿ ಪಡೆದ ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಿಸಿದರೆ, ಅವರು ಮನೆಯಲ್ಲಿರುವ ಮಕ್ಕಳ ಪೌಷ್ಟಿಕಾಂಶ ಮತ್ತು ಶೈಕ್ಷಣಿಕ ಅಗತ್ಯಗಳನ್ನು ನೋಡಿಕೊಳ್ಳುತ್ತಾರೆ.

ಸಲಹೆ 4- ಮೂಲಸೌಲಭ್ಯ ನಿರ್ಮಾಣ. ಚಂಡಮಾರುತದಿಂದ ರಸ್ತೆ, ಸೇತುವೆ ಮತ್ತು ಇನ್ನಿತರ ಕಟ್ಟಡಗಳಿಗೆ ಹಾನಿಯುಂಟಾಗಲಿದೆ. ಮುಂಬೈ-ಗೋವಾ ಸಮುದ್ರ ಮಾರ್ಗವು ಈಗಾಗಲೇ ಕೊಂಕಣ ಕರಾವಳಿಯ ವೈವಿಧ್ಯಕ್ಕೆ ಹಾನಿ ಮಾಡಿದೆ. ಈ ಪ್ರದೇಶದಲ್ಲಿನ ತೊರೆಗಳ ಮೇಲೆ 30-40 ಸೇತುವೆಗಳನ್ನು ನಿರ್ಮಿಸಲು ಯೋಜಿಸಲಾಗಿದೆ. ಇದು ಹೆಚ್ಚಿನ ಹಾನಿಗೆ ಕಾರಣವಾಗಬಹುದು. ಏಕೆಂದರೆ, ಭವಿಷ್ಯದಲ್ಲಿ ಚಂಡಮಾರುತಗಳ ಸಂಭವಿಸುವಿಕೆ ಮತ್ತು ತೀವ್ರತೆ ಹೆಚ್ಚಾಗಬಹುದು ಎಂದು ವಿಜ್ಞಾನಿಗಳು ಹೇಳುತ್ತಾರೆ.

ಭಾರಿ ಮೂಲಸೌಕರ್ಯ ಯೋಜನೆಗಳ ಬದಲು, ಸ್ಥಳೀಯ ಪರಿಸರ ಮತ್ತು ಪರಿಸರ ವ್ಯವಸ್ಥೆಯ ಅಗತ್ಯಗಳನ್ನು ಸರ್ಕಾರವು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಭೂಕುಸಿತ ಅಥವಾ ಪ್ರವಾಹದ ಅಪಾಯ ಹೆಚ್ಚು ಇರುವ ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ ಮೂಲಸೌಲಭ್ಯ ನಿರ್ಮಾಣವನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಇಂಥ ಯೋಜನೆಗಳು ಪಕ್ಷಿ-ಪ್ರಾಣಿಗಳು, ಗಿಡ-ಮರಗಳು ಮತ್ತು ಸ್ಥಳೀಯರಿಗೆ ಹಾನಿಯುಂಟು ಮಾಡುತ್ತವೆ ಎಂದು ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಯಾವುದೇ ಯೋಜನೆಯನ್ನು ಆರಂಭಿಸುವ ಮೊದಲು ಪರಿಸರ ಪರಿಣಾಮದ ಮೌಲ್ಯಮಾಪನ ಮಾಡುವುದು ಅವಶ್ಯ.

ಚಂಡಮಾರುತಗಳು ಜನರು, ಮೂಲಸೌಲಭ್ಯ ಮತ್ತು ಮನೆ-ಆಸ್ತಿಗಳಿಗೆ ಮಾತ್ರ ಹಾನಿಕರವೇ? ಕೊಂಕಣದ ಆರ್ಥಿಕತೆ ಪ್ರವಾಸೋದ್ಯಮವನ್ನು ಅವಲಂಬಿಸಿದೆ. ಆದರೆ, ಸದ್ಯದ ಪರಿಸ್ಥಿತಿ ಪರಿಸರಕ್ಕೆ ಮಾರಕವಾಗಿದೆ. ಸ್ಥಳೀಯರಿಗೆ ತರಬೇತಿ ನೀಡುವ ಮೂಲಕ ಪ್ರವಾಸೋದ್ಯಮದಿಂದ ಉದ್ಯೋಗಾವಕಾಶ ಸೃಷ್ಟಿಸಬಹುದು. ಈ ಸಲಹೆಗಳನ್ನು ಪ್ರಾಮಾಣಿಕವಾಗಿ ಅನುಸರಿಸಿದರೆ, ಹಣಕಾಸಿನ ನಷ್ಟ ಕಡಿಮೆ ಮಾಡಬಹುದು; ಹವಾಮಾನ ಬದಲಾವಣೆ ತಡೆದುಕೊಳ್ಳಲು ಉತ್ತಮವಾಗಿ ಸಜ್ಜುಗೊಂಡಿರುವ, ಒಳಗೊಳ್ಳುವ ಮತ್ತು ಸಮರ್ಥನೀಯವಾದ ಹೊಸ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ಸಾಧ್ಯವಾಗಬಹುದು ಎಂದು ಡಾ. ಗಾಡ್ಗೀಳ್‌ ನಂಬುತ್ತಾರೆ.

(ಅನೂಪ್ ಜೈಪುರಕರ್‌ ಅವರ ಈ ಲೇಖನದಲ್ಲಿನ ಮಾಹಿತಿ, ಚಿಂತನೆ ಅಥವಾ ಅಭಿಪ್ರಾಯಗಳು ಲೇಖಕರದ್ದೇ; ಅದು ʼದಿ ಫೆಡರಲ್‌ʼ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ)

Tags:    

Similar News