ಯುದ್ಧಭೂಮಿಯಾಗುತ್ತಿವೆಯೇ ಕರ್ನಾಟಕದ ಕ್ಯಾಂಪಸ್?
ಕ್ಯಾಂಪಸ್ಗಳಲ್ಲಿನ ದಿನ ನಿತ್ಯದ ಬೆಳವಣಿಗೆಗಳು ಬಲಪಂಥೀಯ ಮತ್ತು ಎಡಪಂಥೀಯ ಚಟುವಟಿಕೆಗಳ ಬಿರುಸಿಗೆ ಸಾಕ್ಷಿಯಾಗಿವೆ.;
ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ (ಸಿಯುಕೆ) ಕಳೆದ ವರ್ಷ ರಾಮನವಮಿ ಆಚರಣೆ ವಿಚಾರವಾಗಿ ಎರಡು ವಿದ್ಯಾರ್ಥಿ ಗುಂಪುಗಳ ನಡುವೆ ಘರ್ಷಣೆ ನಡೆದಿತ್ತು. ಕ್ಯಾಂಪಸ್ನಲ್ಲಿ ಬಲಪಂಥೀಯರು ಪೂಜೆ ನಡೆಸುವುದನ್ನು ಎಡಪಂಥೀಯ ವಿದ್ಯಾರ್ಥಿಗಳು ವಿರೋಧಿಸಿದ್ದರು. ಈ ವಿಷಯವೇ ಘರ್ಷಣೆಗೆ ಕಾರಣವಾಗಿತ್ತು.
ಇನ್ನೊಂದು ಘಟನೆಯಲ್ಲಿ, ಬೆಂಗಳೂರು ವಿಶ್ವವಿದ್ಯಾಲಯದ 'ದುರಾಡಳಿತ'ದ ವಿರುದ್ಧ ಆರ್ಎಸ್ಎಸ್ ನ ಅಂಗಸಂಸ್ಥೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು ಪ್ರತಿಭಟಿಸಿದರು. ಪ್ರತಿಭಟನೆ ವೇಳೆ ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಎಬಿವಿಪಿ ವಿದ್ಯಾರ್ಥಿಗಳು ಪೊಲೀಸರ ಕ್ರಮದ ವಿರುದ್ಧ ಪ್ರತಿಭಟನೆ ನಡೆಸಿದರೆ, ಕಾಂಗ್ರೆಸ್ನ ವಿದ್ಯಾರ್ಥಿ ಘಟಕ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ(ಎನ್ ಎಸ್ ಯುಐ) ಸದಸ್ಯರು ಎಬಿವಿಪಿ ವಿಶ್ವವಿದ್ಯಾನಿಲಯದಲ್ಲಿ ಕೋಮುವಾದ ನಡೆಯುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು.
ಈ ಘಟನೆಗಳು ಕ್ಯಾಂಪಸ್ ರಾಜಕಾರಣ ಮತ್ತು ಶೈಕ್ಷಣಿಕ ಸಂಸ್ಥೆಗಳ ಹೃದಯದ ಮೇಲೆ ದಾಳಿ ನಡೆಸುತ್ತಿರುವ ಸೈದ್ಧಾಂತಿಕ ಸಂಘರ್ಷದ ನಿದರ್ಶನಗಳಾಗಿವೆ. ಇವು ಕಾಲೇಜಿನ ಶಾಂತಿಯುತ ಮತ್ತು ದೈನಂದಿನ ಕಾರ್ಯಚಟುವಟಿಕೆಗಳಿಗೆ ಅಡ್ಡಿಪಡಿಸುವುದು ಮಾತ್ರವಲ್ಲದೆ ಶೈಕ್ಷಣಿಕ ಸ್ವಾತಂತ್ರ್ಯ ಮತ್ತು ವೈವಿಧ್ಯತೆಯ ಮೂಲ ತತ್ವಗಳನ್ನು ದುರ್ಬಲಗೊಳಿಸುತ್ತವೆ.
ಇನ್ನೊಂದು ಆಸಕ್ತಿದಾಯಕ ಅಂಶವೆಂದರೆ ಸಿಯುಕೆ ಕ್ಯಾಂಪಸ್ನಲ್ಲಿ ಪ್ರತಿಭಟನೆ ನಡೆಸುವ ವೇಳೆ ಎಬಿವಿಪಿ ಸದಸ್ಯರು ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್ಯು)ದ 'ದೇಶವಿರೋಧಿ ಶಕ್ತಿʼಗಳನ್ನು ಬಂಧಿಸುವಂತೆ ಒತ್ತಾಯಿಸಿದರು.
ಇತ್ತೀಚಿನ ದಿನಗಳಲ್ಲಿ ಕ್ಯಾಂಪಸ್ ಗಲಾಟೆಗಳು ಉಲ್ಬಣಗೊಂಡಿವೆ. ನರೇಂದ್ರ ಮೋದಿ ಆಡಳಿತದಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ನಿರಂತರ ದಮನವೇ ಇದಕ್ಕೆ ಕಾರಣವಾಗಿದೆ. ಲೋಕಸಭಾ ಚುನಾವಣೆಗಳು ಸಮೀಪಿಸುತ್ತಿರುವಾಗ, ಕೋಮು ವೈಷಮ್ಯವನ್ನು ಕೆರಳಿಸುವ ಗುರಿಯನ್ನು ಹೊಂದಿರುವ ಇಂತಹ ಘಟನೆಗಳು, ರಾಜಕೀಯ ವಲಯದ ಇನ್ನೊಂದು ಬದಿಯ ಜನರ ಮೇಲೆ ದಬ್ಬಾಳಿಕೆಗೂ ಕಾರಣವಾಗಲಿವೆ.
ರಾಜಕೀಯ ಹಸ್ತಕ್ಷೇಪದ ಬಗ್ಗೆ ವಿದ್ಯಾರ್ಥಿಗಳ ಆತಂಕ
ಸೌಹಾರ್ದತೆಗೆ ಭಂಗ ತರುವ ಎಬಿವಿಪಿಯ ಪ್ರಯತ್ನಗಳನ್ನು ವಿರೋಧಿಸಲು ಹಾಗೂ ವಿಶ್ವವಿದ್ಯಾನಿಲಯದ ವಾತಾವರಣವನ್ನು ಶಾಂತಿಯುತವಾಗಿರಿಸಲು ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಕೆಲವು ಸಮಾನ ಮನಸ್ಕ ಸಂಘಟನೆಗಳು ಕೆಲಸ ಮಾಡುತ್ತಿವೆ. ಜೆಎನ್ಯು, ಅಂಬೇಡ್ಕರ್ ಪೆರಿಯಾರ್ ಸ್ಟಡಿ ಸೆಂಟರ್, ಐಐಟಿ ಚೆನ್ನೈ, ಮತ್ತು ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಫ್ಟಿಐಐ ಪುಣೆ) ಯ ವಿದ್ಯಾರ್ಥಿ ನಾಯಕರು ಮೋದಿ ಆಡಳಿತದಲ್ಲಿ ಭಾರತದಲ್ಲಿನ ಉನ್ನತ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸವಾಲುಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸುತ್ತಿರುವ ವಿದ್ಯಾರ್ಥಿ ಗುಂಪುಗಳನ್ನು ಸೇರಿಕೊಂಡಿದ್ದಾರೆ. ಈ ಉನ್ನತ ಕಲಿಕೆಯ ಸ್ಥಾನಗಳಲ್ಲಿ ರಾಜಕೀಯ ಹಸ್ತಕ್ಷೇಪ ಮತ್ತು ಸೈದ್ಧಾಂತಿಕ ಪ್ರಭಾವಗಳ ಬಗ್ಗೆ ವಿದ್ಯಾರ್ಥಿ ಸಮುದಾಯಗಳಲ್ಲಿ ಹೆಚ್ಚುತ್ತಿರುವ ಆತಂಕವನ್ನು ಇದು ಸೂಚಿಸುತ್ತದೆ.
ಈ ವಿದ್ಯಾರ್ಥಿ ಸಮೂಹಗಳು ಬಿಕ್ಕಟ್ಟಿನ ಕ್ಷಣಗಳಲ್ಲಿ ಪರಸ್ಪರ ಒಗ್ಗಟ್ಟಿನಿಂದ ನಿಲ್ಲುತ್ತವೆ. ಉದಾಹರಣೆಗೆ, ಫೆಬ್ರವರಿ 2016ರಲ್ಲಿ, ರೋಹಿತ್ ವೇಮುಲಾ ಅವರ ಆತ್ಮಹತ್ಯೆ ಘಟನೆಯನ್ನು ವಿರೋಧಿಸಿ ಮತ್ತು ವಿಶ್ವವಿದ್ಯಾಲಯದ ಕ್ಯಾಂಪಸ್ ಅನ್ನು ಜಾತಿ ಮುಕ್ತಗೊಳಿಸಲು ಜ್ಞಾನ ಭಾರತಿ ಮತ್ತು ಜ್ಞಾನ ಜ್ಯೋತಿಯಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದ ಕ್ಯಾಂಪಸ್ಗಳಲ್ಲಿ ವಿವಿಧ ಸಂಘಟನೆಗಳು ಹೋರಾಟ ನಡೆಸಿದ್ದವು. ಬಹುಜನ ವಿದ್ಯಾರ್ಥಿ ಸಂಘ (ಬಿವಿಎಸ್), ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ), ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್ಐ) ಮತ್ತು ವಿವಿಧ ದಲಿತ ಸಂಘಟನೆಗಳು ಬಂದ್ ಕರೆಗೆ ಬೆಂಬಲ ನೀಡಿದ್ದವು.
ಎಡ ಮತ್ತು ಬಲಪಂಥೀಯ ಬಣಗಳ ಸಂಘರ್ಷ
ದಶಕಗಳಿಂದ ಎಡಪಂಥೀಯ ಭದ್ರಕೋಟೆಯಾಗಿದ್ದ ಜೆಎನ್‌ಯು ನಲ್ಲಿ ಎಬಿವಿಪಿಯ ಪುನರುತ್ಥಾನ ಮತ್ತು 2014ರಿಂದ ಸೈದ್ಧಾಂತಿಕ ಸಂಘರ್ಷದ ಕೇಂದ್ರಬಿಂದುಗಳಾಗಿರುವ ವಿವಿಧ ಕ್ಯಾಂಪಸ್ಗಳಲ್ಲಿನ ಬೆಳವಣಿಗೆಗಳು ಎಬಿವಿಪಿಯ ಉಪಸ್ಥಿತಿಯನ್ನು ಹೆಚ್ಚಿಸಲು ಕೊಡುಗೆ ನೀಡಿದೆ.
ಎಬಿವಿಪಿ ವಿದ್ಯಾರ್ಥಿ ಸಂಘಟನೆಯು ರಾಷ್ಟ್ರೀಯ ಮಟ್ಟದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ಬಂಡವಾಳ ಮಾಡಿಕೊಂಡಿದೆ. ಕ್ಯಾಂಪಸ್ನಲ್ಲಿ ಘರ್ಷಣೆಗಳನ್ನು ಹುಟ್ಟುಹಾಕಿ, ಭಿನ್ನಾಭಿಪ್ರಾಯದ ಬೀಜಗಳನ್ನು ಬಿತ್ತಿ, ಅಂತಿಮವಾಗಿ ದ್ವೇಷದ ವಾತಾವರಣವನ್ನು ಸೃಷ್ಟಿಸುತ್ತದೆ. ಇದು ಪಕ್ಷಕ್ಕೆ ಚುನಾವಣಾ ಲಾಭ ಪಡೆಯಲು ಸಹಾಯ ಮಾಡುತ್ತದೆ ಎಂದು ವರದಿಯೊಂದು ಹೇಳಿದೆ. ಕರ್ನಾಟಕದಲ್ಲಿ ಬಿಜೆಪಿಯ ನೆಲೆ ಸ್ಥಿರವಾಗಿ ಬೆಳೆದಿದೆ. ಎಬಿವಿಪಿಯು ಹಿಜಾಬ್ನಂತಹ ವಿವಾದಗಳನ್ನು ಹುಟ್ಟುಹಾಕುವ ಮೂಲಕ ಕೋಮುವಾದದ ಅಗ್ನಿಕುಂಡ ಸದಾ ಕುದಿಯುವಂತೆ ಮಾಡಿದೆ.
ಬಲಪಂಥೀಯ ಮತ್ತು ಎಡಪಂಥೀಯ ವಿದ್ಯಾರ್ಥಿ ಬಣಗಳೆರಡೂ ಹೆಚ್ಚಾಗಿ ತಮ್ಮ ಸಂಘರ್ಷಗಳನ್ನು ಬೀದಿಗೆ ತಂದು ಇಳಿಸುತ್ತಾರೆ. ಆಗಾಗ್ಗೆ ಹಿಂಸಾಚಾರವನ್ನು ನಡೆಸುತ್ತಾರೆ. ಈ ಘಟನೆಗಳು ವಿದ್ಯಾರ್ಥಿ ಸಂಘಟನೆಗಳ ಮೇಲೆ ರಾಜಕೀಯ ಸಿದ್ಧಾಂತಗಳ ಆಳವಾದ ಪ್ರಭಾವವನ್ನು ಬೀರಿ, ವಿದ್ಯಾರ್ಥಿಗಳು ತಮ್ಮ ನಿಷ್ಠೆಯ ಬಗ್ಗೆ ಗೊಂದಲಕ್ಕೊಳಗಾಗುತ್ತಾರೆ. ಕ್ಯಾಂಪಸ್ಗಳಲ್ಲಿನ ದಿನ ನಿತ್ಯದ ಬೆಳವಣಿಗೆಗಳು ಬಲಪಂಥೀಯ ಮತ್ತು ಎಡಪಂಥೀಯ ಚಟುವಟಿಕೆಗಳ ಬಿರುಸಿಗೆ ಸಾಕ್ಷಿಯಾಗಿವೆ. ಇದರಿಂದ ವಿದ್ಯಾರ್ಥಿಗಳು ಒಂದಲ್ಲಾ ಒಂದು ಕಡೆ ತಮ್ಮನ್ನು ತಾವು ಗುರುತಿಸಿಕೊಳ್ಳುವ ಆಯ್ಕೆಯನ್ನು ಆಯ್ದುಕೊಳ್ಳಬೇಕಾದ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ.