ಬೆಳಗಾವಿ ʼತ್ರಿʼವಿಭಜನೆ| ಮರಾಠಿ ಪ್ರಾಬಲ್ಯ ಮುರಿದು ಮಹಾರಾಷ್ಟ್ರಕ್ಕೆ ಪಾಠ ಕಲಿಸುವ ಯೋಜನೆ?
ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಿ, ವರ್ಷಕ್ಕೊಂದು ಬಾರಿ ಅಧಿವೇಶನ ನಡೆಸಿದರೂ ಆಡಳಿತಾತ್ಮಕ ಅಡೆತಡೆ ಬಗೆಹರಿದಿಲ್ಲ. ಹಾಗಾಗಿ, ವಿಭಜನೆ ಅತ್ಯಗತ್ಯ ಎಂಬುದು ರಾಜಕಾರಣಿಗಳು ಹಾಗೂ ಪ್ರತ್ಯೇಕ ಜಿಲ್ಲಾ ಹೋರಾಟ ಸಮಿತಿಯವರ ವಾದವಾಗಿದೆ.
ಬೆಳಗಾವಿ ವಿಭಜನೆ ಕುರಿತ ದಶಕಗಳ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ. ವರ್ಷಾಂತ್ಯದಲ್ಲಿ ಬೆಳಗಾವಿ ವಿಭಜಿಸುವ ರಾಜಕಾರಣಿಗಳ ಹೇಳಿಕೆಗಳು, ಆಶ್ವಾಸನೆಗಳು ಜನರಲ್ಲಿ ಗೊಂದಲ ಸೃಷ್ಟಿಸುತ್ತಿವೆ. ಸುಪ್ರೀಂಕೋರ್ಟ್‌ನಲ್ಲಿ ಮಹಾರಾಷ್ಟ್ರ-ಕರ್ನಾಟಕದ ಗಡಿ ವಿವಾದ ಇತ್ಯರ್ಥವಾಗದ ಹೊರತು ವಿಭಜನೆ ಸಾಧ್ಯವೇ ಎಂಬ ಪ್ರಶ್ನೆ ಮುಂದಿದ್ದರೂ ಪದೇ ಪದೇ ಇಂತಹ ಹೇಳಿಕೆಗಳು ತೀವ್ರ ಟೀಕೆಗೆ ಗುರಿಯಾಗಿವೆ.
ಇನ್ನೊಂದು ವಾದದ ಪ್ರಕಾರ ಪದೇ ಪದೇ ಗಡಿವಿವಾದದ ಕ್ಯಾತೆ ತೆಗೆಯುತ್ತಿರುವ ಮಹಾರಾಷ್ಟ್ರಕ್ಕೆ ಮುಖಭಂಗ ಮಾಡುವ ಯತ್ನವೂ ಜಿಲ್ಲಾ ವಿಭಜನೆಯ ಯೋಜನೆಯಾಗಿದೆ ಎನ್ನಲಾಗಿದೆ. ಬೆಳಗಾವಿ ಗಡಿಬಾಗದ ಹಲವು ಗ್ರಾಮಗಳಲ್ಲಿ ವಾಸವಾಗಿರುವ ಮರಾಠಿಗರನ್ನು ಮೂರು ಜಿಲ್ಲೆಗಳಲ್ಲಿ ವಿಭಜಿಸುವ ಮೂಲಕ ಅವರ ಒಗ್ಗಟ್ಟನ್ನು ಮುರಿಯಬಹುದು ಎಂಬ ದೂರಾಲೋಚನೆ ಸರ್ಕಾರದ್ದು ಎನ್ನಲಾಗಿದೆ.
ಆಡಳಿತಾತ್ಮಕವಾಗಿ ಮೂರು ಜಿಲ್ಲೆಗಳಲ್ಲಿ ಮರಾಠಿ ಪ್ರಭಾವ ಇರುವ ಗ್ರಾಮಗಳು ಹಂಚಿಕೆಯಾಗುವುದರಿಂದ ಅಷ್ಟೂ ಮರಾಠಿ ಭಾಷಿಕರು ಬೇರೆ ಬೇರೆ ತಾಲೂಕು, ಗ್ರಾಮ ಪಂಚಾಯತಿಗಳ ವ್ಯಾಪ್ತಿ ಬರುತ್ತಾರೆ. ಬೆಳಗಾವಿ, ಚಿಕ್ಕೋಡಿ ಮತ್ತು ಬೈಲಹೊಂಗಲ ಜಿಲ್ಲೆಗಳ ರಚನೆ ಮೂಲಕ ಬೆಳಗಾವಿ ಜಿಲ್ಲೆಯನ್ನು ಮೂರು ವಿಭಜನೆ ಮಾಡುವ ಮೂಲಕ ಕನ್ನಡ ಹಾಗೂ ಕರ್ನಾಟಕದ ವಿರುದ್ಧ ಸದಾ ಒಂದಲ್ಲ ಒಂದು ಕಾರಣಕ್ಕೆ ಪ್ರತಿರೋಧ ತೋರುವುದೇ ಅಲ್ಲದೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂಬ ಒತ್ತಾಯ ಮಾಡುತ್ತಿದ್ದ ಮರಾಠಿಗರ ಒಗ್ಗಟ್ಟನ್ನು ಮುರಿಯುವ ಉದ್ದೇಶವಿದೆ ಎನ್ನಲಾಗಿದೆ. ಜತೆಗೆ, ಎಂಇಎಸ್‌ನಂತಹ ಮರಾಠ ಪರ ಪಕ್ಷಗಳು ನಿರ್ದಿಷ್ಟವಾಗಿ ಒಂದೇ ಜಿಲ್ಲೆಯಲ್ಲಿ ತಮ್ಮ ಪ್ರಭಾವ ಬೀರುವಂತೆ ಮಾಡುವುದನ್ನು ತಡೆಯುವುದೂ ಸರ್ಕಾರದ ಉದ್ದೇಶ ಎನ್ನಲಾಗಿದೆ.
ಭೌಗೋಳಿಕವಾಗಿ ಅತಿ ದೊಡ್ಡ ಜಿಲ್ಲೆ ಬೆಳಗಾವಿ
ಬೆಳಗಾವಿಯು ಭೌಗೋಳಿಕವಾಗಿ ದೊಡ್ಡ ಜಿಲ್ಲೆ. ಅಥಣಿಯಿಂದ ಬೆಳಗಾವಿಗೆ ಬರಲು ಮೂರೂವರೆ ತಾಸು (134 ಕಿ.ಮೀ.) ಪ್ರಯಾಣಿಸಬೇಕು. ರಾಯಭಾಗ, ನಿಪ್ಪಾಣಿಯಿಂದ ಬೆಳಗಾವಿಗೆ ತೆರಳಲು 91 ಕಿ.ಮೀ ಕ್ರಮಿಸಬೇಕು. ಯಾವುದಾದರೂ ಕೆಲಸ ಕಾರ್ಯಗಳಿಗೆ ಬಂದು ಹೋಗಲು ಇಡೀ ದಿನ ತೆಗೆದುಕೊಳ್ಳಲಿದೆ. ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಿ, ವರ್ಷಕ್ಕೊಂದು ಬಾರಿ ಅಧಿವೇಶನ ನಡೆಸಿದರೂ ಆಡಳಿತಾತ್ಮಕ ಅಡೆತಡೆ ಬಗೆಹರಿದಿಲ್ಲ. ಹಾಗಾಗಿ, ವಿಭಜನೆ ಅತ್ಯಗತ್ಯ ಎಂಬುದು ರಾಜಕಾರಣಿಗಳು ಹಾಗೂ ಪ್ರತ್ಯೇಕ ಜಿಲ್ಲಾ ಹೋರಾಟ ಸಮಿತಿಯವರ ವಾದವಾಗಿದೆ.
ಇನ್ನೊಂದೆಡೆ, ಗಡಿ ವಿವಾದ ಪ್ರಕರಣ ದಶಕಗಳಿಂದ ಬಾಕಿ ಉಳಿದಿದೆ. ಮೊದಲು ಗಡಿ ವಿವಾದ ಇತ್ಯರ್ಥಪಡಿಸಿ, ನಂತರ ಜಿಲ್ಲೆ ವಿಭಜನೆ ಮಾಡಬೇಕು ಎಂಬುದು ಕನ್ನಡ ಸಂಘಟನೆಗಳ ಆಗ್ರಹವಾಗಿದೆ. ಗಡಿ ವಿವಾದ ಬಗೆಹರಿಯದ ಹೊರತು ಜಿಲ್ಲೆ ವಿಭಜನೆ ಕಾನೂನಾತ್ಮಕವಾಗಿಯೂ ಅಸಾಧ್ಯ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ. ಒಂದೊಮ್ಮೆ ಜಿಲ್ಲೆಯ ವಿಭಜನೆಗೆ ಸರ್ಕಾರ ಮುಂದಾದರೆ ಮಹಾರಾಷ್ಟ್ರ ತಕರಾರು ತೆಗೆಯುವ ಸಾಧ್ಯತೆ ಇರಲಿದೆ. ಗಡಿ ವಿವಾದದ ಸೂಕ್ಷ್ಮ ವಿಚಾರಗಳನ್ನು ಇತ್ಯರ್ಥ ಮಾಡದೇ ವಿಭಜನೆ ಹೇಳಿಕೆ ನೀಡುವುದು ಎಷ್ಟು ಸರಿ ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ.
"ಬೆಳಗಾವಿ ಗಡಿ ವಿವಾದ ಇತ್ಯರ್ಥವಾಗದ ಹೊರತು ಜಿಲ್ಲೆ ವಿಭಜನೆ ಪ್ರಕ್ರಿಯೆ ನಡೆಸಬಾರದು. ರಾಜಕಾರಣಿಗಳು ಅನಗತ್ಯವಾಗಿ ಜನರಲ್ಲಿ ಗೊಂದಲ ಸೃಷ್ಟಿಸುವ ಕೆಲಸಕ್ಕೆ ಕೈ ಹಾಕುತ್ತಿವೆ. ಸುಪ್ರೀಂಕೋರ್ಟ್‌ನಲ್ಲಿ ಗಡಿ ವಿವಾದ ಇರುವುದರಿಂದ ಹಾಗೂ ಕೇಂದ್ರ ಸರ್ಕಾರ ಜಾತಿ ಜನಗಣತಿ ನಡೆಸುವುದರಿಂದ ಯಾವುದೇ ಕಾರಣಕ್ಕೂ ಜಿಲ್ಲೆ ವಿಭಜನೆಗೆ ಅವಕಾಶ ಇಲ್ಲ, ಆ ರೀತಿ ಕ್ರಮಕ್ಕೆ ಮುಂದಾದರೆ ಉಗ್ರ ಹೋರಾಟ ನಡೆಸಲಾಗುವುದು" ಎಂದು ಕನ್ನಡ ಪರ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ್ ಚಂದರಗಿ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಬೆಳಗಾವಿ ವಿಭಜನೆ ಅಗತ್ಯವೆಷ್ಟು?
ಬೆಳಗಾವಿಯು ಒಟ್ಟು 14 ತಾಲೂಕು, 506 ಗ್ರಾಮ ಪಂಚಾಯಿತಿ ಸೇರಿ 54 ಲಕ್ಷ ಜನಸಂಖ್ಯೆ, 300 ಕಿ.ಮೀ ಭೌಗೋಳಿಕ ವಿಸ್ತಾರ ಹೊಂದಿದೆ. ಸರ್ಕಾರದ ವಿವಿಧ ಯೋಜನೆ ತಲುಪುವಲ್ಲಿ ವಿಳಂಬ, ಸಂಪನ್ಮೂಲ ಹಂಚಿಕೆಯಲ್ಲಿ ಅಸಮತೋಲನ, ಭಾಷಾ ವೈವಿಧ್ಯತೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲೆ ವಿಭಜನೆ ಅಗತ್ಯವಾಗಿದೆ.
ಬೆಳಗಾವಿ ನಗರ, ಗೋಕಾಕ್, ಅಥಣಿ, ಚಿಕ್ಕೋಡಿ ತಾಲೂಕುಗಳ ನಡುವೆ ಅಭಿವೃದ್ಧಿಯ ಅಸಮಾನತೆ ಹೆಚ್ಚಿದೆ. ಹಾಗಾಗಿ, ಬೆಳಗಾವಿ ಜಿಲ್ಲೆಯನ್ನು ಮೂರು ಜಿಲ್ಲೆಗಳಾಗಿ ವಿಂಗಡಿಸಬೇಕು ಎಂಬ ಪ್ರಸ್ತಾವವಿದೆ. ಬೆಳಗಾವಿ, ಹುಕ್ಕೇರಿ, ಖಾನಾಪುರ, ಸವದತ್ತಿ ಹಾಗೂ ರಾಮದುರ್ಗ ಒಳಗೊಂಡ ಬೆಳಗಾವಿ ಜಿಲ್ಲೆ, ಚಿಕ್ಕೋಡಿ, ನಿಪ್ಪಾಣಿ, ಅಥಣಿ, ಗೋಕಾಕ್, ರಾಯಭಾಗ ಒಳಗೊಂಡ ಚಿಕ್ಕೋಡಿ ಜಿಲ್ಲೆ, ಬೈಲಹೊಂಗಲ, ಕಿತ್ತೂರು, ಕಾಗವಾಡ, ಹಿರೇಬಾಗವಾಡಿ ಒಳಗೊಂಡ ಬೈಲಹೊಂಗಲ ಜಿಲ್ಲೆ ರಚಿಸಬೇಕೆಂಬುದು ಪ್ರಸ್ತಾಪಿಸಲಾಗಿದೆ. ಆದರೆ, ಕೆಲವರು ಬೈಲಹೊಂಗಲ ಬದಲಿಗೆ ಗೋಕಾಕ್ ಜಿಲ್ಲೆ ಮಾಡಬೇಕೆಂಬ ಒತ್ತಾಯವೂ ಇದೆ. ಜಿಲ್ಲೆಯ ವಿಭಜನೆಯಿಂದ ಪ್ರಾದೇಶಿಕ ಅಭಿವೃದ್ಧಿಯ ವೇಗ ಹೆಚ್ಚಲಿದೆ. ಜನರಿಗೆ ಆಡಳಿತ ಸುಲಭವಾಗಲಿದೆ ಎನ್ನಲಾಗಿದೆ.
ವರ್ಷಾಂತ್ಯಕ್ಕೆ ಜಿಲ್ಲೆ ವಿಭಜನೆ?
2025 ರೊಳಗೆ ಬೆಳಗಾವಿ ಜಿಲ್ಲೆ ವಿಭಜಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಘೋಷಿಸಿದ್ದರು. ಡಿ.31ರೊಳಗೆ ಬೆಳಗಾವಿ ಜಿಲ್ಲೆ ವಿಭಜನೆಗೆ ಸರ್ಕಾರ ನಿರ್ಧರಿಸಿದೆ. ಪ್ರತ್ಯೇಕ ಜಿಲ್ಲೆಗಳ ಪ್ರಸ್ತಾಪವನ್ನು ಗಮನದಲ್ಲಿ ಇಟ್ಟುಕೊಂಡು ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಹೇಳುವ ಮೂಲಕ ಜಿಲ್ಲೆ ವಿಭಜನೆಯ ಕೂಗಿಗೆ ತುಪ್ಪ ಸುರಿದಿದ್ದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಕೂಡ ಡಿ.31ರೊಳಗೆ ಬೆಳಗಾವಿ ಜಿಲ್ಲೆ ವಿಭಜನೆ ಮಾಡಬೇಕು. 2026 ಜನವರಿಯಿಂದ ಜಾತಿ-ಜನಗಣತಿ ನಡೆಯಲಿದೆ. ಅಷ್ಟರಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದ್ದರು.
"ಜೆ.ಎಚ್.ಪಟೇಲ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಿಲ್ಲೆ ವಿಭಜನೆಯ ಪ್ರಕ್ರಿಯೆ ನಡೆದಿತ್ತು. ಬೆಳಗಾವಿ ಜಿಲ್ಲೆ ವಿಭಜನೆ ಕುರಿತಂತೆ ಸ್ಥಳೀಯ ಶಾಸಕರು ಮತ್ತು ಸಚಿವರೊಂದಿಗೆ ಸಮಾಲೋಚಿಸಿ ನಿರ್ಧಾರ ಪ್ರಕಟಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದರು.
ಜಿಲ್ಲೆ ಹೋರಾಟದ ಇತಿಹಾಸ
1996 ರಲ್ಲಿ ದಿವಂಗತ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರು ಬೆಳಗಾವಿ ವಿಭಜನೆ ಪ್ರಕ್ರಿಯೆ ಆರಂಭಿಸಿದ್ದರು. ಆದರೆ, ಅಶೋಕ್ ಚಂದರಗಿ ನೇತೃತ್ವದಲ್ಲಿ ಜಿಲ್ಲೆಯ ವಿಭಜನೆ ವಿರೋಧಿಸಿ ತೀವ್ರ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಪ್ರಕ್ರಿಯೆ ಕೈ ಬಿಡಲಾಗಿತ್ತು. ಗಡಿ ವಿವಾದ ಬಗೆಹರಿಯುವವರೆಗೂ ಜಿಲ್ಲೆ ವಿಭಜಿಸದಂತೆ ಪಟ್ಟು ಹಿಡಿಯಲಾಗಿತ್ತು. ತಿಂಗಳುಗಟ್ಟಲೇ ಉಪವಾಸ ಸತ್ಯಾಗ್ರಹ ನಡೆಸಿದ್ದರಿಂದ ಪ್ರಸ್ತಾವ ಕೈ ಬಿಡಲಾಗಿತ್ತು.
ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗಾಗಿ ಸಂಪದಾನ ಸ್ವಾಮೀಜಿ ನೇತೃತ್ವದಲ್ಲಿ 2024ರಲ್ಲಿ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಕಚೇರಿ ಎದುರು ಹೋರಾಟ ನಡೆಸಲಾಗಿತ್ತು. ಡಿಸೆಂಬರ್ 2024 ರಲ್ಲಿ ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ ಚಿಕ್ಕೋಡಿ ಮತ್ತು ಗೋಕಾಕ್ ಎಂಬ ಹೊಸ ಜಿಲ್ಲೆಗಳ ರಚನೆಯನ್ನು ಸರ್ಕಾರ ಘೋಷಿಸುವ ನಿರೀಕ್ಷೆ ಇತ್ತು. ಮಠಾಧೀಶರು, ನಾಗರಿಕ ಮುಖಂಡರು ಮತ್ತು ಸ್ಥಳೀಯ ಸಂಸ್ಥೆಗಳು ವಿಭಜನೆಗೆ ಒತ್ತಾಯಿಸಿ ಮನವಿ ಸಲ್ಲಿಸಿದ್ದವು. 1997 ರಲ್ಲಿ ವಾಸುದೇವ್ ರಾವ್, ಹುಂಡೇಕರ್ ಮತ್ತು ಪಿ.ಸಿ.ಗದ್ದಿಗೌಡರ್ ಸಮಿತಿಗಳು ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ರೂಪಿಸಲು ಶಿಫಾರಸು ಮಾಡಿದ್ದವು. ಕನ್ನಡ ಪರ ಸಂಘಟನೆಗಳ ತೀವ್ರ ವಿರೋಧದ ನಂತರ ಈ ಕ್ರಮ ಕೈಬಿಡಲಾಗಿತ್ತು. ಆದಾಗ್ಯೂ, ವಿಭಜನೆಗೆ ಸರ್ಕಾರ ಮನಸ್ಸು ಮಾಡಿರಲಿಲ್ಲ.