ಯಾವೊಬ್ಬ ಮತದಾರನೂ ಹೊರಗುಳಿಯಬಾರದು: ಚುನಾವಣಾ ಆಯೋಗದ ಡಿಜಿಟಲ್ ಕ್ರಾಂತಿ
x

"ಯಾವೊಬ್ಬ ಮತದಾರನೂ ಹೊರಗುಳಿಯಬಾರದು": ಚುನಾವಣಾ ಆಯೋಗದ ಡಿಜಿಟಲ್ ಕ್ರಾಂತಿ

ತಾಂತ್ರಿಕ ಅರಿವಿನ ಕೊರತೆಯಿಂದಾಗಿ ಅನೇಕರು ಮತದಾರರ ಪಟ್ಟಿಯಿಂದ ಹೊರಗುಳಿಯುವ ಭೀತಿಯಲ್ಲಿದ್ದಾರೆ. ಹಳೆಯ ಫಾರಂಗಳ ಬದಲಿಗೆ ಆಯೋಗವು ಈಗ ಹೊಸ ಮತ್ತು ಸರಳೀಕೃತ ಫಾರಂಗಳನ್ನು ಪರಿಚಯಿಸಿದೆ.


Click the Play button to hear this message in audio format

ಕೇಂದ್ರ ಚುನಾವಣಾ ಆಯೋಗವು ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬವಾದ ಚುನಾವಣೆಗಳನ್ನು ಪಾರದರ್ಶಕವಾಗಿ ನಡೆಸಲು ಕಾಲಕಾಲಕ್ಕೆ ಮತದಾರರ ಪಟ್ಟಿಯನ್ನು ಪರಿಷ್ಕರಿಸುತ್ತದೆ. ಆದರೆ, ತಾಂತ್ರಿಕ ಬದಲಾವಣೆಗಳು ಮತ್ತು ಡಿಜಿಟಲೀಕರಣದ ಅಬ್ಬರದಲ್ಲಿ ಗ್ರಾಮೀಣ ಭಾಗ ಮತ್ತು ನಗರದ ಬಹುತೇಕ ಮತದಾರರಲ್ಲಿ ಹೊಸದಾಗಿ ಹೆಸರು ಸೇರಿಸುವುದು ಹೇಗೆ? ವಿಳಾಸ ಬದಲಾವಣೆ ಮಾಡುವುದು ಹೇಗೆ? ಎಂಬ ಬಗ್ಗೆ ಸಾಕಷ್ಟು ಗೊಂದಲಗಳು ನಿರ್ಮಾಣವಾಗಿವೆ. ಈಗ ಡಿಜಿಟಲ್ ರೂಪ ಪಡೆದುಕೊಂಡಿರುವುದು ಮತ್ತಷ್ಟು ಗೊಂದಲಗೂಡಾಗಿದೆ. ಈ ನಿಟ್ಟಿನಲ್ಲಿ ಆಯೋಗವು "ಯಾವೊಬ್ಬ ಮತದಾರನೂ ಹೊರಗುಳಿಯಬಾರದು" ಎಂಬ ಘೋಷವಾಕ್ಯದೊಂದಿಗೆ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ.

ಗ್ರಾಮೀಣ ಪ್ರದೇಶ ಮತ್ತು ನಗರ ಪ್ರದೇಶದಲ್ಲಿನ ಕೆಲವರಲ್ಲಿ ಮತದಾರರ ಪಟ್ಟಿಯ ಬಗ್ಗೆ ಇರುವ ಅತಿ ದೊಡ್ಡ ಗೊಂದಲವೆಂದರೆ ಅದು "ನೋಂದಣಿ ಕೇವಲ ಆನ್‌ಲೈನ್‌ನಲ್ಲಿ ಮಾತ್ರ ಸಾಧ್ಯವೇ?" ಎಂಬುದಾಗಿದೆ. ತಾಂತ್ರಿಕ ಅರಿವಿನ ಕೊರತೆಯಿಂದಾಗಿ ಅನೇಕರು ಮತದಾರರ ಪಟ್ಟಿಯಿಂದ ಹೊರಗುಳಿಯುವ ಭೀತಿಯಲ್ಲಿದ್ದಾರೆ. ಹಳೆಯ ಫಾರಂಗಳ ಬದಲಿಗೆ ಆಯೋಗವು ಈಗ ಹೊಸ ಮತ್ತು ಸರಳೀಕೃತ ಫಾರಂಗಳನ್ನು ಪರಿಚಯಿಸಿದೆ. ಇದರ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ತಲುಪಿಲ್ಲ. ಅಲ್ಲದೆ, ವಿಳಾಸ ಬದಲಾವಣೆಗೆ ಈಗಿರುವ 'ಏಕೀಕೃತ ನಮೂನೆ'ಯ ಬಗ್ಗೆ ಜನರಲ್ಲಿ ಅಸ್ಪಷ್ಟತೆ ಇದೆ ಎಂಬುದು ಜನತೆಯ ಸಮಸ್ಯೆಯಾಗಿದೆ. ಜನರ ಸಮಸ್ಯೆಯನ್ನು ಬಗೆಹರಿಸಲು ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಎಲ್ಲದರ ಮಾಹಿತಿಯನ್ನು ನೀಡಿದೆ.

ಹೊಸ ಮತದಾರರ ನೋಂದಣಿ

ಅರ್ಜಿ ನಮೂನೆ 6ರಲ್ಲಿ ಹೊಸ ಮತದಾರರು ನೋಂದಣಿ ಮಾಡಿಕೊಳ್ಳಬಹುದಾಗಿದೆ. 18 ವರ್ಷ ತುಂಬಿದ ಪ್ರತಿಯೊಬ್ಬ ಭಾರತೀಯ ನಾಗರಿಕನು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅರ್ಹನಾಗಿರುತ್ತಾನೆ. ಹಿಂದೆ ಈ ಪ್ರಕ್ರಿಯೆಯು ಕೇವಲ ಕಚೇರಿಗಳಿಗೆ ಅಲೆಯುವುದಕ್ಕೆ ಸೀಮಿತವಾಗಿತ್ತು, ಆದರೆ ಈಗ ಡಿಜಿಟಲ್ ರೂಪ ಪಡೆದಿದೆ. ಜನವರಿ 1, ಏಪ್ರಿಲ್ 1, ಜುಲೈ 1 ಅಥವಾ ಅಕ್ಟೋಬರ್ 1 ಕ್ಕೆ 18 ವರ್ಷ ತುಂಬುವ ಯುವಜನಾಂಗದವರು ಮುಂಗಡವಾಗಿ ಹೆಸರು ನೋಂದಾಯಿಸಬಹುದು. ಅರ್ಹ ವ್ಯಕ್ತಿಗಳು ವೋಟರ್‌ ಹೆಲ್ಪ್‌ಲೈನ್‌ ಆಪ್‌(Voter Helpline App) ಅಥವಾ ಎನ್‌ವಿಎಸ್‌ಪಿ (ರಾಷ್ಟ್ರೀಯ ಮತದಾರರ ಸೇವಾ ಪೋರ್ಟಲ್) ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ವಯಸ್ಸಿನ ಪುರಾವೆ (ಆಧಾರ್ ಕಾರ್ಡ್, ಪಿಯುಸಿ ಅಂಕಪಟ್ಟಿ ಅಥವಾ ಜನನ ಪ್ರಮಾಣಪತ್ರ) ಮತ್ತು ವಾಸಸ್ಥಳದ ಪುರಾವೆ (ರೇಷನ್ ಕಾರ್ಡ್, ನೀರಿನ ಬಿಲ್ ಅಥವಾ ಬ್ಯಾಂಕ್ ಪಾಸ್‌ಬುಕ್) ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಕಂಪ್ಯೂಟರ್ ಸೆಂಟರ್‌ಗಳಿಗೆ ಹೋಗಲು ಸಾಧ್ಯವಾಗದವರು ತಮ್ಮ ಗ್ರಾಮದ 'ಬೂತ್ ಮಟ್ಟದ ಅಧಿಕಾರಿ' ಬಳಿ ಹೋಗಿ ಭೌತಿಕ ಅರ್ಜಿಯನ್ನು ಪಡೆದು ಸಲ್ಲಿಸಲು ಸಹ ಚುನಾವಣಾ ಆಯೋಗವು ಅವಕಾಶ ನೀಡಿದೆ.

ವಿಳಾಸ ಬದಲಾವಣೆ, ತಿದ್ದುಪಡಿ

ಅರ್ಜಿ ನಮೂನೆ 8 ವಿಳಾಸ ಬದಲಾವಣೆ ಮತ್ತು ದಾಖಲೆಗಳಲ್ಲಿನ ಮಾಹಿತಿ ತಿದ್ದುಪಡಿಗಾಗಿ ಬಳಸಬಹುದಾಗಿದೆ. ಗ್ರಾಮೀಣ ಭಾಗದ ಜನರಿಗೆ ವಿಳಾಸ ಬದಲಾವಣೆಯ ಪ್ರಕ್ರಿಯೆಯು ಈ ಹಿಂದೆ ಸಂಕೀರ್ಣವಾಗಿತ್ತು. ಆದರೆ ಈಗ ಚುನಾವಣಾ ಆಯೋಗವು ಎಲ್ಲಾ ರೀತಿಯ ಬದಲಾವಣೆಗಳಿಗೆ (ಸ್ಥಳಾಂತರ, ತಿದ್ದುಪಡಿ, ಬದಲಿ ಕಾರ್ಡ್) ಒಂದೇ ಒಂದು ಫಾರ್ಮ್ ಅನ್ನು ನಿಗದಿಪಡಿಸಿದೆ, ಅದಕ್ಕಾಗಿ ಅರ್ಜಿ ನಮೂನೆ 8 ಅನ್ನು ಬಳಕೆ ಮಾಡಬೇಕು. ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೆ ಅಥವಾ ಪಟ್ಟಣಕ್ಕೆ ವಾಸ್ತವ್ಯ ಬದಲಿಸಿದರೆ, ನಮೂನೆ 8 ರಲ್ಲಿ ವಿಳಾಸ ಬದಲಾವಣೆ ಆಯ್ಕೆಯನ್ನು ಆರಿಸಿಕೊಳ್ಳಬೇಕು. ಹೆಸರಿನ ಕಾಗುಣಿತ ತಪ್ಪು, ವಯಸ್ಸಿನ ತಪ್ಪು ಅಥವಾ ಭಾವಚಿತ್ರ ಬದಲಾವಣೆ ಮಾಡಬೇಕಿದ್ದರೂ ಇದೇ ನಮೂನೆಯನ್ನು ಬಳಸಬೇಕು. ಹೊಸ ವಿಳಾಸಕ್ಕೆ ಸಂಬಂಧಿಸಿದ ದಾಖಲೆಯನ್ನು (ಉದಾಹರಣೆಗೆ ಹೊಸ ಊರಿನ ಬಾಡಿಗೆ ಒಪ್ಪಂದ ಅಥವಾ ಮನೆ ತೆರಿಗೆ ರಶೀದಿ) ಒದಗಿಸುವುದು ಕಡ್ಡಾಯವಾಗಿರುತ್ತದೆ ಎಂದು ದ ಫೆಡರಲ್‌ಕರ್ನಾಟಕಕ್ಕೆ ಚುನಾವಣಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ.

ಉದ್ಯೋಗ ಅಥವಾ ವಿವಾಹದ ಕಾರಣದಿಂದ ವಿಳಾಸ ಬದಲಾದಾಗ, ಹೊಸ ವಿಳಾಸದ ಪುರಾವೆಯೊಂದಿಗೆ ನಮೂನೆ 8 ಅನ್ನು ಸಲ್ಲಿಸಬೇಕು. ಇದರಿಂದ ಹಳೆಯ ಕ್ಷೇತ್ರದ ಹೆಸರು ಕಡಿತಗೊಂಡು ಹೊಸ ಕ್ಷೇತ್ರದಲ್ಲಿ ಹೆಸರು ಸೇರ್ಪಡೆಯಾಗುತ್ತದೆ. ಮತದಾರರ ಗುರುತಿನ ಚೀಟಿಯಲ್ಲಿ ಹೆಸರು, ಜನ್ಮ ದಿನಾಂಕ, ಲಿಂಗ ಅಥವಾ ಸಂಬಂಧಿಕರ ಹೆಸರಿನಲ್ಲಿ ತಪ್ಪುಗಳಿದ್ದರೆ ಅದನ್ನು ಸರಿಪಡಿಸಲು ಇದೇ ಅರ್ಜಿ ಬಳಸಲಾಗುತ್ತದೆ. ಗುರುತಿನ ಚೀಟಿ ಕಳೆದುಹೋದರೆ ಅಥವಾ ಹಾಳಾಗಿದ್ದರೆ, ಯಾವುದೇ ತಿದ್ದುಪಡಿ ಇಲ್ಲದೆಯೇ ಹೊಸ ಕಾರ್ಡ್ ಪಡೆಯಲು ಸಹ ಇದು ಉಪಯುಕ್ತವಾಗಲಿದೆ ಎಂದು ತಿಳಿಸಿದರು.

ಡಿಜಿಟಲ್ ಕ್ರಾಂತಿ: ಇ-ಎಪಿಕ್‌

ಚುನಾವಣಾ ಆಯೋಗದ ಅತ್ಯಂತ ಕ್ರಾಂತಿಕಾರಿ ಹೆಜ್ಜೆ ಎಂದರೆ 'ಡಿಜಿಟಲ್ ಮತದಾರರ ಗುರುತಿನ ಚೀಟಿ'. ಇದನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದು ಪಿಡಿಎಫ್ ರೂಪದಲ್ಲಿದ್ದು, ಇದನ್ನು ಪ್ರಿಂಟ್ ಮಾಡಿ ಅಧಿಕೃತ ಗುರುತಿನ ಚೀಟಿಯಾಗಿ ಬಳಸಬಹುದು. ಹೊಸದಾಗಿ ನೋಂದಾಯಿತರಾದವರು ಮತ್ತು ಮೊಬೈಲ್ ಸಂಖ್ಯೆಯನ್ನು ಮತದಾರರ ಪಟ್ಟಿಯೊಂದಿಗೆ ಲಿಂಕ್ ಮಾಡಿದವರು ಇದನ್ನು ಸುಲಭವಾಗಿ ಡೌನ್‌ಲೋಡ್ ಮಾಡಬಹುದು. ಇದು ಭೌತಿಕ ಕಾರ್ಡ್ ಮನೆಗೆ ತಲುಪುವವರೆಗೆ ಕಾಯುವ ಅನಿವಾರ್ಯತೆಯನ್ನು ತಪ್ಪಿಸಿದೆ.

ಮತದಾರರ ಪಟ್ಟಿಯ ಪಾರದರ್ಶಕತೆಗಾಗಿ ಆಧಾರ್ ಸಂಖ್ಯೆಯನ್ನು ಜೋಡಿಸುವ ಪ್ರಕ್ರಿಯೆ ನಡೆಯುತ್ತಿದೆ (ನಮೂನೆ 6ಬಿ). ಇದರಿಂದ ಒಬ್ಬ ವ್ಯಕ್ತಿಯ ಹೆಸರು ಎರಡು ಕಡೆ ಇರುವ ಸಾಧ್ಯತೆ ಇರುವುದಿಲ್ಲ. ಅಲ್ಲದೆ, ಒಮ್ಮೆ ನೋಂದಣಿ ಯಶಸ್ವಿಯಾದ ನಂತರ ಡಿಜಿಟಲ್ ಗುರುತಿನ ಚೀಟಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದು ಅಸಲಿ ಕಾರ್ಡ್ ಬಂದಷ್ಟೇ ಮಾನ್ಯತೆ ಹೊಂದಿರುತ್ತದೆ ಎಂದು ಹೇಳಲಾಗಿದೆ.

ಮತದಾರರ ಹೆಸರು ಅಳಿಸಿ ಹೋಗಬಾರದು ಎಂದರೆ ಏನು ಮಾಡಬೇಕು?

ಮತದಾರರು ತಮ್ಮ ಹೆಸರು ಪಟ್ಟಿಯಲ್ಲಿದೆಯೇ ಎಂದು ಮೊದಲು ಪರಿಶೀಲಿಸಬೇಕು. ಚುನಾವಣೆ ಹತ್ತಿರ ಬಂದಾಗ ನೋಡೋಣ ಎಂದು ಕಾಯುವ ಅಗತ್ಯ ಇಲ್ಲ. ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿದೆಯೇ ಎಂದು ಖಚಿತಪಡಿಸಿಕೊಳ್ಳಬೇಕು. 'Voter Helpline App' ಅಥವಾ voters.eci.gov.in ಪೋರ್ಟಲ್‌ಗೆ ಭೇಟಿ ನೀಡಿ. ಗುರುತಿನ ಚೀಟಿ ಸಂಖ್ಯೆ ಹಾಕಿ ಪರಿಶೀಲಿಸಬೇಕು. ಹೆಸರು ಕಾಣಿಸದಿದ್ದರೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಬೇಕು.

ಹಳೆಯ ವಿಳಾಸ ಬಿಟ್ಟು ಹೊಸ ಮನೆಗೆ ಬಂದಿದ್ದರೆ, ಹಳೆಯ ಕಡೆಯೇ ಹೆಸರು ಇರಲಿ ಎಂದು ಸುಮ್ಮನಿರಬಾರದು. ನಮೂನೆ 8 ಭರ್ತಿ ಮಾಡಿ ಈಗಿರುವ ವಿಳಾಸಕ್ಕೆ ನಿಮ್ಮ ಹೆಸರನ್ನು ವರ್ಗಾಯಿಸಿಕೊಳ್ಳಬೇಕು. ಕುಟುಂಬದಲ್ಲಿ ಯಾರಾದರೂ ಮೃತಪಟ್ಟಿದ್ದರೆ ಅವರ ಹೆಸರನ್ನು ಮತದಾರರಪಟ್ಟಿಯಿಂದ ತೆಗೆಸಲು ನಮೂನೆ 7 ಸಲ್ಲಿಸಬೇಕು. ಹೆಸರುಗಳು ನಕಲಿಯಾಗುವುದನ್ನು ತಡೆಯಲು ಆಯೋಗವು ಆಧಾರ್ ಲಿಂಕ್ ಮಾಡಲು ಪ್ರೋತ್ಸಾಹಿಸುತ್ತಿದೆ. ಇದರಿಂದ ಒಬ್ಬ ವ್ಯಕ್ತಿಯ ಹೆಸರು ಎರಡು ಕಡೆ ಇರುವುದು ತಪ್ಪುತ್ತದೆ ಮತ್ತು ನಿಮ್ಮ ಹೆಸರು ಅಳಿಸಿ ಹೋಗುವ ಸಾಧ್ಯತೆ ಕಡಿಮೆಯಾಗುತ್ತದೆ. ಕರಡು ಮತದಾರರ ಪಟ್ಟಿ ಪ್ರಕಟಗೊಂಡಾಗ ತಮ್ಮ ಕುಟುಂಬದ ಸದಸ್ಯರ ಹೆಸರುಗಳು ಸರಿಯಾದ ಮನೆ ಸಂಖ್ಯೆಯೊಂದಿಗೆ ದಾಖಲಾಗಿವೆಯೇ ಎಂಬುದನ್ನು ಪರಿಶೀಲನೆ ನಡೆಸಿಕೊಳ್ಳಬೇಕು. ಒಂದು ವೇಳೆ ಯಾವುದೇ ಗೊಂದಲವಿದ್ದರೆ ಅಥವಾ ನಿಮ್ಮ ಹೆಸರು ಪಟ್ಟಿಯಲ್ಲಿ ಕಾಣಿಸದಿದ್ದರೆ 1950 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದು ಅಥವಾ ಮಾಹಿತಿ ಪಡೆದುಕೊಳ್ಳಬಹುದು.

ಡಿಜಿಟಲ್​ನಲ್ಲಿ ಸಮಸ್ಯೆಯಾದರೆ ಏನು ಮಾಡಬೇಕು?

ಡಿಜಿಟಲ್ ವ್ಯವಸ್ಥೆಯಲ್ಲಿ ಸಮಸ್ಯೆ ಉಂಟಾದಾಗ ಗಾಬರಿಯಾಗುವ ಅಗತ್ಯವಿಲ್ಲ. ಡಿಜಿಟಲೀಕರಣವು ಕೇವಲ ಒಂದು ಸೌಲಭ್ಯವಷ್ಟೇ ಹೊರತು, ಅದೇ ಅಂತಿಮವಲ್ಲ. ಡಿಜಿಟಲ್ ವ್ಯವಸ್ಥೆಯಲ್ಲಿ ಏನೇ ದೋಷವಿದ್ದರೂ ಬಿಎಲ್‌ಒಗಳನ್ನು ಸಂಪರ್ಕಿಸಬೇಕು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದಿದ್ದರೆ, ಇವರಿಂದ ಭೌತಿಕ ಅರ್ಜಿ ಪಡೆದು ಭರ್ತಿ ಮಾಡಿ ಅವರಿಗೆ ನೀಡಬಹುದು. ಅವರು ಅದನ್ನು ಕಚೇರಿಗೆ ಸಲ್ಲಿಸುತ್ತಾರೆ. ತಾಲೂಕು ಮಟ್ಟದ ತಹಶೀಲ್ದಾರ್ ಕಚೇರಿಯಲ್ಲಿ 'ಚುನಾವಣಾ ಶಾಖೆ' ಇರುತ್ತದೆ. ಅಲ್ಲಿ ಸಹಾಯಕ ಮತದಾರರ ನೋಂದಣಾಧಿಕಾರಿ ಇರುತ್ತಾರೆ. ಡಿಜಿಟಲ್ ಪೋರ್ಟಲ್‌ನಲ್ಲಿ ನಿಮ್ಮ ವಿವರಗಳು ತಪ್ಪು ತೋರಿಸುತ್ತಿದ್ದರೆ ಅಥವಾ ಬದಲಾಗದಿದ್ದರೆ ಭೇಟಿ ನೀಡಿ ಲಿಖಿತ ದೂರು ನೀಡಬಹುದು.

ಜಿಲ್ಲಾಧಿಕಾರಿ ಕಚೇರಿ ಅಥವಾ ಮಹಾನಗರ ಪಾಲಿಕೆ ಕಚೇರಿಗಳಲ್ಲಿ ವಿಶೇಷ ಸಹಾಯ ಕೇಂದ್ರಗಳನ್ನು ತೆರೆಯಲಾಗಿರುತ್ತದೆ. ಬೆಂಗಳೂರಿನಲ್ಲಿ ವಾಸವಿದ್ದರೆ, ವಾರ್ಡ್ ಮಟ್ಟದ ಕಚೇರಿಗಳಿಗೆ ಭೇಟಿ ನೀಡಬಹುದು ಅಥವಾ ಬಿಬಿಎಂಪಿ ಜಂಟಿ ಆಯುಕ್ತರ ಕಚೇರಿಯಲ್ಲಿರುವ ಚುನಾವಣಾ ವಿಭಾಗವನ್ನು ಸಂಪರ್ಕಿಸಬಹುದು. ಇಲ್ಲಿ ತಾಂತ್ರಿಕ ತಜ್ಞರು ನಿಮ್ಮ ಡಿಜಿಟಲ್ ದಾಖಲೆಗಳನ್ನು ಸರಿಪಡಿಸಲು ಸಹಾಯ ಮಾಡುತ್ತಾರೆ. ಆನ್‌ಲೈನ್‌ನಲ್ಲಿ ಡೇಟಾ ಅಪ್‌ಲೋಡ್ ಆಗದಿದ್ದರೆ, ಹಳೆಯ ಪದ್ಧತಿಯಂತೆ ಕೈಬರಹದ ಅರ್ಜಿಯನ್ನು ಸಲ್ಲಿಸಬೇಕು. ಈ ಅರ್ಜಿ ಸಲ್ಲಿಸಿದ ನಂತರ ಅವರು ನೀಡುವ ಸ್ವೀಕೃತಿ ಪತ್ರವನ್ನು ತಪ್ಪದೇ ಪಡೆದುಕೊಳ್ಳಬೇಕು. ಇದು ಡಿಜಿಟಲ್ ದಾಖಲೆಗಿಂತಲೂ ಪ್ರಬಲವಾದ ಪುರಾವೆಯಾಗಿದೆ. ಡಿಜಿಟಲ್ ಮ್ಯಾಪಿಂಗ್‌ನಲ್ಲಿ ತೊಂದರೆಯಾಗಿದ್ದರೆ ಅಥವಾ ನಿಮ್ಮ ವಿವರಗಳು ಆನ್‌ಲೈನ್‌ನಲ್ಲಿ ತಪ್ಪಾಗಿ ತೋರಿಸುತ್ತಿದ್ದರೆ ಸಹಾಯವಾಣಿ ಸಂಖ್ಯೆ 1950 ಕ್ಕೆ ಕರೆ ಮಾಡಿ ದೂರು ದಾಖಲಿಸಬಹುದು.

ಬೂತ್ ಮಟ್ಟದ ಅಧಿಕಾರಿಗಳ ಪಾತ್ರ

ಪ್ರತಿಯೊಂದು ಮತಗಟ್ಟೆಗೂ ಒಬ್ಬ 'ಬೂತ್ ಮಟ್ಟದ ಅಧಿಕಾರಿ' ಇರುತ್ತಾರೆ. ಇವರು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಪರಿಶೀಲಿಸುತ್ತಾರೆ. ಆನ್‌ಲೈನ್ ಬಳಸಲು ಬಾರದ ಗ್ರಾಮೀಣ ಭಾಗದ ಜನರಿಗೆ ಬಿಎಲ್‌ಒಗಳು ಸೇತುವೆಯಾಗಿ ಕಾರ್ಯನಿರ್ವಹಿಸುತ್ತಾರೆ. ವಾರ್ಷಿಕವಾಗಿ ನಡೆಯುವ 'ವಿಶೇಷ ಸಂಕ್ಷಿಪ್ತ ಪರಿಷ್ಕರಣೆ' ಸಂದರ್ಭದಲ್ಲಿ ಇವರ ಪಾತ್ರ ಬಹಳ ದೊಡ್ಡದು. ಒಂದು ವೇಳೆ ಅಧಿಕಾರಿಗಳ ಬಗ್ಗೆ ಮಾಹಿತಿ ಇಲ್ಲದಿದ್ದರೆ ಜನರು ಸಹಾಯವಾಣಿ ಸಂಖ್ಯೆ 1950ಗೆ ಸಂಪರ್ಕಿಸಬಹುದು.

ಮತದಾರರ ನೋಂದಣಿ ಸೇರಿದಂತೆ ಯಾವುದೇ ಸಮಸ್ಯೆಗಳಿದ್ದರೂ ಬಗೆಹರಿಸಲು ಸಾಧ್ಯವಿದೆ. ಎಲ್ಲ ಮಾಹಿತಿಯು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಗ್ರಾಮೀಣ ಭಾಗದವರಿಗೆ ಇದು ಕಷ್ಟಕರವಾಗಿದ್ದರೆ, ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ಚುನಾವಣಾ ಆಯೋಗವು ಮತದಾನದಿಂದ ಯಾರು ತಪ್ಪಿಸಿಕೊಳ್ಳಬಾರದು ಎಂಬ ದೃಷ್ಟಿಯಿಂದ ಆದಷ್ಟು ಸರಳೀಕರಣ ಮಾಡಲಾಗುತ್ತಿದೆ. ಪ್ರತಿ ಪಕ್ಷಗಳು ತಮ್ಮದೇ ಆದ ವ್ಯಕ್ತಿಗಳನ್ನು ಸಹ ನಿಯೋಜನೆ ಮಾಡಿರುತ್ತವೆ. ಅವರಿಂದಲೂ ಸಹ ಜನತೆ ಸಹಾಯ ಪಡೆದುಕೊಳ್ಳಬಹುದು. ಇಲ್ಲವಾದರೆ ಬೂತ್‌ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಅವರು ಜನತೆಯ ಸಮಸ್ಯೆಗಳನ್ನು ಬಗೆಹರಿಸಲಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್‌ ದ ಫೆಡರಲ್‌ಕರ್ನಾಟಕಕ್ಕೆ ತಿಳಿಸಿದರು.

ಜನತೆಯ ಮಾಹಿತಿಗಾಗಿ

ಹೊಸ ನೋಂದಣಿ: ನಮೂನೆ 6

ತಿದ್ದುಪಡಿ/ಸ್ಥಳಾಂತರ: ನಮೂನೆ 8

ಆಧಾರ್ ಜೋಡಣೆ: ನಮೂನೆ 6ಬಿ

ವೆಬ್‌ಸೈಟ್: voterportal.eci.gov.in

ಸಹಾಯವಾಣಿ ಸಂಖ್ಯೆ: 1950

Read More
Next Story