
‘ವೋಟ್ ಚೋರ್, ಗದ್ದಿ ಛೋಡ್’‘ ರ‍್ಯಾಲಿ| ಬಿಜೆಪಿ ಮತಗಳ್ಳತನಕ್ಕೆ ಚುನಾವಣಾ ಆಯೋಗ ಸಾಥ್ - ರಾಹುಲ್ ಗಾಂಧಿ ಆರೋಪ
“ನಾವು ‘ಸತ್ಯ’ದೊಂದಿಗೆ ನಿಲ್ಲುತ್ತೇವೆ, ನರೇಂದ್ರ ಮೋದಿ–ಆರ್‌ಎಸ್‌ಎಸ್ ನೇತೃತ್ವದ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುತ್ತೇವೆ. ಅವರ ಬಳಿ ‘ಸತ್ತಾ’ (ಅಧಿಕಾರ) ಇದೆ, ಆದರೆ ಅವರು ‘ವೋಟ್ ಚೋರಿ’ (ಮತ ಕಳ್ಳತನ) ಮಾಡುತ್ತಿದ್ದಾರೆ” ಎಂದು ರಾಹುಲ್ ಗಾಂಧಿ ದೂರಿದರು.
ಕಾಂಗ್ರೆಸ್ ಪಕ್ಷವು ‘ಸತ್ಯ’ದ ಜೊತೆ ನಿಂತಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಅಧಿಕಾರ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ- ಆರ್‌ಎಸ್‌ಎಸ್ ನೇತೃತ್ವದ ಸರ್ಕಾರವನ್ನು ಅಧಿಕಾರದಿಂದ ದೂರವಿಡುತ್ತೇವೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಘೋಷಿಸಿದರು.
ನವದೆಹಲಿಯ ರಾಮ್‌ಲೀಲಾ ಮೈದಾನನದಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ್ದ ʼವೋಟ್ ಚೋರಿ, ಗದ್ದಿ ಛೋಡ್ʼ ಮಹಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದರು.
‘ಚುನಾವಣೆ ಆಯೋಗವು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಚುನಾವಣಾ ಆಯುಕ್ತರಾದ ಸುಖಬೀರ್ ಸಿಂಗ್ ಸಂಧು ಮತ್ತು ವಿವೇಕ್ ಜೋಶಿ ಅವರು ಬಿಜೆಪಿ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
“ನಾವು ‘ಸತ್ಯ’ದೊಂದಿಗೆ ನಿಲ್ಲುತ್ತೇವೆ, ನರೇಂದ್ರ ಮೋದಿ–ಆರ್‌ಎಸ್‌ಎಸ್ ನೇತೃತ್ವದ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುತ್ತೇವೆ. ಅವರ ಬಳಿ ‘ಸತ್ತಾ’ (ಅಧಿಕಾರ) ಇದೆ, ಆದರೆ ಅವರು ‘ವೋಟ್ ಚೋರಿ’ (ಮತ ಕಳ್ಳತನ) ಮಾಡುತ್ತಿದ್ದಾರೆ” ಎಂದು ದೂರಿದರು.
ಪ್ರಧಾನಿ ಮೋದಿ ವಿರುದ್ಧ ಟೀಕೆ
ಬಿಹಾರ ಚುನಾವಣೆ ವೇಳೆ ಬಿಜೆಪಿ ನೇತೃತ್ವದ ಎನ್‌ಡಿಎ ಪಕ್ಷ ಪ್ರತಿ ಮಹಿಳೆಯ ಖಾತೆಗೆ 10,000 ಹಣ ವರ್ಗಾವಣೆ ಮಾಡಿದ್ದರೂ ಚುನಾವಣಾ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ. ಸತ್ಯ ಮತ್ತು ಅಸತ್ಯದ ನಡುವಿನ ಈ ಹೋರಾಟದಲ್ಲಿ ಚುನಾವಣಾ ಆಯೋಗವು ಬಿಜೆಪಿ ಸರ್ಕಾರದ ಜೊತೆ ಕೆಲಸ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆಕ್ರೋಶ ವ್ಯಕ್ತಪಡಿಸಿದರು.
“ಚುನಾವಣೆ ಆಯೋಗಕ್ಕೆ ರಕ್ಷಣೆ ನೀಡಲು ಪ್ರಧಾನಿ ಮೋದಿ ಅವರು ಹೊಸ ಕಾನೂನು ತಂದಿದ್ದಾರೆ. ನಾವು ಆ ಕಾನೂನನ್ನು ಹಿಂದಿನ ದಿನಾಂಕದಿಂದಲೇ ಬದಲಿಸಿ, ಚುನಾವಣಾ ಆಯುಕ್ತರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ” ಎಂದು ರಾಹುಲ್ ಹೇಳಿದರು.
ಸತ್ಯಕ್ಕೆ ಜಯ ಸಿಗಲು ಸಮಯ ಬೇಕಾಗಬಹುದು, ಕೊನೆಗೆ ಸತ್ಯವೇ ಗೆಲ್ಲುತ್ತದೆ. ಸತ್ಯ ಮತ್ತು ಅಹಿಂಸೆಯೊಂದಿಗೆ ಮೋದಿ ಹಾಗೂ ಅಮಿತ್ ಶಾ ಅವರನ್ನು ಸೋಲಿಸುತ್ತೇವೆ ಎಂದು ಹೇಳಿದರು.
ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆ ನಡೆಸಿ
ರ‍್ಯಾಲಿಯಲ್ಲಿ ಮಾತನಾಡಿದ ಪ್ರಿಯಾಂಕಾ ಗಾಂಧಿ ವಾದ್ರಾ ಅವರು, ಚುನಾವಣೆಯ ಪ್ರತಿಯೊಂದು ಹಂತವೂ ಅನುಮಾನ ಹುಟ್ಟಿಸುತ್ತಿದೆ. ಜನರ ಮತದಾನದ ಹಕ್ಕು ಹೇಗೆ ಕಸಿದುಕೊಳ್ಳಲಾಯಿತು ಎಂಬುದನ್ನು ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇಬ್ಬರು ಆಯುಕ್ತರು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ದೇಶದ ಸಂಸ್ಥೆಗಳು ದುರ್ಬಲಗೊಳ್ಳುತ್ತಿರುವಾಗ ನಾಗರಿಕರು ಧ್ವನಿ ಎತ್ತಬೇಕು. ಬಿಜೆಪಿಯು ಮುಖ್ಯ ಚುನಾವಣಾ ಆಯುಕ್ತರು ಹಾಗೂ ಆಯುಕ್ತರನ್ನು ರಕ್ಷಿಸಲು ಸಾಧ್ಯವಿಲ್ಲ. ಜನರ ಮತದಾನದ ಹಕ್ಕು ಕಸಿದುಕೊಳ್ಳುವ ಸಂಚಿನಲ್ಲಿ ಅವರು ಕೊನೆಗೆ ಉತ್ತರಿಸಲೇಬೇಕು. ಬ್ಯಾಲೆಟ್ ಪೇಪರ್‌ನಲ್ಲಿ ಚುನಾವಣೆ ಎದುರಿಸಿದರೆ ಗೆಲ್ಲುವುದು ಅಸಾಧ್ಯ ಎಂಬುದು ಬಿಜೆಪಿ ನಾಯಕರಿಗೆ ಗೊತ್ತಿದೆ ಎಂದರು.
ಬಿಹಾರ ಸೋಲಿನ ಕುರಿತು ಪ್ರಿಯಾಂಕಾ
ಬಿಹಾರದಲ್ಲಿ ಸೋಲಿನಿಂದ ಕಾರ್ಯಕರ್ತರು ಮನ ನೊಂದುಕೊಳ್ಳಬಾರದು. ಬಿಜೆಪಿ ‘ವೋಟ್ ಚೋರಿ’ ಮೂಲಕವೇ ಗೆಲ್ಲುತ್ತದೆ ಎಂಬುದು ದೇಶಕ್ಕೆ ಗೊತ್ತಿದೆ.
ಮಾದರಿ ಸಂಹಿತೆ ಜಾರಿಯಲ್ಲಿದ್ದಾಗ ಬಿಹಾರದಲ್ಲಿ ಮಹಿಳೆಯರಿಗೆ 10,000 ರೂ. ವರ್ಗಾವಣೆ ಮಾಡಿದ್ದನ್ನೂ ಚುನಾವಣಾ ಆಯೋಗ ನಿರ್ಲಕ್ಷಿಸಿದೆ. ಇದು ವೋಟ್ ಚೋರಿ ಅಲ್ಲ ಅಂದ್ರೆ ಇನ್ನೇನು? ಎಂದು ಪ್ರಶ್ನಿಸಿದರು.
ಚುನಾವಣೆಗಳು ನ್ಯಾಯಸಮ್ಮತವಾಗಿ ನಡೆಯುತ್ತಿಲ್ಲ, ಪ್ರತಿಯೊಂದು ಹಂತವೂ ಅನುಮಾನ ಹುಟ್ಟಿಸುತ್ತಿದೆ. ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಬಿಜೆಪಿಯವರು ‘ಗದ್ದಾರ್‌ಗಳುʼ ; ಖರ್ಗೆ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ‘ವೋಟ್ ಚೋರಿ’ಗೆ ಕಾರಣರಾದವರು ‘ಗದ್ದಾರ್‌ಗಳುʼ ಎಂದು ಟೀಕಿಸಿದರು.
ಮತದಾನದ ಹಕ್ಕು ಹಾಗೂ ಸಂವಿಧಾನ ರಕ್ಷಿಸಲು ಅವರನ್ನು ಅಧಿಕಾರದಿಂದ ದೂರ ಮಾಡಬೇಕು. ಕಾಂಗ್ರೆಸ್ ಸಿದ್ಧಾಂತ ಬಲಪಡಿಸುವ ಜವಾಬ್ದಾರಿ ಪ್ರತಿಯೊಬ್ಬ ಭಾರತೀಯನ ಮೇಲಿದೆ. ಕಾಂಗ್ರೆಸ್ ಪಕ್ಷ ಮಾತ್ರವೇ ದೇಶವನ್ನು ಉಳಿಸಬಲ್ಲದು ಎಂದು ಖರ್ಗೆ ಹೇಳಿದರು.
ಆರ್‌ಎಸ್‌ಎಸ್ ಸಿದ್ಧಾಂತವು ದೇಶವನ್ನು ನಾಶ ಮಾಡುತ್ತದೆ. ಬಿಜೆಪಿ ನಾಯಕರು ‘ಗದ್ದಾರ್‌ಗಳುʼ ಮತ್ತು ‘ಡ್ರಾಮೆಬಾಜ್‌ಗಳುʼ. ಅವರನ್ನು ಅಧಿಕಾರದಿಂದ ಕೆಳಗಿಳಿಸಲೇಬೇಕು ಎಂದು ಹೇಳಿದರು.
ತಮ್ಮ ಮಗನ ಶಸ್ತ್ರಚಿಕಿತ್ಸೆಗಾಗಿ ಬೆಂಗಳೂರಿಗೆ ಹೋಗುವುದನ್ನು ಬಿಟ್ಟು ರ‍್ಯಾಲಿಗೆ ಹಾಜರಾಗಿರುವುದಾಗಿ ತಿಳಿಸಿದ ಖರ್ಗೆ, “140 ಕೋಟಿ ಜನರನ್ನು ಉಳಿಸಲು ಇಲ್ಲಿ ಇರಬೇಕು ಎಂದು ಭಾವಿಸಿದೆ” ಎಂದು ಹೇಳಿದರು.

