ರಾಜ್ಯದಲ್ಲಿ EVM ಸಮೀಕ್ಷೆ ಸಂಚಲನ; ಆಳಂದ, ಮಹದೇವಪುರದ ವರದಿಯಲ್ಲೇನಿದೆ?
x

ರಾಜ್ಯದಲ್ಲಿ EVM ಸಮೀಕ್ಷೆ ಸಂಚಲನ; ಆಳಂದ, ಮಹದೇವಪುರದ ವರದಿಯಲ್ಲೇನಿದೆ?

ಕರ್ನಾಟಕ ಚುನಾವಣಾ ಆಯೋಗದ KAP ಸಮೀಕ್ಷೆ ವರದಿ ಬಹಿರಂಗ! 'ವೋಟ್ ಚೋರಿ' ಆರೋಪದ ಕೇಂದ್ರಬಿಂದು ಕಲಬುರಗಿಯ ಆಳಂದದಲ್ಲಿ ಇವಿಎಂ ಮೇಲೆ 94.48% ವಿಶ್ವಾಸ ವ್ಯಕ್ತವಾಗಿದ್ದರೆ, ಬೆಂಗಳೂರಿನ ಮಹದೇವಪುರದಲ್ಲಿ 'ನಗರ ನಿರಾಸಕ್ತಿ' ಎದ್ದು ಕಾಣುತ್ತಿದೆ. ಸಮಗ್ರ ಅಂಕಿ-ಅಂಶಗಳ ವಿವರ ಇಲ್ಲಿದೆ.


Click the Play button to hear this message in audio format

ಕರ್ನಾಟಕದ ಮತದಾರರು ಇವಿಎಂ ಮೇಲೆ ಹೊಂದಿರುವ ನಂಬಿಕೆಯ ಕುರಿತಾದ ಸಮೀಕ್ಷಾ ವರದಿಯು ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಈ ವರದಿಯನ್ನು ಮುಂದಿಟ್ಟುಕೊಂಡು ಬಿಜೆಪಿ ಕಾಂಗ್ರೆಸ್‌ನ "ವೋಟ್ ಚೋರಿ" ಅಭಿಯಾನವನ್ನು ಲೇವಡಿ ಮಾಡುತ್ತಿದ್ದರೆ, ಕಾಂಗ್ರೆಸ್ ಈ ಸಮೀಕ್ಷೆಗೂ ತನ್ನ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸಮರ್ಥಿಸಿಕೊಳ್ಳುತ್ತಿದೆ. ದೇಶಾದ್ಯಂತ ವೋಟ್‌ ಚೋರಿ ಆರೋಪಕ್ಕೆ ನಾಂದಿ ಹಾಡಿದ್ದಂತಹ ಬೆಂಗಳೂರಿನ ಮಹದೇವಪುರ ಮತ್ತು ಕಲಬುರಗಿಯ ಆಳಂದ ಕ್ಷೇತ್ರಗಳಲ್ಲಿ ಮತದಾರರು ಯಾವ ರೀತಿಯಾಗಿ ಸಮೀಕ್ಷೆಗೆ ಪ್ರತಿಕ್ರಿಯಿಸಿದ್ದಾರೆ ಎಂಬುದು ಅತ್ಯಂತ ಕುತೂಹಲಕರವಾಗಿದೆ.

ಕಲಬುರಗಿಯಲ್ಲಿ ಇವಿಎಂ ಬಗ್ಗೆ ಅತಿ ಹೆಚ್ಚು ವಿಶ್ವಾಸ

ರಾಜಕೀಯವಾಗಿ "ವೋಟ್ ಚೋರಿ" ಆರೋಪದ ಕೇಂದ್ರಬಿಂದುವಾಗಿದ್ದ ಕಲಬುರಗಿ ವಿಭಾಗದಲ್ಲೇ ಮತದಾರರು ಇವಿಎಂ ಮೇಲೆ ಅತಿ ಹೆಚ್ಚು ವಿಶ್ವಾಸ (94.48%) ವ್ಯಕ್ತಪಡಿಸಿದ್ದಾರೆ ಎಂದು ಸಮೀಕ್ಷೆ ಹೇಳುತ್ತಿದೆ.

ಲೋಕಸಭಾ ಚುನಾವಣೆ 2024ರ ಹಿನ್ನೆಲೆಯಲ್ಲಿ ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ ನಡೆಸಿದ 'ನಾಗರಿಕರ ಜ್ಞಾನ, ವರ್ತನೆ ಮತ್ತು ಅಭ್ಯಾಸ' (KAP) ಸಮೀಕ್ಷೆಯಲ್ಲಿ ಆಳಂದ ವಿಧಾನಸಭಾ ಕ್ಷೇತ್ರವು ಗಮನಾರ್ಹ ಸಾಧನೆ ಮಾಡಿದೆ. ಕಲಬುರಗಿ ಜಿಲ್ಲೆಯ ಪ್ರಮುಖ ಕ್ಷೇತ್ರಗಳಲ್ಲಿ ಒಂದಾದ ಆಳಂದದಲ್ಲಿ ಮತದಾರರ ಜಾಗೃತಿ ಕಾರ್ಯಕ್ರಮಗಳು (SVEEP) ತಳಮಟ್ಟದಲ್ಲಿ ಪರಿಣಾಮಕಾರಿಯಾಗಿ ಜಾರಿಯಾಗಿರುವುದು ವರದಿಯಿಂದ ತಿಳಿದುಬಂದಿದೆ.

ಮತದಾನದ ಮೇಲೆ ದೃಢ ವಿಶ್ವಾಸ

ಆಳಂದ ಕ್ಷೇತ್ರವನ್ನೊಳಗೊಂಡ ಕಲಬುರಗಿ ವಿಭಾಗದಲ್ಲಿ ಮತದಾನದ ಬಗ್ಗೆ ಸಕಾರಾತ್ಮಕ ವರ್ತನೆ ಕಂಡುಬಂದಿದೆ. ಸಮೀಕ್ಷೆಯ ಪ್ರಕಾರ, ಈ ಭಾಗದ ಶೇ. 96.95 ರಷ್ಟು ಮತದಾರರು "ಪ್ರತಿಯೊಂದು ಮತವೂ ಅಮೂಲ್ಯ" ಎಂದು ದೃಢವಾಗಿ ನಂಬಿದ್ದಾರೆ. ಇದು ರಾಜ್ಯದ ಸರಾಸರಿಗಿಂತಲೂ ಹೆಚ್ಚಿನ ಮಟ್ಟದಲ್ಲಿದೆ. ಅಲ್ಲದೆ, ಶೇ. 94.48 ರಷ್ಟು ಜನರು ಇವಿಎಂ (EVM) ಯಂತ್ರಗಳ ನಿಖರತೆಯ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದು, ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಇಚ್ಛೆಯನ್ನು ತೋರಿಸಿದ್ದಾರೆ ಎಂದು ಸಮೀಕ್ಷೆಯ ವರದಿಯಲ್ಲಿ ತಿಳಿದುಬಂದಿದೆ.

ಜಾಗೃತಿ ಮತ್ತು ತಾಂತ್ರಿಕ ಅರಿವು

EPIC ಮತ್ತು ಮತದಾರರ ಪಟ್ಟಿ: ಆಳಂದ ಸೇರಿದಂತೆ ಈ ವಿಭಾಗದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿರುವ ಬಗ್ಗೆ ಶೇ. 85.31 ರಷ್ಟು ಜನರಿಗೆ ಅರಿವಿದೆ.

ಚುನಾವಣಾ ಆಪ್‌ಗಳ ಬಳಕೆ: 'ಚುನಾವಣಾ' (CHUNAVANA) ಮತ್ತು 'ಕೆವೈಸಿ' (KYC) ಆಪ್‌ಗಳ ಬಗ್ಗೆ ಈ ಭಾಗದಲ್ಲಿ ಜಾಗೃತಿ ಮೂಡಿಸಲಾಗಿದೆಯಾದರೂ, ತಾಂತ್ರಿಕ ಬಳಕೆ ಶೇ. 10 ರ ಆಸುಪಾಸಿನಲ್ಲಿದೆ.

ಮತದಾನದ ಅನುಭವ: ಶೇ. 48.53 ರಷ್ಟು ಮತದಾರರು ಮತದಾನ ಕೇಂದ್ರಗಳಲ್ಲಿನ ತಮ್ಮ ಅನುಭವ "ಅತ್ಯುತ್ತಮ"ವಾಗಿತ್ತು ಎಂದು ತಿಳಿಸಿದ್ದಾರೆ. ಮತಗಟ್ಟೆ ಸಿಬ್ಬಂದಿಯ ಸಹಕಾರದ ಬಗ್ಗೆ ಶೇ. 59.68 ರಷ್ಟು ಜನರು ಮೆಚ್ಚುಗೆ ಸೂಚಿಸಿದ್ದಾರೆ.

ಸವಾಲುಗಳು ಮತ್ತು ಇತರೆ ಅಂಶಗಳು

ವರದಿಯ ಪ್ರಕಾರ, ಈ ಕ್ಷೇತ್ರದಲ್ಲಿ ಹಣ ಮತ್ತು ಸ್ನಾಯುಬಲದ ಪ್ರಭಾವದ ಕುರಿತು ಮತದಾರರಲ್ಲಿ ಅಲ್ಪ ಆತಂಕವಿದ್ದರೂ, ನೈತಿಕ ಮತದಾನದ ಬಗ್ಗೆ ಹೆಚ್ಚಿನ ಒಲವು ಕಂಡುಬಂದಿದೆ. ಶೇ. 85.71 ರಷ್ಟು ಜನರು "ಮತ ಮಾರಾಟಕ್ಕಲ್ಲ" ಎಂಬ ತತ್ವಕ್ಕೆ ಬದ್ಧರಾಗಿದ್ದಾರೆ. ಅಂಗವಿಕಲ ಮತದಾರರಿಗೆ ಸಕಲ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ 'ಸಾಕ್ಷಮ್' (Saksham) ಆಪ್ ಬಗ್ಗೆ ಶೇ. 50 ಕ್ಕೂ ಹೆಚ್ಚು ಜನರಿಗೆ ಅರಿವಿದ್ದು, ವೀಲ್ ಚೇರ್ ಬುಕಿಂಗ್‌ಗಾಗಿ ಇದನ್ನು ಬಳಸಲಾಗಿದೆ ಎಂದು ಸಮೀಕ್ಷೆ ತಿಳಿಸಿದೆ.

ಮಹದೇವಪುರದಲ್ಲಿ ಮತದಾನದ ಬಗ್ಗೆ ನಿರಾಸಕ್ತಿ

ರಾಜಧಾನಿಯ ಐಟಿ ಹಬ್ ಎಂದೇ ಗುರುತಿಸಲ್ಪಡುವ ಮಹದೇವಪುರ ವಿಧಾನಸಭಾ ಕ್ಷೇತ್ರವು 2024ರ ಲೋಕಸಭಾ ಚುನಾವಣೆಯ ಮೌಲ್ಯಮಾಪನ ವರದಿಯಲ್ಲಿ 'ನಗರ ನಿರಾಸಕ್ತಿʼಗೆ ಪ್ರಮುಖ ಉದಾಹರಣೆಯಾಗಿ ಕಂಡುಬಂದಿದೆ. ಬೆಂಗಳೂರು ನಗರದ ಇತರ ಕ್ಷೇತ್ರಗಳಂತೆ ಇಲ್ಲಿಯೂ ಸಹ ಮತದಾರರ ಜಾಗೃತಿ ಕಾರ್ಯಕ್ರಮಗಳು ನಡೆದಿದ್ದರೂ, ಮತದಾನದ ಪ್ರಮಾಣದಲ್ಲಿ ನಿರೀಕ್ಷಿತ ಮಟ್ಟದ ಸುಧಾರಣೆ ಕಂಡುಬಂದಿಲ್ಲ. ಇವಿಎಂ ಮೇಲಿನ ಅಪನಂಬಿಕೆ ಇದಕ್ಕೆ ಕಾರಣ ಬದಲಾಗಿ ಮತದಾನದ ಬಗೆಗಿನ ನಿರಾಸಕ್ತಿ ಎಂದು ಸಮೀಕ್ಷೆ ಹೇಳಿದೆ.

ಚುನಾವಣೆ ದಿನವನ್ನು ನಾಗರಿಕ ಕರ್ತವ್ಯ ನಿರ್ವಹಿಸುವ ದಿನವೆಂದು ಭಾವಿಸುವ ಬದಲು 'ರಜೆ' ಎಂದು ಪರಿಗಣಿಸುವ ಪ್ರವೃತ್ತಿ ಇಲ್ಲಿನ ಮತದಾರರಲ್ಲಿ ಹೆಚ್ಚಿದೆ. ವ್ಯವಸ್ಥೆಯ ಮೇಲಿನ ನಂಬಿಕೆ ಕೊರತೆ ಮತ್ತು ಚುನಾವಣೆ ನಂತರ ಜನಪ್ರತಿನಿಧಿಗಳ ಹೊಣೆಗಾರಿಕೆಯ ಬಗ್ಗೆ ಇರುವ ಅಸಮಾಧಾನವು ಮತದಾರರನ್ನು ಮತಗಟ್ಟೆಯಿಂದ ದೂರವಿಟ್ಟಿದೆ. ಸುಶಿಕ್ಷಿತರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ (cVIGIL, Voter Helpline) ಅರಿವು ಶೇ. 18.37 ರಷ್ಟು ಮಾತ್ರ ಇರುವುದು ವರದಿಯಲ್ಲಿ ಉಲ್ಲೇಖವಾಗಿದೆ.

ದರ್ಶನ ಮತ್ತು ಸಮೀಕ್ಷೆಯ ಮುಖ್ಯಾಂಶಗಳು

ಮಹದೇವಪುರ ಕ್ಷೇತ್ರವನ್ನು ಒಳಗೊಂಡ ಬೆಂಗಳೂರು ವಿಭಾಗದ ಸಮೀಕ್ಷೆಯಲ್ಲಿ ಕಂಡುಬಂದ ಕೆಲವು ಅಂಕಿಅಂಶಗಳು ಹೀಗಿವೆ:

ಮತದಾರರ ಪಟ್ಟಿಯ ಅರಿವು: ಬೆಂಗಳೂರು ವಿಭಾಗದಲ್ಲಿ ಶೇ. 77.67 ರಷ್ಟು ಜನರಿಗೆ ಮಾತ್ರ ಮತದಾರರ ಪಟ್ಟಿಯ ಬಗ್ಗೆ ಅರಿವಿದ್ದು, ಇದು ರಾಜ್ಯದ ಇತರ ವಿಭಾಗಗಳಿಗಿಂತ (ಮೈಸೂರು - ಶೇ. 93.17) ತೀರಾ ಕಡಿಮೆ ಇದೆ.

ಗುರುತಿನ ಚೀಟಿ ಸಮಸ್ಯೆ: ಈ ಭಾಗದ ಶೇ. 10.06 ರಷ್ಟು ನಾಗರಿಕರು ಮತದಾರರ ಗುರುತಿನ ಚೀಟಿಯ (EPIC) ಬಗ್ಗೆ ತಮಗೆ ಮಾಹಿತಿಯೇ ಇಲ್ಲ ಎಂದು ತಿಳಿಸಿದ್ದಾರೆ.[2]

ತಾಂತ್ರಿಕ ಬಳಕೆ: 'ಚುನಾವಣಾ' ಅಪ್ಲಿಕೇಶನ್ ಬಳಕೆಯಲ್ಲಿ ಈ ಕ್ಷೇತ್ರವು ಹಿಂದುಳಿದಿದ್ದು, ಕೇವಲ ಶೇ. 22.64 ರಷ್ಟು ಜನ ಮಾತ್ರ ಇದನ್ನು ಬಳಸಿದ್ದಾರೆ.

ಸುಧಾರಣಾ ಕ್ರಮಗಳ ಶಿಫಾರಸು

ಮಹದೇವಪುರದಂತಹ ಕಾರ್ಪೊರೇಟ್ ವಲಯದ ಜನನಿಬಿಡ ಪ್ರದೇಶಗಳಲ್ಲಿ ಮತದಾನ ಹೆಚ್ಚಿಸಲು ವರದಿಯು ವಿಶೇಷ ಶಿಫಾರಸುಗಳನ್ನು ಮಾಡಿದೆ.

Read More
Next Story