
Ground Report Part-4| ಲಾಭದಾಯಕ ರೇಷ್ಮೆ ಬೆಳೆಯನ್ನೇ ಬಲಿ ಪಡೆದ ಕಲ್ಲು ಗಣಿಗಾರಿಕೆ !
ಏಷ್ಯಾದ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ ರಾಮನಗರದಲ್ಲಿದೆ. ಇಲ್ಲಿ ಪ್ರತಿನಿತ್ಯ 40 ರಿಂದ 50 ಸಾವಿರ ಕೆ.ಜಿ. ರೇಷ್ಮೆ ಗೂಡು ಮಾರಾಟವಾಗುತ್ತದೆ. ಇದು ರೈತರಿಗೆ ಲಾಭದಾಯಕವಾಗಿದೆ.
ʼರೇಷ್ಮೆ ನಗರಿʼ ರಾಮನಗರಕ್ಕೆ ಸಮೀಪದಲ್ಲೇ ಇದ್ದರೂ ಇಲ್ಲಿ ರೇಷ್ಮೆ ಮಾತ್ರ ಬೆಳೆಯಲ್ಲ. ಕ್ರಷರ್‌ಗಳ ಆರ್ಭಟದಲ್ಲಿ ಲಾಭದಾಯಕ ರೇಷ್ಮೆ ಬೆಳೆಯುವುದನ್ನೇ ರೈತರು ನಿಲ್ಲಿಸಿ ಬಿಟ್ಟಿದ್ದಾರೆ. ಅರ್ಥಾತ್ ಇಡೀ ಪ್ರದೇಶದಲ್ಲಿ ರೇಷ್ಮೆ ಬೆಳೆ ಕಣ್ಮರೆಯಾಗಿದೆ.
ಹೌದು, ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿ ವ್ಯಾಪ್ತಿಯ ಸೂಲಿವಾರ, ಗೊಲ್ಲಹಳ್ಳಿ, ಕುರುಬರಪಾಳ್ಯ, ದೊಣ್ಣೇನಹಳ್ಳಿ, ಮಾದಾಪಟ್ಟಣ ಸೇರಿ ಹಲವು ಗ್ರಾಮಗಳಲ್ಲಿ ಕಲ್ಲು ಗಣಿಗಾರಿಕೆ ದೂಳಿನಿಂದ ರೈತರು ರೇಷ್ಮೆ ಬೆಳೆಯುವುದನ್ನೇ ಮರೆತಿದ್ದಾರೆ. ವಿಪರ್ಯಾಸವೆಂದರೆ ಈ ಮೇಲಿನ ಗ್ರಾಮಗಳು ರಾಮನಗರ ಗಡಿಯಿಂದ ಕೇವಲ 3-4 ಕಿ.ಮೀ. ಅಂತರದಲ್ಲಿವೆ. ರಾಮನಗರ ಜಿಲ್ಲಾ ಕೇಂದ್ರದಿಂದ 20 ಕಿ.ಮೀ.ಅಂತರದಲ್ಲಿವೆ. ಮಂಚನಬೆಲೆ ಜಲಾಶಯ ದಾಟಿದರೆ ರಾಮನಗರ ಜಿಲ್ಲೆಗೆ ಸೇರುವ ಮಂಚನಬೆಲೆ, ಲಿಂಗೇಗೌಡನ ದೊಡ್ಡಿ, ಹಾಗಲಹಳ್ಳಿ, ರಾಂಪುರ ಗ್ರಾಮಗಳಲ್ಲಿ ರೇಷ್ಮೆ ಬೆಳೆ ಸಮೃದ್ಧಿಯಾಗಿದೆ.
ಮಾರುಕಟ್ಟೆ ವ್ಯವಸ್ಥೆ ಇದ್ದರೂ ಬೆಳೆಯಿಲ್ಲ
ಏಷ್ಯಾದ ಅತಿ ದೊಡ್ಡ ರೇಷ್ಮೆ ಮಾರುಕಟ್ಟೆ ರಾಮನಗರದಲ್ಲಿದೆ. ಇಲ್ಲಿ ಪ್ರತಿನಿತ್ಯ 40 ರಿಂದ 50 ಸಾವಿರ ಕೆ.ಜಿ. ರೇಷ್ಮೆ ಗೂಡು ಮಾರಾಟವಾಗುತ್ತದೆ. ರೇಷ್ಮೆ ಮಾರುಕಟ್ಟೆಯಲ್ಲಿ ಬೈವೋಲ್ಟನ್ (ದ್ವಿತಳಿ) ರೇಷ್ಮೆ ಗೂಡು ಕೆ.ಜಿ. 905 ದಾಟಿದೆ. ರಾಮನಗರ ಹಾಗೂ ರೇಷ್ಮೆ ಬೆಳೆಯುವ ಜಿಲ್ಲೆಗಳ ರೈತರಿಗೆ ಇದು ಲಾಭದಾಯಕ ಬೆಳೆಯಾಗಿ ಪರಿಣಮಿಸಿದೆ.
2021 ರಲ್ಲಿ ಕೆ.ಜಿ. ರೇಷ್ಮೆ ಗೂಡು 300-400 ರೂ.ಗಳಿಗೆ ಮಾರಾಟವಾಗುತ್ತಿತ್ತು. ಈಗ ರೇಷ್ಮೆ ಗೂಡಿನ ಬೆಲೆ ಕೆ.ಜಿ.ಗೆ 900 ರೂ. ದಾಟಿದೆ. ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಹೋಬಳಿಯಲ್ಲಿ ರೇಷ್ಮೆ ಬೆಳೆಯಲು ರೈತರು ಇಚ್ಛಿಸಿದರೂ ಕಲ್ಲು ಗಣಿಗಾರಿಕೆಯಿಂದ ಅದು ಸಾಧ್ಯವಾಗುತ್ತಿಲ್ಲ. ದೂಳಿನಿಂದ ಬೆಳೆ ಸರಿಯಾಗಿ ಆಗುವುದಿಲ್ಲ. ರೇಷ್ಮೆ ಹುಳು ಸಾಕಾಣಿಕೆಯೂ ಕಷ್ಟ ಎಂಬುದು ರೈತರ ಅಳಲು.
ತಾವರೆಕೆರೆ ಹೋಬಳಿ ಒಂದರಲ್ಲೇ ಸುಮಾರು 50 ಕ್ಕೂ ಹೆಚ್ಚು ಕ್ವಾರಿಗಳು, 150ಕ್ಕೂ ಹೆಚ್ಚು ಕ್ರಷರ್‌ಗಳಿವೆ. ಎಂ-ಸ್ಯಾಂಡ್, ಜಲ್ಲಿ ಸಾಗಿಸುವ ಟಿಪ್ಪರ್‌ಗಳಿಗೆ ಲೆಕ್ಕವೇ ಇಲ್ಲ. ಇದರಿಂದ ಇಡೀ ಪ್ರದೇಶದಲ್ಲಿ ಮರಗಿಡಗಳು, ಬೆಳೆಗಳು, ರಸ್ತೆ ಹಾಗೂ ಮನೆಗಳ ಮೇಲೆ ದೂಳಿನದ್ದೇ ಕಾರುಬಾರು. ಹೀಗಿರುವಾಗ ಸೂಕ್ಷ್ಮ ಬೆಳೆಯಾಗಿರುವ ರೇಷ್ಮೆ ಬೆಳೆಯುವುದು ಹೇಗೆ ಎಂಬುದೇ ರೈತರಿಗೆ ತೋಚದಂತಾಗಿದೆ.
ರಾಮನಗರದ ರೇಷ್ಮೆ ಮಾರುಕಟ್ಟೆಯಲ್ಲು ಗೂಡು ಮಾರಾಟದ ನೋಟ - ಸಂಗ್ರಹ ಚಿತ್ರ
ಬೆಳೆ ಕುಂಠಿತ, ಗೂಡಿನ ಗುಣಮಟ್ಟ ಕುಸಿತ
"ಕ್ರಷರ್‌ಗಳಿಂದ ಬರುವ ದೂಳು ಹಿಪ್ಪುನೇರಳೆ ಎಲೆಗಳ ಮೇಲೆ ಸಂಗ್ರಹವಾಗುವುದರಿಂದ ಎಲೆಗಳ ಬೆಳವಣಿಗೆ (ಪತ್ರ ಹರಿತ್ತು) ಕುಂಠಿತವಾಗಲಿದೆ. ದೂಳು ಮಿಶ್ರಿತ ಎಲೆಗಳನ್ನು ರೇಷ್ಮೆ ಹುಳುಗಳಿಗೆ ಹಾಕುವುದರಿಂದ ಗುಣಮಟ್ಟದ ಗೂಡು ಕಟ್ಟುವುದಿಲ್ಲ. ದೂಳಿನ ಹಸಿರೆಲೆ ತಿನ್ನುವುದರಿಂದ ರೇಷ್ಮೆ ಹುಳುಗಳ ಜೀರ್ಣಕ್ರಿಯೆಗೆ ಸಮಸ್ಯೆಯಾಗಲಿದೆ. ರೇಷ್ಮೆ ಇಳುವರಿ ಬರುವುದಿಲ್ಲ. ಹಾಗಾಗಿ ರೈತರು ರೇಷ್ಮೆ ಬೆಳೆಯುವುದನ್ನು ನಿಲ್ಲಿಸಿದ್ದಾರೆ. ಗಣಿಗಾರಿಕೆ ಆರಂಭವಾದ ಕೆಲ ವರ್ಷಗಳವರೆಗೆ ರೇಷ್ಮೆ ಬೆಳೆಯಲಾಗುತ್ತಿತ್ತು. ಆದರೆ, ದೂಳು ವಿಪರೀತವಾದ ಪರಿಣಾಮ ರೇಷ್ಮೆ ಬೆಳೆ ಕೈಬಿಡಲಾಯಿತು" ಎಂದು ಕುರುಬರಪಾಳ್ಯದ ನಿವಾಸಿ ಮುನಿರಾಜಪ್ಪ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ರೇಷ್ಮೆ ಕೃಷಿಯ ಬದಲು ತರಕಾರಿ ಬೆಳೆಯಲು ಆರಂಭಿಸಿದೆವು. ಕಲ್ಲು ಗಣಿಗಾರಿಕೆಯಿಂದ ತರಕಾರಿ ಬೆಳೆಗಳ ಇಳುವರಿಯೂ ಕಡಿಮೆಯಾಯಿತು. ಅನಿವಾರ್ಯವಾಗಿ ಗ್ರಾಮಸ್ಥರು ಅನ್ಯ ಕೆಲಸಗಳತ್ತ ಮುಖ ಮಾಡಿದ್ದಾರೆ. ನಾವು ಒಂದು ವೇಳೆ ರೇಷ್ಮೆ ಸಾಕಾಣಿಕೆ ಮಾಡಿದರೂ ಬಂಡೆಗಳ ಸ್ಫೋಟ ಹಾಗೂ ಕ್ರಷರ್ ಗಳ ಶಬ್ದದಿಂದ ರೇಷ್ಮೆ ಪ್ರಕ್ರಿಯೆ ಗೂಡು ಕಟ್ಟುವ ಪ್ರಕ್ರಿಯೆ ಮೇಲೆ ಪರಿಣಾಮ ಬೀರಲಿದೆ ಎಂದು ಹೇಳಿದರು.
"ಮಲ್ಬರಿ, ಬೈ ವೋಲ್ಟನ್ ಹಾಗೂ ಮಿಶ್ರ ತಳಿಯ ರೇಷ್ಮೆಯನ್ನು ತಾವರೆಕೆರೆ ಭಾಗದಲ್ಲಿ ಯತೇಚ್ಛವಾಗಿ ಬೆಳೆಯಲಾಗುತ್ತಿತ್ತು. ಎಸ್. ಗೊಲ್ಲಹಳ್ಳಿ ಗ್ರಾಮದಲ್ಲಿಯೇ 20 ಕ್ಕೂ ಹೆಚ್ಚು ರೈತರು ರೇಷ್ಮೆ ಬೆಳೆಯುತ್ತಿದ್ದೆವು. ಆದರೆ, ಕಲ್ಲು ಗಣಿಗಾರಿಕೆ ಹಾಗೂ ಕ್ರಷರ್‌ಗಳ ದೂಳಿನಿಂದ ರೇಷ್ಮೆ ಬೆಳೆ ಬೆಳೆಯುವುದನ್ನೇ ನಿಲ್ಲಿಸಿದ್ದೇವೆ" ಎಂದು ರೈತ ಶಶಿಕುಮಾರ್ 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.
ನಗರೀಕರಣದಿಂದಲೂ ರೇಷ್ಮೆ ಬೆಳೆ ಕುಂಠಿತ
ಬೆಂಗಳೂರು ಸುತ್ತಮುತ್ತ ನಗರೀಕರಣ ಜೋರಾಗಿದೆ. ರಿಯಲ್ ಎಸ್ಟೇಟ್ ವ್ಯವಹಾರಗಳಿಂದಲೂ ಸಾಕಷ್ಟು ಭೂಮಿ ಮಾರಾಟ ಹಾಗೂ ಖರೀದಿ ನಡೆಯುತ್ತಿದೆ. ತಾವರೆಕೆರೆ ಭಾಗದಲ್ಲಿ ಕಲ್ಲು ಗಣೆಗಾರಿಕೆ ಕೂಡ ರೇಷ್ಮೆ ಬೆಳೆಗೆ ಕುಸಿಯಲು ಕಾರಣವಾಗಿದೆ ಎಂದು ಕರ್ನಾಟಕ ರಾಜ್ಯ ರೇಷ್ಮೆಮಂಡಳಿ ಅಧ್ಯಕ್ಷ ಗಂಗಾಧರ ಸೋಗಲ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಬೆಂಗಳೂರು ನಗರ ಜಿಲ್ಲೆಯಲ್ಲಿ ರೇಷ್ಮೆ ಬೆಳೆ ಹೆಚ್ಚು ಬೆಳೆಯಲಾಗುತ್ತಿತ್ತು. ಈಗ ನಗರ ಬೆಳೆದಂತೆ ಬೆಳೆ ಪ್ರಮಾಣ ಕಡಿಮೆಯಾಗಿದೆ. ತಾವರೆಕೆರೆ ಭಾಗದಲ್ಲಿ ರೈತರಿಗೆ ಆಗುತ್ತಿರುವ ಅನಾನುಕೂಲಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಗಂಗಾಧರ್ ಹೇಳಿದರು.
ಮೈಸೂರು ಬಿತ್ತನೆಗೆ ಸೂಕ್ತ ಪ್ರದೇಶ
ಅರ್ಕಾವತಿ ನದಿ ಪಾತ್ರದಲ್ಲಿ ಬರುವ ತಾವರೆಕೆರೆ ಹೋಬಳಿಯಲ್ಲಿ ರೇಷ್ಮೆ ಬೆಳೆ ರೈತರ ಪ್ರಮುಖ ಆದಾಯದ ಮೂಲವಾಗಿತ್ತು. ಕಲ್ಲು ಗಣಿಗಾರಿಕೆ ದೂಳಿನಿಂದ ರೈತರು ಬೆಳೆ ಬೆಳೆಯಲು ಆಗುತ್ತಿಲ್ಲ. ಬರಡು ಭೂಮಿಯನ್ನು ರೈತರೇ ಕಲ್ಲು ಗಣಿಗಾರಿಕೆಗಳಿಗೆ ನೀಡುತ್ತಿದ್ದಾರೆ. ಅಂತರ್ಜಲವೂ ಆಳಕ್ಕೆ ಹೋಗಿರುವುದರಿಂದ ನೀರಾವರಿ ಕೊರತೆ ಇದೆ ಎಂದು ಪರಿಸರವಾದಿ ಹಾಗೂ ಸಾಮಾಜಿಕ ಕಾರ್ಯಕರ್ತ ಶಶಿಧರ್ ಆರಾಧ್ಯ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ರಾಮನಗರದ ಮಾಗಡಿ ತಾಲೂಕು, ಬೆಂಗಳೂರು ದಕ್ಷಿಣ ತಾಲೂಕು, ತುಮಕೂರಿನ ಕುಣಿಗಲ್ ತಾಲೂಕು, ಹೆಬ್ಬೂರು ಹೋಬಳಿಯಲ್ಲಿ ಮೈಸೂರು ಬಿತ್ತನೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ. ಇದರಿಂದ ಶುದ್ಧ ಮೈಸೂರು ರೇಷ್ಮೆ ಪಡೆಯಹುದಾಗಿದೆ. ಅಲ್ಲದೇ ಈ ರೇಷ್ಮೆ ಗೂಡು ಬಿತ್ತನೆಗೂ ಯೋಗ್ಯವಾಗಿದೆ ಎಂದು ತಿಳಿಸಿದರು.
ಮಂಚನಬೆಲೆ ಜಲಾಶಯದಿಂದ ನೀರು ಹರಿಯುತ್ತಿರುವುದು ಚಿತ್ರ: ಆರ್.ಡಿ.ರಘು
ಕಲ್ಲು ಗಣಿಗಾರಿಕೆ ಕುರಿತ ಗ್ರೌಂಡ್ ರಿಪೋರ್ಟ್‌ಗಳು ಇಲ್ಲಿವೆ.
Ground Report Part-1 ಬ್ಯಾಲಾಳು ಇಸ್ರೋ ಕೇಂದ್ರಕ್ಕೆ 'ಅಕ್ರಮ' ಗಣಿಗಾರಿಕೆ ಕಂಟಕ?
Ground Report Part-3| ವನ್ಯಜೀವಿಗಳಿಗೆ ಉರುಳಾದ ಕಲ್ಲು ಗಣಿಗಾರಿಕೆ; ಅರಣ್ಯಕ್ಕೂ ಅಪಾಯ !

