
GBA Elections| ರಾಜ್ಯ ಬಿಜೆಪಿಗೆ ನಾಯಕತ್ವದ ಕ್ಲಾಸ್; 'ತಂತ್ರಗಾರʼ ರಾಮಮಾಧವ್ ರಾಜಧಾನಿಯಲ್ಲಿ ಠಿಕಾಣಿ!
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಂಗ್ರೆಸ್‌ನಲ್ಲಿ ಚುನಾವಣಾ ಚತುರ ಎಂದೇ ಬಿಂಬಿಸಲಾಗಿದೆ. ಅವರ ರಾಜಕೀಯ ತಂತ್ರಗಾರಿಕೆ ಎದುರಿಸಲು ಬಿಜೆಪಿಯಲ್ಲಿ ಅಂತಹ ನಾಯಕರು ಇಲ್ಲದ ಕಾರಣ ಕೇಂದ್ರದ ನಾಯಕರು ಪ್ರವೇಶಿಸಿದ್ದಾರೆ ಎನ್ನಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಬದಲಿಗೆ ಅಸ್ತಿತ್ವಕ್ಕೆ ಬಂದಿರುವ 'ಗ್ರೇಟರ್ ಬೆಂಗಳೂರು ಪ್ರಾಧಿಕಾರ' (ಜಿಬಿಎ) ಮೊದಲ ಚುನಾವಣಾ ಸಮರಕ್ಕೆ ಸಜ್ಜಾಗುತ್ತಿದೆ. ಇದು ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ಬೆಂಗಳೂರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಸಿದ್ಧತೆ ಕೈಗೊಂಡಿವೆ.
ಈ ನಡುವೆ, ಜಿಬಿಎ ಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ರಾಷ್ಟ್ರೀಯ ನಾಯಕರೇ ಇತ್ತ ಗಮನಹರಿಸಿದ್ದಾರೆ. ಈ ಸಂಬಂಧ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂಘಟನಾ ಚತುರ ರಾಮ್ ಮಾಧವ್ ಅವರನ್ನು ಚುನಾವಣಾ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ರಾಷ್ಟ್ರೀಯ ಪ್ರಭಾವಿ ನಾಯಕರನ್ನು ಸ್ಥಳೀಯ ಸಂಸ್ಥೆಯ ಚುನಾವಣೆಗೆ ಉಸ್ತುವಾರಿಯನ್ನಾಗಿ ನೇಮಕ ಮಾಡಿರುವುದು ಇದೇ ಮೊದಲು ಎಂದು ಹೇಳಲಾಗಿದೆ. ಅಲ್ಲದೇ, ಬಿಜೆಪಿಯಲ್ಲಿಯೇ ತೀವ್ರ ಸಂಚಲನ ಮೂಡಿಸಿದೆ.
ಈಗಾಗಲೇ ಬೆಂಗಳೂರಿಗೆ ಕೆಲವು ಭೇಟಿಗಳನ್ನು ನೀಡಿರುವ ಅವರು ಯುವ ಸಂಸದ ತೇಜಸ್ವಿ ಸೂರ್ಯ, ಬೆಂಗಳೂರಿನ ಬಿಜೆಪಿ ಶಾಸಕರು ಸೇರಿದಂತೆ ಪ್ರಮುಖ ಮುಂದಾಳುಗಳಿಗೆ ಸೂಚನೆಗಳನ್ನು ನೀಡಿದ್ದು, ಬೆಂಗಳೂರಿಗೆ ಸಂಬಂಧಪಟ್ಟ ಪ್ರತಿ ಸಮಸ್ಯೆಗಳನ್ನೂ ಜನರ ಬಳಿ ಒಯ್ಯುವ ಬಗ್ಗೆ ಕಾರ್ಯವಿಧಾನಗಳನ್ನು ತಿಳಿಹೇಳಿದ್ದಾರೆ ಎನ್ನಲಾಗಿದೆ. ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಳ ಸಂದರ್ಭದಲ್ಲೂ ತೇಜಸ್ವಿ ಸೂರ್ಯ ಅವರು ಚುರುಕಾಗಿ ವಿಷಯ ಕೈಗೆತ್ತಿಕೊಂಡಿದ್ದಲ್ಲದೆ, ಬೆಲೆ ಹೆಚ್ಚಳವನ್ನು ಸದ್ಯಕ್ಕೆ ಸ್ಥಗಿತಗೊಳಿಸುವಲ್ಲಿ ಪಾತ್ರ ವಹಿಸಿರುವುದೂ ರಾಮಮಾಧವ್ ಕಾರ್ಯತಂತ್ರದ ಭಾಗವಾಗಿದೆ ಎಂದು ಹೇಳಲಾಗಿದೆ.
ಯಾಕೆ ರಾಮಮಾಧವ್?
ಸಾಮಾನ್ಯವಾಗಿ ಪಾಲಿಕೆ ಚುನಾವಣೆಗಳಿಗೆ ಸ್ಥಳೀಯ ಶಾಸಕರು ಅಥವಾ ರಾಜ್ಯ ಮಟ್ಟದ ಪದಾಧಿಕಾರಿಗಳನ್ನು ಉಸ್ತುವಾರಿಗಳನ್ನಾಗಿ ನೇಮಿಸಲಾಗುತ್ತದೆ. ಆದರೆ, ಈ ಬಾರಿ ಬಿಜೆಪಿ ಹೈಕಮಾಂಡ್ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಹಿನ್ನೆಲೆಯುಳ್ಳ, ಜಮ್ಮು-ಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಮ್ ಮಾಧವ್ ಅವರನ್ನು ಕಣಕ್ಕಿಳಿಸಿದೆ. ರಾಜ್ಯ ಬಿಜೆಪಿಯ ಒಳಗಿನ ಬಣ ರಾಜಕೀಯ ಮತ್ತು 'ಹೊಂದಾಣಿಕೆ ರಾಜಕಾರಣ'ದ ಆರೋಪಗಳಿಂದ ದೂರವಿರುವ ಒಬ್ಬ ತಟಸ್ಥ ಮತ್ತು ಪ್ರಭಾವಿ ನಾಯಕನ ಅಗತ್ಯವಿತ್ತು. ಈ ಕಾರಣಕ್ಕಾಗಿ ಬಿಜೆಪಿ ಹೈಕಮಾಂಡ್ ಈ ತೀರ್ಮಾನ ಕೈಗೊಂಡಿದೆ.
ರಾಮಮಾಧವ್ ಅವರಿಗೆ ಕರ್ನಾಟಕದ ರಾಜಕೀಯ ಪಟ್ಟು-ತಂತ್ರಗಳ ಬಗ್ಗೆ ಮಾಹಿತಿಯಿದ್ದು, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ರಾಜಕೀಯ ವಿಜ್ಞಾನ ವಿಷಯದಲ್ಲಿ ಎಂಎ ಪದವಿಯನ್ನೂ ಪಡೆದಿದ್ದು, ರಾಜ್ಯದ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಜತೆ ಒಡನಾಟವೂ ಇರುವುದು ಅವರು ಗ್ರೇಟರ್ ಬೆಂಗಳೂರು ಚುನಾವಣೆಯ ವಾರ್‌ರೂಮ್‌ನಲ್ಲಿ ಪಾಲ್ಗೊಳ್ಳಲು ಪ್ರಮುಖ ಕಾರಣವಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಪ್ರತ್ಯೇಕ ತಂತ್ರಗಾರಿಕೆಗೆ ಬಿಜೆಪಿ ತಯಾರಿ
ಗ್ರೇಟರ್ ಬೆಂಗಳೂರು ಯೋಜನೆಯಡಿ ಬೆಂಗಳೂರನ್ನು ಐದು ಪ್ರತ್ಯೇಕ ಪಾಲಿಕೆಗಳಾಗಿ ವಿಭಜಿಸುವ ಸರ್ಕಾರದ ನಿರ್ಧಾರಕ್ಕೆ ಆರಂಭದಲ್ಲಿ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಈಗ ಅದೇ ವಿಭಜನೆಯನ್ನು ತನ್ನ ಲಾಭಕ್ಕೆ ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಐದು ಪಾಲಿಕೆಗಳಿಗೂ ಪ್ರತ್ಯೇಕ ತಂತ್ರಗಾರಿಕೆ ರೂಪಿಸುವುದು ಬಿಜೆಪಿಯ ಪ್ರಮುಖ ಉದ್ದೇಶವಾಗಿದೆ. ಪ್ರತಿ ಪಾಲಿಕೆಯಲ್ಲಿಯೂ ಸ್ಥಳೀಯ ನಾಯಕರನ್ನು ಬೆಳೆಸುವುದು ಮತ್ತು ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಲ್ಲುವುದು. ಐದೂ ಪಾಲಿಕೆಗಳಲ್ಲಿ ಬಿಜೆಪಿ ಅಧಿಕಾರ ಹಿಡಿದರೆ, ಇಡೀ ನಗರದ ಮೇಲೆ ಸಂಪೂರ್ಣ ಹಿಡಿತ ಸಾಧಿಸಬಹುದು ಎಂಬುದು ಪಕ್ಷದ ಲೆಕ್ಕಾಚಾರವಾಗಿದೆ.
ರಾಜ್ಯ ನಾಯಕರಲ್ಲಿ ಒಮ್ಮತ ಇಲ್ಲದ ಕಾರಣ ರಾಷ್ಟ್ರ ನಾಯಕರ ಎಂಟ್ರಿ
ಬೆಂಗಳೂರಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ "ಒಳಒಪ್ಪಂದ ರಾಜಕಾರಣ" ನಡೆಯುತ್ತಿದೆ ಎಂಬುದು ರಾಜ್ಯ ಬಿಜೆಪಿ ನಾಯಕರ ಮೇಲಿನ ಹೈಕಮಾಂಡ್‌ಗೆ ಇರುವ ಬಲವಾದ ಸಂಶಯವಾಗಿದೆ. ರಾಜ್ಯ ಸರ್ಕಾರವು ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸುವಾಗ ಬಿಜೆಪಿ ಆರಂಭದಲ್ಲಿ ತೋರಿದ ಆಕ್ರಮಣಕಾರಿ ವಿರೋಧ ನಂತರ ತಣ್ಣಗಾಗಿತ್ತು. ಇದು ಹೈಕಮಾಂಡ್‌ನ ಕೆಂಗಣ್ಣಿಗೆ ಗುರಿಯಾಗಿದೆ. ಅನೇಕ ಸ್ಥಳೀಯ ನಾಯಕರು ತಮ್ಮ ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಸರ್ಕಾರದ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ವರದಿಗಳನ್ನು ಹೈಕಮಾಂಡ್ ತನ್ನದೇ ಆದ ಮೂಲಗಳಿಂದ ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ರಾಮ್ ಮಾಧವ್ ಅವರಂತಹ ಹೊರಗಿನ ನಾಯಕನನ್ನು ನೇಮಿಸುವ ಮೂಲಕ ಹೈಕಮಾಂಡ್ ಹೊಂದಾಣಿಕೆ ರಾಜಕಾರಣಕ್ಕೆ ಕಡಿವಾಣ ಹಾಕಲು ಮುಂದಾಗಿದೆ ಎಂದು ಮೂಲಗಳು ಹೇಳಿವೆ.
ಬ್ಯಾಲೆಟ್ ಪೇಪರ್ ಬಳಕೆ: ಬಿಜೆಪಿಗೆ ಹೊಸ ಸವಾಲು
ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಬಳಸಲು ರಾಜ್ಯ ಚುನಾವಣಾ ಆಯೋಗವು ತೀರ್ಮಾನಿಸಿದೆ. ಇದು ಬಿಜೆಪಿಯ ಆತಂಕಕ್ಕೆ ಕಾರಣವಾಗಿದೆ. ಬ್ಯಾಲೆಟ್ ಪೇಪರ್ ಚುನಾವಣೆಯಲ್ಲಿ ಅಕ್ರಮ ನಡೆಯುವ ಸಾಧ್ಯತೆ ಹೆಚ್ಚು ಎಂಬುದು ಬಿಜೆಪಿಯ ವಾದವಾಗಿದೆ. ಬ್ಯಾಲೆಟ್ ಪೇಪರ್ ಯುಗದಲ್ಲಿ ಕಾಂಗ್ರೆಸ್ ಸಂಘಟನಾತ್ಮಕವಾಗಿ ಬಲಿಷ್ಠವಾಗಿದೆ ಎಂಬ ನಂಬಿಕೆ ಇದೆ. ಆದ್ದರಿಂದ, ಪ್ರತಿ ಬೂತ್‌ನಲ್ಲಿಯೂ ಮತದಾನ ಮತ್ತು ಮತ ಎಣಿಕೆಯ ಮೇಲೆ ತೀವ್ರ ನಿಗಾ ಇಡಲು ಬಿಜೆಪಿ ವಿಶೇಷ ಪಡೆಗಳನ್ನು ರಚಿಸಲು ರಾಮ್ ಮಾಧವ್ ಮಾರ್ಗದರ್ಶನ ನೀಡಲಿದ್ದಾರೆ.
ಬ್ಯಾಲೆಟ್ ಪೇಪರ್ ಚುನಾವಣೆಯಲ್ಲಿ ನಡೆಯುವ ಅಕ್ರಮಗಳನ್ನು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ಇಂತಹ ಚಾಕಚಕತ್ಯತೆ ರಾಜ್ಯ ಬಿಜೆಪಿ ನಾಯಕರಲ್ಲಿ ಕಂಡು ಬರುತ್ತಿಲ್ಲ. ಆಂತರಿಕ ಕಿತ್ತಾಟದಿಂದ ಪಕ್ಷದ ಅಭ್ಯರ್ಥಿಗಳನ್ನು ಸೋಲಿಸಲು ಪಕ್ಷದವರೇ ಷಡ್ಯಂತ್ರ ರೂಪಿಸುವ ಸಾಧ್ಯತೆ ಇದೆ. ಈ ಕಾರಣದಿಂದಾಗಿ ರಾಷ್ಟ್ರನಾಯಕರು ಜಿಬಿಎ ಚುನಾವಣೆಗೆ ಪ್ರವೇಶಿಸಿದ್ದಾರೆ. ಮಳೆ ಹಾನಿ, ಗುಂಡಿ ಬಿದ್ದ ರಸ್ತೆಗಳು ಮತ್ತು ಸಂಚಾರ ದಟ್ಟಣೆಯಂತಹ ವಿಚಾರಗಳಲ್ಲಿ ಸರ್ಕಾರವನ್ನು ಹೇಗೆ ಕಟ್ಟಿಹಾಕಬೇಕು ಎಂಬುದು ಬಿಜೆಪಿಯ ಮುಂದಿರುವ ಸವಾಲಾಗಿದೆ ಎಂದು ಹೇಳಲಾಗಿದೆ.
ಡಿ.ಕೆ.ಶಿವಕುಮಾರ್ ತಂತ್ರಗಾರಿಕೆ ಎದುರಿಸಲು ಬಿಜೆಪಿಯ ಪ್ರತಿತಂತ್ರ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದಾರೆ. ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್‌ನಲ್ಲಿ ಚುನಾವಣಾ ಚತುರ ಎಂದೇ ಬಿಂಬಿಸಲಾಗಿದೆ. ಅವರ ರಾಜಕೀಯ ತಂತ್ರಗಾರಿಕೆಯನ್ನು ಎದುರಿಸಲು ಪ್ರಸ್ತುತ ಬಿಜೆಪಿಯಲ್ಲಿ ಅಂತಹ ಯಾವ ನಾಯಕರು ಇಲ್ಲ. ಬಿಜೆಪಿ ಮಿತ್ಪಪಕ್ಷ ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜಕೀಯವಾಗಿ ಡಿ.ಕೆ.ಶಿವಕುಮಾರ್ ಅವರನ್ನು ಎದುರಿಸಲು ಸಮರ್ಥವಾಗಿದ್ದಾರೆ. ಆದರೆ, ಅವರು ಕೇಂದ್ರ ರಾಜಕಾರಣದಲ್ಲಿರುವ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಆ ಕೊರತೆಯನ್ನು ನೀಗಿಸಬೇಕಾಗಿದೆ. ಬಿಜೆಪಿಯಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ರಾಜಕೀಯವಾಗಿ ಎದುರಿಸುವಂತಹ ನಾಯಕರಿಲ್ಲ. ಈ ಕಾರಣಕ್ಕಾಗಿ ಬಿಜೆಪಿ ವರಿಷ್ಠರು ರಾಷ್ಟ್ರೀಯ ನಾಯಕರನ್ನು ಚುನಾವಣೆಗೆ ಉಸ್ತುವಾರಿಯಾಗಿ ನೇಮಕ ಮಾಡಲಾಗಿದೆ ಎನ್ನಲಾಗಿದೆ.
ರಾಮ್ ಮಾಧವ್ ಮುಂದಿರುವ ಸವಾಲು
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ್, ಮುನಿರತ್ನ, ಕೇಂದ್ರ ಸಚಿವ ವಿ.ಸೋಮಣ್ಣ ಅವರಂತಹ ಪ್ರಭಾವಿ ನಾಯಕರನ್ನು ರಾಮ್ ಮಾಧವ್ ಹೇಗೆ ಒಂದೇ ತಕ್ಕಡಿಯಲ್ಲಿ ತೂಗಲಿದ್ದಾರೆ ಎಂಬುದು ಕುತೂಹಲಕಾರಿ. ಈ ಬಾರಿ ಹಳೆ ಮುಖಗಳಿಗಿಂತ ಹೆಚ್ಚಾಗಿ ಯುವ ಮತ್ತು ಸಂಘಟನಾ ನಿಷ್ಠಾವಂತರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಇದು ಪಕ್ಷದೊಳಗೆ ಬಂಡಾಯಕ್ಕೆ ಕಾರಣವಾಗದಂತೆ ನೋಡಿಕೊಳ್ಳಬೇಕಿದೆ. ಗ್ರೇಟರ್ ಬೆಂಗಳೂರು ಚುನಾವಣೆ ಗೆದ್ದರೆ, ಅದು ರಾಜ್ಯ ಸರ್ಕಾರದ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರುತ್ತದೆ. ಬೆಂಗಳೂರಿನ ಅಭಿವೃದ್ಧಿಯ ಕ್ರೆಡಿಟ್ ಮತ್ತು ಹಣಕಾಸಿನ ಸಂಪನ್ಮೂಲಗಳ ಮೇಲೆ ಹಿಡಿತ ಸಾಧಿಸಲು ಇದು ಅನಿವಾರ್ಯ. ಬಿಜೆಪಿಗೆ ಇದು ಪ್ರತಿಷ್ಠೆಯ ಕದನ. ಒಂದು ವೇಳೆ ಇಲ್ಲಿ ಸೋತರೆ, ರಾಜ್ಯದಲ್ಲಿ ಪಕ್ಷದ ವರ್ಚಸ್ಸು ಮತ್ತಷ್ಟು ಕುಸಿಯುವ ಭೀತಿ ಇದೆ.
ಒಟ್ಟಾರೆಯಾಗಿ, ಗ್ರೇಟರ್ ಬೆಂಗಳೂರು ಪಾಲಿಕೆ ಚುನಾವಣೆಯು ಕರ್ನಾಟಕ ರಾಜಕಾರಣದ ಅತ್ಯಂತ ತುರುಸಿನ ಸ್ಪರ್ಧೆಯಾಗಲಿದೆ. ರಾಮ್ ಮಾಧವ್ ಅವರ ನೇಮಕವು ಬಿಜೆಪಿ ಈ ಚುನಾವಣೆಯನ್ನು ರಾಷ್ಟ್ರೀಯ ಚುನಾವಣೆಯಷ್ಟೇ ಗಂಭೀರವಾಗಿ ಪರಿಗಣಿಸಿದೆ ಎಂಬುದಕ್ಕೆ ಸಾಕ್ಷಿ. ರಾಜ್ಯ ನಾಯಕರ 'ಹೊಂದಾಣಿಕೆ ರಾಜಕಾರಣ'ಕ್ಕೆ ಅಂತ್ಯ ಹಾಡಿ, ತಳಮಟ್ಟದ ಸಂಘಟನೆಯ ಮೂಲಕ ಅಧಿಕಾರ ಹಿಡಿಯುವುದು ಬಿಜೆಪಿಯ ಗುರಿಯಾಗಿದೆ. ಬ್ಯಾಲೆಟ್ ಪೇಪರ್ ಸವಾಲು ಮತ್ತು ಆಡಳಿತ ಪಕ್ಷದ ತಂತ್ರಗಳನ್ನು ಎದುರಿಸಿ ಬಿಜೆಪಿ ಹೇಗೆ ಹೆಚ್ಚಿನ ಸ್ಥಾನದಲ್ಲಿ ಗೆಲುವು ಸಾಧಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

